ಅಂಬೇಡ್ಕರ್ ರವರಿಂದ ಶೋಷಿತ ಸಮುದಾಯಗಳು ಸ್ವಾಭಿಮಾನ ಬದುಕು ಕಂಡುಕೊಂಡಿವೆ

ತುಮಕೂರು: ಶತ ಶತಮಾನಗಳಿಂದ ಇನ್ನೊಬ್ಬರ ಮನೆಯಲ್ಲಿ ಜೀತ ಮಾಡಿ,ಅವರ ಆಶ್ರಯದಲ್ಲಿಯೇ ಬದುಕಬೇಕಾಗಿದ್ದ ಶೋಷಿತ ಸಮುದಾಯಗಳು ಇಂದು ಸ್ವಾಭಿಮಾನದಿಂದ ಬದುಕು ಕಾಣುವಂತಾಗಿದ್ದರೆ,ಅದಕ್ಕೆ ಕಾರಣಕರ್ತರು ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಎಂಬುದನ್ನು ನಾವುಗಳು ಮರೆಯುವಂತಿಲ್ಲ ಎಂದು ಚನ್ನೇನಹಳ್ಳಿಯ ಶ್ರೀಛಲವಾದಿ ಜಗದ್ಗುರು ಪೀಠದ ಶ್ರೀಬಸವಲಿಂಗಮೂರ್ತಿ ಸ್ವಾಮೀಜಿ ತಿಳಿಸಿದ್ದಾರೆ.

ನಗರದ ಶಿರಡಿ ಸಾಯಿಬಾಬಾ ನಗರದ ಛಲವಾದಿ ಸಾಂಸ್ಕøತಿಕ ಭವನದಲ್ಲಿ ತುಮಕೂರು ಛಲವಾದಿ ಮಹಾಸಭಾ ವತಿಯಿಂದ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮ ಜಯಂತಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡುತಿದ್ದ ಅವರು,ಇನ್ನೊಬ್ಬರ ಆಶಯದಲ್ಲಿಯೇ ಬದುಕುತ್ತಿದ್ದ ಸಮುದಾಯಗಳಿಗೆ ಸಾಂವಿಧಾನಿಕ ಹಕ್ಕುಗಳನ್ನು ಕೊಟ್ಟು ಇತರರಂತೆ ಬದುಕುವ ಅವಕಾಶವಿತ್ತರೂ,ಅಧಿಕಾರವಂತರ ನಿರ್ಲಕ್ಷದಿಂದ ಇಂದಿಗೂ ಶೋಷಣೆಗೆ ಒಳಗಾಗುತ್ತಿರುವುದು ನಿಜಕ್ಕೂ ವಿಷಾದದ ಸಂಗತಿಯಾಗಿದೆ ಎಂದರು.

ಅಸ್ಪøಷ್ಯತೆ ಎಂಬುದು ಪ್ರಪಂಚದ ನಾನಾ ದೇಶಗಳಲ್ಲಿ,ಬೇರೆ ಬೇರೆ ರೀತಿಯಲ್ಲಿ ಕಾಣಬಹುದಾಗಿದೆ.ಆದರೆ ಭಾರತದಲ್ಲಿ ತಾನು ಮಾಡುವ ಕಸುಬೇ ಜಾತಿ ಸೂಚಕವಾಗಿ, ಶ್ರೇಣಿಕೃತ ವ್ಯವಸ್ಥೆ ಸೃಷ್ಟಿಯಾಗಿರುವುದು ಶೋಚನೀಯ. ನಮ್ಮನ್ನು ನಾವು ಮೇಲು ಎಂದು ಕರೆದುಕೊಳ್ಳುವ ಲಿಂಗಾಯಿತರು ಬ್ರಾಹ್ಮಣರ ವಠಾರದಲ್ಲಿರುವ ಬಾವಿಯ ನೀರು ಸೇದಿದರು ಎಂಬ ಕಾರಣಕ್ಕೆ ಗೋ ಮೂತ್ರ ಹಾಕಿ ಶುಚ್ಚಿಗೊಳಿಸಿದ ನಂಜನಗೂಡು ತಾಲೂಕಿನ ಪ್ರಕರಣ ತೀರ ಇತ್ತೀಚಿನದ್ದು,ಇಂತಹ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.ಲಿಂಗಾಯಿತರಿಗೆ ಈ ಪರಿಸ್ಥಿತಿಯಾದರೆ ಇನ್ನೂ ದಲಿತರ ಪಾಡೇನು ಎಂದು ಶ್ರೀಬಸವಲಿಂಗಮೂರ್ತಿ ಸ್ವಾಮೀಜಿ ಪ್ರಶ್ನಿಸಿದರು.

ಭಾರತದ ದಲಿತರು ಶೋಷಣೆಯಿಂದ ಮುಕ್ತರಾಗಲು ಬಾಬಾ ಸಾಹೇಬರು ನಮಗೆ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮೂರು ಸೂತ್ರಗಳನ್ನು ಕೊಟ್ಟಿದ್ದಾರೆ.ಆದರೆ ಶಿಕ್ಷಣ ಪಡೆದು, ಸರಕಾರಿ ಹುದ್ದೆಗಳನ್ನು ಪಡೆದ ದಲಿತರು, ಸಂಘಟನೆ ಮತ್ತು ಹೋರಾಟದಿಂದ ವಿಮುಖರಾಗುತ್ತಿದ್ದಾರೆ.ಇದು ಒಳ್ಳೆಯ ಬೆಳವಣಿಗೆಯಲ್ಲ.ನಮಗಲ್ಲದಿದ್ದರೂ ನಮ್ಮ ಮುಂದಿನ ಪೀಳಿಗೆ ಗೋಸ್ಕರ ನಾವೆಲ್ಲರೂ ಸಂಘಟಿತರಾಗಿ, ಹೋರಾಟವನ್ನು ರೂಪಿಸಬೇಕಾಗಿದೆ. ನಮ್ಮ ಉಳಿವಿಗಾಗಿ ಹೋರಾಟ ವೆಂಬುದು ನಿರಂತರವಾಗಿ ನಮ್ಮ ಸಹಾಯಕ್ಕೆ ಬರುವ ಆಸ್ತ್ರವಾಗಿದೆ. ಹಾಗಾಗಿ ನಾವೆಲ್ಲರೂ ಒಗ್ಗೂಡಿ ಒಳ್ಳೆಯ ಭಾರತವನ್ನು ಕಟ್ಟಲು ಶ್ರಮಪಡೋಣ ಎಂದು ಶ್ರೀಬಸವಲಿಂಗಮೂರ್ತಿ ಸ್ವಾಮೀಜಿ ತಿಳಿಸಿದರು.

ಕಲಾಶ್ರೀ ಡಾ.ಲಕ್ಷ್ಮಣದಾಸ್ ಮಾತನಾಡಿ,ಅಸ್ಪøಷ್ಯತೆಗೆ ಶಿಕ್ಷಣವೊಂದೇ ದಾರಿ ಎಂಬುದನ್ನು ಅರಿತಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಈ ದೇಶದಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ವಿಷಯಗಳಲ್ಲಿಯೂ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆಯುವ ಮೂಲಕ ಚಾತುರ್ವಣ ವ್ಯವಸ್ಥೆಯಲ್ಲಿ ಶೋಷಣೆ ಒಳಗಾಗಿದ್ದ ಸಮುದಾಯಗಳಿಗೆ ಬದುಕಿನ ದಾರಿ ತೋರಿಸಿದರು.ಬಾಬಾ ಸಾಹೇಬರು ಹುಟ್ಟಿನಿಂದ ಸಾಯುವವರೆಗೆ ನಾನಾ ರೀತಿಯ ಕಷ್ಟಗಳನ್ನು ಅನುಭವಿಸಿಯೇ ನಮಗೆಲ್ಲರಿಗೂ ಬೆಳಕು ತೋರಿಸಿ ಹೋಗಿದ್ದಾರೆ. ಆ ಬೆಳಕಿನಲ್ಲಿ ನಾವೆಲ್ಲರೂ ಬದುಕು ಕಟ್ಟಿಕೊಳ್ಳುವಂತಾಗಲಿ ಎಂದರು.

ಕಾರ್ಯಕ್ರಮದಲ್ಲಿ ತುಮಕೂರು ಛಲವಾದಿ ಮಹಾಸಭಾ ಅಧ್ಯಕ್ಷ ಡಾ.ಪಿ.ಚಂದ್ರಪ್ಪ,ನಿವೃತ್ತ ಇಇ ಆದಿನಾರಾಯಣ್, ಸರಕಾರಿ ಅಭಿಯೋಜಕ ರಾಜಣ್ಣ, ಸುವರ್ಣಪ್ರಗತಿ ಪತ್ರಿಕೆ ಸಂಪಾದಕ ಹೆಚ್.ಎಸ್.ಪರಮೇಶ್, ರಾಮಾಜೋಯಿಸ್ ನಗರ ಹಿತರಕ್ಷಣಾ ಸಮಿತಿ ಅಧ್ಯಕ್ಷ ವಸಂತಕುಮಾರ್, ಪುಟ್ಟಬೋರಯ್ಯ, ಚಂದ್ರಶೇಖರ್, ಟಿ.ಆರ್.ನಾಗೇಶ್,ಶ್ರೀನಿವಾಸ್,ಹುಚ್ಚವೀರಯ್ಯ,ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *