ತುಮಕೂರು: ದೇಶದ ಭದ್ರತೆ, ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಸಾಮಥ್ರ್ಯವಿರುವ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಬೆಂಬಲಿಸಲು ನಗರದ ಕನ್ನಡಪರ ಸಂಘಟನೆಗಳ ಪ್ರಮುಖರ ಸಭೆ ಒಕ್ಕೊರಲ ತೀರ್ಮಾನ ಮಾಡಿತು.
ಮಂಗಳವಾರದ ನಗರದಲ್ಲಿ ನಡೆದ ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದ ಕರುನಾಡ ವಿಜಯಸೇನೆ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್, ಕನ್ನಡಪರ ಸಂಘಟನೆಗಳಿಗೆ ನಾಡು ಹಾಗೂ ದೇಶದ ರಕ್ಷಣೆ ಮುಖ್ಯ. ಹತ್ತು ವರ್ಷಕಾಲ ಪ್ರಧಾನಿಯಾಗಿ ಭ್ರಷ್ಟಾಚಾರರಹಿತ ಆಡಳಿತ ನಡೆಸಿ, ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಸಾರಿದ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವ ಕಾರಣಕ್ಕೆ ಬಿಜೆಪಿ, ಜೆಡಿಎಸ್ ಮೈತ್ರಿಯ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಈ ಚುನಾವಣೆಯಲ್ಲಿ ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ವಿ.ಸೋಮಣ್ಣ ಅವರನ್ನು ಬೆಂಬಲಿಸುವಂತೆ ಕನ್ನಡಪರ ಸಂಘಟನೆÉಗಳಿಗೆ ಮನವಿ ಮಾಡಿದ್ದರು. ಶಾಸಕರ ಮನವಿ ಕುರಿತು ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಚರ್ಚೆ ಮಾಡಿದಾಗ, ಸೋಮಣ್ಣ ಅವರಿಗೆ ಬೆಂಬಲ ನೀಡಲು ಸರ್ವಾನುಮತದಿಂದ ತೀರ್ಮಾನ ಮಾಡಲಾಯಿತು ಎಂದು ಹೆಚ್.ಎನ್.ದೀಪಕ್ ಹೇಳಿದರು.
ಸಭೆಯಲ್ಲಿ ಹಾಜರಿದ್ದ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಶಂಕರ್ ಮಾತನಾಡಿ, ಮೋದಿ ಸರ್ಕಾರ ತುಮಕೂರು ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ನೀಡಿ ನಗರದ ಅಭಿವೃದ್ಧಿಗೆ ಕೊಡುಗೆ ನೀಡಿದೆ. ನಗರದ ನಾವು ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಬೆಂಬಲಿಸಿ ಮೋದಿಯವರಿಗೆ ಗೆಲುವಿನ ಕೊಡುಗೆ ನೀಡಬೇಕು ಎಂದರು.
ಕೇಂದ್ರ ಸರ್ಕಾರ ಕೊಬ್ಬರಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗಧಿ ಮಾಡಿ ಖರೀದಿ ಮಾಡುವ ಮೂಲಕ ತೆಂಗು ಬೆಳೆಗಾರರ ಹಿತ ಕಾಪಾಡಬೇಕು, ಸೋಮಣ್ಣ ಅವರು ಸಂಸದರಾಗಿ ಆಯ್ಕೆಯಾದ ನಂತರ ಕೊಬ್ಬರಿ ಬೆಳೆಗಾರರ ಪರವಾಗಿ ಕೇಂದ್ರ ಸರ್ಕಾರದಲ್ಲಿ ಧ್ವನಿ ಮಾಡಬೇಕು ಎಂದು ಶಂಕರ್ ಮನವಿ ಮಾಡಿದರು.
ಕರುನಾಡ ವಿಜಯ ಸೇನೆ ರಾಜ್ಯ ಉಪಾಧ್ಯಕ್ಷ ಸೋಮಶೇಖರ್ ಮಾತನಾಡಿ, ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ನಾಡು, ನುಡಿ, ಗಡಿ ವಿಚಾರದಲ್ಲಿ ಹೋರಾಟ ನಡೆಸುವ ಕನ್ನಡಪರ ಸಂಘಟನೆಗಳ ಪರವಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು.
ರಾಜ್ಯ ಕಾರ್ಯದರ್ಶಿ ರಂಜನ್ ಮಾತನಾಡಿ, ರಾಜಕೀಯ ಪಕ್ಷಗಳು ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರನ್ನು ರಾಜಕೀಯವಾಗಿ ಬಳಸಿಕೊಂಡು, ಗೆದ್ದ ನಂತರ ಕಡೆಗಣಿಸುವುದು ಕಂಡುಬಂದಿದೆ. ಇದಕ್ಕೆ ಅವಕಾಶವಾಗದಂತೆ, ನಾಡು, ನುಡಿಯ ರಕ್ಷಣೆ, ಸಮಸ್ಯೆ ನಿವಾರಣೆಗೆ ಹೋರಾಟ ರೂಪಿಸುವ ಸಂಘಟನೆಗಳಿಗೆ ರಾಜಕೀಯ ಪಕ್ಷಗಳು ಬೆಂಬಲ ನೀಡಬೇಕು, ಹೋರಾಟಗಾರರ ವಿರುದ್ಧ ದಾಖಲಾಗಿರುವ ಮೊಕದ್ದಮೆಗಳನ್ನು ದಾಖಲಿಸಿ ಹೋರಾಟ ಹತ್ತಿಕ್ಕುವ ಕಾರ್ಯಗಳು ನಿಲ್ಲಬೇಕು ಎಂದು ಒತ್ತಾಯಿಸಿದರು.
ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ರಂಗಸ್ವಾಮಿ ಮಾತನಾಡಿ, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂಬ ಆಶಯದಿಂದ ಮಾಜಿ ಪ್ರಧಾನಿ ದೇವೇಗೌಡರು ಬೆಂಬಲ ಸೂಚಿಸಿ, ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದನ್ನು ಸ್ವಾಗತಿಸಿದರು.
ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ, ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ ತನುಜ್ಕುಮಾರ್, ಶಿವರಾಮೇಗೌಡರ ಬಣದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಲ್ಲೇಶ್ಗೌಡ, ಕದಂಬ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಆರ್.ಅನಿಲ್ಕುಮಾರ್ ಸೇರಿದಂತೆ ಸಂಘಟನೆಗಳ ವಿವಿಧ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ವಿ.ಸೋಮಣ್ಣ ಅವರನ್ನು ಬೆಂಬಲಿಸಲು ತೀರ್ಮಾನ ಮಾಡಿದರು.