ತುಮಕೂರು: ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಸೋಮವಾರ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಬಿಜಿಎಸ್ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್‍ನವರು ನೀಡಿರುವ ಜಾಹೀರಾತಿನ ಚೊಂಬಿನ ತುಂಬಾ ಹಿಂದೂಗಳ ರಕ್ತ ತುಂಬಿ ಚೆಲ್ಲಾಡುತ್ತಿದೆ. ನೇಹಾ ಕೊಲೆಯನ್ನು ಇಡೀ ದೇಶ ಖಂಡಿಸಿದೆ. ಪ್ರಕರಣವನ್ನು ಮುಚ್ಚಿಹಾಕಲು ಕಾಂಗ್ರೆಸ್‍ನವರು ಪ್ರಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯನವರೇ, ನಿಮ್ಮ ಹಿಂದೂವಿರೋಧಿ ಧೋರಣೆ ಇದೇ ಮೊದಲೇನಲ್ಲ, ಸಾಕಷ್ಟು ಆಗಿವೆ. ಮುಸ್ಲೀಮರ ತುಷ್ಠಿಕರಣದ ಪರಿಣಾಮ ಇಂದು ರಾಜ್ಯ ಭಯೋತ್ಪಾದನೆ ತಾಣವಾಗುತ್ತಿದೆ. ನಿಮ್ಮದು ತಾಲಿಬಾನ್ ಸರ್ಕಾರ ಎಂದು ಟೀಕಿಸಿದರು.
ನಿಮ್ಮ ಕಾಂಗ್ರೆಸ್ ಪಕ್ಷದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ನುಗ್ಗಿದ ಮುಸ್ಲೀಂ ಮೂಲಭೂತವಾದಿಗಳು ಮನೆಗೆ ಬೆಂಕಿ ಹಚ್ಚಿದಾಗಲೂ ನೀವು ಮೌನವಾಗಿದ್ದಿರಿ, ನಿಮ್ಮ ಪಕ್ಷದ ಕಾರ್ಪೋರೇಟರ್ ಮಗಳ ಕೊಲೆಯಾದಾಗಲೂ ಸುಮ್ಮನಿರುವಿರೇ? ಎಂದು ಪ್ರಶ್ನಿಸಿದ ಆರ್.ಅಶೋರ್, ಮೊನ್ನೆ ಡಿ.ಕೆ.ಸುರೇಶ್ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿದರು. ಅವರ ವಿರುದ್ಧ ಏನು ಕ್ರಮ ತೆಗೆದುಕೊಳ್ಳಲಿಲ್ಲ. ಆರೋಪಿಗಳು ರಾಜಾರೋಶವಾಗಿ ಓಡಾಡಿಕೊಂಡಿದ್ದಾರೆ ಎಂದರು.
ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ನೇಹಾ ಹತ್ಯೆ ಅಮಾನವೀಯ. ಇಡೀ ದೇಶವೇ ಖಂಡಿಸಿದೆ. ರಾಜ್ಯದಲ್ಲಿ ಹಿಂದುಗಳಿಗೆ, ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ. ಸರ್ಕಾರದ ತುಷ್ಟೀಕರಣ ರಾಜಕಾರಣದಿಂದ ಇಂತಹ ಪರಿಸ್ಥಿತಿ ಉಂಟಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.
ಜೆಡಿಎಸ್ ಮುಖಂಡ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಸುರೇಶ್‍ಗೌಡ, ಜಿಲ್ಲಾ ಬಿಜೆಪಿ ಅಧÀ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಮತ್ತಿತರ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನಂತರ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.