ತುಮಕೂರು:ಕರ್ನಾಟಕ ರಾಜ್ಯ ರೈತ ಸಂಘದ ನೀತಿ, ನಿಯಮಗಳ ವಿರುದ್ದವಾಗಿ ನಡೆದುಕೊಂಡಿರುವ ಪಾವಗಡ ತಾಲೂಕು ಅಧ್ಯಕ್ಷರಾಗಿದ್ದ ಪೂಜಾರಪ್ಪ ಅವರನ್ನು ಅಧ್ಯಕ್ಷ ಸ್ಥಾನದಿಂದ ಅಮಾನತ್ತು ಮಾಡಲಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಾಗು ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.
ತುಮಕೂರು ವಿಜ್ಞಾನ ಕೇಂದ್ರದಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 1981-82ರಲ್ಲಿ ಹುಟ್ಟಿದ ಕರ್ನಾಟಕ ರಾಜ್ಯ ರೈತ ಸಂಘ ಹಲವು ಸಿದ್ದಾಂತಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ.ರೈತ ಸಂಘದ ಹುಟ್ಟಿಗೆ ಕಾರಣರಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿ,ಎಂ.ಡಿ.ಸುಂದರೇಶ್ ಸೇರಿದಂತೆ ಹಲವರು ನಮಗೆ ಮಾರ್ಗದರ್ಶನ ಮಾಡಿದ್ದು,ಅದರಂತೆ ನಡೆದುಕೊಳ್ಳುತ್ತಾ ಬಂದಿದ್ದೇವೆ. ಆದರೆ ಸಂಘದ ನಿಯಮಗಳನ್ನು ಗಾಳಿಗೆ ತೂರಿ,ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಜಿ.ಸಿ.ಶಂಕರಪ್ಪ ಅವರ ವಿರುದ್ದ ಮಾಧ್ಯಮ ಗೋಷ್ಠಿಯಲ್ಲಿ ಅವಹೇಳನಕಾರಿಯಾಗಿ ನಿಂದಿಸಿರುವುದಲ್ಲದೆ,ಬೆದರಿಕೆ ಹಾಕಿರುವ ಪಾವಗಡ ತಾಲೂಕು ಅಧ್ಯಕ್ಷರಾದ ಪೂಜಾರಪ್ಪ ಅವರ ನಡೆ,ಸಂW ವಿರೋಧಿಯಾಗಿದ್ದು,ಅವರ ವಿರುದ್ದ ವಿಚಾರಣೆಗೆ ಸಮಿತಿ ಯೊಂದನ್ನು ನೇಮಕ ಮಾಡಿದ್ದು,ಸಮಿತಿಯ ವರದಿ ಬರುವವರೆಗೂ ಅವರನ್ನು ಪಾವಗಡ ತಾಲೂಕು ಅಧ್ಯಕ್ಷ ಸ್ಥಾನದಿಂದ ಅಮಾನತ್ತು ಮಾಡಲಾಗಿದೆ ಎಂದರು.
ಕಳೆದ 10 ವರ್ಷಗಳಿಂದ ರೈತ ಸಂಘದ ಪಾವಗಡ ತಾಲೂಕು ಘಟಕ ಕೆಲಸ ಮಾಡುತ್ತಿದ್ದು,ಪೂಜಾರಪ್ಪ ಅವರನ್ನು ಅಧ್ಯಕ್ಷರಾಗಿದ್ದ ನೇಮಕ ಮಾಡಲಾಗಿತ್ತು.ಕಳೆದ ಒಂದು ವರ್ಷದಿಂದ ಅವರ ನಡವಳಿಕೆಗಳಲ್ಲಿ ವೆತ್ಯಾಸ ಕಂಡುಬರುತ್ತಿದ್ದು, ತಮಗೆ ಅಧಿಕಾರ ಇಲ್ಲದಿದ್ದರೂ ಸಂಘದ ಕೆಲ ಪದಾಧಿಕಾರಿಗಳನ್ನು ಜಿಲ್ಲಾ ಸಂಘದ ಗಮನಕ್ಕೆ ತಾರದೆ ವಜಾ ಮಾಡಿ, ತಮಗೆ ಇಷ್ಟ ಬಂದವರನ್ನು ನೇಮಕ ಮಾಡಿಕೊಂಡಿದ್ದಾರೆ.ಅಲ್ಲದೆ ರೈತ ಸಂಘಟನೆಗಳ ಸಮನ್ವಯ ಸಮಿತಿಗಳ ಅಧ್ಯಕ್ಷನೆಂದು ಸ್ವಯಂ ಘೋಷಿಸಿಕೊಂಡು ರೈತ ಸಂಘದ ಶಾಲು ತೆಗೆದು, ಬೇರೆ ಶಾಲು ಹಾಕಿರುವುದು ಖಂಡನೀಯ ಎಂದು ಎ.ಗೋವಿಂದರಾಜು ತಿಳಿಸಿದರು.
ಸದರಿ ವಿಚಾರವಾಗಿ 29-03-2024ರಂದು ಜಿಲ್ಲಾ ಸಮಿತಿಯ ಮುಂದೆ ಹಾಜರಾಗಿ ವಿವರಣೆ ನೀಡುವಂತೆ ನೋಟಿಷ್ ಜಾರಿ ಮಾಡಲು ಜಿಲ್ಲಾ ಸಮಿತಿ ಮುಂದಾಗಿ ನೋಟಿಷ್ ಜಾರಿ ಮಾಡುವ ಮುಂಚೆಯೇ ಸುದ್ದಿಗೋಷ್ಠಿ ಕರೆದು,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ವಿರುದ್ದ ಇಲ್ಲಸಲ್ಲದ ಆರೋಪ ಮಾಡಿ, ಏಕವಂಚನದಲ್ಲಿ ನಿಂದಿಸಿ,ಬೆದರಿಕೆ ಹಾಕಿದಲ್ಲದೆ,ಸದರಿ ಸುದ್ದಿಗೋಷ್ಠಿಯ ವಿಡಿಯೋವನ್ನು ರೈತ ಸಂಘದ ಎಲ್ಲಾ ಸಾಮಾಜಿಕ ಜಾಲತಾಣಕ್ಕೆ ಹಾಕಿ ಸಂಘದ ಘನತೆ, ಗೌರವ ಹಾಳು ಮಾಡಲು ಯತ್ನಿಸಿದ ಪೂಜಾರಪ್ಪ ಅವರ ವಿರುದ್ದ ತನಿಖೆ ನಡೆಸಲು ರೈತ ಸಂಘದ ಎಲ್ಲಾ ತಾಲೂಕು ಅಧ್ಯಕ್ಷರುಗಳನ್ನು ಒಳಗೊಂಡ 12 ಜನರ ಶಿಸ್ತು ಸಮಿತಿಯನ್ನು ನೇಮಕ ಮಾಡಿದ್ದು,ಮುಂದಿನ 15 ದಿನದಲ್ಲಿ ಸಮಿತಿ ವರದಿ ನೀಡಲಿದೆ.ಸದರಿ ವರದಿಯನ್ನು ಜಿಲ್ಲಾ ಸಮಿತಿ ಪರಾಮರ್ಶಿಸಿ,ಅಗತ್ಯ ಕ್ರಮ ಕೈಗೊಳ್ಳಲಿದೆ.ಅಲ್ಲಿಯವರೆಗೆ ಪಾವಗಡ ತಾಲೂಕು ಅಧ್ಯಕ್ಷರಾಗಿದ್ದ ಪೂಜಾರಪ್ಪ ಅವರನ್ನು ತಾಲೂಕು ಅಧ್ಯಕ್ಷ ಸ್ಥಾನದಿಂದ ಅಮಾನತ್ತು ಮಾಡಲು ಇಂದು ನಡೆದ ಜಿಲ್ಲಾ ಕಾರ್ಯಕಾರಿ ಮಂಡಳಿ ಸಭೆ ತೀರ್ಮಾನ ಕೈಗೊಂಡಿದೆ ಎಂದು ಜಿಲ್ಲಾಧ್ಯಕ್ಷ ಎ..ಗೋವಿಂದರಾಜು ಸ್ಪಷ್ಟಪಡಿಸಿದರು.
ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ಮಹಿಳಾ ಅಧ್ಯಕ್ಷರಾದ ನಾಗರತ್ನಮ್ಮ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ರವೀಶ್,ದೊಡ್ಡಮಾಳಯ್ಯ,ಜಿಲ್ಲಾ ಯುವ ಘಟಕದ ಅಧ್ಯಕ್ಷ ಚಿರತೆ ಚಿಕ್ಕಣ್ಣ, ಅರೇಹಳ್ಳಿ ಮಂಜುನಾಥ್, ಹುಚ್ಚೇಗೌಡ, ಸಿ.ಟಿ.ಕುಮಾರ್,ತಾಲೂಕು ಅಧ್ಯಕ್ಷರುಗಳಾದ ಬಿ.ಕೆ.ಲಕ್ಷ್ಮಣಗೌಡ, ನಾದೂರು ಕೆಂಚಪ್ಪ,ಡಿ.ಆರ್.ರಾಜಶೇಖರ್,ನಾಗರಾಜು,ಚಿಕ್ಕಬೋರೆಗೌಡ, ಟಿ.ಎಂ.ತಿಮ್ಮೇಗೌಡ, ಶ್ರೀನಿವಾಸಗೌಡ, ರಹಮತ್ವುಲ್ಲಾ, ರಂಗಹನುಮಯ್ಯ, ಶಬ್ಬೀರ್ ಪಾಷ, ಕೆ.ಎನ್.ವೆಂಕಟೇಗೌಡ, ಸಿ.ಜಿ.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.