ಆಂಧ್ರ ಗಡಿಭಾಗದ ಚೆಕ್‍ಪೋಸ್ಟ್‍ಗಳಿಗೆ ಡೀಸಿ, ಎಸ್‍ಪಿ ಭೇಟಿ

ತುಮಕೂರು : ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಆಂಧ್ರ ಗಡಿ ಭಾಗವಾದ ಪಾವಗಡ ತಾಲೂಕಿನಲ್ಲಿ ಸ್ಥಾಪಿಸಿರುವ ಚೆಕ್‍ಪೋಸ್ಟ್‍ಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ ಅಶೋಕ್ ಅವರು ಇಂದು ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿದರು.

ಪಾವಗಡ ವಿಧಾನಸಭಾ ಕ್ಷೇತ್ರವು ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಡಲಿದ್ದು, ಕರ್ನಾಟಕಾಂಧ್ರದ ಗಡಿ ಭಾಗದಲ್ಲಿದೆ. ಈ ಭಾಗದಲ್ಲಿ ಲಿಕ್ಕರ್ ಮಾಫಿಯಾ ಹೆಚ್ಚಾಗಿ ವರದಿಯಾಗುವ ಸಾಧ್ಯತೆಯಿದೆ ಎಂಬ ಮುನ್ನೆಚ್ಚರಿಕೆಯಿಂದ ಪಾವಗಡ ತಾಲೂಕಿನ ನಾಗಲಾಪುರ ಹಾಗೂ ವೆಂಕಟಮ್ಮನಹಳ್ಳಿ ಚೆಕ್‍ಪೋಸ್ಟ್‍ಗಳಿಗೆ ಭೇಟಿ ನೀಡಿ ಎಸ್‍ಎಸ್‍ಟಿ ತಂಡದ ಕಾರ್ಯವನ್ನು ಪರಿಶೀಲಿಸಿದ ಅವರು ಎಲ್ಲ ತಂಡಗಳು 24×7 ಕಾರ್ಯ ನಿರ್ವಹಿಸುವುದರೊಂದಿಗೆ ಕೆಎಸ್‍ಆರ್‍ಟಿಸಿ ಬಸ್ ಸೇರಿದಂತೆ ಎಲ್ಲಾ ಖಾಸಗಿ ವಾಹನಗಳನ್ನೂ ತಪಾಸಣೆಗೊಳಪಡಿಸಬೇಕು. ಪ್ರತಿ ವಾಹನದ ಸಂಖ್ಯೆ, ವಾಹನದ ಮಾದರಿ, ವಾಹನವು ಎಲ್ಲಿಂದ ಎಲ್ಲಿಗೆ ಸಾಗುತ್ತಿದೆ ಎಂಬ ಮಾಹಿತಿಯನ್ನು ವಹಿಯಲ್ಲಿ ದಾಖಲಿಸಬೇಕೆಂದು ನಿರ್ದೇಶಿಸಿದರಲ್ಲದೆ ಚೆಕ್‍ಪೋಸ್ಟ್‍ಗಳಲ್ಲಿ ನಿರ್ವಹಿಸುತ್ತಿರುವ ವಹಿಗಳನ್ನು ಪರಿಶೀಲಿಸಿದರು.

     ನಂತರ ಆಂಧ್ರ ಪ್ರದೇಶದ ಗಡಿಯಲ್ಲಿರುವ ಕಂಬದೂರು, ಎಗುವಪಲ್ಲಿ ಚೆಕ್‍ಪೆÇೀಸ್ಟ್‍ಗಳಿಗೆ ಭೇಟಿ ನೀಡಿ ಸದರಿ ಚೆಕ್ ಪೆÇೀಸ್ಟ್‍ಗಳ ಪೆÇಲೀಸ್ ಅಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಅಶೋಕ್   ಮಾತನಾಡಿ ಗಡಿ ಭಾಗದಲ್ಲಿ ವರದಿಯಾಗಬಹುದಾದ ಲಿಕ್ಕರ್ ಮಾಫಿಯ ಬಗ್ಗೆ ಚರ್ಚಿಸಿದರು.

ತುಮಕೂರಿಗೆ ಹಿಂದಿರುಗುವಾಗ ಮಾರ್ಗ ಮಧ್ಯೆ ತಿರುಮಣಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರದ ಕೊಠಡಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ವಿದ್ಯಾರ್ಥಿಗಳು ನಕಲು ಮಾಡುತ್ತಿರುವರೇ ಎಂದು ಅವರ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದರು.

       ಬಳಿಕ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಪಾವಗಡ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ನಡೆಸಲಾಗುತ್ತಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ    ಆಹಾರ ತಯಾರಿಸುವ ಅಡುಗೆ ಕೋಣೆ, ಮಲಗುವ ಕೋಣೆ ಪರಿಶೀಲಿಸಿ ಮಕ್ಕಳು ಮಲಗುವ ಹಾಸಿಗೆ ಸ್ವಚ್ಛತೆಯಿಂದ ಕೂಡಿಲ್ಲ.  ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಕೂಡಲೇ ಉತ್ತಮ ಹಾಸಿಗೆ-ಹೊದಿಕೆ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರಲ್ಲದೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರಿಗೆ ಶೋಕಾಸ್ ನೋಟೀಸ್ ನೀಡಲು ಕ್ರಮವಹಿಸಲಾಗುವುದೆಂದು ತಿಳಿಸಿದರು. 

ಪಾವಗಡ ತಾಲ್ಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಆಡಳಿತ ವೈದ್ಯಾಧಿಕಾರಿ ಡಾ|| ಎ.ಎಸ್.ಎಲ್. ಬಾಬು ಅವರಿಂದ ಸಿಬ್ಬಂದಿಗಳ ಮಾಹಿತಿ ಪಡೆದು ಆಸ್ಪತ್ರೆಯಲ್ಲಿರುವ ಮಕ್ಕಳ, ಅರವಳಿಕೆ, ಸ್ತ್ರೀ ರೋಗ ತಜ್ಞರ ಕೊಠಡಿ, ಹೆರಿಗೆ ವಾರ್ಡ್, ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಪರಿಶೀಲಿಸಿದರು. ಔಷಧ ವಿತರಣಾ ಕೊಠಡಿಗೆ ಭೇಟಿ ನೀಡಿ ಔಷಧಿ ದಾಸ್ತಾನು ಇರುವ ಬಗ್ಗೆ ಮಾಹಿತಿ ಪಡೆದರು. ಉಚಿತವಾಗಿ ಔಷಧಿ ವಿತರಿಸುತ್ತಿರುವ ಬಗ್ಗೆ ರೋಗಿಗಳನ್ನು ವಿಚಾರಿಸಿದರು. ಡಾ|| ಎ.ಎಸ್.ಎಲ್. ಬಾಬು ಮಾತನಾಡಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದು, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ಮೇಲೆ ಒತ್ತಡ ಉಂಟಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

 ಪಾವಗಡ ಪಟ್ಟಣದಲ್ಲಿ ಹೊಸದಾಗಿ 1.20 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಪೊಲೀಸ್ ಠಾಣೆ ಕಾಮಗಾರಿಯನ್ನು ಪರಿಶೀಲಿಸಿದರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮಾತನಾಡಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮಗಳನ್ನು ತಡೆಗಟ್ಟಲು ಆಂಧ್ರ ಗಡಿಭಾಗದ ಶಿರಾ, ಮಧುಗಿರಿ ಹಾಗೂ ಪಾವಗಡ ವಿಧಾನ ಸಭಾ ಕ್ಷೇತ್ರಗಳಲ್ಲಿ ಒಟ್ಟು 12 ಚೆಕ್ ಪೋಸ್ಟ್‍ಗಳನ್ನು ನಿರ್ಮಿಸಲಾಗಿದೆ.  ಪಾವಗಡದಲ್ಲಿರುವ ಮತಗಟ್ಟೆಗಳಲ್ಲಿ  ವಲ್ನರಬಲ್ ಮತಗಟ್ಟೆಯೆಂದು ಯಾವುದನ್ನೂ ಗುರುತಿಸಿಲ್ಲ. ಈ ಚೆಕ್‍ಪೋಸ್ಟ್‍ಗಳು ಗಡಿ ಪ್ರದೇಶದಲ್ಲಿರುವುದರಿಂದ  ಪರಿಶೀಲಿಸಲು ಇಂದು ಭೇಟಿ ನೀಡಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *