ತುಮಕೂರು : ತುಮಕೂರು ಲೋಕಸಭೆಯ ಅಭ್ಯರ್ಥಿಯಾಗಲು ಜಿಲ್ಲೆಯಲ್ಲಿ ಪಕ್ಷ ಕಟ್ಟಿದ ಮುರಳೀಧರ ಹಾಲಪ್ಪನವರಿಗೆ ಕೆಪಿಸಿಸಿ ಉಪಾಧ್ಯಕ್ಷರನ್ನಾಗಿ ಮಾಡುವ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಾಗಿದೆ ಎನ್ನಲಾಗುತ್ತಿದೆ.
ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಬೇಕೆಂದು ಪ್ರಬಲ ಆಕಾಂಕ್ಷಿಯಾಗಿದ್ದ ಮುರಳೀಧರ ಹಾಲಪ್ಪನವರನ್ನು ಪಕ್ಷ ಗುರುತಿಸಿ ಕೆಪಿಸಿಸಿ ಉಪಾಧ್ಯಕ್ಷರನ್ನಾಗಿ ಮಾಡಿರುವುದು ಅವರ ಬೆಂಬಲಿಗರಿಗೆ, ಅಭಿಮಾನಿಗಳಿಗೆ ಸಂತೋಷವನ್ನುಂಟು ಮಾಡದರೂ, ಚುನಾವಣೆ ನಡೆಯುತ್ತಿರುವ ಕಾಲದಲ್ಲಿ ಈ ನೇಮಕ ಮಾಡಿರುವುದರಿಂದ ಮುರಳೀಧರ ಹಾಲಪ್ಪನವರ ಮೂಗಿಗೆ ತುಪ್ಪ ಸವರಿದವರು ಯಾರು? ಎಂಬ ಪ್ರಶ್ನೆಯೂ ಅವರ ಬೆಂಬಲಿಗರನ್ನು ಕಾಡುತ್ತಾ ಇದೆ.
ಪ್ರತಿ ಹಳ್ಳಿಯಲ್ಲೂ ಪಕ್ಷವನ್ನು ಕಟ್ಟವಲ್ಲಿ ತಮ್ಮದೇ ರೀತಿಯಲ್ಲಿ ಯುವಕರು, ರೈತರು, ಮಹಿಳೆಯರನ್ನು ಸಂಘಟಿಸಿದ ಮುರಳೀಧರ ಹಾಲಪ್ಪನವರು, ಎಸ್.ಪಿ.ಮುದ್ದಹನುಮೇಗೌಡರು ಬಿಜೆಪಿಗೆ ಸೇರ್ಪಡೆಯಾದ ನಂತರ ಲೋಕಸಭೆಯ ಅಭ್ಯರ್ಥಿಯಾಗಲು ಎಲ್ಲಾ ರೀತಿಯಲ್ಲೂ ಪಕ್ಷವನ್ನು ಸಂಘಟಿಸಿದ್ದಲ್ಲದೆ, ತಮಗೆ ಟಿಕೆಟ್ ಸಿಗಲಿದೆ ಎಂಬ ಆತ್ಮ ವಿಶ್ವಾಸವನ್ನು ಹೊಂದಿದ್ದರು.
ಮುರಳೀಧರ ಹಾಲಪ್ಪನವರಿಗೆ ಟಿಕೆಟ್ ತಪ್ಪಿದ ಹಿನ್ನಲೆಯಲ್ಲಿಯೇ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನಕ್ಕೆ ಬಡ್ತಿ ನೀಡಿದ್ದು, ಹಾಲಪ್ಪನವರಿಗೆ ಪಕ್ಷದಲ್ಲಿ ಒಂದಿಷ್ಟು ಗುರುತಿಸಿ ಸ್ಥಾನ ನೀಡಿದರಲ್ಲ ಎಂಬ ಅಲ್ಪ ಖುಷಿಯಾದರೂ, ಲೋಕಸಭೆ ಟಿಕೆಟ್ ಸಿಗದ ಬೇಸರ ಅವರ ಅಭಿಮಾನಿಗಳಿಗೆ, ಬೆಂಬಲಿಗರಿಗೆ ಹಾಗೆ ಉಳಿಯಲಿದೆ.
ಈಗ ಮುರಳೀಧರ ಹಾಲಪ್ಪನವರು ಕೆಪಿಸಿಸಿ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ, ಹಾಗಾದರೆ ಯಾರೀ ಹಾಲಪ್ಪ ಎಂದು ಪ್ರಶ್ನಿಸಿದ್ದ ಸಹಕಾರಿ ಸಚಿವ ಕೆ.ಎನ್, ರಾಜಣ್ಣನವರು ಈಗೇನು ಹೇಳಲಿದ್ದಾರೆ.
ಪಕ್ಷದ ಕೆಲಸ ಮಾಡದೆ, ಪಕ್ಷ ಕಟ್ಟದೆ ಇದ್ದಿದ್ದರೆ ಹೈಕಮಾಂಡ್ ಮುರಳೀಧರ ಹಾಲಪ್ಪನವರನ್ನು ಗುರುತಿಸಿ ಉಪಾಧ್ಯಕ್ಷರನ್ನಾಗಿ ಮಾಡುತ್ತಿತ್ತೇ! ಆದರೂ ಮುರಳೀಧರ ಹಾಲಪ್ಪನವರಿಗೆ ಲೋಕಸಭೆಯ ಟಿಕೆಟ್ ತಪ್ಪಿಸಿ ಚುನಾವಣೆ ನಡೆಯುತ್ತಿರುವ ಕಾಲದಲ್ಲಿ ಈ ನೇಮಕಾತಿಯು ಮುನಿಸನ್ನು ತಾತ್ಕಾಲಿಕ ಶಮನಕ್ಕೆ ಮಾಡಿರುವುದೇ ಎಂಬ ಪ್ರಶ್ನೆಯೂ ಅವರ ಬೆಂಬಲಿಗರಲ್ಲಿ ಮೂಡಿದೆ.
ಮುರಳೀಧರ ಹಾಲಪ್ಪನವರು ಟಿಕೆಟ್ ಸಿಗಲಿಲ್ಲವೆಂದು ಬೇಸರ ಮಾಡಿಕೊಳ್ಳದೆ ಪಕ್ಷದ ಕಾರ್ಯಗಳನ್ನು ತಮ್ಮ ಪಾಡಿಗೆ ತಾವು ಹೆಗಲು ಕೊಟ್ಟು ಮಾಡಿದ್ದರಿಂದಲೇ ಅವರಿಗೆ ಈ ಬಡ್ತಿ ಸಿಕ್ಕಿರುವುದು ಎನ್ನಲಾಗುತ್ತಿದೆ. ಚುನಾವಣೆ ಮುಗಿದ ನಂತರ ಈ ನೇಮಕಾತಿ ಮುರಳೀಧರ ಹಾಲಪ್ಪನವರ ರಾಜಕೀಯ ಏಳ್ಗೆಯೋ ಅಥವಾ ಚುನಾವಣೆಯ ಕಾಲದ ಕಣ್ಣೊರೆಸುವ ತಂತ್ರಗಾರಿಕೆಯೋ ಎಂಬುದು ತಿಳಿಯಲಿದೆ.
-ವೆಂಕಿ.