ಸಹಕಾರ ಸಂಘದ ಸಿಓಗೆ : ಜೈಲು ಶಿಕ್ಷೆಯೊಂದಿಗೆ 1.40ಕೋಟಿ ದಂಡ ವಿಧಿಸಿ ತೀರ್ಪು

ತುಮಕೂರು : ಜಿಲ್ಲೆಯ ತಿಪಟೂರು ತಾಲ್ಲೂಕು ಬೆನ್ನಾಯಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಹೆಚ್.ಬಸಪ್ಪ @ ಬಸವರಾಜು ಅವರಿಗೆ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಅಕ್ರಮವಾಗಿ ಗಳಿಸಿರುವ ಆರೋಪದ ಮೇಲೆ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯವು ಫೆಬ್ರವರಿ 12ರ ಮಂಗಳವಾರದಂದು 4 ವರ್ಷ ಸಾಧಾರಣ ಜೈಲು ಶಿಕ್ಷೆ ಮತ್ತು 1,40,00,000/- (ಒಂದು ಕೋಟಿ ನಲವತ್ತು ಲಕ್ಷ) ದಂಡ ವಿಧಿಸಿದ್ದು, ದಂಡಕಟ್ಟಲು ವಿಫಲರಾದಲ್ಲಿ ಒಂದು ವರ್ಷ ಹೆಚ್ಚುವರಿ ಕಾರಾಗೃಹ ಶಿಕ್ಷೆ ವಿಧಿಸಿ, ತೀರ್ಪು ನೀಡಿದೆ.

ತಿಪಟೂರು ತಾಲ್ಲೂಕು ರಾಮಶೆಟ್ಟಿಹಳ್ಳಿ ನಿವಾಸಿಯಾಗಿದ್ದ ಆರ್.ಹೆಚ್.ಬಸಪ್ಪ @ ಬಸವರಾಜು ಅವರು ತಮ್ಮ ಸರ್ಕಾರಿ ಸೇವಾ ಅವಧಿಯಲ್ಲಿ ಅಕ್ರಮವಾಗಿ ಹೆಚ್ಚಿನ ಆಸ್ತಿ ಗಳಿಸಿರುವ ಬಗ್ಗೆ ವಿಚಾರಣೆಯಿಂದ ಸಾಬೀತಾಗಿರುವುದರಿಂದ ನ್ಯಾಯಾಧೀಶರಾದ ಪಿ.ಪಿ.ರಾಮಲಿಂಗೇಗೌಡ ಅವರು ವಿಶೇಷ ಪ್ರಕರಣ ಸಂಖ್ಯೆ:196/2016 ರಲ್ಲಿ ತೀರ್ಪು ನೀಡಿದ್ದಾರೆ.

ಆರ್.ಹೆಚ್.ಬಸಪ್ಪ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಮಾಹಿತಿ ಸಂಗ್ರಹಣೆಯ ಆಧಾರದ ಮೇಲೆ ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಗಂಗಲಿಂಗಯ್ಯ ಅವರು 2014ನೇ ಸಾಲಿನಲ್ಲಿ ಮೊ.ನಂ:02/2014 ಕಲಂ-13(1)(ಇ) ರೆ/ವಿ 13(2) ಪಿ.ಸಿ ಆಕ್ಟ್-1988 (ತಿದ್ದುಪಡಿ ಕಾಯ್ದೆ-2018) ರ ರೀತ್ಯಾ ಪ್ರಕರಣ ದಾಖಲಿಸಿ, ಆರೋಪಿ ಅಧಿಕಾರಿ ಮನೆಯ ಮೇಲೆ ದಾಳಿ ನಡೆಸಿದ್ದರು.

ಈ ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಇನ್ಸ್‍ಪೆಕ್ಟರ್ ಎಸ್.ಎಂ.ಶಿವಕುಮಾರ್ ಅವರು ಆರೋಪಿ ಅಧಿಕಾರಿ ಆರ್.ಹೆಚ್.ಬಸಪ್ಪ @ ಬಸವರಾಜು ಅವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಕರಾದ ಶ್ರೀ ಆರ್.ಪಿ.ಪ್ರಕಾಶ್ ರವರು ವಾದ ಮಂಡಿಸಿದ್ದರು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ವಲಿಬಾಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Leave a Reply

Your email address will not be published. Required fields are marked *