ಬಿಜೆಪಿ ಟಿಕೆಟ್ : ಕಾದ ಕಬ್ಬಿಣವಾಗಿರುವ ಒಳ ಒಪ್ಪಂದದ ತ್ರಿಶೂಲ ಯಾರಿಗೆ ತಿವಿಯಲಿದೆ…!…? ಕೊನೆಗೆ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ?

ತುಮಕೂರು : ಲೋಕಸಭಾ ಚುನಾವಣೆಯ ದಿನಾಂಕ ಇನ್ನೊಂದು ನಾಲ್ಕೈದು ದಿನದಲ್ಲಿ ಘೋಷಣೆಯಾಗಲಿದ್ದು, ತುಮಕೂರು ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯ ಘೋಷಣೆ ಭರ್ಜಿಯಿಂದ ತ್ರಿಶೂಲ ರೂಪ ಪಡೆದುಕೊಂಡಿರುವುದರಿಂದ ಒಳ ಒಪ್ಪಂದದ ಒಳ ಏಟು ಯಾರಿಗೆ ಬೀಳಲಿದೆ ಎಂಬುದು ಬೆಳಗಾಗುವುದರೊಳಗೆ ತಿಳಿಯಲಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಸಹ ಹಾಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಅವರಿಗೆ ಟಿಕೆಟ್ ಸಿಗುವುದಿಲ್ಲ, ಸೊಗಡು ಶಿವಣ್ಣನವರಿಗೇ ಟಿಕೆಟ್ ಬಿ.ಎಸ್. ಯಡಿಯೂರಪ್ಪ ಅಭಯ ಹಸ್ತ ನೀಡಿದ್ದಾರೆಂದು ಕೊನೆ ಕ್ಷಣದವರಿಗೂ ತುಮಕೂರು ವಿಧಾನಸಭಾ ಟಿಕೆಟ್ ಕುತೂಹಲ ಕಾಯ್ದುಕೊಂಡಿತ್ತು.

ಈಗಲೂ ಅಂತಹವುದೇ ಕುತೂಹಲ ಕಾದ ಕಬ್ಬಿಣವಾಗಿ ಟಿಕಟ್ ಕೊತ ಕೊತ ಕುದಿಯುತ್ತಾ ಇದ್ದರೆ ಮೂರು ಪಕ್ಷದ ನಾಯಕರು ಬೆಂಗಳೂರಿನ ವಿ.ಸೋಮಣ್ಣನಿಗೇ ಟಿಕೆಟ್ ಸಿಗಲಿ ಎಂದು ಹರಕೆಯನ್ನು ಹೊತ್ತಿದ್ದಾರಂತೆ.

ಹರಕೆ ಹೊತ್ತಿರುವುದು ಒತ್ತಟ್ಟಿಗಿರಲಿ ಚಾಮರಾಜನಗರ ಮತ್ತು ವರುಣಾದಲ್ಲಿ ಸೋತು ಸುಣ್ಣವಾಗಿರುವ, ಸ್ಥಳೀಯರಲ್ಲದ ವಿ.ಸೋಮಣ್ಣನವರನ್ನೇ ಬಿಜೆಪಿ ಮತ್ತು ಜೆಡಿಎಸ್‍ನ ನಾಯಕರು ಯಾಕೆ ಅಭ್ಯರ್ಥಿಯಾಗಬೇಕೆಂದು ಬಯಸುತ್ತಿದ್ದಾರೆ ಎಂದರೆ ಹುಲ್ಲುಗಾವಲು ಚೆನ್ನಾಗಿ ಬೆಳದಿದೆ ನಾವು ಸ್ವಲ್ಪ ಮೇಯಬಹುದು ಎಂಬುದು ಒಂದು ಲೆಕ್ಕಚಾರವಾಗಿದ್ದರೆ, ಇನ್ನ ಸಂಸದರಾದ ಜಿ.ಎಸ್.ಬಸವರಾಜು ಅವರು ಜೆ.ಸಿ.ಮಾಧುಸ್ವಾಮಿ ಮಂತ್ರಿಯಾದಾಗ ಎಲ್ಲದಕ್ಕೂ ಅಡ್ಡಗಾಲು ಹಾಕುತ್ತಿದ್ದನ್ನು ಈಗ ಲೋಕಸಭಾ ಟಿಕೆಟ್ ತಪ್ಪಿಸಲು ತಮ್ಮ ಅಡ್ಡಗಾಲನಿಟ್ಟು ವಿ.ಸೋಮಣ್ಣನವರ ಪರ ಬ್ಯಾಟ್ ಬೀಸುತ್ತಿದ್ದಾರೆ.

ಇದಕ್ಕಾಗಿ ಸಂಸದ ಬಸವರಾಜು ಅವರು ಮೂರು ಪಕ್ಷದ ಕೆಲ ನಾಯಕರುಗಳ ಬಳಿ ವಿ.ಸೋಮಣ್ಣನವರ ಪರ ಒಳ ಒಪ್ಪಂದವನ್ನು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿಯವರಿಗೆ ಟಿಕೆಟ್ ನೀಡಿದರೆ ಅವರು ಗೆದ್ದು ಬಂದರೆ ನಮ್ಮ ಮಾತು ನಡೆಯುವುದಿಲ್ಲ, ಮಾಧುಸ್ವಾಮಿ ನಮ್ಮ ಮಾತಿಗೆ ಸೊಪ್ಪು ಹಾಕುವುದಿಲ್ಲ ಆದ್ದರಿಂದ ಟಿಕೆಟ್ ಸಿಗದಂತೆ ಮಾಡಿದರೆ ಮಾಧುಸ್ವಾಮಿಯವರ ರಾಜಕೀಯವನ್ನೇ ಮುಗಿಸಿದಂತೆ ಎಂದು ಬಸವರಾಜು ಅವರ ಲೆಕ್ಕಚಾರವಿದೆ ಎನ್ನಲಾಗುತ್ತಿದೆ.

ಜೆ.ಸಿ.ಮಾಧುಸ್ವಾಮಿಯವರು ಗ್ರಾಮಾಂತರ ಶಾಸಕರಾದ ಬಿ.ಸುರೇಶ್‍ಗೌಡ ಅವರಿಗೂ ಬೇಕಿಲ್ಲ, ಗ್ರಾಮಾಂತರಕ್ಕೆ ಹೇಮಾವತಿಯ ಏತ ನೀರಾವರಿ ವಿಷಯದಲ್ಲಿ ಖಡಕ್ ತೀರ್ಮಾನವನ್ನು ಮಾಧುಸ್ವಾಮಿಯವರು ತೆಗೆದುಕೊಂಡರು ಎಂಬ ಸಿಟ್ಟನ್ನು ಟಿಕೆಟ್ ಸಿಗದಂತೆ ಮಾಡುವುದರ ಮೂಲಕ ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತದೆ.

ಈ ಮಧ್ಯೆ ತುಮಕೂರು ಜಿಲ್ಲೆಯ ಪ್ರಭಾವಿ ಸಚಿವರೊಬ್ಬರು ಸಂಸದ ಜಿ.ಎಸ್.ಬಸವರಾಜು ಮನೆಗೆ ಭೇಟಿನೀಡಿದ ನಂತರ ವಿ.ಸೋಮಣ್ಣ ಯಾಕೆ ತುಮಕೂರು ಜಿಲ್ಲೆಯ ಅಭ್ಯರ್ಥಿಯಾಗಬಾರದು ಎಂದು ಮಾರ್ಮಿಕವಾಗಿ ಹೇಳಿಕೆ ನೀಡಿದ್ದರ ಹಿಂದೆ ಯಾರ ರಾಜಕೀಯ ಮುಗಿಸುವ ಹುನ್ನಾರವು ಇದರ ಹಿಂದ ಇದೆ ಎನ್ನಲಾಗುತ್ತಿದೆ.

ಜೆ.ಸಿ.ಮಾಧುಸ್ವಾಮಿಯವರು ಸಹ ಜಿದ್ದಿಗೆ ಬಿದ್ದವರಂತೆ ಟಿಕೆಟ್‍ಗಾಗಿ ಪ್ರಬಲ ಪೈಪೋಟಿ ನಡೆಸುತ್ತಿದ್ದು, ಹೊರಗಿನವರು ಬಂದರೆ ಸೋಲುತ್ತಾರೆ ಎಂಬ ಕಟು ಸತ್ಯ ಹೇಳಿದ್ದನ್ನು ಕೆಲ ಬಿಜೆಪಿಯ ಜಿಲ್ಲಾ ನಾಯಕರುಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.

ಹೈಕಮಾಂಡ್‍ಗೆ ತುಮಕೂರು ಜಿಲ್ಲೆಯ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು, ಇಬ್ಬರ ಜಗಳ ಮೂರನೇಯವನಿಗೆ ಲಾಭ ಎನ್ನುವಂತೆ ರಿಯಲ್ ಎಸ್ಟೇಟ್ ಉದ್ಯಮಿಗೋ, ಅಥವಾ ವೈದ್ಯರಿಗೋ ಟಿಕೆಟ್ ಲಾಟರಿ ಹೊಡೆದರೂ ಅಚ್ಚರಿಯಿಲ್ಲ.

ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಜಿಲ್ಲಾ ನಾಯಕರುಗಳ ನಡುವೆ ತುಂಬಾ ವರ್ಷಗಳಿಂದ ಒಳ ಒಪ್ಪಂದದ ಮೂಲಕ ರಾಜಕೀಯ ಮಾಡಿಕೊಂಡು ಆಯಾ ಪಕ್ಷದ ಅಭ್ಯರ್ಥಿಗಳನ್ನು ಅವರವರೇ ಸೋಲಿಸಿ ಮನೆಗೆ ಕಳಿಸುವ ಒಂದು ಒಪ್ಪಂದ ಈ ಜಿಲ್ಲೆಯಲ್ಲಿ ಅನಾದಿಕಾಲದಿಂದ ನಡೆಯುತ್ತಾ ಬಂದಿದೆ.
ಈ ಒಪ್ಪಂದ ಆಯಾ ಪಕ್ಷದ ಎಲ್ಲಾ ನಾಯಕರಿಗೂ ಗೊತ್ತಿದ್ದರೂ ಅವರೂ ಒಳ ಒಪ್ಪಂದದ ಕರಾರಿಗೆ ಒಳ ಪಟ್ಟಿರುವುದರಿಂದ ತುಟಿ ಬಿಚ್ಚುವುದಿಲ್ಲ.

ಈ ಒಳ ಒಪ್ಪಂದ ಇಲ್ಲ ಅಂದಿದ್ದರೆ ಕಾಂಗ್ರೆಸ್‍ನ ಜಿಲ್ಲಾ ಇಬ್ಬರು ಸಚಿವರು, ನಾಯಕರುಗಳು ಪಕ್ಷಕ್ಕೆ ದುಡಿದವರನ್ನು ಬಿಟ್ಟು ಬೇರೊಂದು ಪಕ್ಷಕ್ಕೆ ಜಿಗಿದಿದ್ದ ಎಸ್.ಪಿ.ಮುದ್ದಹನುಮೇಗೌಡರನ್ನು ಕರೆತರುವ ಪ್ರಮೇಯವೇ ಇರುತ್ತಿರಲಿಲ್ಲ.

ಈಗ ಬಿಜೆಪಿಯ ಒಳ ಒಪ್ಪಂದದ ಒಳ ಜಗಳ ಹೈಕಮಾಂಡ್‍ಗೆ ತಲೆ ನೋವಾಗಿದ್ದು ಜಿಲ್ಲೆಯ ಜೆಡಿಎಸ್ ನಾಯಕರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿಯಾಗಲಿ ಎಂದು ಒಮ್ಮತದ ತೀರ್ಮಾನ ತೆಗೆದುಕೊಂಡಿರುವುದರಿಂದ ಕೊನೆ ಕ್ಷಣದಲ್ಲಿ ಬಿಜೆಪಿಯ ಹೈಕಮಾಂಡ್ ಕುಮಾಸ್ವಾಮಿಯವರನ್ನು ತುಮಕೂರು ಲೋಕಸಭಾ ಮೈತ್ರಿ ಅಭ್ಯರ್ಥಿ ಎಂದು ಘೋಷಿಸಿದರೂ ಅಚ್ಚರಿ ಪಡಬೇಕಿಲ್ಲ.

ಆಗ ಎರಡೂ ಪಕ್ಷದವರೂ ಕುಮಾರಸ್ವಾಮಿಯ ಗೆಲುವಿಗೆ ಶ್ರಮಿಸಬೇಕಾಗುತ್ತದೆ, ಕುಮಾರಸ್ವಾಮಿ ತುಮಕೂರು ಅಭ್ಯರ್ಥಿಯಾಗುವುದರಿಂದ ಬೆಂಗಳೂರು ಗ್ರಾಮಾಂತರದಲ್ಲಿ ಕುಮಾರಸ್ವಾಮಿಯವರ ಭಾವ ಡಾ||ಮಂಜುನಾಥ ಅವರು ನಿಲ್ಲುವುದರಿಂದ ಪ್ರಚಾರಕ್ಕೂ ಅನುಕೂಲವಾಗಬಹುದು ಎಂಬ ಲೆಕ್ಕಚಾರ ನಡೆಯುತ್ತಾ ಇದೆ.

ಒಟ್ಟಿನಲ್ಲಿ ತುಮಕೂರು ಲೋಕಸಭಾ ಚುನಾವಣೆ ಒಳ ಒಪ್ಪಂದದ ಚುನಾವಣೆಯಾಗಿದ್ದು ಕೊನೆ ಕ್ಷಣದಲ್ಲಿ ಯಾವ ನಾಯಕರು ಯಾವ ಅಭ್ಯರ್ಥಿಗೆ ಗುಂಡಿ ತೋಡಿ ಬೀಳಿಸಲಿದ್ದಾರೆ ಎಂಬುದು ಚುನಾವಣೆ ಒಂದೆರಡು ದಿನವಿದೆ ಎಂಂದಾಗ ತಿಳಿಯಲಿದೆ.

ಒಟ್ಟಿನಲ್ಲಿ ತುಮಕೂರು ಬಿಜೆಪಿಯ ಟಿಕೆಟ್ ಮನೆ ಮಗನಿಗಿಲ್ಲ ಅನ್ನುವ ಹಂತಕ್ಕೆ ತಲುಪುವ ಲಕ್ಷಣಗಳು ಗೋಚರಿಸುತ್ತಿದ್ದು, ಜಿ.ಎಸ್.ಬಸವರಾಜು ಅವರ ಗೆಲುವಿಗೆ ಟೊಂಕ ಕಟ್ಟಿ ಪ್ರಚಾರ ಮಾಡಿದ ಜೆ.ಸಿ.ಮಾಧುಸ್ವಾಮಿಯವರಿಗೆ ಟಿಕೆಟ್ ಸಿಗದೆ ರಾಜಕೀಯ ಕೊನೆಯಾದರೂ ಆಗಬಹುದು.

ಒಟ್ಟಿನಲ್ಲಿ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ ಸ್ಥಳಿಯರಿಗೆ ಬಿಜೆಪಿ ಟಿಕೆಟ್ ಇಲ್ಲ ಎಂಬ ಮಾತು ಜನಜನಿತವಾಗುತ್ತದೋ ಅಥವಾ ಮಹಾಭಾರತದ ಗಾದೆ ಮಾತು ಸುಳ್ಳಾಗಲಿದೆಯೋ ಎಂಬುದು ಒಳ ಒಪ್ಪಂದದ ನಾಯಕರ ಮೇಲೆ ನಿಂತಿದೆ.

ಜೆ.ಸಿ.ಮಾಧುಸ್ವಾಮಿಯವರಿಗೆ ಟಿಕೆಟ್ ತಪ್ಪಿದಲ್ಲಿ ಜಿಲ್ಲೆಯಲ್ಲಿ ರಾಜಕೀಯದ ಮತ್ತೊಂದು ದೃವೀಕರಣವಾದರೂ ಆಗಬಹುದು.

ಈ ಹಿನ್ನಲೆಯಲ್ಲಿ ತುಮಕೂರು ಜಿಲ್ಲೆಯ ರಾಜಕಾರಣ ಕಾದ ಕಬ್ಬಿಣದಂತಿದ್ದು, ಕಾದ ಕಬ್ಬಿಣಕ್ಕೆ ಯಾರ ಸುತ್ತಿಗೆ ಏಟು ಬಿದ್ದು ಭರ್ಜಿಯಿಂದ ತ್ರಿಶೂಲವಾಗಿ ಯಾರಿಗೆ ತಿವಿಯಲಿದೆ ಎಂಬುದನ್ನು ಬಿಜೆಪಿ ಟಿಕೆಟ್ ಹಂಚಿಕೆಯ ಪರದೆ ಮೇಲೆ ಲೋಕಸಭಾ ಚುನಾವಣಾ ಸಿನಿಮಾ ನಡೆಯಲಿದೆ.

-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *