ತುಮಕೂರು- ನಾನು ಹೇಮಾವತಿ ನೀರನ್ನು ತುಮಕೂರಿಗೆ ಬಿಡಲು ಅಡ್ಡಿ ಪಡಿಸಿದ್ದೇನೆಂದು ಅಪಪ್ರಚಾರ ಮಾಡಿದರು, ಆದರೆ ಇಂದು ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಯನ್ನು ವಿರೋಧಿಸಿ ಪ್ರಣಾಳಿಕೆ ಹೊರಡಿಸಿದ್ದು, ಅವರ ಜೊತೆ ಕಾಂಗ್ರೆಸ್ ಕೈ ಜೋಡಿಸಿ ನೀರು ಹರಿಸುತ್ತಿರುವುದರಿಂದ ಬೆಂಗಳೂರಿಗೆ ನೀರಲ್ಲದಂತೆ ಮಾಡಿದೆ ಎಂದು ಮಾಜಿ ಪ್ರಧಾನಿ ಹಚ್.ಡಿ.ದೇವೇಗೌಡ ಆರೋಪಿಸಿದರು.
ತಾಲ್ಲೂಕಿನ ಊರ್ಡಿಗೆರೆಯಲ್ಲಿ ಎನ್‍ಡಿಎ ಅಭ್ಯರ್ಥಿ ವಿ. ಸೋಮಣ್ಣ ಅವರ ಪರ ನಡೆದ ಕಾರ್ಯಕರ್ತರು ಹಾಗೂ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇವೇಗೌಡ ಸಾಮಾನ್ಯ ರೈತನ ಮಗ, ಶ್ರೀಮಂತನ ಮಗನಲ್ಲ. ನಮಗೆ ಬಡವರು, ರೈತರ ಬಗ್ಗೆ ಅಪಾರ ಕಾಳಜಿ ಇದೆ. ಕಾಂಗ್ರೆಸ್ ಪಕ್ಷದವರ ರೀತಿ ಬರೀ ಸುಳ್ಳು ಆಶ್ವಾಸನೆಗಳನ್ನು ಕೊಡುತ್ತಾ ಕಾಲ ಹರಣ ಮಾಡಿಲ್ಲ ಎಂದು ಅವರು ಹೇಳಿದರು.
ನಾನು ತುಮಕೂರಿಗೆ ಹೇಮಾವತಿ ನೀರು ಹರಿಯಲು ಬಿಡುವುದಿಲ್ಲ ಎಂದು ಅಪಪ್ರಚಾರ ಮಾಡಿದರು. ಇವತ್ತು ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಕಾವೇರಿ ಬೇಸಿನ್‍ನಲ್ಲಿ 10 ಜಿಲ್ಲೆ ಬರುತ್ತದೆ. ಅಲ್ಲಿ ನಾವು ಗೆದ್ದರೆ, ಮೋದಿ ಮುಂದೆ ಎದೆ ಉಬ್ಬಿಸಿ ನಿಂತು ಕೇಳಬಹುದು. ಆದ್ದರಿಂದ ಕೋಲಾರ, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಎನ್‍ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ನಮ್ಮದು ದೊಡ್ಡ ದೇಶ, ನಮ್ಮ ದೇಶಕ್ಕೆ ನರೇಂದ್ರ ಮೋದಿಯವರಂತಹ ದಿಟ್ಟ ಪ್ರಧಾನಿಯ ಅಗತ್ಯವಿದೆ. ಹಾಗಾಗಿ ನರೇಂದ್ರ ಮೋದಿಯವರನ್ನು 3ನೇ ಬಾರಿಗೆ ಪ್ರಧಾನಿ ಮಾಡಲು ನಾವೆಲ್ಲೂ ಪಣ ತೊಡಬೇಕು ಎಂದು ಕರೆ ನೀಡಿದರು.
ಇಂಡಿಯಾ (ಐಎನ್‍ಡಿಎ) ಒಕ್ಕೂಟದಲ್ಲಿ ಯಾರಿಗೂ ಪ್ರಧಾನಿಯಾಗುವ ಯೋಗ್ಯತೆ ಇಲ್ಲ. ಹಾಗಾಗಿ ಈ ಒಕ್ಕೂಟದಲ್ಲಿ ಯಾರೂ ಪ್ರಧಾನ ಮಂತ್ರಿಯಾಗುವುದಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡ ಹೇಳಿದರು.
ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದು ಸೋನಿಯಾಗಾಂಧಿ. ನಾನು ಅದನ್ನು ಇಲ್ಲ ಎನ್ನುವುದಿಲ್ಲ ಎಂದ ಅವರು, ನಾನು ಈ ಹಿಂದೆ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬರುವ ಉದ್ದೇಶ ಹೊಂದಿರಲಿಲ್ಲ. ಆದರೂ ಕಾಂಗ್ರೆಸ್‍ನವರು ನನ್ನನ್ನು ಕರೆತಂದು ಸೋಲಿಸಿದರು. ಹಾಗಾಗಿ ನಾನು ರಾಜಕೀಯದಲ್ಲಿ ಯಾರನ್ನೂ ನಂಬುವುದಿಲ್ಲ ಎಂದರು.
ಕುಮಾರಸ್ವಾಮಿ ಇಡೀ ದೇಶದಲ್ಲಿಯೇ ಉತ್ತಮವಾದ ಪಂಚರತ್ನ ಯೋಜನೆ ರೂಪಿಸಿದರು. ಇಡೀ ರಾಜ್ಯದ ನೀರನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆಯೂ ಯೋಜನೆ ರೂಪಿಸಿದ್ದರು. ಅಲ್ಲದೆ ಬಡವರು, ರೈತರ 25 ಕೋಟಿ ಸಾಲ ಮನ್ನಾ ಮಾಡಿದರು. ಇಂತಹ ಕುಮಾರಸ್ವಾಮಿ ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡುತ್ತಾರೆಯೇ, ಇದೆಲ್ಲಾ ಕಾಂಗ್ರೆಸ್‍ನವರ ಚಿತಾವಣೆ ಎಂದು ಅವರು ಹೇಳಿದರು.
ಮಹಿಳೆಯರಿಗೆ ಮೀಸಲಾತಿ ಕೊಟ್ಟವರು ಯಾರು ಎಂದು ಪ್ರಶ್ನಿಸಿದ ಅವರು, ಮಹಿಳೆಯರಿಗೆ 68 ರೂಪಾಯಿ ಮಾಸಾಶನವನ್ನು ನಾನು ಜಾರಿಗೆ ತಂದೆ. ಅದನ್ನು ನನ್ನ ಮಗ ಕುಮಾರಸ್ವಾಮಿ 2 ಸಾವಿರ ರೂಪಾಯಿಗೆ ಏರಿಕೆ ಮಾಡಿದರು ಎಂದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಗೆ ಮಾರು ಹೋಗಬೇಡಿ, ಪ್ರಧಾನಿ ಮೋದಿಯವನ್ನು ಈ ದೇಶವನ್ನು 5ನೇ ಸ್ಥಾನಕ್ಕೆ ತಂದಿದ್ದು, ಮುಂದಿನ ದಿನಗಳಲ್ಲಿ 3ನೇ ಸ್ಥಾನಕ್ಕೆ ತರಲಿದ್ದಾರೆ. ಈ ದೇಶವನ್ನು ಆಳುವ ಶಕ್ತಿ ಕೇವಲ ಮೋದಿಗೆ ಮಾತ್ರ ಇದ್ದು, ಎನ್‍ಡಿಎ ಅಭ್ಯರ್ಥಿ ಸೋಮಣ್ಣ ರವರಿಗೆ ಮತ ಚಲಾಯಿಸುವ ಮೂಲಕ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಎಂದರು.
ಅಭ್ಯರ್ಥಿ ವಿ. ಸೋಮಣ್ಣ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರು ನಮ್ಮೆಲ್ಲರಿಗೂ ಉತ್ಸಾಹದ ಚಿಲುಮೆಯಾಗಿದ್ದಾರೆ. 150 ಕೋಟಿ ಭಾರತೀಯರು ಸಂಕಷ್ಟಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಸೋಮಣ್ಣ ನನ್ನ ಮೇಲೆ 50 ಕೋಟಿ ಖರ್ಚು ಮಾಡಿ ಸೋತಿದ್ದಾರೆ ಎಂದು ಹೇಳಿದ್ದಾರೆ. ನನಗೂ ಗೊತ್ತಿದೆ, ನೀವು ಮಾಡಿರುವ ಖರ್ಚಿನ ಬಗ್ಗೆ ಎಂದು ತಿರುಗೇಟು ನೀಡಿದರು.
ಶಾಸಕ ಬಿ. ಸುರೇಶ್‍ಗೌಡ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಮಾತನಾಡಿದರು.
ಸಮಾವೇಶದಲ್ಲಿ ಮಾಜಿ ಸಚಿವ ಗೋಪಾಲಯ್ಯ, ಮಾಜಿ ಶಾಸಕ ನಿಂಗಪ್ಪ, ನೆ.ಲ. ನರೇಂದ್ರಬಾಬು, ವೈ.ಎ. ನಾರಾಯಣಸ್ವಾಮಿ, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಆರ್.ಸಿ. ಅಂಜಿನಪ್ಪ, ಮುಂತಾದವರಿದ್ದರು.