ಶೋಷಿತ, ದಲಿತರ ಕಾಪಾಡಲು ವಿಫಲವಾಗಿರುವ ಬಿಜೆಪಿ ಸೋಲಿಸಿ-ಎಂ.ವೆಂಕಟೇಶ್

ತುಮಕೂರು:ದೇಶದ ಶೋಷಿತರು,ಬಡವರು, ದಲಿತರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ವಿಫಲವಾಗಿರುವ ಬಿಜೆಪಿಯನ್ನು ಸೋಲಿಸಿ,ಸಾಮಾಜಿಕ ನ್ಯಾಯಕ್ಕೆ ಬದ್ದವಾಗಿರುವ ಕಾಂಗ್ರೆಸ್ ಪಕ್ಷವನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸುವಂತೆ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಗಳ ಸಂಚಾಲಕ ಎಂ.ವೆಂಕಟೇಶ್ ಕರೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಸಂವಿಧಾನ ವಿರೋಧಿಗಳಿಂದ ಬಡವರ ಪರವಾಗಿರುವ ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಇನ್ನಿತರ ದಲಿತ ಸಂಘಟನೆಗಳು ಸೇರಿ ಐಕ್ಯ ಹೋರಾಟ ಸಮಿತಿ ರಚಿಸಿಕೊಂಡು, ಎದ್ದೇಳು ಕರ್ನಾಟಕ ಸಂಘಟನೆಯ ಸಹಕಾರದಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿ, ದಲಿತ ಸಮುದಾಯಗಳ ಮುಖಂಡರು, ಮತದಾರರಿಗೆ ರಾಜಕೀಯ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ದಲಿತರು ಸೇರಿದಂತೆ ದೇಶದ ಹಿಂದುಳಿದ ಸಮುದಾಯಗಳ ಏಳಿಗೆಗೆ ಬೆನ್ನೆಲುಬಾಗಿರುವ ಮೀಸಲಾತಿಯನ್ನು ಹೇಗಾದರೂ ಮಾಡಿ ರದ್ದು ಪಡಿಸಬೇಕು ಎಂಬುದು ಬಿಜೆಪಿಯ ಹುನ್ನಾರವಾಗಿದೆ. ಹಾಗಾಗಿಯೇ ಅಧಿಕಾರಕ್ಕೆ ಬಂದ ಹತ್ತು ವರ್ಷಗಳಲ್ಲಿ ದಲಿತರು, ಹಿಂದುಳಿದ ವರ್ಗಗಳ ವಿದ್ಯಾವಂತರಿಗೆ ಆಸರೆಯಾಗಿದ್ದ ಸಾರ್ವಜನಿಕ ಸಂಸ್ಥೆಗಳನ್ನು ಬಂಡವಾಳ ಹಿಂಪಡೆಯುವ ನೆಪದಲ್ಲಿ ಖಾಸಗಿಯವರಿಗೆ ಮಾರಾಟ ಮಾಡಿದ ಪರಿಣಾಮ, ಮೀಸಲಾತಿ ಇಲ್ಲದಾಗಿದೆ.ಇದರ ಜೊತೆಗೆ,ಸಾಮಾಜಿಕ ನ್ಯಾಯ, ಅಭಿವ್ಯಕ್ತಿ ಸ್ವಾತಂತ್ರಕ್ಕೆ ಅವಕಾಶವೇ ಇಲ್ಲದಂತಾಗಿದೆ.ಇದಕ್ಕೆ ಹತ್ತಾರು ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇವೆ ಎಂದರು.

ಸರಕಾರದ ನೀತಿಗಳನ್ನು ಪ್ರಶ್ನಿಸುವ ಪತ್ರಕರ್ತರು,ಬುದ್ದಿಜೀವಿಗಳ ಮೇಲೆ ಯುಎಪಿಎ ಕೇಸು ಹಾಕಿ 2-3 ವರ್ಷಗಳ ಕಾಲ ವಿಚಾರಣೆ ಇಲ್ಲದೆ ಜೈಲುಗಳಲ್ಲಿ ಕೊಳೆಯುವಂತೆ ಬಿಜೆಪಿ ಸರಕಾರ ಮಾಡಿದೆ.ಉತ್ತರಪ್ರದೇಶದ ಸರಕಾರ ಶಾಲಾ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟದಲ್ಲಿ ರೊಟ್ಟಿಯ ಜೊತೆಗೆ,ನೆಂಚಿಕೊಳ್ಳಲು ಉಪ್ಪು ನೀಡುತ್ತಿದೆ ಎಂದು ಸುದ್ದಿ ಮಾಡಿದ ಪತ್ರಕರ್ತನ ಮೇಲೆ ಕೇಸು ಹಾಕಿ ಜೈಲಿಗೆ ಕಳುಹಿಸಲಾಗಿದೆ.ಸತ್ಯವನ್ನು ಹೇಳಲಾಗದ ಭಯದ ವಾತಾವರಣದಲ್ಲಿ ಜನರು ಬದುಕುತ್ತಿದ್ದಾರೆ. ಹಾಗಾಗಿ ಸಂವಿಧಾನ,ಅಭಿವ್ಯಕ್ತಿ ಸ್ವಾತಂತ್ರ ಉಳಿಯಲು ಬಿಜೆಪಿಯನ್ನು ಸೋಲಿಸುವಂತೆ ಕರೆ ನೀಡಲಾಗುತ್ತಿದೆ ಎಂದು ಎಂ.ವೆಂಕಟೇಶ್ ತಿಳಿಸಿದರು.

ಎದ್ದೇಳು ಕರ್ನಾಟಕ ಸಂಘಟನೆಯ ಡಾ.ಪಾವನ ಮಾತನಾಡಿ, ದೇಶದಲ್ಲಿ ಮಾಧ್ಯಮ ಸ್ವಾತಂತ್ರವೇ ಇಲ್ಲದಾಗಿದೆ.ಐಟಿ, ಈಡಿ, ಸಿಬಿಐ ಮೂಲಕ ವಿರೋಧಪಕ್ಷಗಳನ್ನು ಹೆದರಿಸಿ, ಪ್ರಜಾಪ್ರಭುತ್ವವನ್ನು ಧಮನಗೊಳಿಸುವ ಕೆಲಸ ಭರದಿಂದ ಸಾಗಿವೆ.ಇದು ಹೋಗಬೇಕೆಂದರೆ ಬಿಜೆಪಿ ಸೋಲಬೇಕು. ಹಾಗಾಗಿ ಪರ್ಯಾಯ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಹೋರಾಟಗಾರರು ಜನರಲ್ಲಿ ಮನವಿ ಮಾಡುತ್ತಿರುವುದಾಗಿ ತಿಳಿಸಿದರು.

ಹಿರಿಯ ಚಿಂತಕ ದೊರೆರಾಜು ಮಾತನಾಡಿ,ದೇಶದಲ್ಲಿ ಚಳವಳಿಗಾರರ ದ್ವನಿ ಅಡಗಿಸುವ ಕೆಲಸ ನಡೆಯುತ್ತಿದೆ. ವಿಚಾರವಾದಿಗಳಾದ ಆನಂದ ತಲ್ತುಂಬೆ ಅವರನ್ನು ಕಾರಣವಿಲ್ಲದೆ ಎರಡು ವರ್ಷಗಳ ಕಾಲ ಜೈಲಿ ಗೈಟಿದ್ದರು. ಇಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಣಮುಂದಿವೆ.ಇಂತಹ ಸರ್ವಾಧಿಕಾರಿ ಆಡಳಿತ ತೊಲಗಬೇಕು ಎಂಬ ಉದ್ದೇಶದಿಂದ ಬಿಜೆಪಿ ಸೋಲಿಸಿ, ಕಾಂಗ್ರೆಸ್ ಗೆಲ್ಲಿಸಿ ಅಭಿಯಾನವನ್ನು ದಲಿತ ಹೋರಾಟಗಾರರು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಜೀವನಹಳ್ಳಿ ಆರ್.ವೆಂಕಟೇಶ್ ಮಾತನಾಡಿ, ಕಳೆದ ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವದ ಬೇರುಗಳಾದ ಸ್ವಾತಂತ್ರ,ಸಮಾನತೆ,ಸಹೋದರತ್ವಕ್ಕೆ ಧಕ್ಕೆಯಾಗಿದೆ. ಆಘೋಷಿತ ತುರ್ತು ಪರಿಸ್ಥಿತಿ ದೇಶದಲ್ಲಿದೆ.ಸರಕಾರದ ನಡೆ ವಿರೋಧಿಸುವವರನ್ನು ಜೈಲಿಗೆ ಹಾಕುವ ಹಿಟ್ಲರ್ ಆಡಳಿತ ಚಾಲ್ತಿಯಲ್ಲಿದೆ. ಮೋದಿಯ ಯಾವ ಭರವಸೆಗಳು ಈಡೇರಿಲ್ಲ.ಬುಲೇಟ್ ಟ್ರೈನ್,ಪಕ್ಕಾ ಮನೆ, 100 ಸ್ಮಾರ್ಟ್‍ಸಿಟಿ, ರೈತರ ಆದಾಯ ದ್ವಿಗುಣ ಎಲ್ಲವೂ ಮರೀಚಿಕೆಯಾಗಿವೆ.ಭೇಟಿ ಬಜಾವೋ,ಬೇಟಿ ಪಡಾವೋ ಎಂಬುದು ಬೂಟಾಟಿಕೆ ಎಂಬುದು ಕುಸ್ತಿಪಟುಗಳ ಪ್ರತಿಭಟನೆಯ ವೇಳೆ ಸಾಭೀತಾಗಿದೆ.ಹೊತ್ತಿ ಹುರಿಯುತ್ತಿರುವ ಮಣಿಪುರಕ್ಕೆ ಇದುವರೆಗೂ ಮೋದಿ ಕಾಲಿಟ್ಟಿಲ್ಲ. ಹಾಗಾಗಿ ಬಿಜೆಪಿ ಸೋಲಿಸಬೇಕುಂಬುದು ನಮ್ಮ ಕರೆಯಾಗಿದೆ.ದೇಶದ ಜಾತ್ಯಾತೀತತೆ ಮತ್ತು ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್‍ಗೆ ಮತ ನೀಡುವಂತೆ ನಮ್ಮ ಕೋರಿಕೆಯಾಗಿದೆ ಎಂದರು.

ಸಮಾಜ ಸೇವಕ ತಾಜುದ್ದೀನ್ ಮಾತನಾಡಿ,ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ಹೊಡೆದು ಆಳುತ್ತಿರುವ ಬಿಜೆಪಿಯಿಂದ ದೇಶ ಉಳಿಸುವ ನಿಟ್ಟಿನಲ್ಲಿ ಹಲವಾರು ಸಂಘಟನೆಗಳು ಬಿಜೆಪಿ ಸೋಲಿಸಲು ಪಣತೊಟ್ಟಿವೆ ಎಂದರು.

ದಲಿತ ಸಂಘರ್ಷ ಸಮಿತಿ ಮುಖಂಡರಾದ ನರಸಿಂಹಯ್ಯ, ಐಕ್ಯ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಡಾ.ಮುರುಳೀಧರ್,ಬೆನ್ನಿಗಾನಹಳ್ಳಿ ರಾಮಚಂದ್ರ, ಹೆಚ್.ಮುನಿವೆಂಕಟಪ್ಪ, ಗಂಗಾಧರ್,ಕೇಬಲ್ ರಘು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *