ಏ.3, ಬಿಜೆಪಿ ಹಠವೋ ದೇಶ ಬಚವೋ ಸಿಪಿಐಯಿಂದ ರಾಜಕೀಯ ಸಮಾವೇಶ

ತುಮಕೂರು:ಕಳೆದ ಹತ್ತು ವರ್ಷಗಳ ಮೋದಿ ಸರಕಾರ ಪ್ರಜಾಪ್ರಭುತ್ವ ವಿರೋಧಿ ನಡೆಗಳನ್ನು ಅನುಸರಿಸುತ್ತಿದ್ದು,ಈ ಭಾರೀಯ ಲೋಕಸಭೆಯಲ್ಲಿ ಇಂತಹ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬಾರದು ಎಂಬ ಉದ್ದೇಶದಿಂದ ಸಿಪಿಐ ಪಕ್ಷದಿಂದ ಬಿಜೆಪಿ ಹಠವೋ ದೇಶ ಬಚವೋ ಎಂಬ ಘೋಷವಾಕ್ಯದೊಡನೆ ಏಪ್ರಿಲ್ 03ರಂದು ಕನ್ನಡ ಭವನದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ ತುಮಕೂರು ಮಂಡಲಿ ವತಿಯಿಂದ ರಾಜಕೀಯ ಸಮಾವೇಶ ನಡೆಯಲಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಸಹ ಕಾರ್ಯದರ್ಶಿ ಬಿ.ಅಜ್ಮದ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಜನರು ಮೋದಿ ಸರಕಾರದ ಮೇಲಿಟ್ಟ ಎಲ್ಲಾ ಭರವಸೆಗಳನ್ನು ಹತ್ತು ವರ್ಷಗಳಲ್ಲಿ ಹಾಳು ಮಾಡಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ, ಕಪ್ಪು ಹಣ ವಾಪಸ್,ಅಗತ್ಯವಸ್ತುಗಳ ಬೆಲೆ ಹೆಚ್ಚಳ ಕಡಿತ,ಭ್ರಷ್ಟಾಚಾರಕ್ಕೆ ಕಡಿವಾಣ ಸೇರಿದಂತೆ ಯಾವ ಭರವಸೆಯನ್ನು ಈಡೇರಿಸಿಲ್ಲ.ಜಾತಿ,ಧರ್ಮದ ಹೆಸರಿನಲ್ಲಿ ಜನರನ್ನು ಭಾವನಾತ್ಮಕ ವಿಚಾರಗಳಿಂದ ಮತ ಪಡೆಯಲು ಮುಂದಾಗಿದೆ.ಚುನಾವಣಾ ಬಾಂಡ್ ಮೂಲಕ ಭ್ರಷ್ಟಾಚಾರಿ ಯಾರು ಎಂಬುದನ್ನು ಸುಪ್ರಿಂಕೋರ್ಟು ಜನತೆಯ ಮುಂದೆ ತೆರೆದಿಟ್ಟಿದೆ. ನಾ ಖಾವೊಂಗ, ನಾ ಖಾನದೋಂಗ ಎಂಬುದು ಕೇವಲ ಬೂಟಾಟಿಕೆಯಾಗಿದ್ದು, ಎಲೆಕ್ಟ್ರೋರಲ್ ಬಾಂಡ್ ಮೂಲಕ ಶೇ60ರಷ್ಟು ಉದ್ದಿಮೆದಾರರಿಂದ ಹಣ ಪಡೆದಿದ್ದು,ಇದು ಅಕ್ರಮ ಮತ್ತು ಸಂವಿಧಾನ ವಿರೋಧಿಯಾಗಿದೆ.ಚುನಾವಣಾ ಬಾಂಡ್ ಕುರಿತು ಸುಪ್ರಿಂಕೋರ್ಟ ನೇತೃತ್ವದಲ್ಲಿ ಸಮಗ್ರ ತನಿಖೆಯಾಗಬೇಕೆಂಬುದು ಸಿಪಿಐ ಆಗ್ರಹವಾಗಿದೆ ಎಂದು ಅಮ್ಜ್‍ದ್ ತಿಳಿಸಿದರು.

ನ್ಯಾಯ ಕೇಳಲು ಬಂದ ರೈತರಿಗೆ ಲಾಠಿ ಜಾರ್ಜ್ ಮಾಡಿ,ರೈತರ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿಯಾಗುತ್ತದೆ ಎಂದು,ಉದ್ಯಮಿಗಳ 14 ಲಕ್ಷ ಕೋಟಿ ರೂಗಳಿಗೂ ಹೆಚ್ಚು ಸಾಲವನ್ನು ಮನ್ನಾ ಮಾಡಿ, ರೈತವಿರೋಧಿ, ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ.ಪ್ರಜಾತಂತ್ರ ವ್ಯವಸ್ಥೆಯನ್ನೇ ಹಾಳು ಮಾಡಿ,ವಿರೋಧಪಕ್ಷವೇ ಇಲ್ಲದಂತೆ ಮಾಡುವ ಹುನ್ನಾರವನ್ನು ಬಿಜೆಪಿ ನಡೆಸುತ್ತಿದೆ.ಇಂತಹ ಪ್ರಜಾಪ್ರಭುತ್ವ ವಿರೋಧಿ ಸರಕಾರ ಅಧಿಕಾರದಲ್ಲಿ ಮುಂದುವರೆಯಬಾರದು ಎಂಬ ನಿಲುವಿನೊಂದಿಗೆ ಬಿಜೆಪಿ ಸೋಲಿಸಿ, ದೇಶ ಉಳಿಸಿ ಎಂಬ ಅಭಿಯಾನ ನಡೆಸುತ್ತಿದ್ದು, ಇದರ ಭಾಗವಾಗಿಯೇ ಏಪ್ರಿಲ್ 03ರಂದು ಕನ್ನಡ ಭವನದಲ್ಲಿ ಜಿಲ್ಲಾ ರಾಜಕೀಯ ಸಮಾವೇಶ ಆಯೋಜಿಸಲಾಗಿದೆ ಎಂದರು.

ಏಪ್ರಿಲ್ 03ರ ಬುಧವಾರ ಬೆಳಗ್ಗೆ 9:30 ಗಂಟೆಗೆ ತುಮಕೂರು ಟೌನ್‍ಹಾಲ್‍ನಿಂದ ಕನ್ನಡ ಭವನದವರೆಗೂ ಸಿಪಿಐ ಮೆರವಣಿಗೆ ನಡೆಯಲಿದೆ. ತದನಂತರ ರಾಜಕೀಯ ಸಮಾವೇಶ ಆರಂಭವಾಗಲಿದ್ದು, ಸಮಾವೇಶವನ್ನು ಹಿರಿಯ ಸ್ವಾತಂತ್ರ ಹೋರಾಟಗಾರರಾದ ಟಿ.ಆರ್.ರೇವಣ್ಣ ಉದ್ಘಾಟಿಸುವರು.ಅಧ್ಯಕ್ಷತೆಯನ್ನು ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ವಹಿಸುವರು. ಮುಖ್ಯ ಅತಿಥಿಗಳಾಗಿ ಕಾರ್ಯದರ್ಶಿ ಸಾತಿ ಸುಂದರೇಶ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಎ.ಜೋತಿ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ,ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಎಎಪಿ ಪಕ್ಷದ ಜಿಲ್ಲಾಧ್ಯಕ್ಷರಾದ ಹೆಚ್.ಎ.ಜಯರಾಮಯ್ಯ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಂಬೇಗೌಡ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಹಕಾರ್ಯದರ್ಶಿ ಆರ್.ಗೋವಿಂದರಾಜು, ಜಿಲ್ಲಾ ಸಹಕಾರ್ಯದರ್ಶಿ ಅಶ್ವತ್ಥ ನಾರಾಯಣ, ಜಿಲ್ಲಾ ಖಜಾಂಚಿ ರವಿಪ್ರಸಾದ್, ಎಐಟಿಯುಸಿ ಜಿಲ್ಲಾ ಖಜಾಂಚಿ ದೊಡ್ಡತಿಮ್ಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *