ತುಮಕೂರು : ಕರ್ನಾಟಕ ಲೋಕಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ಜಿಲ್ಲೆಯಲ್ಲಿ ಮಾರ್ಚ್ 16 ರಿಂದ ಏಪ್ರಿಲ್ 1ರವರೆಗೆ 8851.26 ಲೀಟರ್ ಭಾರತೀಯ ತಯಾರಿಕಾ ಮದ್ಯ, 18053.02 ಲೀ. ಬಿಯರ್ ಹಾಗೂ 30 ಲೀ. ಸೇಂದಿ ಸೇರಿ 66,48,084 ರೂ. ಮೌಲ್ಯದ ಮದ್ಯ ಉತ್ಪಾದನೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಚುನಾವಣಾ ಅಕ್ರಮವನ್ನು ತಡೆಯಲು 58 ವಿಚಕ್ಷಣ ದಳ(ಎಫ್‍ಎಸ್‍ಟಿ-ಫ್ಲೈಯಿಂಗ್ ಸ್ವ್ಯಾಡ್), 44 ಸ್ಥಿರ ಕಣ್ಗಾವಲು ತಂಡ (ಎಸ್‍ಎಸ್‍ಟಿ-ಸ್ಟ್ಯಾಟಿಕ್ ಸರ್ವೇಲೆನ್ಸ್ ತಂಡ) ಹಾಗೂ 11 ಅಬಕಾರಿ ತಂಡವನ್ನು ರಚಿಸಿ ನಿಯೋಜಿಸಲಾಗಿದೆ.
ಜಿಲ್ಲಾದ್ಯಂತ ನಿಯೋಜಿತ ತಂಡಗಳು ಮಾರ್ಚ್ 16 ರಿಂದ ಏಪ್ರಿಲ್ 1ರವರೆಗೆ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ಸಹಕಾರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಎಫ್‍ಎಸ್‍ಟಿ ತಂಡದಿಂದ 10,91,500 ರೂ. ಹಾಗೂ ಎಸ್‍ಎಸ್‍ಟಿ ತಂಡದಿಂದ 31,18,950 ರೂ. ಸೇರಿ 42.10ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ದಾಖಲೆಯಿಲ್ಲದ 24,60,500 ರೂ. ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಉಳಿದ 17,49,950 ರೂ. ಹಣವನ್ನು ಜಿಲ್ಲಾ ಖಜಾನೆಗೆ ಜಮೆ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆಯಲ್ಲಿ ಜಮೆಯಾಗಿರುವ 24,60,500 ರೂ. ಹಣಕ್ಕೆ ಸಮರ್ಪಕ ದಾಖಲೆ ಒದಗಿಸಿದ ನಂತರ ಸಂಬಂಧಿಸಿದವರಿಗೆ ಹಿಂದಿರುಗಿಸಲಾಗುವುದು.
ಅದೇ ರೀತಿ ಮಾರ್ಚ್ 16 ರಿಂದ ಏಪ್ರಿಲ್ 1ರವರೆಗೆ 1.70ಲಕ್ಷ ರೂ. ಮೌಲ್ಯದ 5.35 ಕೆ.ಜಿ. ಗಾಂಜಾ ಅನ್ನು ವಶಪಡಿಸಿಕೊಳ್ಳಲಾಗಿದೆ.
ಮತದಾರರಿಗೆ ಹಂಚಿಕೆ ಮಾಡಲು ಸಂಗ್ರಹಿಸಿಟ್ಟಿದ್ದ 12,56,146 ರೂ. ಅಂದಾಜು ಮೌಲ್ಯದ 73 ಬಾಕ್ಸ್ ಕುಕ್ಕರ್, 700 ಗೋಡೆ ಗಡಿಯಾರ, 126 ಸೀರೆ, 126.42 ಗ್ರಾಂ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಡಿ ದಾಖಲಾದ ಪ್ರಕರಣಗಳಲ್ಲಿ ಅಬಕಾರಿ ಕಾಯ್ದೆಯನ್ನು ಉಲ್ಲಂಘಿಸಿದ ಒಟ್ಟು 425 ಪ್ರಕರಣಗಳಿಗೆ ಪ್ರಥಮ ವರ್ತಮಾನ ವರದಿ(ಎಫ್‍ಐಆರ್) ಮಾಡಲಾಗಿದೆ ಎಂದು ತಿಳಿಸಿದ್ದಾರೆ.