ತುಮಕೂರು : ಲೋಕಸಭಾ ಟಿಕೆಟ್ ಆಸೆಗಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ತೊರೆದು ಮತ್ತೆ ಬಿಜೆಪಿಯನ್ನು ಸೇರಿದ್ದಾರೆ.
ಕೇಂದ್ರದಲ್ಲಿ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರ ಸಚಿವರಾಗಬಹುದು, ಪ್ರಹ್ಲಾದ ಜೋಶಿಗೆ ಬಿಜೆಪಿ ರಾಷ್ಟಾಧ್ಯಕ್ಷರನ್ನಾಗಿ ಮಾಡುವ ಮಾತುಕತೆ ನಡೆಯುತ್ತಾ ಇದ್ದು, ಜೋಶಿಯ ನಂತರ ಪ್ರಬಲ ಮತ್ತು ಹಿರಿಯರೆನೆಸಿಕೊಳ್ಳುವ ಜಗದೀಶ್ ಶೆಟ್ಟರ್ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡುವವರಿದ್ದಾರೆ, ಈ ಹಿನ್ನಲೆಯಲ್ಲಿ ಜಗದೀಶ್ ಶೆಟ್ಟರ್ ಅವರು ಮರಳಿ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಲಿಲ್ಲವೆಂದು ಬೇಸರ ಮತ್ತು ಸಿಟ್ಟುಗೊಂಡು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದ ಶೆಟ್ಟರ್ ಚುನಾವಣೆಯಲ್ಲಿ ಸೋಲನನುಭಿವಿಸಿದ್ದರು, ನಂತರ ಕಾಂಗ್ರೆಸ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಿಸಿತ್ತು.
ಈಗ ಲೋಕಸಭೆ ಚುನಾವಣೆ ಹತ್ತಿರ ಬಂದ ಕೂಡಲೇ ಜಗದೀಶ್ ಶೆಟ್ಟರನ್ನು ಕರೆ ತಂದರೆ ಹೆಚ್ಚು ಸ್ಥಾನಗಳನ್ನು ಗೆಲ್ಲ ಬಹುದು ಎಂಬ ಲೆಕ್ಕಚಾರದಲ್ಲಿ ಲೋಕಸಭಾ ಟಿಕೆಟ್ ಆಸೆ ತೋರಿಸಿ ಮತ್ತೆ ಬಿಜೆಪಿಗೆ ಕರೆ ತರುವಲ್ಲಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಶಸ್ವಿಯಾಗಿದ್ದಾರೆ.
ವಿಧಾನ ಪರಿಷತ್ತು ಸ್ಥಾನಕ್ಕೆ ರಾಜೀನಾಮೆ
ವಿಧಾನ ಪರಿಷತ್ ಸ್ಥಾನಕ್ಕೆ ತಮ್ಮ ಸ್ವ ಇಚ್ಚೆಯಿಂದ ರಾಜೀನಾಮೆ ನೀಡಿರುವುದಾಗಿ ಜಗದೀಶ್ ಶೆಟ್ಟರ್ ಅವರು ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ.
“ಕರ್ನಾಟಕ ವಿಧಾನ ಪರಿಷತ್ತು ಸದಸ್ಯತ್ವಕ್ಕೆ ಈ ದಿನ ನಾನು ನನ್ನ ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸುತ್ತಿದ್ದೇನೆ, ದಯವಿಟ್ಟು ರಾಜೀನಾಮೆಯನ್ನು ಸ್ವೀಕರಿಸಬೇಕಾಗಿ ವಿನಂತಿ, ಇಲ್ಲಿಯವರೆಗೆ ತಾವು ನೀಡಿದ ಸಹಕಾರಕ್ಕಾಗಿ ವಂದನೆಗಳು” ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ
ಕಾಂಗ್ರೆಸ್ನಲ್ಲಿ ಶೆಟ್ಟರ್ಗೆ ಅನ್ಯಾಯವಾಗಿಲ್ಲ : ಮುಖ್ಯಮಂತ್ರಿ
ಲೋಕಸಮರದಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರಾದ ಜಗದೀಶ್ ಶೆಟ್ಟರ್ ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಜಗದೀಶ್ ಶೆಟ್ಟರಿಗೆ ಯಾವುದೇ ಅನ್ಯಾಯ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದಲ್ಲಿ ಜಗದೀಶ್ ಶೆಟ್ಟರಿಗೆ ಯಾವುದೇ ಅನ್ಯಾಯ ಆಗಿಲ್ಲ.
ಅವಮಾನವೂ ಆಗಿಲ್ಲ. ಬಿಜೆಪಿ ಟಿಕೆಟ್ ಕೊಡದೇ ಅವಮಾನ ಮಾಡಿದ್ದಾರೆ ಎಂದು ಹೇಳಿ ಸೇರಿದರು. ನಾವು ಅವರಿಗೆ ಟಿಕೆಟ್ ಕೊಟ್ಟರೂ ವಿಧಾನಸಭಾ ಚುನಾವಣೆಯಲ್ಲಿ ಸೋತರು. ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಅವರನ್ನು ಗೌರವಯುತವಾಗಿ ನಡೆಸಿಕೊಂಡಿದ್ದೇವೆ ಎಂದರು. ಜಗದೀಶ್ ಶೆಟ್ಟರ್ ಅವರು ಪುನ: ಬಿಜೆಪಿಗೆ ಸೇರ್ಪಡೆಯಾಗಿರುವ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಬಳಿ ಬಿಜೆಪಿಯಲ್ಲಿ ಅವಮಾನವಾಗಿದ್ದು ಪುನ: ವಾಪಸ್ಸು ಹೋಗುವುದಿಲ್ಲ ಎಂದಿದ್ದರು. ಬಿಜೆಪಿಯಿಂದ ಅವಮಾನಿತರಾಗಿ ಬಂದ ಜಗದೀಶ್ ಶೆಟ್ಟರಿಗೆ ಕಾಂಗ್ರೆಸ್ ಪಕ್ಷ ಘನತೆಯಿಂದ ನಡೆಸಿಕೊಂಡು ಸೂಕ್ತ ಸ್ಥಾನ ಮಾನ ನೀಡಿತು. ನನ್ನನ್ನು ಅವರು 10 ದಿನಗಳ ಹಿಂದೆ ಸಭೆಯೊಂದರಲ್ಲಿ ಭೇಟಿ ಮಾಡಿದ್ದರು. ನಂತರ ನನಗೆ ಅವರು ಸಿಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.