ತುಮಕೂರು : ಅಭಿವೃದ್ಧಿ ಹರಿಕಾರ ಎಂದು ಬೊಗಳೆ ಬಿಡುವ ವಿ.ಸೋಮಣ್ಣ ವಸತಿ ಸಚಿವರಾಗಿದ್ದಾಗ ಒಂದು ಮನೆಯನ್ನೂ ಕೊಡಲಿಲ್ಲ, ಇಂತಹವರು ಗೆದ್ದರೆ ಮೋದಿಗೆ ಹದರಿ ಗಡ ಗಡ ನಡುಗಿ ತುಟಿಕ್-ಪಿಟಿಕ್ ಎನ್ನುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತುಮಕೂರು ಲೋಕಸಭಾ ಅಭ್ಯರ್ಥಿ ಸೋಮಣ್ಣನವರನ್ನು ಟೀಕಿಸಿದರು.
ಅವರು ಮಂಗಳವಾರ ಸಂಜೆ ತುಮಕೂರಿನ ಯಲ್ಲಾಪುರದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರ ಪರ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು. ಮತದಾರರು ಮಾಡುವ ತೀರ್ಮಾನ ದೇಶದ ಹಿತ ದೃಷ್ಟಿಯಿಂದ ಮಹತ್ವದ ತೀರ್ಮಾನ, ದೇಶದ ಭವಿಷ್ಯದ ತೀರ್ಮಾನ ಎಂದ ಸಿದ್ದರಾಮಯ್ಯ, ತೆರಿಗೆಯಲ್ಲಿ ಅನ್ಯಾಯ ಮತ್ತು ಬರ ಪರಿಹಾರ ಕೇಂದ್ರ ಸರ್ಕಾರ ನೀಡದೇ ಇದ್ದರೂ ಈ ಹಿಂದಿನ ತುಮಕೂರು ಸಂಸದರಾದ ಜಿ.ಎಸ್.ಬಸವರಾಜು ರಾಜ್ಯದ ಪರವಾಗಿ ಒಂದೇ ಒಂದು ಮಾತನಾಡಲಿಲ್ಲ, ಬಿಜೆಪಿ 25 ಜನ ಲೋಕಸಭಾ ಸದಸ್ಯರು ಪ್ರಧಾನಿನರೇಂದ್ರ ಮೋದಿ ಮತ್ತು ಅಮಿತ್ ಶಾ ಬಳಿ ಪ್ರಸ್ತಾಪಿಸಲಿಲ್ಲ ಇಂತಹವರಿಂದ ಕರ್ನಾಟಕಕ್ಕೆ ಆದ ಅನ್ಯಾಯ ಸರಿಪಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಆದ್ದರಿಂದ ಯಾರು ಸತ್ಯ ಹೇಳುತ್ತಾರೋ ಅಂತವರಿಗೆ ಮತ ನೀಡಿ ಸುಳ್ಳು ಹೇಳುವವರನ್ನು ತಿರಸ್ಕರಿಸಿ ಎಂದು ಮನವಿ ಮಾಡಿದ ಮುಖ್ಯಮಂತ್ರಿಗಳು, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ತೆರಿಗೆಯಲ್ಲಿ ಅನ್ಯಾಯವಾಗಿದೆ 4 ಲಕ್ಷದ 30 ಕೋಟಿ ತೆರಿಗೆ ಕೇಂದ್ರಕ್ಕೆ ಕೊಡುತ್ತೇವೆ ಆದರೆ ಅವರು ಕೇವಲ 55,000 ಕೋಟಿ ರೂ ವಾಪಸ್ಸು ಕೊಡುತ್ತಾರೆ.ಅಂದರೆ ರೂ.100 ತೆರಿಗೆ ಕಟ್ಟಿದರೆ 13 ಮಾತ್ರ ವಾಪಸ್ ಕೊಡುತ್ತಿದ್ದಾರೆ. ತುಮಕೂರು ಲೋಕಸಭೆಯ ಇಂದಿನ ಎಂಪಿ ಯಾವತ್ತಾದರೂ ಈ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರಾ!, ಮಾಡಿಲ್ಲ, ಪ್ರಸ್ತಾಪ ಮಾಡುವ ಶಕ್ತಿ ಇರುವಂತವರನ್ನು ಲೋಕಸಭೆಗೆ ಕಳಿಸಬೇಕು ಎಂದರು.
ರಾಜ್ಯ ಸರ್ಕಾರಕ್ಕೆ ತೆರಿಗೆ ಅನ್ಯಾಯವಾಗಿದೆ ಎಂದು ಹಣಕಾಸು ಆಯೋಗ 5495 ಕೋಟಿ ರೂಗಳನ್ನು ಕೊಡುವಂತೆ ಶಿಫಾರಸು ಮಾಡಿದರೂ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಕೊಡಲಿಲ್ಲ ಎಂದು ದೂರಿದರು.
ರಾಜ್ಯದಲ್ಲಿ 240 ತಾಲೂಕುಗಳು ಪೈಕಿ 223 ತಾಲೂಕುಗಳು ಬರಪೀಡಿತ ಕೇಂದ್ರ ಅಧ್ಯಯನ ತಂಡ ಮೆಮೊರಡಂ ಸೆಪ್ಟಂಬರಿನಲ್ಲಿ ಕೊಟ್ಟಿದ್ದು, ರಾಜ್ಯ ಸರ್ಕಾರವು ಅಕ್ಟೋಬರ್ನಲ್ಲೇ ವರದಿ ನೀಡಿದ್ದು, ಒಂದು ತಿಂಗಳಲ್ಲಿ ಇತ್ಯಾರ್ಥ ಮಾಡಬೇಕು ಆರು ತಿಂಗಳಾದರೂ ನಯಾ ಪೈಸೆ ಕೊಟ್ಟಿಲ್ಲ. ಡಿಸೆಂಬರ್ 19 ರಂದು ಪ್ರಧಾನ ಮಂತ್ರಿಗಳಿಗೆ ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ ಎನ್.ಡಿ.ಆರ್.ಎಫ್ನಿಂದ ಪರಿಹಾರ ಕೊಡಿಸಿ ಎಂದು ಕೇಳಿದವು, ಡಿಸೆಂಬರ್ 20ರಂದು ಅಮಿತ್ ಶಾ ಅವರು ಭೇಟಿ ಮಾಡಿ ಕಮಿಟಿಗೆ ಶಿಫಾರಸ್ ಮಾಡಿ ಬರ ಪರಿಹಾರ ನೀಡುವಂತೆ ಕೇಳಿದೆವು ಡಿಸೆಂಬರ್ 23ಕ್ಕೆ ಸಭೆ ಕರೆದು ಇತ್ಯರ್ಥ ಮಾಡು ಎಂಬುದಾಗಿ ಹೇಳಿದರೂ ಇಂದಿನವರೆಗೂ ಹೈ ಕಮಿಟಿ ಮೀಟಿಂಗ್ ಮಾಡಿಲ್ಲ ಒಂದು ನಯಾ ಪೈಸೆ ಕೊಡದೆ ರಾಜ್ಯಕ್ಕೆ ಅನ್ಯಾಯವೆಸಗಿದ್ದಾರೆ ಎಂದು ಟೀಕಿಸಿದರು.
ಪರಿಹಾರ ಕೊಡಿಸುವಂತೆ ಸರ್ವೋಚ್ಚ ನ್ಯಾಯಾಲಯ ಹೇಳಿದ ಮೇಲೆ ಒಂದು ವಾರದಲ್ಲಿ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ, ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಬರ ಪರಿಹಾರಕ್ಕಾಗಿ ತಡವಾಗಿ ವರದಿಯನ್ನು ನೀಡಿದ್ದಾರೆ ಎಂಬುದನ್ನು ಸುಪ್ರೀಂಕೋರ್ಟಿಗೆ ಯಾಕೆ ಹೇಳಿಲ್ಲ ಎಂದು ವಾಗ್ದಾಳಿ ನಡೆಸಿದರು.
2019ರಲ್ಲಿ ನರೇಂದ್ರ ಮೋದಿ ಪ್ರಧಾನಿ ಆದ್ರೆ ದೇಶ ಬಿಡುತ್ತೇನೆ ಎಂದು ಎಚ್ ಡಿ ದೇವೇಗೌಡರು ಹೇಳಿದ್ದರು, ಈಗ ನರೇಂದ್ರ ಮೋದಿಯವರ ಜೊತೇನೆ ಮೈತ್ರಿ ಮಾಡಿಕೊಂಡಿರುವ ಇವರಿಗೆ ಮೋದಿ ಮತ್ತು ದೇವೇಗೌಡರ ಬಗ್ಗೆ ಟೀಕೆ ಮಾಡಿದರು.
ಮೋದಿ ಹತ್ತತ್ತು ವರ್ಷ ಪ್ರಧಾನಿಯಾಗಿ ಭಾರತೀಯರಲ್ಲಿ ಭ್ರಮೆ ಹುಟ್ಟಿಸಿದ್ದು ಬಿಟ್ಟರೆ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ ಎಂದರು.
ವರ್ಷಕ್ಕೆ 2 ಕೋಟಿಯಂತೆ ಹತ್ತು ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಮಾಡಬೇಕಿತ್ತು. ಆದರೆ 20 ಲಕ್ಷ ಉದ್ಯೋಗವನ್ನೂ ಸೃಷ್ಟಿಸದ ಮೋದಿ ಕೆಲಸ ಕೇಳಿದ ವಿದ್ಯಾವಂತರಿಗೆ ಹೋಗಿ ಪಕೋಡ ಮಾರಾಟ ಮಾಡಿ ಅಂದರು.
ನನ್ನ ಕೈಗೆ ಅಧಿಕಾರ ಕೊಡಿ ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದ್ರು. ಹತ್ತು ವರ್ಷದಲ್ಲಿ ಹದಿನೈದು ಪೈಸೆಯನ್ನೂ ಹಾಕಲಿಲ್ಲ.
ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದೋರು ರೈತ ಖರ್ಚು ಮೂರು ಪಟ್ಟು ಮಾಡಿಟ್ಟಿದ್ದಾರೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ಮೋದಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಹಾಗಾದ್ರೆ ಮೋದಿ ಯಾರ ಪರ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ ಎಂದರು.
ಮೋದಿ ಬಂದ ಮೇಲೆ ಜನ ಸಾಮಾನ್ಯರ, ಮಧ್ಯಮ ವರ್ಗದವರ ಮೇಲೆ ತೆರಿಗೆ ಭಾರ ಹೆಚ್ಚಾಯಿತು. ಉದ್ಯಮಿಗಳ ತೆರಿಗೆ ಭಾರ ಕಡಿಮೆ ಆಯಿತು. ಆದ್ದರಿಂದ ಮೋದಿ ಜನದ್ರೋಹಿ ತಾನೆ ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿಯವರು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಾಸನದಲ್ಲಿ ಜೆಡಿಎಸ್ನ್ನು ಬಿಜೆಪಿಯ ‘ಬಿ’ ಟೀಮ್ ಎಂದು ಹೇಳಿದ್ದರು, ಆಗ ನೀವು ಟೀಕೆ ಮಾಡಿದ್ರಲ್ಲ ಈಗ ಅವರ ಜೊತೆನೆ ಸೇರಿದ್ದೀರಲ್ಲ ನಾಚಿಕೆ ಆಗಲ್ವಾ, ನರೇಂದ್ರ ಮೋದಿಯನ್ನು ಹೊಗಳುವ ಹಂತಕ್ಕೆ ಹೋಗಿದ್ದೀರಾ ಇಂತಹ ವ್ಯವಸ್ಥೆ ನಿಮಗೆ ಬರಬಾರದಾಗಿತ್ತು, ಕಾಂಗ್ರೆಸ್ಸಿನಲ್ಲಿ ಪ್ರಧಾನಿ ಆಗಲು ಯಾರಿದ್ದಾರೆ ಎಂದು ಕೇಳುವ ದೇವೇಗೌಡರು, ನೀವು ಪ್ರಧಾನಿಯಾಗುವಾಗ ಯಾರಾದರೂ ನೀವು ಪ್ರಧಾನಿ ಆಗುತ್ತೀರಾ ಎಂದು ಹೇಳಿದ್ರಾ ಘೋಷಣೆ ಮಾಡಿದ್ರಾ? ಈ ದೇಶದಲ್ಲಿ ಪ್ರಧಾನಿಯಾಗಲು ಬಹಳ ಜನ ಇದ್ದಾರೆ ಪ್ರಧಾನಿ ಆಗೋರು ಯಾರಿದ್ದಾರೆ ಎಂದು ಹೇಳುವುದು ಸ್ವಾರ್ಥತನ ಎಂದು ಹೇಳಿದರು.
ಶಾಸಕರಾದ ಟಿ.ಬಿ.ಜಯಚಂದ್ರ, ಎಸ್.ಆರ್.ಶ್ರೀನಿವಾಸ್, ಕೆ.ಷಡಕ್ಷರಿ, ಎಚ್.ವಿ.ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ಕೆ.ಆರ್.ರಾಜೇಂದ್ರ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖ ರ್ಗೌಡ, ಮಾಜಿ ಶಾಸಕರಾದ ಕೆ.ಎಸ್. ಕಿರಣ್ ಕುಮಾರ್, ರಫಿಕ್ ಅಹಮದ್, ಡಿ.ಸಿ.ಗೌರಿಶಂಕರ್, ಗಂಗಹನುಮಯ್ಯ, ಬೆಮಲ್ ಕಾಂತರಾಜು, ಮುಖಂಡರಾದ ಎಂ.ಸಿ.ವೇಣುಗೋಪಾಲ್,ಗೋವಿಂದ- ರಾಜು. ಆರ್.ರಾಮಕೃಷ್ಣ, ಇಕ್ಬಾಲ್ ಅಹಮದ್, ಗೀತಾ, ಮುರಳೀಧರ್ ಹಾಲಪ್ಪ, ನಿಕೇತ್ ರಾಜ್ ಮೌರ್ಯ ಉಪಸ್ಥಿತರಿದ್ದರು.