ಅಂತಿಮ ಮತದಾರರ ಪಟ್ಟಿ: 22,67,153 ಮತದಾರರು

ತುಮಕೂರು : ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲೆಯ ಎಲ್ಲಾ 2615 ಮತಗಟ್ಟೆಗಳಲ್ಲಿ ಈಗಾಗಲೇ ಜನವರಿ 22ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪಟ್ಟಿಯನ್ವಯ 11,25,351 ಪುರುಷರು, 11,41,711 ಮಹಿಳೆಯರು ಹಾಗೂ 91 ಇತರೆ ಸೇರಿದಂತೆ 22,67,153 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿಂದು ಜರುಗಿದ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಂತಿಮ ಮತದಾರರ ಪಟ್ಟಿಯು 41,658  ಯುವ, 29,261 ವಿಕಲಚೇತನ, 742 ಸೇವಾ ಹಾಗೂ 7,718 ಗಣ್ಯ ಮತದಾರರು ಸೇರಿದಂತೆ ಒಟ್ಟು 22,67,153 ಮತದಾರರನ್ನೊಳಗೊಂಡಿದೆ ಎಂದು ತಿಳಿಸಿದರು. 

ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ವತಿಯಿಂದ ಜಿಲ್ಲೆಯ ಪ್ರತಿಯೊಂದು ಮತಗಟ್ಟೆಗೆ ಮತಗಟ್ಟೆ ಏಜೆಂಟರನ್ನು ನೇಮಕ ಮಾಡಿ ಸಂಬಂಧಿಸಿದ ಮತದಾರರ ನೋಂದಣಾಧಿಕಾರಿ(ಇಆರ್‍ಓ)ಗಳಿಗೆ ಮಾಹಿತಿ ಸಲ್ಲಿಸಬೇಕು. ಮತದಾರರ ಪರಿಷ್ಕರಣೆ ಕಾರ್ಯದಲ್ಲಿ ಆಯಾ ಬಿಎಲ್‍ಓ(ಮತಗಟ್ಟೆ ಮಟ್ಟದ ಅಧಿಕಾರಿ)ಗಳಿಗೆ ಅಗತ್ಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಒಟ್ಟು 2615 ಮತಗಟ್ಟೆಗಳಿದ್ದು, ತಿಪಟೂರು ವಿಧಾನ ಸಭಾ ಕ್ಷೇತ್ರದಲ್ಲಿ ಹೊನ್ನವಳ್ಳಿ ಹೋಬಳಿ ಹೊಸ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ನೊಣವಿನಕೆರೆ ಹೋಬಳಿ ಹೊನ್ನೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸದಾಗಿ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. 

ಚುನಾವಣೆ ಆಯೋಗದ ನಿರ್ದೇಶನದಂತೆ  ಪ್ರತಿ ವರ್ಷ ಜನವರಿ-1, ಏಪ್ರಿಲ್-1, ಜುಲೈ-1 ಮತ್ತು ಅಕ್ಟೋಬರ್-1ನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿದ್ದು, ಆಯಾ ದಿನಾಂಕಕ್ಕೆ 18 ವರ್ಷ ತುಂಬಲಿರುವವರು ತಮ್ಮ ಹೆಸರುಗಳ ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಮತದಾರರು ನಿರಂತರ ಪರಿಷ್ಕರಣೆಯಡಿ ನಿಗಧಿತ ನಮೂನೆಗಳಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದ್ದು, ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ರ ಸಂಬಂಧ ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಗಳನ್ನು ಎಲ್ಲಾ ಮತಗಟ್ಟೆ, ಸಹಾಯಕ ಚುನಾವಣಾಧಿಕಾರಿಗಳ ಕಛೇರಿ, ಚುನಾವಣಾಧಿಕಾರಿಗಳ ಕಛೇರಿ ಹಾಗೂ ceo.karnataka.gov.in ಮತ್ತು tumkur.nic.in ವೆಬ್‍ಸೈಟ್‍ಗಳಲ್ಲಿ ಪ್ರಚುರಪಡಿಸಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರು ತಮ್ಮ ನಿವಾಸ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹಾಗೂ ತಮ್ಮ ಮನೆಯ ಸದಸ್ಯರ ಹೆಸರುಗಳು ನಮೂದಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಯಾವುದೇ ಅರ್ಹ ಮತದಾರರ ಹೆಸರುಗಳು ಬಿಟ್ಟು ಹೋಗಿದ್ದಲ್ಲಿ ನಮೂನೆ-6 ಹಾಗೂ ಯಾವುದೇ ಹೆಸರು, ವಿಳಾಸ ಇತ್ಯಾದಿ ತಿದ್ದುಪಡಿಗಳಿದ್ದಲ್ಲಿ ನಮೂನೆ-8ರಲ್ಲಿ ಆನ್‍ಲೈನ್ ಮೂಲಕ ನಿರಂತರ ಪರಿಷ್ಕರಣೆ ಅಡಿ ಅಗತ್ಯ ದಾಖಲೆಗಳೊಂದಿಗೆ ಮನವಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಹೇಳಿದರು.
ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಉಚಿತ ಸಹಾಯವಾಣಿ ಸಂಖ್ಯೆ: 0816-1950ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *