ಚೆಕ್‍ಪೋಸ್ಟ್‍ಗಳಲ್ಲಿ ಮುಲಾಜಿಲ್ಲದೆ ಪ್ರತಿಯೊಂದು ವಾಹನಗಳನ್ನು ಪರಿಶೀಲಿಸಲು ಡಿಸಿ ಖಡಕ್ ಸೂಚನೆ

ತುಮಕೂರು : ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾವಹಿಸಲು ಜಿಲ್ಲೆಯಲ್ಲಿ ಸ್ಥಾಪಿಸಿರುವ ಎಲ್ಲ ಚೆಕ್‍ಪೋಸ್ಟ್‍ಗಳಲ್ಲಿ ಯಾವುದೇ ಮುಲಾಜಿಲ್ಲದೇ ಪ್ರತಿಯೊಂದು ವಾಹನವನ್ನು ಪರಿಶೀಲಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ಖಡಕ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತಿಯಲ್ಲಿ ಶನಿವಾರ ಎಫ್‍ಎಸ್‍ಟಿFlying Squad Team) ಮತ್ತು ಎಸ್‍ಎಸ್‍ಟಿ(Static Surveillance Team)ಗಳಿಗಾಗಿ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಎಲ್ಲ ಚೆಕ್‍ಪೋಸ್ಟ್‍ಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಸಿಸಿ ಕ್ಯಾಮೆರಾಗಳನ್ನು ಚುನಾವಣಾ ಕಂಟ್ರೋಲ್ ರೂಂಗೆ ನೇರ ಸಂಪರ್ಕಗೊಳಿಸಿ ಅಧಿಕಾರಿ-ಸಿಬ್ಬಂದಿಗಳ ಚಲನ-ವಲನದ ಮೇಲೆ ನಿರಂತರವಾಗಿ ನಿಗಾವಹಿಸಲಾಗುತ್ತಿದೆ. ಚೆಕ್‍ಪೋಸ್ಟ್‍ಗೆ ನಿಯೋಜಿತ ಅಧಿಕಾರಿ-ಸಿಬ್ಬಂದಿಗಳು ಪ್ರತೀ ವಾಹನ ತಪಾಸಣೆ ಮಾಡದೇ ಇರುವುದು ಕಂಡು ಬಂದಲ್ಲಿ ಅವರನ್ನು ಅಮಾನತ್ತು ಮಾಡಲು ಕ್ರಮ ಕೈಗೊಳ್ಳಲಾಗುವುದೆಂದು ಸೂಚನೆ ನೀಡಿದರು.

ವಾಹನ ಪರಿಶೀಲನೆ ಸಂದರ್ಭದಲ್ಲಿ ಯಾವುದೇ ವಾಹನದಲ್ಲಿ 50,000 ರೂ.ಗಳಿಗಿಂತ ಹೆಚ್ಚಿನ ಹಣ- 50,000 ರೂ.ಗಳಿಗಿಂತ ಹೆಚ್ಚಿನ ಮೌಲ್ಯದ ಸರಕು ಸಾಗಿಸುತ್ತಿದ್ದಲ್ಲಿ ಅಂತಹ ವಾಹನಗಳನ್ನು ವಶಪಡಿಸಿಕೊಳ್ಳಬೇಕು. ಹಣ-ಸರಕುಗಳಲ್ಲದೆ ಪಕ್ಷದ ಗುರುತು ಹೊಂದಿರುವ ಟೀ-ಷರ್ಟ್, ಕ್ಯಾಪ್, ಹೆಚ್ಚಿನ ಸಂಖ್ಯೆಯಲ್ಲಿ ಸೀರೆ, ಆಹಾರದ ಕಿಟ್, ಮತ್ತಿತರ ಅಕ್ರಮ ವಸ್ತುಗಳ ಸಾಗಾಣಿಕೆ ಕಂಡು ಬಂದಲ್ಲಿ ಅಂತಹ ವಾಹನಗಳನ್ನು ವಶಪಡಿಸಿಕೊಳ್ಳಬೇಕು ಎಂದು ನಿರ್ದೇಶಿಸಿದರು. ಅನುಮಾನಾಸ್ಪದ ವ್ಯಕ್ತಿಗಳ ಮೇಲೂ ನಿಗಾವಹಿಸಬೇಕು. ಚುನಾವಣಾ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡ ನಂತರ ಚುನಾವನಾ ಕರ್ತವ್ಯ ನಿಯೋಜಿತರ ಕೆಲಸ ಇನ್ನಷ್ಟು ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಲೋಕಸಭಾ ಕ್ಷೇತ್ರ ಚುನಾವಣೆ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 44 ಎಸ್‍ಎಸ್‍ಟಿ ಹಾಗೂ 54 ಎಫ್‍ಎಸ್‍ಟಿ ತಂಡಗಳನ್ನು ನಿಯೋಜಿಸಲಾಗಿದ್ದು, ಚೆಕ್‍ಪೋಸ್ಟ್ ಮೂಲಕ ಹಾದು ಹೋಗುವ ಸರಕು ಸಾಗಾಣೆ ವಾಹನಗಳ ಮೇಲೆ ಹೆಚ್ಚಿನ ನಿಗಾ ಇಡಬೇಕು ಎಂದು ತಿಳಿಸಿದರು.

ಪ್ರತಿ ಎಫ್‍ಎಸ್‍ಟಿ ಹಾಗೂ ಎಸ್‍ಎಸ್‍ಟಿ ತಂಡದಲ್ಲಿ ಹಿರಿಯ ಕಾರ್ಯನಿರ್ವಾಹಕ ಮಾಜಿಸ್ಟ್ರೇಟ್, ಸಹಾಯಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಅಬಕಾರಿ ಸಿಬ್ಬಂದಿ ಹಾಗೂ ವಿಡಿಯೋಗ್ರಾಫರ್‍ಗಳನ್ನು ನಿಯೋಜಿಸಲಾಗಿದ್ದು, ಎಸ್‍ಎಸ್‍ಟಿ ತಂಡವು ಚೆಕ್‍ಪೋಸ್ಟ್‍ಗಳಲ್ಲಿ ಒಳಹೋಗುವ-ಹೊರಬರುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡುತ್ತದೆ. ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಅಕ್ರಮವಾಗಿ ಸಾಗಿಸುವಂತಹ ಎಲ್ಲಾ ವಸ್ತುಗಳ ಮೇಲೆ ಈ ತಂಡ ನಿಗಾ ವಹಿಸಲಿದೆ. ಅದೇ ರೀತಿ ಎಫ್‍ಎಸ್‍ಟಿ ತಂಡವು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವ ಯಾವುದೇ ಘಟನೆ ಬಗ್ಗೆ ಮಾಹಿತಿ ಬಂದ ಕೂಡಲೇ ವಿಎಸ್‍ಟಿ(Video Surveillance Team) ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ವಿಡಿಯೋ ಚಿತ್ರೀಕರಿಸಿ ಸಾಕ್ಷ್ಯ ಸಂಗ್ರಹಿಸುವ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದರು.

ಎಸ್‍ಎಸ್‍ಟಿ ತಂಡವು ಚೆಕ್‍ಪೋಸ್ಟ್‍ಗಳಲ್ಲಿ 50,000ಕ್ಕಿಂತ ಹೆಚ್ಚಿನ ಮೌಲ್ಯದ ನಗದು/ಸರಕು ಸಾಗಾಣಿಕೆ ಮಾಡುವಾಗ ಸಾಗಿಸುತ್ತಿರುವ ನಗದು/ಸರಕಿನ ಬಗ್ಗೆ ಪೂರಕ ದಾಖಲೆಗಳನ್ನು ಹೊಂದಿರುವ ಬಗ್ಗೆ ಪರಿಶೀಲಿಸಬೇಕು. ಎಫ್‍ಎಸ್‍ಟಿ ತಂಡವು ತಮ್ಮ ವ್ಯಾಪ್ತಿಯಲ್ಲಿರುವ ಚೌಲ್ಟ್ರಿ, ಗೋದಾಮು, ಕೈಗಾರಿಕಾ ಪ್ರದೇಶದಲ್ಲಿರುವ ವೇರ್‍ಹೌಸ್‍ಗಳಿಗೆ ಆಗಾಗ್ಗೆ ಭೇಟಿ ನೀಡಿ ಮತದಾರರನ್ನು ಪ್ರೇರೇಪಿಸಬಹುದಾದ ವಸ್ತುಗಳಿದ್ದಲ್ಲಿ ಜಪ್ತಿ ಮಾಡಿ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಅಬ್ದುಲ್ ಖಾದರ್ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಎಫ್‍ಐಆರ್ ಯಾವ ಸಂದರ್ಭದಲ್ಲಿ ದಾಖಲಿಸಬೇಕು. ಅಕ್ರಮವಾಗಿ ಹೊಂದಿರುವ ನಗದು/ಸರಕನ್ನು ಜಪ್ತಿ ಮಾಡಿದ ನಂತರ ವಹಿಸಬೇಕಾದ ಕ್ರಮಗಳ ಬಗ್ಗೆ ವಿವರಣೆ ನೀಡಿದರು. ಎಲ್ಲಾ ತಂಡಗಳಲ್ಲಿಯೂ ಪೊಲೀಸ್ ಸಿಬ್ಬಂದಿ ಕಡ್ಡಾಯವಾಗಿ ಇರುತ್ತಾರೆ ಎಂದರಲ್ಲದೆ, ನಿಗಧಿತ ಮೊತ್ತಕ್ಕಿಂತ ಹೆಚ್ಚಿನ ಹಣ ಕಂಡು ಬಂದಲ್ಲಿ ಮಾದರಿ ನೀತಿ ಸಂಹಿತೆ ಜಾರಿ ಸಮಿತಿಯ ಗಮನಕ್ಕೆ ತರಬೇಕು. ಸಮಿತಿ ನಿರ್ಣಯದನ್ವಯ ಎಫ್‍ಐಆರ್ ದಾಖಲಿಸಬೇಕೆಂದು ಮಾಹಿತಿ ನೀಡಿದರು.

ಸಭೆಯಲ್ಲಿ ಪಾಲಿಕೆ ಆಯುಕ್ತ ಅಶ್ವಿಜ ಬಿ.ವಿ., ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಆದಾಯ ತೆರಿಗೆ ಅಧಿಕಾರಿ, ವಾಣಿಜ್ಯ ತೆರಿಗೆ, ಎಫ್‍ಎಸ್‍ಟಿ, ಸ್ಥಿರ ಕಣ್ಗಾವಲು ತಂಡ, ವಿಡಿಯೋ ಕಣ್ಗಾವಲು ತಂಡದ ಅಧಿಕಾರಿ/ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *