ಪುಲ್ವಾಮ ಘಟನೆ ಬಗ್ಗೆ ಉತ್ತರಿಸದವರು ಶ್ರೇಷ್ಠರಲ್ಲ-ಲೇಖಕ ತುಂಬಾಡಿ ರಾಮಣ್ಣ

ತುಮಕೂರು : ಪುಲ್ವಾಮ ಘಟನೆಯಲ್ಲಿ ಮೃತಪಟ್ಟ ಯೋದರ ಕುಟುಂಬಸ್ಥರಿಗೆ ಪರಹಾರ ನೀಡಲು ಇಂದಿನ ಪ್ರಧಾನಿಗಳು ಬಂದಿದ್ದಾಗ ಸಂತ್ರಸ್ಥರನ್ನು ಮಾತನಾಡಿಸಿದಾಗ ನನ್ನ ಮಗುವಿಗೆ ತಂದೆಯನ್ನು ಕೊಡಿ ಎಂದು ಕೇಳುತ್ತಾರೆ, ಇಂತಹ ಪ್ರಶ್ನೆಗಳು ಎದುರಾಗುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಪತ್ರಿಕಾಗೋಷ್ಠಿ ನಡೆಸುತ್ತಿಲ್ಲ ಎಂದು ಲೇಖಕ ತುಂಬಾಡಿ ರಾಮಣ್ಣ ಹೇಳಿದರು.


ತುಮಕೂರು ನಗರದ ಕನ್ನಡ ಭವನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗೋವಿಂದರಾಜು ಎಂ ಕಲ್ಲೂರು ಅವರ ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕಥಾಸಂಕಲನ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನನಗೆ ಸಿದ್ಧಗಂಗಾ ಮಠದ ಡಾ|| ಶಿವಕುಮಾರಸ್ವಾಮಿಗಳು ಹೇಳಿದ ಅಂಗೂಲಿಮಾಲ-ಬುದ್ಧನ ಕಥೆ ಮತ್ತು ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದವರನ್ನು ಭೇಟಿ ಮಾಡಿ ಕ್ಷಮಿಸಿರುವುದಾಗಿ ಹೇಳಿದ ಪ್ರಿಯಾಂಕ ಗಾಂಧಿ ಅವರುಗಳು ಶ್ರೇಷ್ಠರಾಗುತ್ತಾರೆ, ಪುಲ್ವಾಮ ಘಟನೆ ನಡೆಯುತ್ತದೆ ಎಂದು ತಿಳಿದಿದ್ದರೂ ತಡೆಯದ ಒಬ್ಬ ಪ್ರಧಾನಿ ಪತ್ರಕರ್ತರಿಗೆ ಉತ್ತರಿಸಲಾಗದೆ ಇರುವುದು ಶ್ರೇಷ್ಠವಲ್ಲ ಎಂದರು.


ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು ಸಂಕಲನದ ಕಥೆಗಳು ಸಮಾಜ ದಲ್ಲಿರುವ ರೂಢಿ ಕಂದಾಚಾರಗಳನ್ನು ಪ್ರಶ್ನೆಮಾಡುವ ಗುಣ, ಕಥೆ ಹೇಳಲು ಬಳಸಿಕೊಂಡ ಭಾμÉ, ತಂತ್ರಗಾರಿಕೆ ಈ ಸಂಕಲನವನ್ನು ವಿಶಿಷ್ಟವಾಗಿಸಿದೆ ಎಂದು ಹಿರಿಯ ಲೇಖಕ ಅಗ್ರಾಹಾರ ಕೃಷ್ಣಮೂರ್ತಿ ಹೇಳಿದರು.

ತುಮಕೂರು ನಗರದ ಕನ್ನಡ ಭವನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗೋವಿಂದರಾಜು ಎಂ ಕಲ್ಲೂರು ಅವರ ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕಥಾಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗೋವಿಂದರಾಜು ತಮ್ಮ ಕಥೆಗಳ ಮೂಲಕ ಪರಂಪರೆಯ ಕಥನಗಳನ್ನು ಸಮಕಾಲೀನ ಸಂದರ್ಭದ ತಿಳುವಳಿಕೆಯ ಜೊತೆಗಿಟ್ಟು ವಿಶ್ಲೇಷಣೆ ನಡೆಸಲು ಪ್ರಯತ್ನಿಸುತ್ತಾರೆ, ಸತ್ಯವನ್ನು ಬಹು ಆಯಾಮಗಳಿಂದ ಪರೀಕ್ಷಿಸಲು ಪ್ರಯತ್ನಿಸುತ್ತವೆ. ಜಾನಪದ, ಪೌರಾಣಿಕ, ಅಭಿಜಾತ ಸಾಹಿತ್ಯದ ಕಥನಗಳನ್ನು ಮರುವಿಶ್ಲೇಷಣೆಗೆ ಒಳಪಡಿಸಿ ಶೋಧನೆ ನಡೆಸುವ ಗುಣ ಈ ಸಂಕಲನದ ಉದ್ದಕ್ಕೂ ಕಾಣುತ್ತದೆ ಎಂದು ಹೇಳಿದರು.


ವಿಮರ್ಶಕ ರವಿಕುಮಾರ್ ನೀಹ ಮಾತನಾಡಿ ಕಥಾಸ್ಪರ್ಧೆಗಳು, ಸೃಜನಶೀಲ ಚಟುವಟಿಕೆಗಳು ವಿಮರ್ಶೆ, ಸಂಶೋಧನೆಗೆ ಹಿನ್ನೆಡೆ ಉಂಟುಮಾಡುತ್ತವೆ ಎಂಬ ಮಾತುಗಳ ನಡುವೆ ಇಲ್ಲಿನ ಕಥೆಗಳು ಸಂಶೋಧನಾತ್ಮಕ ಸೃಜನೆಗಳಾಗಿವೆ. ಈ ಸಂಕಲನ ಸಂಶೋಧನೆ-ವಿಮರ್ಶೆ-ಸೃಜನಶೀಲತೆಯ ನಡುವಿನ ಗೆರೆಯನ್ನು ಅಳಿಸಿಹಾಕಿದೆ. ಇವು ವಿಮರ್ಶಾ ಸಂಶೋಧನಾತ್ಮಕ ಕಥೆಗಳು. ಎಂಟು ಕಥೆಗಳನ್ನು ಹೊಂದಿರುವ ಈ ಸಂಕಲನದಲ್ಲಿ ಏಕ ಮಾದರಿಯ ಸಂಸ್ಕøತಿ ಹೇರಿಕೆಗೆ ಸಾಹಿತ್ಯಿಕ ಪ್ರತಿರೋಧವಿದೆ ಎಂದರು.

ಇಡೀ ಸಂಕಲನದ ಉದ್ದಕ್ಕೂ ಕಾವ್ಯದ ರೂಪಕಗಳು ಎದುರಾಗುತ್ತವೆ. ಕೆಲವು ಕಥೆಗಳು ಕಾವ್ಯದಿಂದ ಆರಂಭವಾದರೆ ಕೆಲವು ಕಥೆಗಳು ಕಾವ್ಯದಿಂದ ಮುಕ್ತಾಯವಾಗುತ್ತವೆ. ಇವು ಕಾವ್ಯಾತ್ಮಕ ಕಥನ ಸೃಜನೆಗಳೂ ಹೌದು. ವೈಚಾರಿಕತೆಯನ್ನು ಸೃಜನಶೀಲತೆಗೆ ಅಳವಡಿಸುವಾಗ ಅದು ತೀರಾ ವಾಚ್ಯವಾಗಿಬಿಡುವ ಸಾಧ್ಯತೆಗಳಿವೆ ಆದರೆ ಇಲ್ಲಿನ ಕಥೆಗಳು ತಿಳಿಹಾಸ್ಯ ಬೆರೆತ ವೈಚಾರಿಕ ನಿರೂಪಣೆಗಳಾಗಿದ್ದು ಇದು ಈ ಕಾಲದ ಮುಖ್ಯ ಸಂಕಲನ ಎಂದು ಹೇಳಿದರು.

ಖ್ಯಾತ ಕಥೆಗಾರ ಕೇಶವ ಮಳಗಿ ಮಾತನಾಡಿ, ಕಥಾ ಪರಿಸರದ ಸಂಕೀರ್ಣತೆಯ ಬಗೆಗಿನ ತಿಳಿವು, ಕಥಾವಸ್ತುವಿನ ಚೆಲುವು, ನೋವು, ವಿಷಾದವನ್ನು ವಿವರಿಸಲು ಆಯ್ದುಕೊಂಡ ಭಾಷೆ ವಿಧಾನ, ಸ್ಥಳೀಯತೆ, ಪ್ರಾದೇಶಿಕತೆಯ ದಟ್ಟ ಪ್ರತಿಫಲನ, ಪ್ರತಿ ಕಥೆಗಳಿಗೂ ಭಿನ್ನವಾಗಿ ರೂಪಿಸಿಕೊಂಡ ನುಡಿಗಟ್ಟು ಮತ್ತು ವಿನ್ಯಾಸ, ಗಾಢ ವಾಸ್ತವ ಪ್ರಜ್ಞೆ, ಕನಸು ಕನವರಿಕೆ, ಬದುಕಿನ ರೂಕ್ಷತೆ, ಅಸಂಗತತೆಯನ್ನು ವಿವರಿಸಲು ಕಥೆಗಾರ ನೀಡುವ ರೂಪಕಗಳ ಗೊಂಚಲುಗಳು, ಸಿದ್ಧಮಾದರಿಯಿಂದ ಹೊರಬಂದು ನೇಯ್ದ ಭರವಸೆ ಹುಟ್ಟಿಸುವ ಕಥೆಗಳು ಇಲ್ಲಿವೆ ಎಂದು ತಿಳಿಸಿದರು.

ಪ್ರಾಧ್ಯಾಪಕ ನಿತ್ಯಾನಂದ ಬಿ ಶೆಟ್ಟಿ ಮಾತನಾಡಿ ಕಥೆ ಏನು ಹೇಳುತ್ತದೆ, ಕಥೆ ಏನು ಮಾಡುತ್ತದೆ ಎನ್ನುವ ಪ್ರಶ್ನೆಗಳ ಜೊತೆಗೆ ಕಥೆಗಾರ ಏನು ಮಾಡಲು ಹೊರಟಿದ್ದಾನೆ ಎನ್ನುವ ಪ್ರಶ್ನೆಯೂ ಮುಖ್ಯವಾಗುತ್ತದೆ. ಭಾಷೆಯನ್ನು ಬಳಸಿ ಮಾಡುವ ಕೃತವೆಲ್ಲವು ರಾಜಕೀಯ ಚಟುವಟಿಕೆಯೇ ಆಗಿರುತ್ತವೆ. ಸಮಕಾಲೀನ ಕಥೆಗಾರರಿಗಿಂತ ಭಿನ್ನ, ಆಶಾದಾಯಕ ಬೆಳಕಿನ ಸೆಳಕೊಂದು ಗೋವಿಂದರಾಜುವಿನ ಕಥೆಗಳಲ್ಲಿದೆ ಎಂದರು.

ಹಿರಿಯ ಲೇಖಕ ಕರೀಗೌಡ ಬೀಚನಹಳ್ಳಿ ಮಾತನಾಡಿ ಮನಃಶಾಸ್ತ್ರೀಯ ಮತ್ತು ಸಂಶೋಧನೆಯ ಅನೇಕ ಥಿಯರಿಗಳ ತಳಹದಿಯ ಮೇಲೆ ಇಲ್ಲಿನ ಕತೆಗಳನ್ನು ಕಟ್ಟಲಾಗಿದೆ. ಇವು ಸಂಶೋಧಕನೊಬ್ಬ ಬರೆದ ಕಥೆಗಳು ಎಂದರು.

ಮಲ್ಲಿಕಾ ಬಸವರಾಜು ಮಾತನಾಡಿ ಆಧುನಿಕತೆ-ಪುರಾಣವನ್ನು ಸೃಜನಶೀಲವಾಗಿ ಬೆರೆಸಿದ ಇಲ್ಲಿನ ಕಥೆಗಳಲ್ಲಿ ಬರುವ ಸ್ತ್ರೀ ಪಾತ್ರಗಳಿಗೆ ಅಪಾರ ಗಟ್ಟಿ ಧ್ವನಿ ಇದೆ. ಸಮಕಾಲೀನ ಸಂದರ್ಭದಲ್ಲಿ ಗಮನಿಸಲೇಬೇಕಾದ ಸಂಕಲನವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೇಖಕ ತುಂಬಾಡಿ ರಾಮಣ್ಣ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಲೇಖಕ ಗೋವಿಂದರಾಜು ಎಂ ಕಲ್ಲೂರು, ಪ್ರಾಧ್ಯಾಪಕರಾದ ಗೀತಾವಸಂತ, ಆಶಾ ಬಗ್ಗನಡು, ಕಥೆಗಾರರಾದ ಗುರುಪ್ರಸಾದ್ ಕಂಟಲಗೆರೆ, ಎಸ್ ಗಂಗಾಧರಯ್ಯ, ಕುಂದೂರು ಮುರುಳಿ, ಚೈತ್ರಾ-ಕೊಟ್ಟಶಂಕರ್, ಮರಿಯಾಂಬಿ, ಎಂ ಎಚ್ ನಾಗರಾಜು, ಸುಧಾಕರ್ ಕೆ ಎಸ್, ಸಾಹಿತ್ಯಾಸಕ್ತರು ಇದ್ದರು.

Leave a Reply

Your email address will not be published. Required fields are marked *