ತುಮಕೂರು : ತುಮಕೂರು ಲೋಕಸಭೆಯಲ್ಲಿ ಎನ್ಡಿಎ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಗೆಲ್ಲಿಸುವ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರಿಗೆ ಕೊಡುಗೆ ನೀಡಲಿದ್ದೇವೆ ಎಂದು ಚಿಕ್ಕನಾಯಕನಹಳ್ಳಿ ಶಾಸಕರಾದ ಸಿ.ಬಿ.ಸುರೇಶ್ಬಾಬು ಹೇಳಿದರು.
ಅವರಿಂದು ಜಿಲ್ಲಾ ಜಾತ್ಯತೀತ ಜನತಾದಳ ಕಛೇರಿ ಆವರಣದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಸೋಲನನುಭಿಸಿದ್ದು, ಈ ಹಿನ್ನಲೆಯಲ್ಲಿ ಸೋಮಣ್ಣನವರನ್ನು ಗೆಲ್ಲಿಸಲೇ ಬೇಕೆಂದು ತೀರ್ಮಾಸಿರುವುದಾಗಿ ಸುರೇಶ್ಬಾಬು ಹೇಳಿದರು.
ಎರಡೂ ಪಕ್ಷದ ಕಾರ್ಯಕರ್ತರು 8 ಕ್ಷೇತ್ರದಲ್ಲೂ ವಿ.ಸೋಮಣ್ಣನವರಿಗೆ ಹೆಚ್ಚಿನ ಮತಗಳನ್ನು ಹಾಕಿಸುವ ಮೂಲಕ ಜಯ ತಂದು ಕೊಡಲಿದ್ದಾರೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯ ಮೈತ್ರಿ ಪಕ್ಷದ ಉಸ್ತುವಾರಿ ಶಾಸಕ ಗೋಪಾಲಯ್ಯ ಮಾತನಾಡಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ತಾಲ್ಲೂಕು ಕೋರ್ ಕಮಿಟಿಗಳನ್ನು ಮಾಡಿ ವಿ.ಸೋಮಣ್ಣನವರನ್ನು ಗೆಲ್ಲಿಸುವ ಮೂಲಕ ಹೆಚ್.ಡಿ.ದೇವೇಗೌಡಮತ್ತು ನರೇಂದ್ರ ಮೋದಿಯವರಿಗೆ ಗೌರವ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಎಂ.ಟಿ.ಕೃಷ್ಣಪ್ಪ, ಬಿ.ಸುರೇಶ್ಗೌಡ, ಮಾಜಿ ಶಾಸಕರಾದ ತಿಮ್ಮರಾಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.