ತುಮಕೂರು : ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಮ್ಮ ಕೊಠಡಿಯಲ್ಲಿಂದು ಬರ ನಿರ್ವಹಣೆ ಕುರಿತು ವಿವಿಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಮುಂದಿನ 6 ತಿಂಗಳಲ್ಲಿ ಕುಡಿಯುವ ನೀರಿಗೆ ಬವಣೆಯುಂಟಾಗಬಹುದಾದ ಗ್ರಾಮಗಳನ್ನು ಗುರುತಿಸಿ ಅಗತ್ಯವಿರುವ ಕಡೆ ತುರ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದು ನಿರ್ದೇಶನ ನೀಡಿದರು.
ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಜಿಲ್ಲೆಯಲ್ಲಿರುವ ಎಲ್ಲ ಆರ್.ಓ. ಘಟಕಗಳನ್ನು ಸುಸ್ಥಿತಿಯಲ್ಲಿಡಬೇಕು. ಕೆಟ್ಟು ನಿಂತಿರುವ ಘಟಕಗಳನ್ನು ತುರ್ತಾಗಿ ದುರಸ್ತಿಪಡಿಸಬೇಕು ಎಂದು ಸೂಚನೆ ನೀಡಿದರಲ್ಲದೆ ಬೇಸಿಗೆಯಲ್ಲಿ ಜಾನುವಾರುಗಳ ಮೇವು ಹಾಗೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರವೀಶ್ ಮಾತನಾಡಿ, ಜಿಲ್ಲೆಯಲ್ಲಿ ಚಿ.ನಾ.ಹಳ್ಳಿ, ತುರುವೇಕೆರೆ ಹಾಗೂ ಕೊರಟಗೆರೆ ತಾಲೂಕಿನ ತಲಾ 12, ಗುಬ್ಬಿ ಹಾಗೂ ಕುಣಿಗಲ್ ತಾಲೂಕಿನ ತಲಾ 7, ಮಧುಗಿರಿ ಹಾಗೂ ಪಾವಗಡದ ತಲಾ 8, ಶಿರಾ-9, ತುಮಕೂರು-1 ಸೇರಿ 76 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದೆಂದು ಅಂದಾಜಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ತುರ್ತು ಕುಡಿಯುವ ನೀರಿನ ಯೋಜನೆಯ 1ಕೋಟಿ ರೂ. ಗಳ ಅನುದಾನದಡಿ ಈಗಾಗಲೇ 35 ಗ್ರಾಮಗಳಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಸಲಾಗಿದ್ದು, ಪ್ರಸ್ತುತ ಯಾವುದೇ ಗ್ರಾಮಗಳಿಗೆ ಟ್ಯಾಂಕರ್ ನೀರು ಸರಬರಾಜು ಮಾಡುವ ಪರಿಸ್ಥಿತಿ ಎದುರಾಗಿಲ್ಲವೆಂದು ಮಾಹಿತಿ ನೀಡಿದರು.
ನಂತರ ಸಣ್ಣ ನೀರಾವರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಮೂಡ್ಲಗಿರಿಯಪ್ಪ ಅವರಿಂದ ಕೆರೆಗಳ ಸ್ಥಿತಿ-ಗತಿ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಜಿಲ್ಲಾಧಿಕಾರಿಗಳು ವರದಿಯನುಸಾರ ಸಣ್ಣ ನೀರಾವರಿ ವಿಭಾಗದ ವ್ಯಾಪ್ತಿಯಲ್ಲಿರುವ 371 ಕೆರೆಗಳ ಪೈಕಿ 111 ಕೆರೆಗಳಲ್ಲಿ ನೀರು ಸಂಪೂರ್ಣ ಬರಿದಾಗಿದ್ದು, 181 ಕೆರೆಗಳು ಶೇ.1 ರಿಂದ 30ರಷ್ಟು, 55 ಕೆರೆಗಳು ಶೇ.31 ರಿಂದ 50ರಷ್ಟು, 24 ಕೆರೆಗಳು ಶೇ.51 ರಿಂದ 99ರಷ್ಟು ತುಂಬಿವೆ ಎಂದರಲ್ಲದೆ ಕೆರೆಯಲ್ಲಿ ಲಭ್ಯವಿರುವ ನೀರನ್ನು ಪೋಲು ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜಿನಪ್ಪ ಮಾತನಾಡಿ, ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ 218 ವಾರ್ಡುಗಳ ಪೈಕಿ ಪಾವಗಡ ಪುರಸಭೆ ವ್ಯಾಪ್ತಿಯ ಬೆಟ್ಟದ ಮೇಲಿರುವ ಕೆಲವು ಮನೆಗಳಿಗೆ ಮಾತ್ರ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಉಳಿದಂತೆ ಕುಡಿಯುವ ನೀರಿಗೆ ಯಾವುದೇ ಕೊರತೆಯುಂಟಾಗಿಲ್ಲವೆಂದು ಮಾಹಿತಿ ಒದಗಿಸಿದರಲ್ಲದೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ 161 ಆರ್.ಓ ಘಟಕಗಳ ಪೈಕಿ 156 ಘಟಕಗಳು ಸುಸ್ಥಿತಿಯಲ್ಲಿದ್ದು, 5 ಘಟಕಗಳು ದುರಸ್ಥಿಯಲ್ಲಿವೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ಈವರೆಗೆ ಸ್ವೀಕೃತವಾದ 37858 ಮನವಿ ಅರ್ಜಿಗಳಿಗೆ 1276.46 ಲಕ್ಷ ರೂ. ವಿಮಾ ಪರಿಹಾರ ನೀಡಲಾಗಿದ್ದು, ದಾಖಲೆಗಳ ಹೊಂದಾಣಿಕೆಯಾಗದಿರುವ 519 ಅರ್ಜಿಗಳು ಬಾಕಿ ಉಳಿದಿವೆ ಎಂದು ಜಂಟಿ ಕೃಷಿ ನಿರ್ದೇಶಕ ರಮೇಶ್ ಸಭೆಗೆ ಮಾಹಿತಿ ನೀಡಿದರು.
ಪಶುಸಂಗೋಪನಾ ಇಲಾಖೆ ಮುಖ್ಯ ಪಶು ವೈದ್ಯಾಧಿಕಾರಿ ಡಾ: ದಿವಾಕರ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ 14 ವಾರಗಳಿಗಾಗುವಷ್ಟು ಜಾನುವಾರುಗಳಿಗೆ ಮೇವು ಲಭ್ಯವಿರುತ್ತದೆ. ಜಾನುವಾರುಗಳಿಗೆ ಮೇವು ಉತ್ಪಾದಿಸಲು ನೀರಾವರಿ ಸೌಲಭ್ಯವಿರುವ ರೈತರಿಗೆ 1,08,401 ಮೇವಿನ ಬೀಜದ ಮಿನಿ ಕಿಟ್‍ಗಳನ್ನು ವಿತರಿಸಲಾಗಿದೆ. ಬಿತ್ತನೆ ಮಾಡಿರುವ ಮೇವಿನ ಬೆಳೆ ಫೆಬ್ರವರಿ ಅಂತ್ಯಕ್ಕೆ ಕಟಾವಿಗೆ ಬರಲಿದ್ದು, ಇದರಿಂದ 1,38,000 ಟನ್ ಮೇವಿನ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಸದ್ಯಕ್ಕೆ ಮೇವಿನ ಕೊರತೆ ಇರುವುದಿಲ್ಲ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ತೋಟಗಾರಿಕೆ ಉಪನಿರ್ದೇಶಕ ಶಾರದಮ್ಮ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಾಗವೇಣಿ, ಹೇಮಾವತಿ ಯೋಜನೆ, ರೇಷ್ಮೆ ಉಪನಿರ್ದೇಶಕ ಬಾಲಕೃಷ್ಣಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.