ತುಮಕೂರು: 28 ಸೀಟುಗಳಲ್ಲಿ ಕನಿಷ್ಠ 20 ಸೀಟುಗಳನ್ನಾದರೂ ಈ ಬಾರಿಯ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಬೇಕಿದೆ.ಇಲ್ಲದಿದ್ದರೆ ಸರಕಾರ ನಡೆಸುವ ನೈತಿಕತೆ ನಮಗೆ ಇರುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಮಯೂರ ಜಯಕುಮಾರ್ ಅವರ ಸಮ್ಮುಖದಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಂಬಂಧ ಪಕ್ಷದ ಮುಖಂಡರು,ಕಾರ್ಯಕರ್ತರು,ಮಂಚೂಣಿ ಘಟಕಗಳ ಅಧ್ಯಕ್ಷರುಗಳ ಅಭಿಪ್ರಾಯ ಆಲಿಸುವ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ನೇತೃತ್ವದಲ್ಲಿ ಸಭೆ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡುತ್ತಿದ್ದರು.
ಯಾವುದೇ ಪಕ್ಷ ಸದೃಢವಾಗಬೇಕಿದ್ದರೆ, ಆ ಪಕ್ಷದ ಕಾರ್ಯಕರ್ತರು ಸದೃಢರಾಗಿದ್ದಾಗ ಮಾತ್ರ ಸಾಧ್ಯ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇದು ಸಾಭೀತಾಗಿದೆ. ಗೆಲ್ಲುವ ಅಭ್ಯರ್ಥಿಗೆ ಟಿಕೇಟ್ ನೀಡಬೇಕೆಂಬ ಆಶಯ ನಮ್ಮದು.ನಾವೇನು ಅಭಿಪ್ರಾಯ ಮಂಡಿಸಿದರೂ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳುವವರು ಮುಖ್ಯಮಂತ್ರಿಗಳು ಮತ್ತು ಎಐಸಿಸಿ ಮುಖಂಡರು. ಪಕ್ಷ ಮಾಡಿರುವ ಜನಪರ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟು ಅವರು ಕಾಂಗ್ರೆಸ್ಗೆ ಮತ ಹಾಕುವಂತೆ ಮಾಡುವ ಗುರುತರ ಜವಾಬ್ದಾರಿ ಕಾರ್ಯಕರ್ತರು ಮತ್ತು ಮುಖಂಡರ ಮೇಲಿದೆ ಎಂದರು.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಶ್ರಮಿಸಿದ ಕಾರ್ಯಕರ್ತರನ್ನು ವಿವಿಧ ನಿಗಮ,ಮಂಡಳಿ,ಜಿಲ್ಲಾ ಮಟ್ಟದ ಸಮಿತಿಗಳಿಗೆ ನೇಮಕ ಮಾಡುವ ಪ್ರಕ್ರಿಯೆ ಆರಂಭವಾಗಿದೆ.ಫೆ10 ರಿಂದ ರಾಜ್ಯದಲ್ಲಿ ಆರಂಭವಾಗುವ ಬಜೆಟ್ ಅಧಿವೇಶನದ ವೇಳೆಗೆ ಎಲ್ಲಾ ಜಿಲ್ಲೆಗಳಿಂದ ಪಟ್ಟಿ ಪಡೆದು,ಫೆ.16 ರಂದು ಬಜೆಟ್ ಮಂಡಿಸಿ,ಫೆ.24ರೊಳಗೆ ಎಲ್ಲಾ ನಿಗಮ, ಮಂಡಳಿ,ಜಿಲ್ಲಾ ಮಟ್ಟದ ಸಮಿತಿಗಳ ನೇಮಕ ಪೂರ್ಣಗೊಳ್ಳಲಿದ್ದು,ಮಾರ್ಚ್ 01ರಿಂದ ಲೋಕಸಭಾ ಚುನಾವಣೆಗೆ ತಯಾರಿ ಆರಂಭ ವಾಗಲಿದೆ.ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಟಿಕೇಟ್ ಕೇಳುವ ಅಧಿಕಾರವಿದೆ.ಕಾಂಗ್ರೆಸ್ ಪಕ್ಷದ ಜೀವಾಳವೇ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು.ಟಿಕೇಟ್ ನೀಡಲು ಗೆಲುವೇ ಮಾನದಂಡ.ವೈಯಕ್ತಿಕ ವಚ್ರ್ಚಸ್ಸಿನ ಜೊತೆಗೆ,ಪಕ್ಷದ ಬಲವೂ ಬೇಕು.ಇದು ಪಕ್ಷದ ಅಳಿವು, ಉಳಿವಿನ ಪ್ರಶ್ನೆ ಎಂದು ಕೆ.ಎನ್.ರಾಜಣ್ಣ ನುಡಿದರು.
ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ ಮಾತನಾಡಿ,ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನಮ್ಮೆಲ್ಲಾ ಕಾರ್ಯಕರ್ತರ ಶ್ರಮವಿದೆ.ಬಡವರು,ದಲಿತರು,ಅಲ್ಪಸಂಖ್ಯಾತರು,ಹಿಂದುಳಿದ ವರ್ಗದವರ ಹಿತ ಕಾಯುವಂತಹ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ.ಆ ನಂಬಿಕೆಯಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ನಂಬಿ ಜನತೆ ಮತ ನೀಡಿದ ಪರಿಣಾಮ 136 ಸೀಟುಗಳನ್ನು ಗೆದ್ದು ಅಧಿಕಾರ ಹಿಡಿದಿದೆ. ಪಕ್ಷ ತೀರ್ಮಾನಿಸುವ ಅಭ್ಯರ್ಥಿಯ ಗೆಲುವಿಗೆ ದುಡಿಯುವುದಾಗಿ ವಾಗ್ಧಾನವನ್ನು ನೀಡಬೇಕಾಗಿದೆ ಎಂದರು.
ಎಐಸಿಸಿ ಕಾರ್ಯದರ್ಶಿ ಕಾರ್ಯಕರ್ತರು, ಮುಖಂಡರ ಅಭಿಪ್ರಾಯಗಳನ್ನು ಆಲಿಸಿದ ನಂತರ ಮಾತನಾಡಿ,ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಶೇ40ರ ಕಮಿಷನ್ನ ಬಿಜೆಪಿ ಸರಕಾರವನ್ನು ಕಿತ್ತೊಗೆಯುವಲ್ಲಿ ನಮ್ಮೆಲ್ಲಾ ಕಾರ್ಯಕರ್ತರ ಶ್ರಮವಿದೆ. ಹಾಗಾಗಿ ಅವರಿಗೆ ಅಧಿಕಾರ ನೀಡಿದರೆ ಮಾತ್ರ ಮುಂದಿನ ಚುನಾವಣೆ ಸುಸೂತ್ರ. ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಯ ಜಿಲ್ಲಾಧ್ಯಕ್ಷರು ಜಿಲ್ಲಾ, ತಾಲೂಕು ಮಟ್ಟದ ಆಶ್ರಯ,ಆರಾಧನಾ,ಅಸ್ಪತ್ರೆ ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಸಮಿತಿಗಳ ಸದಸ್ಯರುಗಳನ್ನು ನೇಮಕ ಮಾಡಲು ಮುಂದಿನ 10 ದಿನಗಳ ಒಳಗೆ ಪಟ್ಟಿ ಕಳುಹಿಸಬೇಕು.ಒಂದು ವೇಳೆ ತಪ್ಪಿದ್ದಲ್ಲಿ, ಮುಖಂಡರ ಅಭಿಪ್ರಾಯ ಆಲಿಸಿ, ಪಕ್ಷದ ಹೈಕಮಾಂಡ್ ನೇಮಕ ಅದೇಶ ಹೊರಡಿಸಲಿದೆ.ಎಐಸಿಸಿ ಡಿಸಿಸಿಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲ್ಲ.ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಗೌರವ ಸಿಗಬೇಕೆಂದರೆ ಅವರಿಗೂ ಅಧಿಕಾರಗಳು ಸಿಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ಶಾಸಕರು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳಿಂದ ಮಾಹಿತಿ ಪಡೆದು ಶೀಘ್ರ ಪಟ್ಟಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು, ವೇದಿಕೆಯಲ್ಲಿ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ.ಜಯಚಂದ್ರ, ಮಾಜಿ ಶಾಸಕರಾದ ಎಸ್.ಷಪಿ ಅಹಮದ್,ಡಾ.ರಫೀಕ್ ಅಹಮದ್,ಗಂಗಹನುಮಯ್ಯ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್,ಮಾಜಿ ಅಧ್ಯಕ್ಷರಾದ ಆರ್.ರಾಮಕೃಷ್ಣ,ನರಸಿಂಹಯ್ಯ,ಇಕ್ಬಾಲ್ ಅಹಮದ್,ಮುರುಳೀಧರ ಹಾಲಪ್ಪ,ನಿಖೇತರಾಜ್ ಮೌರ್ಯ,ಷಣ್ಮುಖಪ್ಪ, ರಾಯಸಂದ್ರ ರವಿಕುಮಾರ್, ಗೀತಾರಾಜಣ್ಣ, ಸುಜಾತ, ನಾಗಮಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.