ಮಾರ್ಚ್ 28ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ

ತುಮಕೂರು : ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ವೇಳಾಪಟ್ಟಿಯನ್ವಯ ಮಾರ್ಚ್ 28 ರಿಂದ ಏಪ್ರಿಲ್ 4ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಓರ್ವ ಅಭ್ಯರ್ಥಿಗೆ ಗರಿಷ್ಠ 4 ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ನಾಮಪತ್ರವನ್ನು ಮಾರ್ಚ್ 28 ರಿಂದ ಏಪ್ರಿಲ್ 4ರವರೆಗೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸ್ವೀಕರಿಸಲಾಗುವುದು. ಅಭ್ಯರ್ಥಿಗಳಿಂದ ಸಾರ್ವತ್ರಿಕ ರಜಾ ದಿನಗಳಾದ ಮಾರ್ಚ್ 29ರ ಗುಡ್ ಫ್ರೈಡೆ ಹಾಗೂ ಮಾ.31ರ ಭಾನುವಾರ ಹೊರತುಪಡಿಸಿ ಉಳಿದ ದಿನಗಳಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರಗಳನ್ನು ತೆಗೆದುಕೊಳ್ಳಲಾಗುವುದು. 

ನಾಮಪತ್ರ ಸಲ್ಲಿಸುವ ಅಭ್ಯರ್ಥಿಯ ಹೆಸರು ಯಾವುದೇ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿತವಾಗಿರಬೇಕು. ಅಭ್ಯರ್ಥಿಯು 25 ವರ್ಷ ವಯೋಮಿತಿಯವರಾಗಿದ್ದು, ಭಾರತೀಯ ನಾಗರೀಕರಾಗಿರಬೇಕು. ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಓರ್ವ ಸೂಚಕರನ್ನು ಹೊಂದಲು ಅವಕಾಶವಿದ್ದು, ಈ ಸೂಚಕರು ಸಂಬಂಧಪಟ್ಟ ಲೋಕಸಭಾ ಕ್ಷೇತ್ರದ ಮತದಾರರಾಗಿರಬೇಕು. ನೋಂದಾಯಿತ ರಾಜಕೀಯ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳಿಗೆ 10 ಜನ ಸೂಚಕರು ಕಡ್ಡಾಯವಾಗಿ ಇರಬೇಕು. ಎಲ್ಲಾ ಸೂಚಕರು ಸಂಬಂಧಪಟ್ಟ ಲೋಕಸಭಾ ಕ್ಷೇತ್ರದ ಮತದಾರರಾಗಿರಬೇಕು.

ಓರ್ವ ಅಭ್ಯರ್ಥಿಯು ಗರಿಷ್ಠ 4 ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದ್ದು, ಒಂದು ನಾಮಪತ್ರದ ಜೊತೆ ಪೂರ್ಣ ಪ್ರಮಾಣದ ದಾಖಲಾತಿ ನೀಡಿದಲ್ಲಿ ಉಳಿಕೆ ನಾಮಪತ್ರಗಳಿಗೆ ಕೇವಲ ನಾಮಪತ್ರ ಮಾತ್ರ ಸಲ್ಲಿಸಿದರೆ ಸಾಕು. ನಾಮಪತ್ರ ಸ್ವೀಕರಿಸುವ ಕೋಣೆಯಲ್ಲಿ ಒಂದು ಸಿ.ಸಿ.ಟಿ.ವಿ., ಒಂದು ಗೋಡೆ ಗಡಿಯಾರ(ಸರಿಯಾದ ವೇಳೆ ತೋರಿಸುವುದು)ವನ್ನು ಅಳವಡಿಸಲಾಗುವುದಲ್ಲದೆ ಹಾಗೂ ಓರ್ವ ವಿಡಿಯೋಗ್ರಾಫರ್ ಅನ್ನು ನಿಯೋಜಿಸಲಾಗುವುದು.

Leave a Reply

Your email address will not be published. Required fields are marked *