ಉದ್ಯೋಗ ಖಾತ್ರಿ ಕಾಯ್ದೆ ಯಡಿಯಲ್ಲಿ ಮೂರುವರ್ಷದ ಒಳಗಿನ ಮಕ್ಕಳನ್ನು ಹೊಂದಿರುವ ಹೆಣ್ಣು ಮಕ್ಕಳ ಉದ್ಯೋಗದ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಗಳು ಉದ್ಯೋಗ ಖಾತ್ರಿ ಕಾಯ್ದೆಯನ್ನು ಒಗ್ಗೂಡಿಸುವ ಮೂಲಕ ಕೂಸಿನ ಮನೆ ಯೋಜನೆಯನ್ನು ರೂಪಿಸಿವೆ.
ಕೂಸಿನ ಮನೆ ಯೋಜನೆಯ ಅನುಷ್ಠಾನ ಕುರಿತು ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತಿದೆ. ಕಾರಣಗಳನ್ನು ಅವಲೋಲಿಸಿದಾಗ ಯೋಜನೆಯ ಅನುಷ್ಠಾನ ಅವೈಜ್ಯಾನಿಕ ವಾಗಿದೆ.
ಈ ಯೋಜನೆಯನ್ನು ಅಧಿಕೃತವಾಗಿ 2023-24 ನೇ ಸಾಲಿನ ರಾಜ್ಯ ಆಯವ್ಯಯ ದಲ್ಲಿ ಘೋಷಿಸುವ ಮುನ್ನ ರಾಜ್ಯ ವಿವಿಧ ಜಿಲ್ಲೆಗಳ 62 ಗ್ರಾಮ ಪಂಚಾಯತಿಗಳಲ್ಲಿ, ಪ್ರಾಯೋಗಿಕವಾಗಿ ಕೂಸಿನ ಮನೆಗಳನ್ನು ಸ್ಥಾಪಿಸಿ ನಿವೃತ್ತ ಐಎಎಸ್ ಅಧಿಕಾರಿಳು ಸ್ಥಾಪಿಸಿರುವ ಕ್ರಿಸ್ಪ್(CCRISP) ಸಂಸ್ಥೆಯ ಮೂಲಕ ಅಧ್ಯಯ ಮಾಡಿಸಲಾಗಿದೆ.
ಅಧ್ಯಯನದ ಹಿನ್ನೆಲೆಯಲ್ಲಿ ನೋಡಿದಾಗ ಈ ಕೆಳಗಿನ ಅಂಶಗಳು ಗಮನ ಸೆಳೆಯುತ್ತವೆ.
ಉದ್ಯೊಗ ಖಾತ್ರಿ ಕಾಯ್ದೆ:
ಉದ್ಯೊಗ ಖಾತ್ರಿ ಕಾಯ್ದೆಯ ಸೆಕ್ಷನ್ 28 ರ ಪ್ರಕಾರ ಉದ್ಯೊಗ ಖಾತ್ರಿ ಅಡಿಯಲ್ಲಿ ಕಾಮಗಾರಿ ನಡೆಯುವ ಕಾಮಗಾರಿಯಲ್ಲಿ ಕೆಲಸ ಮಾಡಲು ಮೂರು ವರ್ಷದೊಳಗಿನ ಮಕ್ಕಳನ್ನು ಹೊಂದಿರುವ ಐದಕ್ಕಿಂತ ಹೆಚ್ಚು ಹೆಣ್ಣು ಮಕ್ಕಳು ಬಂದಲ್ಲಿ, ಅವರೊಡನೆ ಬಂದಿರುವ ಮಕ್ಕಳನ್ನು ನೋಡಿಕೊಳ್ಳಲು ಆರನೆಯ ಹೆಣ್ಣು ಮಗಳನ್ನು ನೇಮಕ ಮಾಡಬೇಕು. ಸೆಕ್ಷನ್ 29 ರ ಪ್ರಕಾರ ಆ ಹೆಣ್ಣು ಮಗಳಿಗೆ ಉದ್ಯೋಗ ಖಾತ್ರಿ ಕಾಯ್ದೆ ಅನುಸಾರ ಆ ದಿನದ ಕೂಲಿಯನ್ನು ಕೊಡಬೇಕು.
ಐದು ಹೆಣ್ಣು ಮಕ್ಕಳು ಮೂರು ವರ್ಷದ ಮಕ್ಕಳೊಂದಿಗೆ ಬರದಿದ್ದಲ್ಲಿ ಏನು ಮಾಡಬೇಕು ಎಂಬುದಕ್ಕೆ ಉತ್ತರವಿಲ್ಲ. ಕೆಲಸ ನಡೆಯದಿದ್ದ ದಿನ ಸರ್ಕಾರ ತಾಲ್ಲೂಕು ಪಂಚಾಯತಿ ಗಳ ಮೂಲಕ ಒದಗಿಸಿರುವ ಅನುದಾನದಲ್ಲಿ ಅಂದಿನ ಕೂಲಿ ಕೊಡಬೇಕೆಂದಿದೆ. ಈ ಅನುದಾನ ಸಾಕಾಗುವುದಿಲ್ಲ.

ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳನ್ನು ಹೊರತು ಪಡಿಸಿ ಇತರೆ ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳಿರಲಿ, ಗಂಡು ಮಕ್ಕಳೇ ಕೆಲಸಕ್ಕೆ ಬರುತ್ತಿಲ್ಲ, ಇಂಥಹ ಪರಿಸ್ಥಿತಿಯಲ್ಲಿ ಕೂಸಿನ ಮನೆ ಕಾರ್ಯಕರ್ತೆಯರಿಗೆ ಕೂಲಿಹಣ ನೀಡುವುದು ಹೇಗೆ? ಉತ್ತರವಿಲ್ಲ. ಕ್ರಿಸ್ಪ್ ಸಂಸ್ಥೆಯ ಅಧ್ಯಯಯನ ವರದಿ ಕೂಸಿನ ಮನೆ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿರುವ ಮಡಿರುವ 62 ರಲ್ಲಿ ಕ್ರಿಯಾ ಶೀಲಾವಗಿರುವ 20 ರಲ್ಲಿ ಕೇವಲ ಎರಡು ಕೂಸಿನ ಮನೆಗಳಲ್ಲಿ ಮಾತ್ರ ಉದ್ಯೊಗ ಖಾತ್ರಿ ಕಾಯ್ದೆ ಅಡಿಯಲ್ಲಿ ಕೂಲಿ ಹಣ ನೀಡಲಾಗಿದೆ.
ಕೂಲಿ ಹಣ ನೀಡಲು ಸೂಕ್ತ ಹಣಕಾಸಿನ ಲಭ್ಯತೆಯಿಲ್ಲದೇ ಕೂಸಿನ ಮನೆ ನಡೆಸಲು ಸಾಧ್ಯವೇ?
ಸೂಕ್ತ ಸುರಕ್ಷಿತ ಕಟ್ಟಡ:
ಕೂಸಿನ ಮನೆ ಕಟ್ಟಡ ಮಕ್ಕಳಸ್ನೇಹಿಯಾಗಿರಬೇಕು, ಮಕ್ಕಳಿಗೆ ಮತ್ತು ಕಾರ್ಯಕರ್ತೆಗೆ ಪ್ರತ್ಯೇಕ ಸೌಚಾಲಯ ಇರಬೇಕು, ಪ್ರತ್ಯೇಕ ಅಡುಗೆ ಕೋಣೆ, ಉಗ್ರಾಣದ ವ್ಯವಸ್ತೆಯಿರಬೇಕು, ಮಕ್ಕಳು ಆಟವಡಲು ಸುತ್ತಲೂ ಸಾಕಷ್ಟು ಖಾಲಿ ಜಾಗವಿರಬೇಕು. ಕಟ್ಟಡ ಎಲ್ಲಾ ರೀತಿಯಲ್ಲೂ ಗುಣಮಟ್ಟ ದಿಂದ ಕೂಡಿದ್ದು ಸುರಕ್ಷಿತವಾಗಿರಬೇಕು ಎಂದು ಸರ್ಕಾರದ ಮಾರ್ಗ ಸೂಚಿಗಳು ಹೇಳುತ್ತವೆ. “ಕೂಸಿನ ಮನೆ ನನ್ನ ಕನಸಿನ ಕೂಸು” ಅನುಷ್ಠಾನ ಗೊಳ್ಳಲೇಬೇಕು ಎಂಬ ಅಧಿಕಾರಿಯೊಬ್ಬರ ಪ್ರತಿಷ್ಠೆಯ ಕಾರಣಕ್ಕಾಗಿ ಗ್ರಾಮಪಂಚಾಯತಿಗಳಲ್ಲಿ ಲಭ್ಯವಿರುವ ಹಳೇ ಕಟ್ಟಡಗಳಲ್ಲೇ ಅವುಗಳಿಗೆ ಸುಣ್ಣ ಬಣ್ಣ ಬಳಿಸಿ ಯಾವುದೇ ಸುರಕ್ಷತೆಗೆ ಗಮನ ನೀಡದೇ ಕೂಸಿನ ಮನೆಗಳನ್ನು ಪ್ರಾರಂಭ ಮಾಡಲಾಗಿದೆ. ಮಕ್ಕಳ ಸುರಕ್ಷತೆಯ ಜವಾಬ್ದಾರಿ ಯಾರದೂ ಎಂಬುದಕ್ಕೆ ಸ್ಪಷ್ಟವಾದ ಉತ್ತರವಿಲ್ಲ.

ತಾಯಿ ಮತ್ತು ಮಕ್ಕಳು:
ಉದ್ಯೋಗ ಖಾತ್ರಿ ಕಾಯ್ದೆ ಇನ್ನೆಲೆಯಲ್ಲಿ ಕೂಸಿನ ಮನೆಯ ಮೂಲ ಉದ್ದೇಶವೇ ಮಗುವಿನ ತಾಯಿ ಪುಟ್ಟ ಮಗುವಿರುವ ಕಾರಣಕ್ಕೆ ಉದ್ಯೋಗ ಕಳೆದುಕೊಳ್ಳಬಾರಾದು ಹಾಗೂ ಮಗು ತಾಯಿಯಿಂದ ದೂರವಿರಬಾರದು, ತಾಯಿಯ ಎದೆ ಹಾಲೂ ಕುಡಿಯುವ ಮಕ್ಕಳಿಗೆ ಹಾಲುಣಿಸಲು ಅನುಕೂಲವಾಗುವಂತೆ, ಕಾಮಗಾರಿ ಸ್ಥಳದಲ್ಲೇ ತಾತ್ಕಾಲಿಕ ವ್ಯವಸ್ಥೆ ಮಾಡುವುದು.
ಆದರೆ ಸರ್ಕಾರ ತಾತ್ಕಾಲಿಕ ವ್ಯವಸ್ಥೆಯನ್ನು ಸಾಂಸ್ಥೀಕರಣಗೊಳಿಸಿದೆ. ಗ್ರಾಮ ಪಂಚಾಯತಿಗೊಂದು ಹಳ್ಳಿಯಲ್ಲಿ ಕೂಸಿನ ಮನೆ ಸ್ಥಾಪಿಸಿದರೆ, ಪಂಚಾಯತಿ ವ್ಯಾಪ್ತಿಯ ಇತರೆ ಹಳ್ಳಿಗಳ್ಳಿಗಳಿಂದ ಮಕ್ಕಳನ್ನು ಕೂಸಿನ ಮನೆಗೆ ಮಕ್ಕಳನ್ನು ಕರೆತರುವುದು, ಕರೆದುಕೊಂಡು ಹೋಗುವುದು ಹೇಗೆ, ತಾಯಿ ಕಾಮಗಾರಿ ಸ್ಥಳದಿಂದ ಬಂದು ಹಾಲುಣಿಸುವುದು ಹೇಗೆ ಎಂದರೆ ಗ್ರಾಮ ಪಂಚಾಯತಿ ಬೇಕಾದರೆ ಎಲ್ಲಾ ಹಳ್ಳಿಗಳಲ್ಲಿ ಕೂಸಿನ ಮನೆ ಸ್ಥಾಪಿಸಲಿ ಎಂಬ ಬೇಜವಾಬ್ದಾರಿ ಉತ್ತರವನ್ನು ಅಧಿಕಾರಿಯೊಬ್ಬರು ನೀಡುತ್ತಾರೆ. ಒಂದು ಕೂಸಿನ ಮನೆ ಸ್ಥಾಪಿಸಲು ಬೇಕಾದ ಆರ್ಥಿಕ ಬೆಂಬಲವನ್ನೇ ಸರ್ಕಾರ ನೀಡಿಲ್ಲ. ಹೆಚ್ಚುವರಿ ಸ್ಥಾಪಿಸುವುದು ಹೇಗೆ? ಉತ್ತರವಿಲ್ಲ.
ಗ್ರಾಮ ಪಂಚಾಯತಿಗಳಿಂದ ವಿರೋಧ:
ಗ್ರಾಮ ಪಂಚಾಯತಿ ಗಳು ಸ್ಥಳೀಯ ಸ್ವಯಂ ಸರ್ಕಾರಗಳೆಂದು ಸಂವಿಧಾನ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಹೇಳುತ್ತದೆ. ಗ್ರಾಮ ಸಭಾಗಳ ಮೂಲಕ ಜನರ ಬೇಡಿಕೆಗಳ ಅಧಾರದಲ್ಲಿ ಅರ್ಥಿಕ ಅಭಿವೃದ್ಧಿ ಮತ್ತು ಸಾಮಜಿಕ ನ್ಯಾಯದ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುವುದು ಪಂಚಾಯತಿಗಳ ಜವಾಬ್ದಾರಿ.
ಆದರೆ ಸರ್ಕಾರವೇ ಕೂಸಿನ ಮನೆ ಯೋಜನೆಯನ್ನು ರೂಪಿಸಿ, ಗ್ರಾಮ ಪಂಚಾಯತಿಗಳು ತನ್ನ ಲಭ್ಯ ಅನುದಾನ ಬಳಸಿ ಅನುಷ್ಠಾನ ಮಾಡುವಂತೆ ಒತ್ತಡ ಹಾಕುತ್ತಿದೆ. ಇದು ಸಂಪುರ್ಣವಾಗಿ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಮತ್ತು ಗ್ರಾಮ ಪಂಚಾಯತಿಗಳು ಆರ್ಥಿಕ ಮುಗ್ಗಟ್ಟಿನಿಂದ ಸೊರಗುವಂತೆ ಮಾಡಿದೆ. ಅದರಿಂದಾಗಿ ಪಂಚಾಯತಿಗಳು ಯೋಜನೆ ರೂಪಿಸಿದ ಸರ್ಕಾರವೇ ಅದಕ್ಕೆ ಬೇಕಾದ ಅನುದಾನದ ವ್ಯವಸ್ಥೆಯನ್ನುಮಾಡಾಬೇಕು ಎಂದು ಆಗ್ರಹಿಸುತ್ತಿವೆ.
ಅಂಗವವಾಡಿ ಕೇಂದ್ರಗಳು:
1975 ರಲ್ಲಿ 0 ಯಿಂದ 6 ವರ್ಷದ ಸರ್ವತೋಮುಖ ಬೆಳಣಿಗೆಯ ದೃಷ್ಟಿಯಿಂದ ಸಮಹ್ರ ಶಿಶು ಅಭಿವೃದ್ಧಿ ಯೋಜನೆ ರೂಪಿಸಿ ಅಂಗವಾಡಿಗಳನ್ನು ಸ್ಥಾಪಿಸಲಾಯಿತು.
ಅಂಗನವಾಡಿಗಳಿಗೆ ಮೂರು ವರ್ಷದ ಮೇಲ್ಪಟ್ಟಮಕ್ಕಳು ಬರುತ್ತೆ. ಮೂರು ವರ್ಷದ ಮಕ್ಕಳಿಗೆ ಮನೆಗೇ ಸೂಕ್ತ ಪೋಷಕಾಂಷ ಯುಕ್ತ ಆಹಾರ ನೀಡಿ ಫೋಷಿಸಲಾಗುತ್ತಿದೆ. ರಾಜ್ಯದ ಪ್ರತಿ ಗ್ರಾಮ ಗಳಲ್ಲಿ ಅಂಗನವಾಡಿ ಕೇಂದ್ರಗಳಿವೆ. ಅವುಗಳಲ್ಲಿ ಐವತ್ತು ವರ್ಷಗಳ ತುಂಬುತ್ತಾ ಬಂದರೂ ಇನ್ನೂ ಹತ್ತು ಸಾವಿರ ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ಖಾಸಗಿ ಶಾಲೆಗಳ ಕಾರಣದಿಂದಾಗಿ ಹಾಗೂ ಸರ್ಕಾರಿ ಶಾಲೆಗಳಲ್ಲೂ ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಿರುವ ಕಾರಣದಿಂದಾಗಿ ಅಂಗನವಾಡಿಗಳು ಮಕ್ಕಳಿಲ್ಲದೆ ಸೊರಗುತ್ತಿವೆ.
ಇಂಥಹ ಸಂದರ್ಭದಲ್ಲಿ ಹೆಚ್ಚಿನ ಆರ್ಥಿಕ ಬೆಂಬಲದೊಂದಿಗೆ ಅಂಗನವಾಡಿಗಳಲ್ಲೇ ಕೂಸಿನ ಮನೆಗಳನ್ನು ಸ್ಥಾಪಿಸಬಹುದಾಗಿತ್ತು. ಇದರಿಂದಾಗಿ ಪ್ರತೀ ಹಳ್ಳಿಯಲ್ಲಿ ಪುಟ್ಟ ಮಕ್ಕಳಿರುವ ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲವಾಗುತ್ತಿತ್ತು.
ಬಜೆಟ್ ಬೆಂಬಲ ಬೇಕು!!
ಮೇಲಿನ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಪ್ರಾರಂಭಿಸಿರುವ ಕೂಸಿನ ಮನೆಗಳು ಸುಸ್ಥಿರಗೊಳ್ಳ ಬೇಕೆಂದರೆ ಕೂಸಿನ ಮನೆ ಮನೆಯನ್ನು ಉದ್ಯೋಗ ಖಾತ್ರಿ ಕಾಯ್ದೆಯಿಂದ ಬಿಡುಗಡೆಗೊಳಿಸಿ ನೇರವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಅಂಗನವಾಡಿ ಶಿಕ್ಷಕಿಯರಿಗೆ ಗೌರವ ಧನ ನೀಡುವ ಹಾಗೆ ಕೂಸಿನ ಮನೆ ಕಾರ್ಯಕರ್ತೆಯರಿಗೂ ಗೌರವ ಧನ ನೀಡಲು ಹಾಗೂ ಮಕ್ಕಳ ಸುರಕ್ಷತೆಯನ್ನು ಪಣಕ್ಕಿಟ್ಟು ಲಭ್ಯ ಹಳೇ ಕಟ್ಟಡದಲ್ಲಿ ಕೂಸಿನ ಮನೆ ನಡೆಸುವುದನ್ನು ತಪ್ಪಿಸಲು ಸುಸಜ್ಜಿತ ಸುರಕ್ಷಿತ ಕೂಸಿನ ಮನೆ ಕಟ್ಟಡಗಳನ್ನು ನಿರ್ಮಾಣ ಮಾಡಲು ಹಾಗೂ ಪೌಷ್ಟಿಕಾಂಶ ಯುಕ್ತ ಆಹಾರ ನೀಡಲು ಸರ್ಕಾರ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ನೀಡಬೇಕು.
ಕೂಸಿನ ಮನೆ ಯಶಸ್ಸಿಗೆ ಬಜೆಟ್ ಬೆಂಬಲ ಬೇಕೆ ಬೇಕು. ಇಲ್ಲವಾದರೆ ಇದೊಂದು ಅಧಿಕಾರಿಯೊಬ್ಬರ ಕನಸಿನ ಸೋತ ಮನೆಯಾಗುವುದರಲ್ಲಿ ಅನುಮಾನವಿಲ್ಲ!!!
- ಕಾಡಶೆಟ್ಟಿಹಳ್ಳಿ ಸತೀಶ್ ,
ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟ