ಬಿಜೆಪಿ ಮಂದಿರ, ಮಸೀದಿ ಹೆಸರಿನಲ್ಲಿ ಯುವಕರನ್ನು ದಾರಿ ತಪ್ಪಿಸುತ್ತಿದೆ-ಕೆ.ಎನ್.ರಾಜಣ್ಣ

ತುಮಕೂರು:ಮಂದಿರ,ಮಸೀದಿ ಹೆಸರಿನಲ್ಲಿ ಯುವಕರನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದ್ದು, ವಿದ್ಯಾವಂತ ಯುವಕರು ಸಹ ಪೊಲೀಸ್ ಕೇಸುಗಳಲ್ಲಿ ಸಿಲುಕಿ ಉದ್ಯೋಗ ಪಡೆಯಲು ಆಗದಂತಹ ಸ್ಥಿತಿಗೆ ತಲುಪಿದ್ದು,ಯುವಜನತೆ ಎಚ್ಚೆತ್ತುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವಂತೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ
ಕಾಂಗ್ರೆಸ್‍ಪಕ್ಷದ ಮುಂಚೂಣಿ ಘಟಕಗಳಾದ ಯುವ ಕಾಂಗ್ರೆಸ್, ಎಸ್ಸಿ, ಎಸ್ಟಿ, ಓಬಿಸಿ, ಮಹಿಳಾ, ಸೇವಾದಳ ಹಾಗೂ ಕಾರ್ಮಿಕರ ಘಟಕದ ಮುಖಂಡರುಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,ಮಂಗಳೂರು ಭಾಗದ ಯುವಕರು ಬಿಜೆಪಿ ಮತ್ತು ಸಂಘಪರಿಹಾರದ ಬಣ್ಣದ ಮಾತುಗಳಿಗೆ ಮರುಳಾಗಿ, ಇಂದು ಕೆಲಸವಿಲ್ಲದೆ ಪರಿತಪಿಸುತಿದ್ದಾರೆ, ತಾವುಗಳು ಹಾಗಾಗಬಾರದು ಎಂದು ಎಚ್ಚರಿಸಿದರು.

ಶ್ರೀರಾಮ ಇಂದು, ನಿನ್ನೆಯವರಲ್ಲ. ಶತ ಶತಮಾನಗಳಿಂದಲೂ ಜನರು ಶ್ರೀರಾಮಮಂದಿರ, ಹನುಮಂತನ ಗುಡಿಗಳನ್ನು ಕಟ್ಟಿ ಪೂಜಿಸುತ್ತಾ ಬಂದಿದ್ದಾರೆ.ಶ್ರೀರಾಮನ ಜೊತೆ ಸೀತೆ, ಲಕ್ಷ್ಮಣ, ಹನುಮಂತ ಇದ್ದರೆ ಒಳಿತು.ಆದರೆ ಬಿಜೆಪಿಯವರಿಗೆ ಇವರ್ಯಾರು ಬೇಡ, ಶ್ರೀರಾಮನಷ್ಟೇ ಸಾಕು.ಯುವಕರು ರಾಜಕಾರಣಕ್ಕೆ ಬರಬೇಕೆಂಬ ಕನಸನ್ನು ಕಾಂಗ್ರೆಸ್ ಹೊಂದಿದೆ. ಹಾಗಾಗಿ ಯುವಜನರಿಗೆ ಹೆಚ್ಚಿನ ಅದ್ಯತೆ ನೀಡುತ್ತಿದೆ.ಸ್ಥಳೀಯವಾಗಿಯೂ ಪಕ್ಷದ ಹುದ್ದೆಗಳಲ್ಲದೆ, ಸರಕಾರದ ವಿವಿಧ ನೇಮಕಾತಿಗಳಲ್ಲಿಯೂ ಯುವಕರಿಗೆ ಅದ್ಯತೆ ನೀಡಲಾಗಿದೆ. ಮುಂದೆಯೂ ನೀಡಲಿದೆ. ಬೂತ್ ಮಟ್ಟದಲ್ಲಿ ಪ್ರತಿಯೊಬ್ಬರು ಚುನಾವಣಾ ಸಮಯದಲ್ಲಿ ಹೆಚ್ಚಿನ ಗಮನಹರಿಸಿ, ಒಂದು ಮತವು ವಿಫಲವಾಗದಂತೆ ಎಲ್ಲರೂ ಮುದ್ದಹನುಮೇಗೌಡರಿಗೆ ಮತ ಚಲಾಯಿಸಲು ಕ್ರಮ ಕೈಗೊಳ್ಳಬೇಕೆಂದು ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ ಮಾತನಾಡಿ,ಶ್ರೀರಾಮನೆಂದರೆ ಸತ್ಯ, ಧರ್ಮ, ಸಮಾನತೆಯ ಪ್ರತೀಕ.ರಾಮರಾಜ್ಯವೆಂದರೆ ಸಮಾನತೆ, ಸ್ವಾಭಿಮಾನದ ಬದುಕಿನ ಪ್ರತೀಕ. ಆದರೆ ಬಿಜೆಪಿ ಪಕ್ಷದವರು ಕೇವಲ ಒಂದು ವರ್ಗಕ್ಕೆ ಮಾತ್ರ ಶ್ರೀರಾಮನನ್ನು ಸಿಮೀತಗೊಳಿಸಲು ಹೊರಟಿದ್ದಾರೆ.ರಾಮರಾಜ್ಯದ ಕನಸು ನನಸು ಮಾಡುತ್ತಿರುವ ಪಕ್ಷವೆಂದರೆ ಕಾಂಗ್ರೆಸ್‍ಪಕ್ಷ. ಎಲ್ಲರೂ ಒಂದೇ ಎಂಬುದು ಕಾಂಗ್ರೆಸ್ ಪಕ್ಷದ ಸಿದ್ದಾಂತವಾಗಿದೆ ಎಂದರು.

ಇಂದು ನಡೆಯುತ್ತಿರುವ ಲೋಕಸಭಾ ಚುನಾವಣೆ ಸತ್ಯ ಮತ್ತು ಅಸತ್ಯ ಹಾಗೂ ಧರ್ಮ ಮತ್ತು ಅಧರ್ಮದ ನಡುವೆ ನಡೆಯುತ್ತಿರುವ ಚುನಾವಣೆಯಾಗಿದೆ.ಗಾಂಧಿಜೀ ಅವರ ಸತ್ಯಮೇವ ಜಯತೆ ಎಂಬುದು ಕಾಂಗ್ರೆಸ್‍ಪಕ್ಷದ ಮೂಲಮಂತ್ರ. ಬಿಜೆಪಿ ಪಕ್ಷದ ಧರ್ಮ, ಜಾತಿ, ಭಾಷೆಯ ಹೆಸರಿನಲ್ಲಿ ಜನ ಸಮುದಾಯವನ್ನು ವಿಂಗಡಿಸುವ ಕತ್ತರಿಯ ಕೆಲಸ ಮಾಡಿದರೆ, ಕಾಂಗ್ರೆಸ್ ಪಕ್ಷ ಭಾರತೀಯರೆಲ್ಲರೂ ಸಮಾನರು ಎಂದು ಸೂಜಿಯಿಂದ ಹೊಲೆಯುವ ಕೆಲಸ ಮಾಡುತ್ತಿದೆ ಎಂದರು.

ಮಾಜಿ ಶಾಸಕರಾದ ಗಂಗಹನುಮಯ್ಯ, ಡಾ.ರಫೀಕ್ ಅಹಮದ್,ಎನ್.ಗೋವಿಂದರಾಜು,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆ ಮಠ್,ಓಬಿಸಿ ಘಟಕದ ಪುಟ್ಟರಾಜು,ಎಸ್ಸಿ ಘಟಕದ ಕುಮಾರಸ್ವಾಮಿ, ಕಾರ್ಮಿಕನ ಘಟಕದ ಸೈಯದ್ ದಾದಾಪೀರ್,ಸೇವಾದಳದ ಕಿರಣ್ ಕುಮಾರ್ ಅವರುಗಳು ಸಭೆ ಕುರಿತು ಮಾತನಾಡಿದರು.ಇದೇ ವೇಳೆ ಘಟಹಲವು ಪಕ್ಷಗಳ ಮುಖಂಡರು ಡಾ.ಜಿ.ಪರಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

Leave a Reply

Your email address will not be published. Required fields are marked *