ತುಮಕೂರು : ಶತಮಾನಗಳಲ್ಲೇ ಕಂಡರಿಯದ ಭೀಕರ ಬರಗಾಲವನ್ನು ರಾಜ್ಯ ಅನುಭವಿಸುತ್ತಿದೆ. ಬೇಸಿಗೆ ಪ್ರಾರಂಭ ಆಗಿರುವುದು ಮತ್ತು ಮಾಮೂಲಿಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯದಾದ್ಯಂತ ಜಾನುವಾರುಗಳಿಗೆ ಮೇವು – ನೀರಿನ ಅಭಾವ ಸೃಷ್ಟಿಯಾಗಿದೆ. ಉದ್ಯೋಗ-ಆಹಾರಕ್ಕಾಗಿ ಹಾಹಾಕಾರ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ರಾಜ್ಯದ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು, ಉದ್ಯೋಗ ಖಾತರಿ ಕೆಲಸದ ದಿನಗಳನ್ನು ಇನ್ನೂರು ದಿನಗಳಿಗೆ ಹೆಚ್ಚಿಸಬೇಕು, ಹೆಚ್ಚುವರಿ ಪಡಿತರ ಧಾನ್ಯವನ್ನು ಒದಗಿಸಬೇಕು. ರಾಜ್ಯ ಸರ್ಕಾರ ಬರ ಪರಿಹಾರ ನಿಯಾಮವಳಿಗಳ ಪ್ರಕಾರ ಕೋರಿರುವ ಹದಿನೆಂಟು ಸಾವಿರ ಕೋಟಿ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಕೆಪಿಆರ್‍ಎಸ್ ಆಗ್ರಹಿಸಿದೆ.
ನೊಂದಣಿಯಾಗಿರುವ ಎಲ್ಲಾ ರೈತರ ಕೊಬ್ಬರಿ ಖರೀದಿಸಲು ಆಗ್ರಹ
ಕಳೆದ ಮೂರು ದಿನಗಳಿಂದ ಕೊಬ್ಬರಿ ಖರೀದಿ ನೊಂದಣಿ ನಡೆಯುತ್ತಿದೆ. ಯಾವುದೇ ರೈತರನ್ನು ವಾಪಸ್ಸು ಕಳುಹಿಸದೇ ನೊಂದಣಿ ಮಾಡಬೇಕು ಮತ್ತು ನೊಂದಣಿ ಆದ ಎಲ್ಲಾ ರೈತರ ಕೊಬ್ಬರಿ ಯನ್ನು ಖರೀದಿಸಬೇಕು. ಇದಕ್ಕೆ ಅನುಕೂಲ ಆಗುವಂತೆ ಕೊಬ್ಬರಿ ಖರೀದಿ ಮಿತಿಯನ್ನು ರೈತರ ಬೇಡಿಕೆಗಳಿಗೆ ಅನುಗುಣವಾಗಿ ಹೆಚ್ಚಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಕೆಪಿಆರ್‍ಎಸ್ ಆಗ್ರಹಿಸುತ್ತದೆ.
ದೆಹಲಿ ರೈತ ಚಳವಳಿ ಮೇಲೆ ಡ್ರೋಣ್ ಧಾಳಿ ನಿಲ್ಲಿಸಿ ಮಾತುಕತೆ ಮೂಲಕ ಪರಿಹರಿಸಲು ಆಗ್ರಹ:
ಎಂ ಎಸ್ ಪಿ ಗೆ ಕಾನೂನು ಖಾತರಿ, ವಿದ್ಯುತ್ ಖಾಸಗೀಕರಣ ಮಸೂದೆ ವಾಪಸ್ಸಾತಿ, ಪ್ರತಿಭಟನಾ ರೈತರನ್ನು ಕಾರು ಹರಿಸಿ ಕೊಂದ ಕ್ರಿಮಿನಲ್ ಪಿತೂರಿ ಮಂತ್ರಿ ಅಜಯ್ ಮಿಶ್ರಾ ಥೇಣಿ ವಜಾ ಸೇರಿದಂತೆ ರೈತರ ನ್ಯಾಯಯುತ ಹಕ್ಕೊತ್ತಾಯಗಳನ್ನು ಇಟ್ಟು ಪ್ರತಿಭಟಿಸುತ್ತಿರುವ ರೈತರ ಮೇಲೆ ಡ್ರೋಣ್ ಬಳಸಿ ಅಶ್ರುವಾಯು ಶೆಲ್ ಸಿಡಿತವು ಅತ್ಯಂತ ಖಂಡನಾರ್ಹ ವಾಗಿದೆ. ಎರಡೂ ವರೆ ವರ್ಷಗಳ ಹಿಂದೆ ಐತಿಹಾಸಿಕ ದೆಹಲಿ ರೈತ ಚಳವಳಿ ನಿಲ್ಲಿಸಲು ವಿನಂತಿಸಿ ನರೇಂದ್ರ ಮೋದಿ ಸರ್ಕಾರ ನೀಡಿದ್ದ ಲಿಖಿತ ಭರವಸೆಗಳನ್ನು ಈಡೇರಿಸಬೇಕೆಂಬುದು ರೈತರ ಆಗ್ರಹವಾಗಿದೆ.
ರೈತರ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ಐತಿಹಾಸಿಕ ಚಳವಳಿ ಸಮಯದಲ್ಲಿ ನೀಡಿದ್ದ ಲಿಖಿತ ಭರವಸೆಗಳನ್ನು ಈಡೇರಿಸಲು ಮಾರ್ಚ್ 14 ರಂದು ನವದೆಹಲಿಯಲ್ಲಿ ಕಿಸಾನ್ ಮಜ್ದೂರ್ ಮಹಾ ಪಂಚಾಯತ್ ನಡೆಯಲಿದ್ದು ರಾಜ್ಯದಿಂದಲೂ ರೈತ ಹೋರಾಟಗಾರರು ಭಾಗವಹಿಸಲಿದ್ದಾರೆ.