ತುಮಕೂರು: ಎಲ್ಲಾ ವರ್ಗದ ಜನ ಸ್ವಾಭಿಮಾನದಿಂದ, ಸ್ವಾವಲಂಬಿಯಾಗಿ ಬಾಳಬೇಕು ಎನ್ನುವ ಮೋದಿಯವರ ಆಶಯ ಕೇವಲ ಬಾಯಿಮಾತಿನ ಭರವಸೆಯಾಗದೆ ಸಾಂವಿಧಾನಿಕವಾಗಿ ಕಾರ್ಯರೂಪ ಪಡೆಯುತ್ತಿದೆ. ಮೋದಿ ಸರ್ಕಾರವು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ರಾಜ್ಯ ಬಿಜೆಪಿ ಓಬಿಸಿ ಮುಖಂಡ ಡಾ.ಎಂ.ಆರ್.ಹುಲಿನಾಯ್ಕರ್ ಹೇಳಿದರು.
ಗುರುವಾರ ನಗರದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ರಕ್ಷಣೆ, ಆರ್ಥಿಕ ಸುಧಾರಣೆ, ಸಾಮಾಜಿಕ ಬದಲಾವಣೆಗೆ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಿ ಕಾರ್ಯೋನ್ಮುಖರಾಗಿರುವ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲು ಎಲ್ಲಾ ಕಡೆ ಎನ್.ಡಿ.ಎ ಅಭ್ಯರ್ಥಿಗಳನ್ನು ಆಯ್ಕೆಮಾಡಬೇಕು, ತುಮಕೂರು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಅವರ ಗೆಲುವಿಗೆ ಹಿಂದುಳಿದ ವರ್ಗ ಸಂಕಲ್ಪ ಮಾಡಿದೆ ಎಂದರು.
ಹಿಂದುಳಿದ ವರ್ಗಗಳ ಜನರಿಗೆ ಕೆನೆಪದರು ಆದಾಯ ಮಿತಿಯನ್ನು 2017ರಲ್ಲಿ ಆರು ಲಕ್ಷದಿಂದ ಎಂಟು ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಹಿಂದುಳಿದ ವರ್ಗದ ನಾಯಕರಿಗೆ ರಾಜಕೀಯ ಸ್ಥಾನಮಾನ ನೀಡುವಲ್ಲಿ ಮೋದಿ ಸರ್ಕಾರ ಆದ್ಯತೆ ಹೊಂದಿದೆ, ಪ್ರಸ್ತುತ ಮೋದಿ ಸರ್ಕಾರದಲ್ಲಿ ಈ ವರ್ಗದ 27 ಜನ ಸಚಿವರು, 70ಕ್ಕೂ ಹೆಚ್ಚು ಸಂಸದರಿದ್ದಾರೆ. ಪಿಎಂ ವಿಶ್ವಕರ್ಮ ಯೋಜನೆಯಡಿ 18 ವಿವಿಧ ಕಾಯಕ ಮಾಡುವ ಹಿಂದುಳಿದ ವರ್ಗಗಳ 30 ಲಕ್ಷ ಕುಟುಂಬಗಳಿಗೆ 13 ಸಾವಿರ ಕೋಟಿ ರೂ. ಅನುದಾನ ನೀಡಿ ಸ್ವಾವಲಂಬಿಯಾಗಿ ಮಾಡುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಉತ್ತಮ ಆಡಳಿತ ನಡೆಸಿ ಜಗತ್ತಿನ ಶ್ರೇಷ್ಠ ನಾಯಕರಾಗಿ ಹೆಸರಾಗಿರುವ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ಎಲ್ಲಾ ವರ್ಗದ ಜನರ ಅಭಿಲಾಷೆಯಾಗಿದೆ. ಹಿಂದುಳಿದ ವರ್ಗದ ಸಾಮಾನ್ಯ ಕುಟುಂಬದಿಂದ ಬಂದ ಮೋದಿಯವರು ಉನ್ನತ ಸ್ಥಾನಕ್ಕೇರಿ ಎಲ್ಲಾ ವರ್ಗದ ಜನರ ಬದುಕಿನ ಸುಧಾರಣೆಗೆ ಮಹತ್ತರವಾದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿದರು.
ಸಂವಿಧಾನದ 127ನೇ ತಿದ್ದುಪಡಿಯಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಆಂತರಿಕ ಅವಕಾಶ ನೀಡಲಾಗಿದೆ. ಈ ವರ್ಗದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾಭ್ಯಾಸಕ್ಕಾಗಿ 1,083 ಕೋಟಿ ರೂ.ಗಳ ವಿದ್ಯಾರ್ಥಿ ವೇತನ ನೀಡಲಾಗಿದೆ. ಇನ್ನೂ ಹಲವಾರು ಯೋಜನೆಗಳ ಮೂಲಕ ಎಲ್ಲಾ ವರ್ಗಗಳ ಜನರ ಶ್ರೇಯೋಭಿವೃದ್ಧಿಗೆ ಮೋದಿ ಸರ್ಕಾರ ಬದ್ಧವಾಗಿದೆ. ಮೋದಿಯವರು ಇನ್ನೊಮ್ಮೆ ಪ್ರಧಾನಿಯಾಗಿ ದೇಶ ಮತ್ತಷ್ಟು ಪ್ರಗತಿ ಆಗಬೇಕು. ಈ ಬಾರಿ ಚುನಾವಣೆಯಲ್ಲಿ ಹಿಂದುಳಿದ ವರ್ಗ ಎನ್.ಡಿ.ಎ ಅಭ್ಯರ್ಥಿಗಳನ್ನು ಬೆಂಬಲಿಸಬೇಕು. ತುಮಕೂರಿನಲ್ಲಿ ಸೋಮಣ್ಣ ಅವರ ಗೆಲುವಿ ನಿಶ್ಚಿತ. ಎಲ್ಲಾ ವರ್ಗದ ಜನ ಸೋಮಣ್ಣ ಅವರನ್ನು ಬೆಂಬಲಿಸಲಿದ್ದಾರೆ ಎಂದು ಡಾ.ಹುಲಿನಾಯ್ಕರ್ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ಓಬಿಸಿ ಮುಖಂಡ ಶಂಕರಪ್ಪ ಮಾತನಾಡಿ, ಪ್ರಧಾನಿ ಮೋದಿಯವರ ಕೈ ಬಲಪಡಿಸಲು ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಗೆಲ್ಲಿಸಲು ಎಲ್ಲಾ ವರ್ಗದ ಜನರು ಸಂಕಲ್ಪ ಮಾಡಿದ್ದಾರೆ. ಅಭಿವೃದ್ಧಿಯ ಹರಿಕಾರರೆಂದೇ ಹೆಸರಾದ ಸೋಮಣ್ಣನವರು ಸರ್ವಜನರ ನಾಯಕರಾಗಿದ್ದಾರೆ. ಇವರು ವಸತಿ ಸಚಿವರಾಗಿದ್ದಾಗ ವಸತಿರಹಿತ ಕಾಡುಗೊಲ್ಲರಿಗೆ 30 ಸಾವಿರಕ್ಕೂ ಹೆಚ್ಚು ಮನೆಗಳನ್ನು ನೀಡಿ ನೆರವಾಗಿದ್ದಾರೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ ಮಾತನಾಡಿ, ಸಣ್ಣ ಸಮುದಾಯಗಳ ಸಾಮಾನ್ಯ ವ್ಯಕ್ತಿಗೂ ರಾಜಕೀಯ ಸ್ಥಾನಮಾನ ಕೊಟ್ಟು, ಆ ಸಮುದಾಯಕ್ಕೆ ಶಕ್ತಿ ತುಂಬುವಂತಹ ಪ್ರಯತ್ನ ಆಗುತ್ತಿರುವುದು ಬಿಜೆಪಿಯಲ್ಲಿ ಮಾತ್ರ. ನಿರ್ಲಕ್ಷಿತ ಸಮುದಾಯದವರೂ ಉನ್ನತ ಮಟ್ಟದ ರಾಜಕೀಯ ಸ್ಥಾನಮಾನ ಪಡೆಯಲು ಸಾಧ್ಯವಾಗಿಸಿದ್ದು ಬಿಜೆಪಿ, ಪರಿಶಿಷ್ಟ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮ ಅವರಿಗೆ ರಾಷ್ಟ್ರಪತಿ ಸ್ಥಾನ ನೀಡಿದ್ದು ಬಿಜೆಪಿಯ ಹೆಗ್ಗಳಿಕೆ ಎಂದರು.
ಹಿಂದುಳಿದ ವರ್ಗದ ಸಣ್ಣ ಸಮುದಯದಿಂದ ಬಂದ ಮೋದಿಯವರು ಅಂತಹ ಸಮುದಾಯಗಳ ಕಷ್ಟಗಳನ್ನು ಅನುಭವಿಸಿ ಬಂದವರು, ಅವರಿಗೆ ಈ ಸಮುದಾಯಗಳಿಗೆ ಶಕ್ತಿ ತುಂಬುವ, ಸ್ವಾಭಿಮಾನದಿಂದ ಬದುಕುವಂತಹ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.
ಮಧುಗಿರಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಮುಖಂಡರಾದ ಎಸ್.ಶಿವಪ್ರಸಾದ್, ನಗರ ಪಾಲಿಕೆ ಮಾಜಿ ಸದಸ್ಯ ವಿಷ್ಣುವರ್ಧನ್, ವಕ್ತಾರ ಟಿ.ಆರ್.ಸದಾಶಿವಯ್ಯ, ಮಾಧ್ಯಮ ಪ್ರಮುಖ್ ಜೆ.ಜಗದೀಶ್, ಮುಖಂಡರಾದ ಚಂದ್ರಬಾಬು, ಹನುಮಂತರಾಜು, ರಂಗನಾಥ್, ಮೇಲಾಕಪ್ಪ ಭಾಗವಹಿಸಿದ್ದರು.