ತುಮಕೂರು:ರಾಜ್ಯ ಸರಕಾರ ಶುಕ್ರವಾರ ಮಂಡಿಸಲಿರುವ ಬಜೆಟ್ನಲ್ಲಿ ಕೊಬ್ಬರಿಗೆ ಮೂರು ಸಾವಿರ ರೂಗಳ ಪ್ರೋತ್ಸಾಹ ಧನ ಪ್ರಕಟಿಸುವ ಮೂಲಕ ನಾವು ರೈತರ ಪರ ಎಂಬುದನ್ನು ಕೇವಲ ಹೇಳಿಕೆಗಳ ಮೂಲಕ ಅಲ್ಲ. ದಾಖಲೆಗಳ ಸಮೇತ ಸಾಭೀತು ಪಡಿಸುವಂತೆ ರೈತ ಮುಖಂಡ ಕೆ.ಟಿ.ಶಾಂತಕುಮಾರ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಕೊಬ್ಬರಿಗೆ ಕ್ವಿಂಟಾಲ್ಗೆ 15 ಸಾವಿರ ಬೆಂಬಲ ಬೆಲೆಗೆ ಆಗ್ರಹಿಸಿ ರೈತ ಸಂಘ ಮತ್ತು ಹಸಿರುವ ಆಯೋಜಿಸಿರುವ ತುಮಕೂರು ಬಂದ್ ಹಿನ್ನೆಲೆಯಲ್ಲಿ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡು ಟೌನ್ಹಾಲ್ ಬಳಿ ಮಾತನಾಡಿದ ಅವರು,ರಾಜ್ಯ ಸರಕಾರ ನೀಡುತ್ತಿರವು 1500 ರೂಗಳಿಗೆ ಹೆಚ್ಚುವರಿಯಾಗಿ ಅಷ್ಟೇ ಹಣವನ್ನು ಪ್ರೋತ್ಸಾಹಧನವಾಗಿ ಘೋಷಿಸುವ ಮೂಲಕ ಸಂಕಷ್ಟದ ಲ್ಲಿರುವ ಸುಮಾರು 12 ಜಿಲ್ಲೆಗಳ ಕೊಬ್ಬರಿ ಬೆಳೆಗಾರರ ನೆರವಿಗೆ ಬರಬೇಕೆಂದರು.
ಕೇಂದ್ರದ ಅನುಮೋಧನೆಯಂತೆ ರಾಜ್ಯ ಸರಕಾರ ನ್ಯಾಫೇಡ್ ಮೂಲಕ ಖರೀದಿಸಲು ಹೊರಟಿದ್ದ ಕೊಬ್ಬರಿ ನೊಂದಣಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ.ಸರಕಾರದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೇ ಶಾಮೀಲಾಗಿದೆ. ವರ್ತಕರು, ದಲ್ಲಾಳಿಗಳು, ಸಾಗಾಟಗಾರರಿಂದ ಕೊಬ್ಬರಿ ಖರೀದಿಸಿ, ಕೇವಲ ನಾಲ್ಕು ದಿನದಲ್ಲಿ ನಿಗಧಿ ಪಡಿಸಿದ 62500 ಮೆ.ಟ.ಖರೀದಿ ಮುಗಿದಿದೆ ಎಂದು ಹೇಳಿದ್ದಾರೆ. ಇದು ಶುದ್ದ ಸುಳ್ಳು,ರೈತರಿಗೆ ಇದರಿಂದ ಯಾವುದೇ ಉಪಯೋಗವಿಲ್ಲ.ಹಾಗಾಗಿ 62500 ಮೆ.ಟನ್ಗೆ ಬದಲಾಗಿದೆ 1.50 ಲಕ್ಷ ಮೆ.ಟ.ಖರೀದಿಗೆ ರಾಜ್ಯ ಸರಕಾರ ಅನುಮೋಧನೆ ಪಡೆದುಕೊಳ್ಳಬೇಕು.ಹಾಗೆಯೇ ಎಫ್.ಎ.ಕ್ಯೂನನ್ನು 75ಎಂ.ಎಂ.ಗೆ ಬದಲಾಗಿ 50 ಎಂ.ಎಂ.ಗೆ ಇಳಿಸಬೇಕು ಎಂದು ಕೆ.ಟಿ.ಶಾಂತಕುಮಾರ್ ಆಗ್ರಹಿಸಿದರು.
ನ್ಯಾಫೇಡ್ನ ಮೂಲಕ ಕೊಬ್ಬರಿ ಖರೀದಿಗೆ ನೊಂದಾಯಿಸುವ ವೇಳೆ ಸಾಕಷ್ಟು ಅವ್ಯವಹಾರ ನಡೆದಿರುವ ಶಂಕೆ ಇದೆ. ಹಾಗಾಗಿ ಸರಕಾರ ಕೂಡಲೇ ತನಿಖೆ ಕೈಗೊಂಡು, ತಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವುದರ ಜೊತೆಗೆ,ಮತ್ತಷ್ಟು ಖರೀದಿಗೆ ರೈತರ ಹೆಸರು ನೊಂದಾಯಿಸಲು ಮುಂದಾಗಬೇಕು.ರಾಜ್ಯದಲ್ಲಿಯೇ ಅತಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆ ತುಮಕೂರು.ಆದರೆ ನೊಂದಣಿ ನೋಡಿದರೆ ಕಡಿಮೆ ಇದೆ.ಹಾಸನ,ಮಂಡ್ಯದಲ್ಲಿ ಹೆಚ್ಚಾಗಿದೆ.ಹಾಗಾಗಿ ಜಿಲ್ಲೆಯ ರೈತರಿಗೆ ಅನ್ಯಾಯವಾಗಲಿದೆ ಎಂದು ಕೆ.ಟಿ.ಶಾಂತ ಕುಮಾರ್ ಆರೋಪಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ,ಕೇಂದ್ರ ಸರಕಾರ ಎಂ.ಎಸ್.ಪಿ.ಗೆ ಕಾಯ್ದ ತರಬೇಕೆಂದು ಹೋರಾಟ ನಡೆಸುತ್ತಿರುವ ರೈತರ ಪರವಾಗಿ ಮಾತನಾಡುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ಗಾಂಧಿ ಅವರುಗಳು,ರಾಜ್ಯದಲ್ಲಿ ಮಾತ್ರ ಅತಿ ಕಡಿಮೆ ಬೆಲೆಗೆ ಕೊಬ್ಬರಿ ಖರೀದಿಸು ತ್ತಿದ್ದರೂ ಇದುವರೆಗೂ ಮಾತನಾಡಿಲ್ಲ.ರೈತರ ನಿರಂತರ ಹೋರಾಟಕ್ಕೆ ಮಣಿದು ಕೇಂದ್ರ ಸರಕಾರ ಮೂರು ರೈತವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆದಿದೆ.ಆದರೆ ಚುನಾವಣೆ ಪೂರ್ವದಲ್ಲಿ ಕರ್ನಾಟಕದಲ್ಲಿ ಜಾರಿಯಲ್ಲಿರುವ ರೈತವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವ ವಾಗ್ಧಾನ ನೀಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದು 8 ತಿಂಗಳು ಕಳೆದರೂ ಇದುವರೆಗೂ ವಾಪಸ್ ಪಡೆದಿಲ್ಲ.ಇದು ರೈತಪರ ಸರಕಾರವೇ ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಗ್ಗೂಡಿ ಕೊಬ್ಬರಿಗೆ ಸರಿಯಾದ ಬೆಂಬಲ ಬೆಲೆ ನೀಡದಿದ್ದರೆ 2001ರಲ್ಲಿ ರೈತರು ತೆಂಗಿಗೆ ನೀರಾ ಕಟ್ಟಿದಂತೆ, ಇಂದು ನೀರಾದಿಂದ ಸ್ಪೀರಿಟ್ ಉತ್ಪಾಧನೆ ಮಾಡಲು ಮುಂದಾಗಬೇಕಾಗುತ್ತದೆ. ಈಗಾಗಲೇ ಶ್ರೀಲಂಕಾದಲ್ಲಿ ತೆಂಗಿನ ನೀರಾದಿಂದ ಅತ್ಯುತ್ತಮ ಸಾವಯವ ಸ್ಪಿರೀಟ್ ಉತ್ಪಾಧನೆಯಲ್ಲಿ ತೊಡಗಿದ್ದಾರೆ.ಅಲ್ಲಿನ ಸರಕಾರವೂ ಮಾರಾಟಕ್ಕೆ ಅನುಮೋಧನೆ ನೀಡಿದೆ.ಸಕ್ಕರೆಯಿಂದ ತಯಾರಿಸುವ ಸ್ಪಿರೀಟ್ಗಿಂತ ತೆಂಗಿನ ನೀರಾದಿಂದ ತಯಾರಿಸುವ ಲಿಕ್ಕರ್ ಅತ್ಯುತ್ತಮವಾಗಿದ್ದು,ಸರಕಾರವೇ ಅನಿವಾರ್ಯವಾಗಿ ರೈತರನ್ನು ಲಿಕ್ಕರ್ ತಯಾರಿಸಲು ದೂಡಿದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಫೆ.05 ರಿಂದ ರಾಜ್ಯದಲ್ಲಿ ನ್ಯಾಫೇಡ್ ಮೂಲಕ ಖರೀದಿಸಿರುವ ಕೊಬ್ಬರಿಗೆ ರಾಜ್ಯ ಸರಕಾರ ನೀಡುವ ಬೆಂಬಲ ಬೆಲೆ 92ರಿಂದ 105 ಕೋಟಿಯಷ್ಟು ಆಗಬಹುದು.ಆದರೆ ರೈತರ ಬಳಿ ಇನ್ನೂ ಸಾವಿರಾರು ಕ್ವಿಂಟಾಲ್ ಕೊಬ್ಬರಿ ಇದೆ. ಹಾಗಾಗಿ ಹೆಚ್ಚುವರಿ ಖರೀದಿಗೆ ಸರಕಾರ ಕೇಂದ್ರದೊಂದಿಗೆ ಮಾತುಕತೆ ನಡೆಸಬೇಕು.ಹಾಗೆಯೇ ಕೇರಳ, ತೆಮಿಳುನಾಡಿನಲ್ಲಿ ಇರುವಂತೆ ರಾಜ್ಯದಲ್ಲಿಯೇ 70 ಎಂ.ಎಂ.ಗಿಂತ ಕಡಿಮೆ ಗಾತ್ರ ಇರುವ ಕೊಬ್ಬರಿಯನ್ನು ಮಿಲ್ಲಿಂಗ್ ಕೊಬ್ಬರಿ ವಿಭಾಗದಲ್ಲಿ ಖರೀದಿಸಲು ಕೇಂದ್ರಕ್ಕೆ ಪತ್ರ ಬರೆದು ಅನುಮತಿ ಪಡೆಯಬೇಕೆಂದು ಒತ್ತಾಯಿಸಿದರು.
ಅಂದು 2014ರಲ್ಲಿ ಇಂದಿನ ಪ್ರಧಾನಿ ನರೇಂದ್ರಮೋದಿ ಅವರು ಎಂ.ಎಸ್.ಪಿ. ಕಾಯ್ದೆ ತರುವ ವಿಚಾರ ಪ್ರಸ್ತಾಪಿಸಿದ್ದು, ಇದುವರೆಗೂ ಇದನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ.2020ರಲ್ಲಿ ರೈತರ ಹೋರಾಟದ ಬಿಸಿ ಮುಟ್ಟಿ ಕರಾಳ ಕಾಯ್ದೆವಾಪಸ್ ಪಡೆದಿತ್ತು.ಆದರೆ ಎಂ.ಎಸ್.ಪಿ.ಕಾಯ್ದೆ ಜಾರಿಯಾಗಿಲ್ಲ. ಮತ್ತೊಮ್ಮೆ ರೈತರು ಹೋರಾಟಕ್ಕೆ ಇಳಿದಿದ್ದಾರೆ.ಈ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಸರಕಾರ ಕೂಡಲೇ ಡಾ.ಸ್ವಾಮಿನಾಥನ್ ವರದಿ ಆಧರಿಸಿ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ರೈತ ಸಂಘ ಮತ್ತು ಹಸಿರುವ ಸೇನೆಯ ಜಿಲ್ಲಾಧ್ಯಕ್ಷ ಧನಂಜಯಾ ಆರಾಧ್ಯ,ಬಿ.ಎಸ್.ಪಿ.ಯ ರಾಜಸಿಂಹ, ಹನುಮಂತರಾಯಪ್ಪ, ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ. ಎಎಪಿಯ ಕರಿಗೌಡ,ರುಕ್ಸಾನ್ಭಾನು, ಮಧುಸೂಧನ್ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
ನಗರದ ಸ್ವಾತಂತ್ರ ಚೌಕದಿಂದ ಹೊರಟ ರೈತರ ಮೆರವಣಿಗೆ ಮಂಡಿಪೇಟೆ ಮುಖ್ಯರಸ್ತೆ ಮೂಲಕ ಕಾಲ್ಟ್ಯಾಕ್ಸ್ ಸರ್ಕಲ್,ಬಿ.ಜಿ.ಸರ್ಕಲ್, ಭದ್ರಮ್ಮ ಸರ್ಕಲ್,ಎಂ.ಜಿ.ರಸ್ತೆ ಮೂಲಕ ಟೌನ್ ಹಾಲ್ಗೆ ಬಂದು, ಜಿಲ್ಲಾಧಿಕಾರಿಗಳ ಕಚೇರಿ ಮುಖ್ಯಸ್ತರಿಗೆ ಮನವಿ ಸಲ್ಲಿಸಲಾಯಿತು.