ತುಮಕೂರು: ತಿಗಳ ಸಮುದಾಯಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಹೆಚ್ಚಿನ ಪ್ರಮಾಣದಲ್ಲಿ ರಾಜಕೀಯ ಅಧಿಕಾರ ಹಾಗೂ ಅನುದಾನ ನೀಡಿ ನೆರವಾಗಿವೆ. ಹಾಗಾಗಿ ಸಮುದಾಯವು ಈ ಬಾರಿ ಎನ್.ಡಿ.ಎ ಅಭ್ಯರ್ಥಿಗಳನ್ನು ಬೆಂಬಲಿಸಲು ತೀರ್ಮಾನ ಮಾಡಿದೆ. ದೇಶದ ರಕ್ಷಣೆ, ಅಭಿವೃದ್ಧಿ ಹಾಗೂ ನಮ್ಮ ಸಂಸ್ಕøತಿ ಉಳಿಸುವ ಸಮರ್ಥ ನಾಯಕ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಹೇಳಿದರು.
ಬುಧವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ತಿಗಳ ಸಮಾಜದ ಯಜಮಾನರು, ಚುನಾಯಿತ ಪ್ರತಿನಿಧಿಗಳು ಹಾಗೂ ಪ್ರಮುಖರು ಭಾಗವಹಿಸಿ ಎನ್.ಡಿ.ಎ ಪರ ಒಗ್ಗಟ್ಟು ಪ್ರದಶಿಸಿದರು. ಈ ವೇಳೆ ಮಾತನಾಡಿದ ನರೇಂದ್ರಬಾಬು, ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣನವರು ಅಭಿವೃದ್ಧಿ ಕಾರ್ಯದಲ್ಲಿ ಹೆಸರಾಗಿದ್ದಾರೆ. ಅವರು ಈ ಹಿಂದೆ ಪ್ರತಿನಿಧಿಸಿದ್ದ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳು ಸೋಮಣ್ಣನವರ ಕಾರ್ಯಕ್ಕೆ ಕನ್ನಡಿ ಹಿಡಿದಂತಿವೆ. ಸೋಮಣ್ಣನವರನ್ನು ಹೆಚ್ಚಿನ ಮತಗಳಿಂದ ಆಯ್ಕೆ ಮಾಡಿದರೆ ತುಮಕೂರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ತಿಗಳ ಸಮುದಾಯದ ಮುಖಂಡರು ಜಿ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ತುಮಕೂರು ನಗರಸಭೆ, ನಗರ ಪಾಲಿಕೆಯ ಅಧ್ಯಕ್ಷರು, ಉಪಾಧ್ಯಕ್ಷರು, ಮೇಯರ್, ಉಪಮೇರ್ ಸ್ಥಾನಪಡೆಯಲು ಬಿಜೆಪಿ, ಜೆಡಿಎಸ್ ಪಕ್ಷಗಳು ಸಹಕಾರ ನೀಡಿವೆ. ತುಮಕೂರು ಹಾಗೂ ಗುಬ್ಬಿ ವಿಧಾನಸಭಾ ಕ್ಷೇತ್ರಗಳಲ್ಲಿ ತಿಗಳ ಮುಖಂಡರು ಸ್ಪರ್ಧೆ ಮಾಡಲು ಈ ಪಕ್ಷಗಳು ಅವಕಾಶ ಮಾಡಿಕೊಟ್ಟಿವೆ. ತಿಗಳರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು, ಸರ್ಕಾರದಿಂದ ಅಗ್ನಿಬನ್ನಿರಾಯ ಜಯಂತಿ ಆಚರಣೆಗೆ ಅವಕಾಶ ಮಾಡಿಕೊಟ್ಟಿದ್ದು, ಅಗ್ನಿಬನ್ನಿರಾಯ ಅಧ್ಯಯನ ಪೀಠ ಸ್ಥಾಪಿಸಿದ್ದು ಬಿಜೆಪಿ ಸರ್ಕಾರ ಎಂದು ಹೇಳಿದರು.
ತಿಗಳರ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ ಸರ್ಕಾರ ನೀಡಿದ್ದ 400 ಕೋಟಿ ರೂ. ಅನುದಾನವನ್ನು ಈಗಿನ ಕಾಂಗ್ರೆಸ್ ಸರ್ಕಾರ ತಡೆಹಿಡಿದಿದೆ. ಇನ್ಯಾರಿಗೋ ಹತ್ತು ಕೋಟಿ ರೂ. ಕೊಡುತ್ತೇವೆ ಎಂದು ಹೇಳುವ ಕಾಂಗ್ರೆಸ್ ನಾಯಕರು, ತಿಗಳರನ್ನು ಕಡೆಗಣಿಸಿದ್ದಾರೆ ಎಂದು ಟೀಕಿಸಿದರು.
ತುಮಕೂರಿನ ಹನುಮಂತಪುರ ತಿಗಳರ ಸಮುದಾಯ ಭವನ ನಿರ್ಮಾಣಕ್ಕೆ ಯಡಿಯೂರಪ್ಪ ಸರ್ಕಾರ ಒಂದು ಕೋಟಿ ರೂ. ಅನುದಾನ ನೀಡಿತ್ತು, ನಮ್ಮ ಮಹಾಲಕ್ಷ್ಮಿ ಪೀಠಕ್ಕೆ ಬಿಜೆಪಿ 5 ಕೋಟಿ ರೂ. ನೆರವು ನೀಡಿದೆ. ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ತಮ್ಮ ಶಾಸಕರ ಅನುದಾನದಲ್ಲಿ ಸಮುದಾಯಕ್ಕೆ 30 ಲಕ್ಷ ರೂ. ನೀಡಿದರು, ತಿಗಳರ ವಿದ್ಯಾಭಿವೃದ್ಧಿ ಸಂಘದ ಸಮುದಾಯ ಭವನಕ್ಕೆ 25 ಲಕ್ಷ ರೂ. ನೀಡಿದ್ದಾರೆ ಎಂದು ನೆ.ಲ.ನರೇಂದ್ರಬಾಬು ಹೇಳಿದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಗುಬ್ಬಿಯ ಯೋಗಾನಂದ್ ಮಾತನಾಡಿ, ಬಿಜೆಪಿ, ಜೆಡಿಎಸ್ ಪಕ್ಷಗಳೇ ತಿಗಳರಿಗೆ ಹೆಚ್ಚಿನದಾಗಿ ಅನುದಾನ, ಅಧಿಕಾರ ನೀಡಿವೆ. ನಮ್ಮ ಪರವಾಗಿ ಧ್ವನಿಯಾಗಿವೆ. ಸಹಾಯ ಮಾಡಿದ ಪಕ್ಷಗಳ ಋಣ ತೀರಿಸುವ ಸಲುವಾಗಿ ಈ ಬಾರಿಯ ಚುನಾವಣೆಯಲ್ಲಿ ನಾವು ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಬೆಂಬಲಿಸುವುದಾಗಿ ಹೇಳಿದರು.
ತಿಗಳ ಸಮಾಜದ ಮುಖಂಡರಾದ ಟಿ.ಎಲ್.ಕುಂಭಣ್ಣ, ರವೀಶ್ ಜಹಾಂಗೀರ್, ನಗರಸಭೆ ಮಾಜಿ ಅಧ್ಯಕ್ಷರಾದ ಎಲ್.ಕಮಲಮ್ಮ, ಟಿ.ಹೆಚ್.ಜಯರಾಂ, ಮಾಜಿ ಉಪ ಮೇಯರ್ ಟಿ.ಕೆ.ನರಸಿಂಹಮೂರ್ತಿ, ಶಶಿಕಲಾ ಗಂಗಹನುಮಯ್ಯ, ಮಾಜಿ ಸದಸ್ಯರಾದ ಟಿ.ಜಿ.ನರಸಿಂಹರಾಜು, ಶ್ರೀನಿವಾಸ್, ಟಿ.ಹೆಚ್.ವಾಸುದೇವ್, ಟಿ.ಹೆಚ್.ಬಾಲಕೃಷ್ಣ, ಮರಿಗಂಗಯ್ಯ, ಅಣೆತೋಟ ಶ್ರೀನಿವಾಸ್, ಟಿ.ಹೆಚ್.ಕೃಷ್ಣಪ್ಪ, ವೈ.ಟಿ.ನಾಗರಾಜು, ಯಜಮಾನರುಗಳಾದ ಗಂಗಹನುಮಯ್ಯ, ಪುಟ್ಟಣ್ಣ, ಹನುಮಯ್ಯ, ಶ್ರೀನಿವಾಸ್, ಶಿವಕುಮಾರ್, ಹನುಮಂತರಾಯಪ್ಪ, ಚಿಕ್ಕವೀರಪ್ಪ, ಟಿ.ಡಿ.ಶ್ರೀನಿವಾಸ್, ನಗರ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಹನುಮಂತಪುರ ಹನುಮಂತರಾಜು ಮೊದಲಾದವರು ಭಾಗವಹಿಸಿದ್ದರು.