ತುಮಕೂರು : ಭಾರತೀಯ ಜನತಾ ಪಾರ್ಟಿಯ ತುಮಕೂರು ಲೋಕಸಭಾ ಅಭ್ಯರ್ಥಿ ವಿ.ಸೋಮಣ್ಣ ಬೃಹತ್ ಮೆರವಣಿಗೆಯೊಂದಿಗೆ ತೆರಳಿ ಮಾಜಿ ಮುಖ್ಯಮತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಹೆಚ್.ಡಿ.ಕುಮಾರಸ್ವಾಮಿ ಜೊತೆಗೂಡಿ ನಾಮ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿ.ಸೋಮಣ್ಣ ಇಬ್ಬರು ಮಾಜಿ ಮುಖ್ಯಮಂತ್ರಿಗಳು ನನ್ನ ಜೊತೆಗೂಡಿ ನಾಮಪತ್ರವನ್ನು ಸಲ್ಲಿಸಿದ್ದು ನನ್ನ ಜವಾಬ್ದಾರಿಯನ್ನು ಮುಳ್ಳಿನ ಹಾಸಿಗೆಯಷ್ಟು ಜಾಸ್ತಿ ಮಾಡಿದ್ದಾರೆಂದು ತಿಳಿಸಿದರು.
ಈ ಕ್ಷೇತ್ರದ ಮತದಾರರು ನೀಡಿರುವ ಬೆಂಬಲವನ್ನು ನೋಡಿದರೆ, ಮುಂದಿನ 23 ದಿನಗಳ ಕಾಲ 8 ವಿಧಾನಸಭಾ ಕ್ಷೇತ್ರಗಳನ್ನು ಸುತ್ತಾಡಿ ಬಂದಿದ್ದೇನೆ, ಇಂದು ಬಂದಂತಹ ಜನಸ್ತೋಮ ಭಗವಂತನ ದಯೆ, ಯಾವುದೋ ಕಾಲದಲ್ಲಿ ಮಾಡಿರುವ ಪೂರ್ವ ಜನ್ಮದ ಪುಣ್ಯ, ನನ್ನ ತಂದೆ-ತಾಯಿಗಳ ಆಶೀರ್ವಾದ, ಪರಮ ಪೂಜ್ಯ ನಡೆದಾಡುವ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ಎಲ್ಲೋ ಒಂದು ಸಂದೇಶ ಇದಾಗಿದೆ ಎಂದರು.
ನಮ್ಮ ನಾಯಕರು ಬಂದಿದ್ದರಿಂದ ಜವಾಬ್ದಾರಿ ಜಾಸ್ತಿಯಾಯಿತು ಚುನಾವಣೆ ಮುಗಿದು ಗೆದ್ದಮೇಲೆ ಏನು ಜವಾಬ್ದಾರಿ ಎಂದು ಯೋಚನೆ ಮಾಡುತ್ತಿದ್ದೆನೋ ಆ ಜವಾಬ್ದಾರಿಯಾಗಿ ಇಂದು 3ನೇ ತಾರೀಖು ನಾಮಪತ್ರ ಸಲ್ಲಿಸಿದ್ದೇನೆ, ಈ ಕ್ಷೇತ್ರದ ನನಗೆ ನೂರು ಪಟ್ಟು ಜವಾಬ್ದಾರಿಯನ್ನು ಇಂದು ವಹಿಸಿದ್ದು, ಇದೊಂದು ಮುಳ್ಳಿನ ಹಾಸಿಗೆಯನ್ನ ಈ ಭಾಗದ ಜನ ನನಗೆ ಸೃಷ್ಠಿ ಮಾಡಿ ಕೊಟ್ಟಿದ್ದಾರೆ. ಭಗವಂತನ ದಯೆ ಏನಿದೆಯೋ ಗೊತ್ತಿಲ್ಲ, ಎರಡೂ ಪಕ್ಷದ ನಾಯಕರು ಬೆಂಬಲ ಸೂಚಿಸಿದ್ದಕ್ಕೆ ಧನ್ಯವಾದ ಹೇಳಿದರು.
ಬೆಳಿಗ್ಗೆ 11 ಗಂಟೆಗೆ ವಿ.ಸೋಮಣ್ಣ ಕಾಲ್ಟೆಕ್ಸ್ ಸರ್ಕಲ್‍ನ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಸಾವಿರಾರು ಜನರೊಂದಿಗೆ ಮೆರವಣಿಗೆಯೊಂದಿಗೆ ಟೌನ್‍ಹಾಲ್ ಸರ್ಕಲ್, ಗಾಯತ್ರಿ ಟಾಕೀಸ್ ಮುಂಭಾಗದಿಂದ ಎಂ.ಜಿ.ರಸ್ತೆಯ ಮೂಲಕ ತೆರಳಿದರು.
ಎಂ.ಜಿ.ರಸ್ತೆಯ ಮೂಲಕ ಮೆರವಣಿಗೆ ಸಾಗುವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ ಅವರುಗಳು ಮೆರವಣಿಗೆಗೆ ಸಾಥ್ ನೀಡಿದರು.

ಸೋಮಣ್ಣ ಗೆಲುವಿಗೆ ಮುನ್ನುಡಿ: ಬಿಎಸ್‍ವೈ
ಮೆರವಣಿಗೆಯಲ್ಲಿ ಬಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾತನಾಡಿ, ಸೋಮಣ್ಣನವರ ನಾಮಪತ್ರ ಸಲ್ಲಿಕೆಗೆ ಎರಡೂ ಪಕ್ಷಗಳ ಇಷ್ಟೊಂದು ಜನ ಸೇರಿರುವುದು ದೊಡ್ಡ ದಾಖಲೆ, ಇದು ಸೋಮಣ್ಣ ಅವರ ಗೆಲುವಿನ ಮುನ್ಸೂಚನೆ, ಸೋಮಣ್ಣ ಎರಡು ಲಕ್ಷ ಮತಗಳ ಅಂತರದಿಂದ ಚುನಾವಣೆಯಲ್ಲಿ ಜಯಗಳಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ, ಯಾವುದೇ ಜನಪರವಾದ ಯೋಜನೆಯಾಗಲಿ, ಅಭಿವೃದ್ಧಿ ಕಾರ್ಯಗಳಾಗಲಿ ಈ ಸರ್ಕಾರದಿಂದ ಆಗುತ್ತಿಲ್ಲ ಎಂದು ಟೀಕಿಸಿದ ಅವರು, ವಿ.ಸೋಮಣ್ಣ ಅವರು ಜನಪ್ರಿಯ ನಾಯಕ, ಇವರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸಿ, ಮೋದಿಯವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ದೇಶದ ಸಮಗ್ರ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಂಸದ ಜಿ.ಎಸ್.ಬಸವರಾಜು ಉಪಸ್ಥಿತ್ತರಿದ್ದರು.