ವಸತಿ ಯೋಜನೆ ಮನೆಗಳಲ್ಲಿ ಅಪರಾಧ ಚಟುವಟಿಕೆ ಕಂಡರೆ ಖಾಲಿ ಮಾಡಿಸಲು ಕ್ರಮ

ತುಮಕೂರು : ಸರ್ಕಾರವು ವಿವಿಧ ವಸತಿ ಯೋಜನೆಗಳಡಿ ನಿರ್ಮಿಸಿರುವ ಮನೆಗಳಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದವರು ವಾಸಿಸುತ್ತಿದ್ದಲ್ಲಿ ಅಂತಹವರನ್ನು ಮನೆಯಿಂದ ಖಾಲಿ ಮಾಡಿಸಲು ಕ್ರಮಕೈಗೊಳ್ಳಲಾಗುವುದೆಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ತಿಳಿಸಿದರು.

ನಗರದ ಎಂಪ್ರೆಸ್ ಕಾಲೇಜಿನ ಆಡಿಟೋರಿಯಂನಲ್ಲಿ ಮಹಾನಗರ ಪಾಲಿಕೆ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿಂದು ಆಯೋಜಿಸಿದ್ದ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,  2017-18ನೇ ಸಾಲಿನಲ್ಲಿ ನಗರದ ದಿಬ್ಬೂರಿನಲ್ಲಿ ರಾಜೀವ್ ಆವಾಸ್ ಯೋಜನೆಯಡಿ ನಿರ್ಮಿಸಲಾಗಿದ್ದ ಜಿ+2 ಮಾದರಿ ಮನೆಗಳಲ್ಲಿ ವಾಸಿಸುವವರಿಗೆ ಈವರೆಗೂ ಹಂಚಿಕೆ ಪತ್ರ ನೀಡಲಾಗಿರಲಿಲ್ಲ. ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲು ಈಗ ಕಾಲ ಕೂಡಿ ಬಂದಿದೆ ಎಂದು ತಿಳಿಸಿದ ಅವರು, ಕಳ್ಳರು, ಮಾದಕ ವಸ್ತು ಮಾರಾಟ ಮಾಡುವವರು ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದವರು ವಾಸಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.  ಇಂಥ ವ್ಯಕ್ತಿಗಳು ವಾಸಿಸುತ್ತಿರುವುದು ಕಂಡು ಬಂದರೆ ಅಕ್ಕ-ಪಕ್ಕದವರು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ದಿಬ್ಬೂರಿನಲ್ಲಿ ವಸತಿ ಯೋಜನೆಯ ಫಲಾನುಭವಿಗಳು ನೆಮ್ಮದಿಯಿಂದ ಬದುಕಬೇಕು. ಇಲ್ಲಿನ ನಿವಾಸಿಗಳಿಗೆ ಯಾವುದೇ ತೊಂದರೆಯಾಗದಂತೆ ಮೂಲಭೂತ ಸೌಕರ್ಯಗಳನ್ನು ಪಾಲಿಕೆಯಿಂದ ಒದಗಿಸಬೇಕೆಂದು ಹೇಳಿದರು. 

ರಾಜ್ಯ ಸರ್ಕಾರದಿಂದ ಅಂಬೇಡ್ಕರ್, ವಾಜಪೇಯಿ, ಬಸವ ಸೇರಿದಂತೆ ಹಲವಾರು ವಸತಿ ಯೋಜನೆಗಳಡಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಗುರುತಿಸಿ ಅವರು ನೆಮ್ಮದಿಯಿಂದ ಬದುಕಲು ಸೂರು ಕಲ್ಪಿಸಲು ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಜನರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. 

ನಮ್ಮ ಸರ್ಕಾರ ಲಕ್ಷಾಂತರ ಫಲಾನುಭವಿಗಳಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿ, ಸಮಾಜ ಕಲ್ಯಾಣ ಇಲಾಖೆ, ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಡಿ ಮನೆಗಳನ್ನು ಕಲ್ಪಿಸುವ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರದ 2013-18ರ ಅವಧಿಯಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ವಸತಿ ಯೋಜನೆಗಳಡಿ 13ಲಕ್ಷ ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು.  ಇತ್ತೀಚೆಗೆ ತಾನೆ ಮುಖ್ಯಮಂತ್ರಿಗಳು ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ ಸುಮಾರು 36,000 ಮನೆಗಳಿಗೆ ವಿತರಣೆ ಮಾಡಿದ್ದಾರೆ.  ಈಗಾಗಲೇ ಆಯವ್ಯಯದಲ್ಲಿ ಪ್ರತಿ ವರ್ಷ 3ಲಕ್ಷ ಮನೆಗಳನ್ನು ನಿರ್ಮಿಸುವ ಬಗ್ಗೆ ಘೋಷಣೆ ಮಾಡಲಾಗಿದ್ದು,  ಈಗಾಗಲೇ ಮನೆಗಳನ್ನು ನಿರ್ಮಿಸುವ ಕೆಲಸ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. 

ಪ್ರತಿ ಜಿಲ್ಲೆಗೂ ಭೇಟಿ ನೀಡಿದ ಸಂದರ್ಭದಲ್ಲಿ ಸೂರಿನ ಸೌಲಭ್ಯವಿಲ್ಲ ಎಂಬ ಕೂಗು ಬಡವರಿಂದ ಕೇಳಿ ಬರುತ್ತಿದೆ.  ಈ ನಿಟ್ಟಿನಲ್ಲಿ ಸರ್ಕಾರವು ಪಂಚಾಯತಿ/ವಾರ್ಡ್‍ವಾರು ನಿವೇಶನ ರಹಿತ/ವಸತಿ ರಹಿತ ಕುಟುಂಬಗಳ ಅಂದಾಜು ಅಂಕಿ-ಅಂಶಗಳನ್ನು ಸಿದ್ಧಪಡಿಸಬೇಕೆಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು. 

ಜಿಲ್ಲೆಯಲ್ಲಿ ಬಡವರಿಗೆ ವಸತಿ ಯೋಜನೆಯಡಿ ವಿತರಿಸಲು ಸುಮಾರು 40,000 ನಿವೇಶನಗಳನ್ನು ಗುರುತಿಸಲಾಗಿದೆ.  ಇದಕ್ಕಾಗಿ 2,000 ಎಕರೆ ಪ್ರದೇಶವನ್ನು ಗುರುತಿಸಿ ನಿವೇಶನಗಳನ್ನಾಗಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.  ಪ್ರತಿ ತಾಲ್ಲೂಕಿನಲ್ಲಿ 2 ರಿಂದ 3000 ನಿವೇಶನಗಳನ್ನು ವಿತರಿಸಲು ಜಾಗವನ್ನು ಗುರುತಿಸಲಾಗಿದೆ.  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಜಂಟಿಯಾಗಿ ನನ್ನ ಗಮನಕ್ಕೆ ತಂದಿದ್ದಾರೆ ಎಂದು ತಿಳಿಸಿದರು. 

ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ಹೊರವಲಯದಲ್ಲಿ ಸುಮಾರು ವರ್ಷಗಳಿಂದ ಹೊಸ ಬಡಾವಣೆಗಳನ್ನು ನಿರ್ಮಿಸಿ ಅಭಿವೃದ್ಧಿಪಡಿಸಿಲ್ಲ. ಈ ನಿಟ್ಟಿನಲ್ಲಿ ಹೊಸ ಬಡಾವಣೆಗಳನ್ನು ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು. 

ಪಾಲಿಕೆ ಆಯುಕ್ತೆ ಅಶ್ವಿಜ ಪ್ರಾಸ್ತಾವಿಕವಾಗಿ ಮಾತನಾಡಿ, ಪಾಲಿಕೆ ವತಿಯಿಂದ ಅಂಬೇಡ್ಕರ್ ವಸತಿ ಯೋಜನೆಯಡಿ ರಾಜ್ಯದಿಂದ 2ಲಕ್ಷ ರೂ. ಹಾಗೂ ಕೇಂದ್ರದಿಂದ 1.50ಲಕ್ಷ ರೂ.; ವಾಜಪೇಯಿ ನಗರ ವಸತಿ ಯೋಜನೆಯಡಿ ರಾಜ್ಯದಿಂದ 1.20ಲಕ್ಷ ರೂ. ಹಾಗೂ ಕೇಂದ್ರದಿಂದ 1.50ಲಕ್ಷ ರೂ.; ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ 1.50ಲಕ್ಷ ರೂ. ಹಾಗೂ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ರಾಜ್ಯದಿಂದ 6ಲಕ್ಷ ಹಾಗೂ ಕೇಂದ್ರದಿಂದ 1.50ಲಕ್ಷ ರೂ.ಗಳ ಸೌಲಭ್ಯ ಕಲ್ಪಿಸಲಾಗಿರುತ್ತದೆಯಲ್ಲದೆ, ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಪಕ್ಕಾ ಮನೆಗಾಗಿ 3ಲಕ್ಷ  ಹಾಗೂ ಮನೆ ದುರಸ್ತಿಗಾಗಿ 50ಸಾವಿರ ರೂ.ಗಳ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ನಗರದ ದಿಬ್ಬೂರು ಪ್ರದೇಶದಲ್ಲಿ ನಿರ್ಮಿಸಿರುವ 1200(ಜಿ+2) ಮನೆಗಳ ಫಲಾನುಭವಿಗಳಿಗೆ ಹಂಚಿಕೆ ಪತ್ರ ವಿತರಿಸಲಾಯಿತು. 

ತುಮಕೂರು ನಗರ ವ್ಯಾಪ್ತಿಯಲ್ಲಿ 30 ಅಧಿಕೃತ ಕೊಳಗೇರಿ ಪ್ರದೇಶಗಳೆಂದು ಘೋಷಿಸಲಾಗಿದ್ದು, ಸುಮಾರು 7959 ಕುಟುಂಬಗಳ 46727 ಜನರು ಕೊಳಗೇರಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.  ಇವರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಮಂಡಳಿಯು ಹಲವಾರು ಯೋಜನೆಗಳಡಿ ವಸತಿ ಸೌಕರ್ಯ ಕಲ್ಪಿಸುತ್ತಿದೆ.  ಈ ಪೈಕಿ 487 ಪ.ಜಾತಿ/ಪ.ಪಂಗಡ, 521 ಅಲ್ಪಸಂಖ್ಯಾತರು, 13 ವಿಕಲಚೇತನರು, 6 ಮಂಗಳಮುಖಿಯರು ಹಾಗೂ 173 ಇತರೆ ವರ್ಗದ ಫಲಾನುಭವಿಗಳು ಸೇರಿ ಒಟ್ಟು 1200 ಫಲಾನುಭವಿಗಳಿಗೆ ಮನೆಗಳನ್ನು ವಿತರಿಸಲಾಗಿದೆ. 

ಪಾಲಿಕೆ ವತಿಯಿಂದ ವಾಜಪೇಯಿ ಮತ್ತು ಅಂಬೇಡ್ಕರ್ ನಗರ ವಸತಿ ಯೋಜನೆಯಡಿ ಸ್ವಂತ ನಿವೇಶನ ಹೊಂದಿದವರಿಗೆ ಮನೆ ನಿರ್ಮಾಣಕ್ಕಾಗಿ 300 ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಗುರಿ ಹೊಂದಲಾಗಿತ್ತು. ಈ ಪೈಕಿ ಈಗಾಗಲೇ 255 ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಲಾಗಿದ್ದು, ಈ ದಿನ 45 ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಲಾಯಿತು. 

ಕಾರ್ಯಕ್ರಮದಲ್ಲಿ ಶಾಸಕ ಜ್ಯೋತಿ ಗಣೇಶ್, ಪೆÇಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿವೇಕಾನಂದ ಜಿ.ವಾರ್ಕರ್, ವಿವಿಧ ವಸತಿ ಯೋಜನೆಗಳ ಫಲಾನುಭವಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *