ಮೋದಿಯ ಅಲೆಯೇ ಬೀಸಿದ್ದರೆ ಸೋಮಣ್ಣ, ಗ್ಯಾರಂಟಿ ಅಲೆ ಬೀಸಿದ್ದರೆ ಮುದ್ದಹನುಮೇಗೌಡ, ಭವಿಷ್ಯ ನಿರ್ಧರಿಸಲಿರುವ ಮೂರು ಕ್ಷೇತ್ರಗಳು

ತುಮಕೂರು : ಎನ್‍ಡಿಎ (ಬಿಜೆಪಿ) ಅಭ್ಯರ್ಥಿ ವಿ.ಸೋಮಣ್ಣ ನನ್ನನ್ನು ನೋಡಿ ಮತ ಹಾಕಬೇಡಿ, ಮೋದಿಯನ್ನು ನೋಡಿ ಮತ ನೀಡಿ ಎಂದು ಚುನಾವಣೆಯ ಕೊನೆಯತನಕ ಮತ ಕೇಳಿದ್ದು ಮೋದಿ ಹೆಸರಲ್ಲಿ, ಮೋದಿಯ ಅಲೆಯೇ ನಿಜವಾಗಿ ಬೀಸಿದ್ದರೆ ಸೋಮಣ್ಣ ಗೆಲ್ಲಬೇಕು, ಕಾಂಗ್ರೆಸ್‍ನ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಮೇಲೆಯೇ ಚುನಾವಣೆ ನಡೆಸಿದ್ದು ಗ್ಯಾರಂಟಿ ಅಲೆಯೇ ಬೀಸಿದ್ದರೆ ಎಸ್.ಪಿ.ಮುದ್ದಹನುಮೇಗೌಡರು ಜಯಗಳಿಸಬೇಕು.

ಈ ಚುನಾವಣೆ ದೇಶದ ಚುನಾವಣೆಯಾಗಿದ್ದು, ಮೋದಿ ಈ ದೇಶಕ್ಕೆ ಮತ್ತೊಮ್ಮೆ ಪ್ರಧಾನಿಯಾಗಬೇಕು, ಮೋದಿಯನ್ನು ನೋಡಿ ಓಟಾಕಿ, ಕಾಂಗ್ರೆಸ್‍ನಲ್ಲಿ ಪ್ರಧಾನಿಯ ಅಭ್ಯರ್ಥಿಯೇ ಇಲ್ಲ, ಈ ದೇಶ ನಡೆಸಲು ಮೋದಿಯೇ ಸಮರ್ಥ ಅವರನ್ನು ನೋಡಿ ಮತ ನೀಡಿ, ತುಮಕೂರನ್ನು ವಾರಣಾಸಿ ಮಾಡುತ್ತೇನೆ ಎಂದು ವಿ ಸೋಮಣ್ಣ ಚುನಾವಣೆ ಪ್ರಾರಂಭವಾದ ದಿನದಿಂದ ಹೇಳುತ್ತಾ ಬಂದರು.

ಸೋಮಣ್ಣ ಪತ್ರಿಕಾಗೋಷ್ಠಿಗಳಲ್ಲಿ ಗೋವಿಂದರಾಜ ನಗರ ನೋಡಿ ಬನ್ನಿ ಹೇಗೆ ಅಭಿವೃದ್ಧಿ ಮಾಡಿದ್ದೇನೆ ಎಂಬ ಜಪವನ್ನು ನೂರಾರು ಸಲ ಪತ್ರಕರ್ತರಿಗೆ, ಚುನಾವಣಾ ಪ್ರಚಾರ ಸಭೆಗಳಲ್ಲಿ ಹೇಳಿದರು, ಹಾಗಾದರೆ ಗೋವಿಂದರಾಜನಗರ ಬಿಟ್ಟು ವರುಣ, ಮತ್ತು ಚಾಮರಾಜನಗರಕ್ಕೆ ಸೋಮಣ್ಣ ಹಾರಿದ್ದೇಕೆ, ಸೋತಿದ್ದೇಕೆ ಎಂಬುದು ಕಾಂಗ್ರೆಸ್‍ಗರ ಚುಚ್ಚು ಮಾತುಗಳಿಗೆ ಸೋಮಣ್ಣ ಅಷ್ಟಾಗಿ ಉತ್ತರ ನೀಡಲಿಲ್ಲ.

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ವಿ.ಸೋಮಣ್ಣನವರು ಟಿಕೆಟ್ ತರುವ ಮುನ್ನ ಕ್ಷೇತ್ರದ ಬಗ್ಗೆ ಅಧ್ಯಯನ ಮಾಡಬೇಕಿತ್ತು ಎಂಬ ಮಾತುಗಳೂ ಕೇಳಿ ಬರುತ್ತಿದ್ದು, ಮೇಲ್ನೋಟಕ್ಕೆ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಮಧ್ಯೆ ಹೊಂದಾಳಿಕೆಯು ಕೊನೆಯ ತನಕ ಆಗದೆ, ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು.

ಟಿಕೆಟ್ ಕೊಡಿಸಿಕೊಂಡು ಬಂದ ಹಾಲಿ ಸಂಸದ ಜಿ.ಎಸ್.ಬಸವರಾಜು ಎಲ್ಲಿಯೂ ಪ್ರಚಾರದ ಸಭೆಗಳಲ್ಲಿ ಆಗಲಿ, ರ್ಯಾಲಿಯಲ್ಲಾಗಲಿ ಅಥವಾ ರೋಡ್ ಶೋಗಳಲ್ಲಾಗಲಿ ಕಾಣಿಸಿಕೊಳ್ಳದಿರುವುದು ಸಹ ಮತದಾರರು ಬೇರೆ ರೀತಿಯೇ ಮಾತನಾಡುತ್ತಿದದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ. ತುಮಕೂರು ಜಿಲ್ಲೆಯ ರಾಜಕೀಯ ಚಾಣಕ್ಷ್ಯ ಎಂದು ಕರೆಸಿಕೊಳ್ಳುವ ಜಿ.ಎಸ್.ಬಸವರಾಜು ಅವರನ್ನು ಸರಿಯಾಗಿ ಸೋಮಣ್ಣ ಬಳಸಿಕೊಳ್ಳಲಿಲ್ಲ ಎಂಬು ಮಾತುಗಳೂ ಕೇಳಿ ಬರುತ್ತಿವೆ.

ಕೊನೆಯ ತನಕ ಬಿಜೆಪಿಯಲ್ಲಿದ್ದ ಗೊಂದಲಗಳನ್ನು ವಿ.ಸೋಮಣ್ಣ ನೀವಾರಿಸಿಕೊಳ್ಳಲು ಆಗಲೇ ಇಲ್ಲ, ಜೆ.ಸಿ.ಮಾಧುಸ್ವಾಮಿಯವರು ಹೊರಗಿನವರಿಗೆ ಟಿಕೆಟ್ ನೀಡಿರುವುದರಿಂದ ನಾನು ಅವರ ಪರ ನಿಲ್ಲುವುದಿಲ್ಲ, ಹೊರಗಿನವರಿಗೆ ನಾವು ಮಣ್ಣು ಹೊತ್ತರೆ ನಮ್ಮ ಜಿಲ್ಲೆಯ ನಾಯಕರು ಬೆಳೆಯೋದು ಯಾವಾಗ ಎಂದು ಅವರು ನೇರವಾಗಿ ಹೇಳಿದಂತೆ ನಡೆದುಕೊಂಡರು.

ಅದೇ ರೀತಿ ಗುಬ್ಬಿಯ ದಿಲೀಪ್ ಕುಮಾರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾದರು ಎನ್ನಲಾಗುತ್ತಿದೆ.

ಸೋಮಣ್ಣ ಭಾರೀ ಹಣವನ್ನು ಮುಖಂಡರಿಗೆಲ್ಲಾ ಕೊಡುತ್ತಾರೆ ಎಂಬುದನ್ನು ಹುಸಿಗೊಳಿಸಿದರು ಎಂದು ಸಹ ಹೇಳಲಾಗುತ್ತಿದ್ದು, ಸೋಮಣ್ಣ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬ ಗೊಂದಲಕ್ಕೆ ಬಿದ್ದು ಹಲವಾರು ಸಲ ಹಲವರ ಮೇಲೆ ಸಿಟ್ಟು ಮಾಡಿಕೊಂಡಿದ್ದಲ್ಲದೆ, ಎಲ್ಲಾವನ್ನು ಬೆಂಗಳೂರಿನವರೇ ನಿಭಾಯಸಿದ್ದರಿಂದ ಬಿಜೆಪಿ, ಜೆಡಿಎಸ್‍ನ ಮುಖಂಡರು ಅಷ್ಟಕ್ಕಷ್ಟರಲ್ಲೇ ನೂಲು ನೇಯ್ದರು, ಸ್ಪಂಧಿಸಲು ಆಗಲಿಲ್ಲ ಎನ್ನಲಾಗುತ್ತಿದೆ.

ಇದರ ಜೊತೆಗೆ ಚುನಾವಣೆಯ ಎರಡು ದಿನ ಇದೆ ಎನ್ನುವಾಗ ಚುನಾವಣೆ ಚಾಣಕ್ಷ್ಯ ಎಂದು ಕರೆಸಿಕೊಳ್ಳುವ ಅಮಿತ್ ಶಾ ಪ್ರಚಾರದಲ್ಲಿ ಭಾಗವಹಿಸದೇ ಇರುವುದೂ ಪರಿಣಾಮ ಬೀರಲಿದೆಯೇ ಎಂಬುದನ್ನು ನೋಡಬೇಕಿದೆ. ಶಾ ಪ್ರಾರದ ಸಮಾವೇಶಕ್ಕೆ ಬರಲಿದ್ದಾರೆಂದು ಕೊನೆ ಕ್ಷಣದಲ್ಲಿ ರದ್ದಾಗಿದ್ದು ಸೋಮಣ್ಣನವರು ಗೆಲ್ಲುವುದಿಲ್ಲ ಎಂದು ಇಂಟಲಿಜೆನ್ಸಿ ರಿಪೋರ್ಟ್ ಹೋಗಿದೆ ಎಂದು ಹೇಳಾಲಾಯಿತು ಎನ್ನಲಾಗಿದೆ.
ಯಡಿಯೂರಪ್ಪನವರು ಮಾತ್ರ ಎರಡು ಬಾರಿ, ದೇವೇಗೌಡರು ಒಂದು ಬಾರಿ, ಕುಮಾರಸ್ವಾಮಿಯವರು ಎರಡು ಬಾರಿ ಪ್ರಚಾರ ಕೈಗೊಂಡಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಅವರು ನಾನು 2014ರಿಂದ 2019ರವರೆಗೆ ತುಮಕೂರು ಕ್ಷೇತ್ರದಲ್ಲಿ ನಾನು ಮಾಡಿರುವ ಕೆಲಸಗಳೇ ಶ್ರೀರಕ್ಷೆ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಗೂಗಲ್ ಮ್ಯಾಪ್ ಇಲ್ಲದೆ ಯಾವ ಹಳ್ಳಿಗಾದರೂ ಹೋಗುವಷ್ಟು ಕ್ಷೇತ್ರವನ್ನು ಅರಿತಿದ್ದೇನೆ, ನಾನು ಹೆಚ್.ಎಂ.ಟಿ ಜಾಗ ಉಳಿಸಿದ್ದೇನೆ, ಎರಡು ಪಥದ ರೈಲ್ವೆ ಲೈನ್, ತುಮಕೂರಿನಿಂದ ಶಿವಮೊಗ್ಗದವರೆಗೆ ನಾಲ್ಕು ಪಥದ ರಸ್ತೆ, ಸ್ಮಾರ್ಟ್ ಸಿಟಿ, ಇಂಡಸ್ಟ್ರೀಯಲ್ ಕಾರಿಡಾರ್ ತಂದಿದ್ದೇನೆ ಇವೇ ನನ್ನ ಗೆಲುವಿಗೆ ಶ್ರೀರಕ್ಷೆ ಎಂದು ಮತ ಕೇಳಿರುವ ಕಾಂಗ್ರೆಸ್ ಅಭ್ಯರ್ಥಿ, ರಾಜ್ಯ ಸರ್ಕಾರವು ತಂದಿರುವ ಐದು ಗ್ಯಾರಂಟಿಗಳ ಮೇಲೆಯೇ ಈ ಚುನಾವಣೆ ನಡೆದಿದ್ದು, ಈ ಗ್ಯಾರಂಟಿಗಳು ಕಾಂಗ್ರೆಸ್‍ನ್ನು ಕೈ ಹಿಡಿದಿದ್ದರೆ ಎಸ್‍ಪಿಎಂಗೆ ಗೆಲುವು ಸಿಗಲಿದೆ.

ಮುದ್ದಹನುಮೇಗೌಡರ ಪರ ಯಾವ ಸ್ಟಾರ್ ಕ್ಯಾಂಪೈನ್ ಮಾಡಲಿಲ್ಲ, ಮುಖ್ಯಮಂತ್ರಿಗಳು ಮಾತ್ರ ಎರಡು ಬಾರಿ ಬಂದು ಪ್ರಚಾರ ಕೈಗೊಂಡರು,ಡಿ.ಕೆ.ಶಿವಕುಮಾರ್ ಒಮ್ಮೆ ಪ್ರಚಾರ ಮಾಡಿದರು, ಆದರೆ ಯಾವ ರಾಷ್ಟ್ರ ನಾಯಕರೂ ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಂದು ಪ್ರಚಾರ ಕೈಗೊಳ್ಳಲಿಲ್ಲ.
ಪ್ರಿಯಾಂಕಗಾಂಧಿಯವರು ಪಕ್ಕದ ಚಿತ್ರದುರ್ಗದ ಕ್ಷೇತ್ರಕ್ಕೆ ಬಂದಿದ್ದರೂ, ತುಮಕೂರು ಕ್ಷೇತ್ರಕ್ಕೆ ಬಾರದೇ ತೆರಳಿದರು.

ಮುದ್ದಹನುಮೇಗೌಡರಿಗೆ ಗೃಹ ಸಚಿವರು ಮತ್ತು ಸಹಕಾರಿ ಸಚಿವರಿಬ್ಬರೂ ಜೋಡೆತ್ತಿನಂತೆ ನಿಂತಿದ್ದರೂ ತುಮಕೂರಿನ ನಗರದಲ್ಲಿ ಒಂದೇ ಒಂದು ಚುನಾವಣಾ ರ್ಯಾಲಿಯನ್ನು ಮಾಡಲಿಲ್ಲ, ಕಳೆದ ವಿಧಾನ ಸಭೆ ಚುನಾವಣೆಯಲ್ಲೂ ಇದೇ ರೀತಿ ಚುನಾವಣಾ ರ್ಯಾಲಿ ಮಾಡಲಿಲ್ಲ, ಇದರ ಅರ್ಥ ಏನಿರಬಹುದು! ಮುದ್ದಹನುಮೇಗೌಡರು ಬಿಜೆಪಿಯಿಂದ ಕಾಂಗ್ರೆಸ್‍ಗೆ ಬಂದ ಮೇಲೂ ಪಕ್ಷದೊಳಗಿನ ಆಂತರಿಕ ಗೊಂದಲಗಳನ್ನು ಅಸಮದಾನವನ್ನು ಹೋಗಲಾಡಿಸುವಲ್ಲಿ ಇಬ್ಬರೂ ಸಚಿವರು ವಿಫಲರಾದರು.

7ಜನ ಶಾಸಕರಿಂದ್ದರು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕೆಂದು ಹಠಕ್ಕೆ ಬಿದ್ದವರಂತೆ ಎಲ್ಲರೂ ಒಟ್ಟಿಗೆ ಕೂತು ಚುನಾವಣಾ ತಂತ್ರಗಾರಿಕೆಯನ್ನು ಎಣೆಯುವಲ್ಲಿ ಎಡವಿದರು ಎನ್ನಲಾಗುತ್ತಿದೆ.

ಕಾಂಗ್ರೆಸ್‍ನವರು ಮೋದಿ ಬರ ಪರಿಹಾರ ನೀಡಲಿಲ್ಲ ಎಂಬುದನ್ನೇ ದೊಡ್ಡದಾಗಿ ಬಿಂಬಿಸಿದರೇ ಹೊರತು ತಾವು ಗೆದ್ರೆ ತರುತ್ತಿರುವ ಗ್ಯಾರಂಟಿಗಳನ್ನು ಗಟ್ಟಿಯಾಗಿ ಕೇಳಿಸಿಕೊಳ್ಳುವಂತೆ ಹೇಳಲೇ ಇಲ್ಲ, ಕರ್ನಾಟಕದಲ್ಲಿ ತಂದಿರುವ ಗ್ಯಾರಂಟಿಗಳನ್ನು ಮಾತ್ರ ಜೋರಾಗಿ ಹೇಳಿದರು.

ತುಮಕೂರು ಕಾಂಗ್ರೆಸ್‍ಗೆ ಇತ್ತೀಚಿನ ದಿನಗಳಲ್ಲಿ ಒಂದು ರೋಗ ಅಂಟಿಕೊಂಡಿದೆ, ಪಕ್ಷ ಕಟ್ಟಿ ಟಿಕೆಟ್ ಕೊಡುತ್ತಾರೆಂದು ಓಡಾಡುವರನ್ನು ಮೂಲೆಗುಂಪು ಮಾಡಿ, ಬೇರೆ ಪಕ್ಷದಿಂದ ಅಭ್ಯರ್ಥಿ ಕರೆ ತಂದು ಟಿಕೆಟ್ ಕೊಡುವ ಚಾಳಿ ಬೀಸಿದ್ದು, ಇದರಿಂದ ಹಲವಾರು ಯುವಕರು ರಾಜಕೀಯವಾಗಿ ಬೆಳೆಯಬೇಕೆಂದು ಪಕ್ಷಕ್ಕಾಗಿ ದುಡಿದವರನ್ನು ಭ್ರಮ ನಿರಸನ ಮಾಡಿ ಓಡಿಸಲಾಗಿದೆ.

ಜೂ ಹುಜೂರ್ ಎನ್ನುತ್ತಾ ಜಿಲ್ಲೆಯ ಕೆಲ ನಾಯಕರನ್ನು ಹೊಗಳುವವರನ್ನು ಬಗಲಲ್ಲಿ ಇಟ್ಟುಕೊಂಡು ಓಡಾಡುವುದಲ್ಲದೆ, ಪಕ್ಷಕ್ಕೆ ದುಡಿದವರಿಗೆ ಸ್ಥಾನಮಾನಗಳೇನು ಸಿಕ್ಕಿಲ್ಲ.
ಕಾಂಗ್ರೆಸ್‍ನವರು ಅಲ್ಪಸಂಖ್ಯಾತರು, ಹಿಂದುಳಿದವರನ್ನು, ದಲಿತರನ್ನು ಈ ಚುನಾವಣೆಯಲ್ಲಾದರೂ ಒಟ್ಟುಗೂಡಿಸುವ ಕೆಲಸವನ್ನು ಮಾಡಲಿಲ್ಲ.

ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಕಾಂಗ್ರೆಸ್ ಅಭ್ಯರ್ಥಿ ಸೋತರೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಗೆಲ್ಲಿಸಲಿಲ್ಲ ಎಂಬ ಕೆಟ್ಟ ಹೆಸರು ಬರುತ್ತದೆಂದು ಹೆಚ್ಚು ಶ್ರಮ ಹಾಕಿ ಪ್ರಚಾರ ಮಾಡಿದರು, ಇಷ್ಟೇ ಶ್ರಮವನ್ನು ಇತರರೂ ಹಾಕಿದ್ದರೆ ಮುದ್ದಹನುಮೇಗೌಡರ ಗೆಲುವು ಹೂ ಕಿತ್ತಷ್ಟು ಸುಲಭವಾಗುತ್ತಿತ್ತೇನೋ.

ಕಾಂಗ್ರೆಸ್‍ನಲ್ಲೂ ಒಳ ಒಪ್ಪಂದ, ಹೊಂದಾಳಿಕೆ ಇಲ್ಲದಿರುವಿಕೆ, ಅಭ್ಯರ್ಥಿ ಪಕ್ಷದ ಕಛೇರಿಗೆ ಎಡ ತಾಕದಿರುವುದು, ಎರಡನೇ ಹಂತದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ದೊಡ್ಡ ನಾಯಕರೇ ನನ್ನ ಗೆಲ್ಲಿಸಲಿದ್ದಾರೆ ಎಂದು ಓಡಾಡಿದರು.

ಒಟ್ಟಿನಲ್ಲಿ ಇಬ್ಬರೂ ಅಭ್ಯರ್ಥಿಗಳಿಗೂ ಆಯಾ ಪಕ್ಷದವರೇ ಒಳ ಏಟು ಕೊಟ್ಟಿದ್ದರೂ ಕೊಟ್ಟಿರ ಬಹುದು.

ಕಾಂಗ್ರೆಸ್ ನವರು ಸೋಮಣ್ಣ ಹೊರಗಿನವರು ಎಂದು ಜರಿದರೆ ಸೋಮಣ್ಣ ಸೋನಿಯಾ ಎಲ್ಲಿ ನಿಂತಿದ್ದರು, ಸಿದ್ದರಾಮಯ್ಯ ಬಾದಮಿಗೇಕೆ ಹೋಗಿದ್ದರು ಎಂದು ಚಾಟಿ ಬೀಸುತ್ತಿದ್ದರು.

ಸೋಲು-ಗೆಲುವಿನ ಲೆಕ್ಕಚಾರ :

ಈ ಇಬ್ಬರು ಅಭ್ಯರ್ಥಿಗಳಿಗೂ ಈ ಚುನಾವಣೆ ರಾಜಕೀಯದ ಅಳಿವು-ಉಳಿವಿನ ಪ್ರಶ್ನೆಯಾಗಿದ್ದು, ಇಬ್ಬರೂ ಗೆಲ್ಲಬೇಕೆಂಬ ದರ್ದಿಗೆ ಬಿದ್ದು ಚುನಾವಣೆಯನ್ನು ಮಾಡಿದ್ದಾರೆ. ಯಾರೂ ಸೋತರೂ ಅವರ ರಾಜಕೀಯಕ್ಕೆ ಕೊನೆ ಮೊಳೆ ಇದಾಗಲಿದೆ ಎನ್ನಲಾಗುತ್ತಿದೆ.

ಲೋಕಸಭಾ ಚುನಾವಣೆಗೆ ಮತದಾನ ನಡೆದು ಸೋಲು ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿದ್ದು, ಸೋಮಣ್ಣನ ಗೆಲುವು ಮೂರು ಕ್ಷೇತ್ರಗಳ ಮತದಾನದ ಮೇಲೆ ನಿಂತಿದ್ದು, ಕಾಂಗ್ರೆಸ್ ಅಭ್ಯರ್ಥಿ ಎಸ್. ಪಿ.ಮುದ್ದಹನುಮೇಗೌಡರ ಗೆಲುವು ಗ್ಯಾರಂಟಿಗಳ ಮೇಲೆ ನಿಂತಿದೆ.

ತುಮಕೂರು ಗ್ರಾಮಾಂತರ, ತುರುವೇಕೆರೆ ಮತ್ತು ಮಧುಗಿರಿ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣನವರಿಗೆ ಎಷ್ಟು ಮತಗಳು ಬರಲಿವೆ ಎಂಬುದರ ಮೇಲೆ ಅವರ ಗೆಲುವಿನ ಲೆಕ್ಕಾಚಾರ ನಡೆಯಲಿದೆ.

ಕಳೆದ ಬಾರಿ ತುಮಕೂರು ಗ್ರಾಮಾಂತರ ಮತ್ತು ಮಧುಗಿರಿ ಕ್ಷೇತ್ರಗಳು ಜಿ.ಎಸ್.ಬಸವರಾಜು ಅವರಿಗೆ ಹೆಚ್ಚಿನ ಮತ ತಂದು ಕೊಟ್ಟು, ಗೆಲುವು ತಂದ ಕ್ಷೇತ್ರಗಳಾಗಿವೆ.

ತುಮಕೂರು ಗ್ರಾಮಾಂತರ ಕ್ಷೇತ್ರ ಮತ್ತು ಮಧುಗಿರಿ ಕ್ಷೇತ್ರಗಳಲ್ಲಿ ವಿ.ಸೋಮಣ್ಣನವರು 20,000 ಮತಗಳು ಮುನ್ನಡೆಯನ್ನು ಸಾಧಿಸಿದಲ್ಲಿ ಗೆಲುವಿನ ಓಟವನ್ನು ಕಾಣಬಹುದು. ಆದರೆ ಶಾಸಕ ಬಿ.ಸುರೇಶ್‍ಗೌಡರಿಗೆ ಹೆಬ್ಬೂರು ಹೋಬಳಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮುದ್ದಹನುಮೇಗೌಡರ ಬೆಂಬಲಿಗರು ಕೈ ಹಿಡಿದಿದ್ದರಿಂದ ಗೆಲುವು ಸಾಧ್ಯವಾಯಿತು, ಆದರೆ ಈ ಚುನಾವಣೆಯಲ್ಲಿ ಮುದ್ದಹನುಮೇಗೌಡರ ಬೆಂಬಲಿಗರ ಮತಗಳು ಬೆಜೆಪಿಗೆ ಬಂದಿರಲಾರವು, ಗೌರಿಶಂಕರ್ ಕಾಂಗ್ರೆಸ್‍ಗೆ ಹೋದ ಮೇಲೆ ತ್ಯಾಪೆ ಹಾಕಲು ಮಾಜಿ ಶಾಸಕ ಹೆಚ್.ನಿಂಗಪ್ಪನವರುನ್ನು ಕರೆ ತಂದರೂ ಅದೇನು ಪರಿಣಾಮ ಬೀರಿಲ್ಲ ಎನ್ನಲಾಗುತ್ತಿದೆ, ಯಾಕೆಂದರೆ ವರ್ಚಸಿಲ್ಲದ, ಚಾರ್ಮಿಲ್ಲದ ನಿಂಗಪ್ಪನವರು ಅಷ್ಟೇನು ಪರಿಣಾಮ ಬೀರಿಲ್ಲ ಎನ್ನಲಾಗಿತ್ತಿದೆ.

ತಿಪಟೂರು ಕ್ಷೇತ್ರದಲ್ಲಿ ಕನಿಷ್ಠ 10ರಿಂದ 15000 ಮತಗಳು ವಿ.ಸೋಮಣ್ಣನವರು ಮುನ್ನಡೆಗೆ ಗಳಿಸಿಕೊಂಡಲ್ಲಿ ಅನುಕೂಲವಾಗಲಿದೆ.ಕಳೆದ ಬಾರಿ ಜಿ.ಎಸ್.ಬಸವರಾಜ್ ಅವರಿಗೆ ಮಧುಗಿರಿ ಕ್ಷೇತ್ರವು 20 ಸಾವಿರದಷ್ಟು ಮುನ್ನಡೆ ಕೊಟ್ಟು ಗೆಲುವನ್ನು ತಂದುಕೊಟ್ಟಿತ್ತು. ಗ್ರಾಮಾಂತರದಲ್ಲಿಯೂ ಸಹ ಜಿ ಎಸ್ ಬಸವರಾಜ್ ಅವರಿಗೆ ಹೆಚ್ಚಿನ ಮತಗಳು ಲಭಿಸಿದ್ದವು. ಆದರೆ ಕಳೆದ ಭಾರಿ ಕೆ.ಎನ್.ರಾಜಣ್ಣನವರ ಕೃಪಾಕಟಾಕ್ಷೆಯಿಂದ ಅದು ಸಾಧ್ಯವಾಯಿತು, ಈ ಬಾರಿ ರಾಜಣ್ಣನವರು ಮಂತ್ರಿಯಾಗಿರುವುದರಿಂದ ಅವರ ಮಂತ್ರಿ ಸ್ಥಾನ ಕೂಡ ಈ ಕ್ಷೇತ್ರದ ಮುನ್ನಡೆ, ಹಿನ್ನಡೆಯ ಮೇಲೆ ಮಂತ್ರಿ ಸ್ಥಾನ ಅಳಿವು-ಉಳಿವು ನಿರ್ಧಾರವಾಗಲಿದೆ ಎನ್ನಲಾಗುತ್ತಿದೆ.

ಈ ಬಾರಿಯೂ ಈ ಎರಡು ಕ್ಷೇತ್ರಗಳು ಗೆಲುವನ್ನು ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ವಿಶ್ಲೇಷಣೆಗಳು ಹೇಳುತ್ತವೆ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕ ಈ ಸುರೇಶ್‍ಗೌಡ ಅವರು ತಮ್ಮ ಪ್ರತಿμÉ್ಠಯನ್ನು ಕಣಕ್ಕಿಟ್ಟು ಸೋಮಣ್ಣನವರಿಗೆ ಹೆಚ್ಚು ಮುನ್ನಡೆಯನ್ನು ಕೊಡಬೇಕೆಂದು ಕ್ಷೇತ್ರದ ತುಂಬಾ ಹಲವಾರು ತಂತ್ರಗಾರಿಕೆಗಳನ್ನು ಮಾಡಿದ್ದಾರೆ, ಮ್ಯಾಜಿಕ್ ಲಾಜಿಕ್ ಕೂಡ ಆಗಬಹುದಲ್ಲ ಎನ್ನಲಾಗುತ್ತಿದೆ.

ತುಮಕೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಪಕ್ಷವು ಈ ಹಿಂದಿನಿಂದಲೂ ಅಷ್ಟಾಗಿ ಇರಲಿಲ್ಲ. ಅಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ಪಕ್ಷಗಳದೇ ಪ್ರಾಬಲ್ಯ. ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಅವರು ಕಾಂಗ್ರೆಸ್ ಸೇರ್ಪಡೆಯಾದ ಮೇಲೆ ಜೆಡಿಎಸ್‍ನ ಎಲ್ಲಾ ಕಾರ್ಯಕರ್ತರು ಅವರ ಹಿಂದೆ ಹೋಗಿದ್ದಾರೆ ಎಂದು ಹೇಳಲಾಗದು, ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಒಟ್ಟುಗೂಡಿ ಕೆಲಸ ಮಾಡಿರುವುದಿಲ್ಲ ಎಂದೂ ಕೂಡ ಹೇಳಲಾಗುತ್ತಿಲ್ಲ.

ಇನ್ನ ಮಧುಗಿರಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳ ಕಾರ್ಯಕರ್ತರು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರು ಪದೇ ಪದೇ ದೇವೇಗೌಡರನ್ನು ಅವಹೇಳನ ಮಾಡುವ ಮೂಲಕ ಜೆಡಿಎಸ್ ಪಕ್ಷವನ್ನು ಗೇಲಿ ಮಾಡುತ್ತಿರುವುದಕ್ಕೆ ಈ ಬಾರಿ ಮಧುಗಿರಿಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮುನ್ನಡೆಯನ್ನು ಕೊಟ್ಟು ಮುಖಭಂಗ ಮಾಡಲೇಬೇಕೆಂದು ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ.

ಈ ನಿಟ್ಟಿನಲ್ಲಿ ಈ ಬಾರಿಯೂ ಮಧುಗಿರಿ ಕ್ಷೇತ್ರವು ಬಿಜೆಪಿ ಅಭ್ಯರ್ಥಿಯನ್ನು ಕೈ ಹಿಡಿಯಲಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ಕೆಲ ರಾಜಕೀಯ ಒಳ ಒಪ್ಪಂದಗಳು ಸಹ ನಡೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.ಇನ್ನ ತಿಪಟೂರು ಕ್ಷೇತ್ರವು ಈ ಬಾರಿ ಮಾಧುಸ್ವಾಮಿಯ ಅವರ ಹಿಡಿತದಿಂದ ಸ್ವಲ್ಪ ಬಿಜೆಪಿಗೆ ಹಿನ್ನಡೆಯಾದರೂ ಕಾಂಗ್ರೆಸ್ ಅಲ್ಪಸ್ವಲ್ಪ ಮುನ್ನಡೆಯನ್ನು ಸಾಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಮಧುಗಿರಿ, ತುಮಕೂರು ಗ್ರಾಮಾಂತರ ಮತ್ತು ತುರುವೇಕೆರೆ ಕ್ಷೇತ್ರಗಳಲ್ಲಿ ವಿ. ಸೋಮಣ್ಣನವರು 50,000 ಮತಗಳ ಮುನ್ನಡೆಯನ್ನು ಸಾಧಿಸಿದಲ್ಲಿ ಗೆಲುವನ್ನು ಕಾಣಬಹುದು ಎಂದು ಹೇಳಲಾಗುತ್ತಿದೆ.

ಇನ್ನ ತುರುವೇಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಕೆಲಸ ಮಾಡಿರುವುದರಿಂದ ಕಾಂತರಾಜುಗೆ ಹಿನ್ನಡೆ ಮಾಡಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಶಕ್ತಿ ಮೀರಿ ಶ್ರಮಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಬಿಜೆಪಿ ಮಾಜಿ ಶಾಸಕ ಮಸಾಲೆ ಜಯರಾಮ್ ಮತ್ತು ಹಾಲಿ ಶಾಸಕ ಕೃಷ್ಣಪ್ಪ ಅವರ ಪ್ರಭಾವ ಎಷ್ಟರಮಟ್ಟಿಗೆ ಬೀರಿದೆ ಎಂಬುದರ ಮೇಲೆಯೂ ಸೋಮಣ್ಣನವರಿಗೆ ಎಷ್ಟು ಮತಗಳು ಬಂದಿವೆ ಅದರ ಮೇಲೆ ಮುನ್ನಡೆ ಅಥವಾ ಹಿನ್ನಡೆಯೋ ಎಂಬುದು ಮತ ಎಣಿಕೆಯ ದಿನ ತಿಳಿಯಲಿದೆ.

ಚಿಕ್ಕನಾಯಕನಹಳ್ಳಿಯಲ್ಲಿ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿಯವರು ನೇರವಾಗಿ ಕಾಂಗ್ರೆಸ್ ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡರಿಗೆ ಮತ ನೀಡುವಂತೆ ತಮ್ಮ ಬೆಂಬಲರಿಗೆ ಹೇಳಿರುವುದರಿಂದ ಅಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲಿದ್ದು, ಇದಕ್ಕೆ ಮಾಜಿ ಶಾಸಕ ಕಿರಣ್ ಕುಮಾರ್ ಅವರ ಶ್ರಮವೂ ಇದೆ ಎಂದು ಹೇಳಲಾಗುತ್ತಿದೆ.

ಇನ್ನು ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಅದೇ ರೀತಿ ಕೊರಟಗೆರೆ ಕ್ಷೇತ್ರವು ಗೃಹ ಸಚಿವ ಡಾಕ್ಟರ್ ಜಿ.ಪರಮೇಶ್ವರ್ ಅವರ ಕ್ಷೇತ್ರವಾಗಿದ್ದು ಕಾಂಗ್ರೆಸ್ ಪಕ್ಷವು ಮುನ್ನಡೆಯನ್ನು ಸಾಧಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಗುಬ್ಬಿ ಕ್ಷೇತ್ರದಲ್ಲಿ ಕೆ ಎಸ್ ಆರ್ ಟಿ ಸಿ ನಿಗಮದ ಅಧ್ಯಕ್ಷರಾದ ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಈ ಬಾರಿ ಮುನ್ನಡೆ ಕೊಡಲೇಬೇಕೆಂದು ಶ್ರಮ ಹಾಕಿದ್ದು, ಈ ಕ್ಷೇತ್ರದಲ್ಲಿ ಪ್ರತಿಬಾರಿ ವಿಧಾನಸಭಾ ಚುನಾವಣೆಯಲ್ಲಿ ವಾಸು ಅವರು, ಜಯ ಜಯಗಳಿಸುತ್ತಿದ್ದು, ಲೋಕ ಸಭೆ ಚುನಾವಣೆಯಲ್ಲಿ ಪ್ರತಿ ಬಾರಿಯೂ ಬಿಜೆಪಿ ಅಭ್ಯರ್ಥಿಯ ಮುನ್ನಡೆ ಸಾಧಿಸುತ್ತಿದ್ದಾರೆ ಇದರ ಒಳ ಮರ್ಮ ಇನ್ನೂ ಅರ್ಥವಾಗಿಲ್ಲ. ಅಂದರೆ ಒಳ-ಹೊರಗಿನ ಒಳ ಒಪ್ಪಂದ ಇಸ್ಪೀಟ್ ಎಲೆಯ ಒಳಗೆ-ಹೊರಗೆ ಎಂಬ ಆಟವನ್ನು ಆಡುತ್ತಾರೆ ಎನ್ನಲಾಗುತ್ತಿದೆ. ಈ ಬಾರಿ ಎರಡೂ ಪಕ್ಷಗಳಿಗೂ ಸಮ-ಸಮ ಎನ್ನಲಾಗುತ್ತಿದೆ.

ಈ ಹಿಂದೆ ಗುಬ್ಬಿಯಲ್ಲಿ ಮುನ್ನಡೆಗೆ ರಾಜಕೀಯ ಒಳ ಒಪ್ಪಂದಗಳು ಇರುತ್ತಿದ್ದವೆನ್ನೆಲಾಗುತ್ತಿದೆ. ಆದರೆ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿರುವುದರಿಂದ ಎರಡು ಪಕ್ಷದ ಮತಗಳು ಒಟ್ಟುಗೂಡಿಲ್ಲ ಬಿಜೆಪಿ ಮುನ್ನಡೆ ಸಾಧಿಸುವುದಿಲ್ಲ ಎನ್ನಲಾಗುತ್ತಿದೆ.

ಇನ್ನ ಎಸ್.ಪಿ. ಮುದ್ದಹನುಮೇಗೌಡ ಅವರು ಗ್ಯಾರೆಂಟಿ ಸ್ಕೀಮ್‍ಗಳು ನನ್ನನ್ನು ಕೈಹಿಡಿಯಬಹುದೆಂದು ನಂಬಿಕೊಂಡಿದ್ದು ಇದರ ಜೊತೆಗೆ ಈ ಬಾರಿ ಅಲ್ಪಸಂಖ್ಯಾತರು ಹೆಚ್ಚಿನ ಮತದಾನ ಮಾಡಿರುವುದರಿಂದ ತುಮಕೂರು, ತಿಪಟೂರು, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಜೊತೆಗೆ ತುಮಕೂರು ಗ್ರಾಮಾಂತರ, ಮಧುಗಿರಿ ಕ್ಷೇತ್ರಗಳು ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆಯನ್ನು ಕೊಟ್ಟಲ್ಲಿ ಎಸ್.ಪಿ. ಮುದ್ದಮ್ಮೇಗೌಡರ ಗೆಲುವು ಸುಲಭವವಾಗಲಿದೆ.

ಇದರ ಜೊತೆಗೆ ಹಿಂದುಳಿದ ಜಾತಿಗಳಾದ ಗೊಲ್ಲ, ನಾಯಕ, ಕುರುಬ, ತಿಗಳ ಸಮಾಜಗಳು ಯಾವ ಅಭ್ಯರ್ಥಿಗೆ ಹೆಚ್ಚು ಮತ ಚಲಾವಣೆ ಮಾಡಿದ್ದಾರೆ ಎಂಬುದರ ಮೇಲೆಯೂ ಗೆಲುವನ್ನು ನಿರ್ಧರಿಸಲಾಗುತ್ತದೆ. ಇನ್ನ ಪರಿಶಿಷ್ಟ ಜಾತಿಯ ಮತಗಳು ಎರಡು ಪಕ್ಷಗಳಿಗೆ ಹಂಚಿಕೆಯಾಗಿವೆ ಎಂದು ಹೇಳಲಾಗುತ್ತಿದ್ದು ಶೇಕಡ 10 ರಷ್ಟು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತಗಳು ಪರಿಶಿಷ್ಟ ಜಾತಿಯ ಮತಗಳು ಬಿದ್ದಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದರ ಜೊತೆಗೆ ಗ್ಯಾರೆಂಟಿ ಯೋಜನೆಯ ಫಲಾನುಭವಿಗಳಾದ ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ರೀತಿಯಲ್ಲಿ ಮತ ನೀಡಿದ್ದಲ್ಲಿಮುದ್ದಹನುಮೇಗೌಡರ ಗೆಲುವು ಸರಾಗವಾಗಲಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿಯವರೂ ಮತದಾರರು ಮೋದಿಯ ಕೈ ಹಿಡಿದಿದ್ದಾರೆ, ಮೋದಿ ಮತ್ತೊಮ್ಮೆ ಪ್ರಧಾನಿ ಆಗಲು ಜಯ ಸಿಗಲಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಈ ಮಧ್ಯೆ ಲಿಂಗಾಯಿತ ಮತ್ತು ಒಕ್ಕಲಿಗರ ಮತಗಳು ಯಾರ ಕಡೆಗೆ ಒಲವು ತೋರಿವೆ ಎಂಬುದರ ಮೇಲೆ ಕೂಡ ಗೆಲುವು ನಿರ್ಧಾರವಾಗಲಿದೆ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ನಾಯಕರುಗಳು ಸೋಣ್ಣನವರು 20000ಕ್ಕೂ ಹೆಚ್ಚಿನ ಅಧಿಕ ಮತಗಳಿಂದ ಜಯಗಳಿಸುತ್ತಾರೆ ಎಂದು ಹೇಳಿಕೊಳ್ಳುತ್ತಿದ್ದು, ಕಾಂಗ್ರೆಸಿನವರು 50,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ಎರಡು ಪಕ್ಷದ ಅಭ್ಯರ್ಥಿಗಳ ಗೆಲುವಿನ ಮೇಲೆ ಆಗಲೇ ಬೆಟ್ಟಿಂಗ್ ಪ್ರಾರಂಭವಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಎನ್ ಡಿ ಎ ಅಭ್ಯರ್ಥಿ ವಿ. ಸೋಮಣ್ಣನವರು ಜಯಗಳಿಸಿದಲ್ಲಿ ದೇವೇಗೌಡರ ಸೋಲನ್ನು ತೀರಿಸಿಕೊಂಡಂತಾಗುತ್ತದೆ.ಒಟ್ಟಿನಲ್ಲಿ ಈ ಚುನಾವಣೆಯು ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಕೊನೆಯ ಮೊಳೆಯನ್ನು ಜೂನ್ 4ರಂದು ನಿರ್ಧರಿಸಲಿದೆ. ಇಬ್ಬರಿಗೂ ರಾಜಕೀಯದ ಅಳಿವು ಉಳಿವಿನ ಪ್ರಶ್ನೆ ಈ ಫಲಿತಾಂಶದ ಮೇಲೆ ನಿಂತಿದೆ.

ಕೊನೆಯ ಮಾತು : ಎರಡೂ ಪಕ್ಷದ ಅಭ್ಯರ್ಥಿಗಳು ದೃಶ್ಯ ಮಾಧ್ಯಮಗಳನ್ನು ಹೆಚ್ಚು ಒಲೈಕೆ ಮಾಡಿದ್ದರಿಂದ ಮುರಕಲು ಶಾಲೆಯ ಮುಂದಿನ ಪಡ ಶಾಲೆಯ ತಿರುಕನ ಕನಸ್ಸನ್ನು ದೃಶ್ಯ ಮಾಧ್ಯಮಗಳು ತೋರಿಸಿವೆ ಎನ್ನಲಾಗುತ್ತಿದೆ.

ಮುದ್ರಣ ಮಾಧ್ಯಮ ಪತ್ರಿಕೆಗಳನ್ನು ಎರಡೂ ಅಭ್ಯರ್ಥಿಗಳ ಉದಾಸೀನ ಫಲಿತಾಂಶದ ದಿನ ಅದರ ಪರಿಣಾಮ ಎಷ್ಟು ಎಂಬುದು ತಿಳಿಯಲಿದೆ.

-ಹೆಚ್.ವಿ.ವೆಂಕಟಾಚಲ

Leave a Reply

Your email address will not be published. Required fields are marked *