36 ವರ್ಷಗಳ ಪತ್ರಿಕಾ ಜರ್ನಿ…….. ದೇವೇಗೌಡರು ಪೇಪರ್ ತೂರಿದ್ದು, ಹೆಚ್.ಡಿ.ಕುಮಾರಸ್ವಾಮಿ ಲಾಕ್ ಮಾಡಿಕೊಂಡಿದ್ದು… ವಾಟಾಳ್ ಬೆಂಕಿಯಾಗಿದ್ದು…..

ತುಮಕೂರು : ನನ್ನ ಪತ್ರಿಕಾ ವೃತಿಯ ಜರ್ನಿ(ಪ್ರಯಾಣ)ಯನ್ನು ಹಿಂತಿರುಗಿ ನೋಡಿದರೆ ನನಗಂತೂ ಆತ್ಮತೃಪ್ತಿ, ಆತ್ಮ ಸಂತೋಷ ಎಲ್ಲವೂ ಇದೆ, ಇಷ್ಟೊಂದು ದೂರ ಸಾಗಿ ಬಂದಿದೆಯಲ್ಲಾ ಪತ್ರಿಕಾ ಜರ್ನಿ ಎಂಬುದೇ ಈಗ ಖುಷಿ ಮತ್ತು ಅಷ್ಟೇ ವಿಷಾದವೂ ನನ್ನಲ್ಲಿದೆ.

ನಾನು ಓದಿದ್ದು ವಿಜ್ಞಾನ ವಿಷಯ, ಆಯ್ದುಕೊಂಡಿದ್ದು ಪತ್ರಿಕೋದ್ಯಮ, ಈ ಪತ್ರಿಕಾ ವೃತ್ತಿಯ ಪ್ರಯಾಣ ನನ್ನ ಬದುಕಿನಲ್ಲಿ ಒಂದು ತರಹ ಝುಳು ಝುಳು ಹರಿಯುವ ನದಿಯಂತೆ ಹರಿದಿದೆ, ಹರಿಯುತ್ತಾ ಇದೆ, ನಾನು ಬಿಡಬೇಕೆಂದರೂ ಅದು ನನ್ನ ಬಿಡದೆ ಗೆಳತಿಯಾಗಿಯೋ, ಗೆಳಯನಾಗಿಯೋ, ಒಂದು ಕವನದ ಕನವರಿಕೆಯಂತೆ ನನ್ನ ಮನಸ್ಸು ಮತ್ತು ಹೃದಯದಲ್ಲಿ ಹರಿಯುತ್ತಲೇ ಇದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕೆ ಓದುತ್ತಿರುವುದು

ಅದು 1998 ಓದುವುದಕ್ಕೆ ತುಮಕೂರಿಗೆ ಕಾಲಿಟ್ಟಾಗ ಪ್ರಜಾಪ್ರಗತಿ ಪತ್ರಿಕೆ ಹೊಸದಾಗಿ ಪ್ರಾರಂಭವಾಗಿತ್ತು, ಆ ಪತ್ರಿಕೆಯನ್ನು ಮನೆ ಮನೆಗೆ ಹಂಚುವ ಕೆಲಸಕ್ಕೆ ಹುಡುಗರು ಬೇಕಿತ್ತು, ಈಗಿನ ಬೆವರಹನಿ ಪತ್ರಿಕೆಯ ಸಂಪಾದಕರಾದ ಕುಚ್ಚಂಗಿ ಪ್ರಸನ್ನ ಅವರು ಮ್ಯಾನೇಜರ್ ಆಗಿದ್ದರು, ಒಂದು ಸೈಕಲ್ ತಗೋ ಪೇಪರ್ ಹಾಕುವಂತೆ ಒಂದು ಪೇಪರ್‍ಗೆ ದಿನಕ್ಕೆ 5ಪೈಸೆ ಸಿಗುತ್ತದೆ ಎಂದು ಒಂದಿನ ಕಾಲೇಜ್ ಬಳಿ ಸಿಕ್ಕಿದಾಗ ಹೇಳಿದರು.

ಮೈತ್ರಿನ್ಯೂಸ್ ಪತ್ರಿಕೆ 2ನೇ ವರ್ಷದ ವಾರ್ಷಿಕೋತ್ಸವದಲ್ಲಿ ಗೆಳೆಯ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಪರಿಸರ ಪತ್ರಿಕೆ ಸಂಪಾದಕರಾದ ಜಿ.ಎಲ್.ಜನಾರ್ಧನ್, ಪತ್ರಕರ್ತರಾದ ಪಾರ್ವತೀಶ್, ತುಮಕೂರು ವಿ.ವಿ.ಕುಲಾಪತಿ ರಾಜಾಸಾಬ್, ಅಂದಿನ ಕಸಾಪ ಅಧ್ಯಕ್ಷರಾಗಿದ್ದ ಬಾ.ಹ.ರಮಾಕುಮಾರಿ ಇದ್ದಾರೆ. ವಾರ್ಷಿಕೋತ್ಸವದಲ್ಲಿ ಭಾಗವಹಿಸಿರುವ ಪತ್ರಿಕಾ ಓದುಗರು, ಗೆಳೆಯರು.

ಆಗಿನ ಕಾಲಕ್ಕೆ ನಮಗೆ ಮನೆಯಿಂದ ರೂಂ ಬಾಡಿಗೆಗೆ ಅಂತ 50ರೂಪಾಯಿ ಕಳಿಸೋರು, ಕೆಲವು ಸಲ ಕಳಿಸಿದರೆ ಕಳಿಸಿದರು, ಇಲ್ಲದಿದ್ದರೆ ಇಲ್ಲ, ಅಷ್ಟು ಮನೆ ಕಡೆ ಬಡತನ. ಬಾಡಿಗೆಗೆ, ಪೆನ್, ಪುಸ್ತಕಕ್ಕೆಲ್ಲಾ ದುಡ್ಡುಬೇಕಿತ್ತು, ಅದೇಗೋ ಒಂದು ಸೈಕಲ್ ತಗೊಂಡು ಪೇಪರ್ ಹಾಕೋದು ಶುರುವಾದ ಮೇಲೆ, ಅಮೇಲೆ ನನ್ನ ತಮ್ಮ, ಆರ್. ರಮೇಶ, ವೈ.ಕೆ.ರಂಗಪ್ಪ, ವೈ.ಕೆ.ತಿಪ್ಪೇಸ್ವಾಮಿ, ಇತರರೆಲ್ಲಾ ಒಂದೊಂದು ಏರಿಯಾದಲ್ಲಿ ಪೇಪರ್ ಹಾಕುತ್ತಿದ್ದೆವು.

ಆಗ ಚಿಕ್ಕೀರಪ್ಪನವರು ಬಂಡಲ್ ಕಟ್ಟಿ ಕೊಡುತ್ತಿದ್ದರು, ಪ್ರತಿ ಭಾನುವಾರ ಚಿಕ್ಕೀರಪ್ಪ ನಮ್ಮನ್ನು ಓದಲೂ ಬಿಡದೆ ಸಕ್ರ್ಯುಲೇಷನ್ ಅಂತ ಕರೆದುಕೊಂಡು ಹೋಗೋರು, ಕೊನೆಗೆ ಈಗಿನ ವಿಶ್ವವಿದ್ಯಾನಿಲಯದ ಮುಂದಿನ ಗಾಯತ್ರಿ ಹೋಟೆಲ್‍ನಲ್ಲಿ ಮಸಾಲೆ ದೋಸೆ ತಿಂದು ಚಿಕ್ಕೀರಪ್ಪನವರನ್ನು ಗೋಳೈಯ್ದುಕೊಂಡು ಚಿಕ್ಕೀರಪ್ಪನವರನ್ನು ರೇಗಿಸಿ ಓಡಿ ಹೋಗುತ್ತಿದ್ದೆವು.

3ನೇ ಮೈತ್ರಿನ್ಯೂಸ್ ಪತ್ರಿಕಾ ವಾರ್ಷಿಕೋತ್ಸವದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ವಿಶೇಷಾಂಕ ಬಿಡುಗಡೆ ಮಾಡಿದರು. ಚಿತ್ರದಲ್ಲಿ ಡಾ|| ವೀರಭದ್ರಯ್ಯ, ಸಾಹಿತಿ ಕೆ.ಬಿ.ಸಿದ್ದಯ್ಯ, ತಿಪಟೂರಿನ ಟೂಡಾ ಸಿ.ಬಿ. ಶಶಿಧರ್, ನಿವೃತ್ತ ಪ್ರಾಂಶುಪಾಲರಾದ ಪ್ರೊ.ಜಿ.ಎಂ.ಶ್ರೀನವಾಸಯ್ಯ, ತುಮಕೂರು ವಿ.ವಿ.ಅಧ್ಯಾಪಕರಾದ ಡಾ.ಗೀತಾವಸಂತ, ಮೈತ್ರಿನ್ಯೂಸ್ ಪತ್ರಿಕೆ ಸಂಪಾದಕರಾದ ವೆಂಕಟಾಚಲ.ಹೆಚ್.ವಿ., ರಮ್ಯಾ ಇದ್ದಾರೆ. ವಾರ್ಷಿಕೋತ್ಸವದಲ್ಲಿ ಭಾಗವಹಿಸಿರುವ ಪತ್ರಿಕಾ ಓದುಗರು, ಗೆಳೆಯರು.

ಹೊರಪೇಟೆ ಚರ್ಚ್ ಮೂಲೆಯಲ್ಲಿ ತುಮಕೂರು ವಾರ್ತೆಯ ಹೆಚ್.ಎಸ್.ರಾಮಣ್ಣ ನನ್ನ ಕರೆದುಕೊಂಡು ಹೋಗಿ ಪ್ರೂಪ್ ನೋಡೋದು, ಸುದ್ದಿ ಬರೆಯೋದು ಹೇಗೆ ಅಂತ ಹೇಳಿ ಕೊಡುತ್ತಿದ್ದರೂ, ಆ ದಿನಗಳಲ್ಲಿ ನಾವು ಸಮತಾ ವಿದ್ಯಾರ್ಥಿ ಒಕ್ಕೂಟ ಕಟ್ಟಿ ಮೀಟಿಂಗ್ ಮಾಡಿದ ಸುದ್ದಿ, ವಿಚಾರ ಸಂಕೀರ್ಣ, ವಿಚಾರಗೋಷ್ಠಿ, ಕವಿಗೋಷ್ಠಿ, ಸಾಹಿತ್ಯದ ಕಾರ್ಯಕ್ರಮಗಳ ಸುದ್ದಿ ಬರೆದು ಕೊಡೋದು, ಬೆಳಿಗ್ಗೆಗೆ ಪೇಪರಲ್ಲಿ ಬಂದರೆ ಖುಷಿಯೋ ಖುಷಿ, ನಾವು ಬರೆದ ಸುದ್ದಿ ಹಾಕಲೇಬೇಕು, ಇಲ್ಲದಿದ್ದರೆ ಆ ದಿನದ ಬಂಡಲ್ ಪತ್ರಿಕಾಲಯದಲ್ಲೇ ಬಿದ್ದಿರುತ್ತತ್ತು.

4ನೇ ಮೈತ್ರಿನ್ಯೂಸ್ ಪತ್ರಿಕಾ ವಾರ್ಷಿಕೋತ್ಸವದಲ್ಲಿ ಅಂದಿನ ಮಾಧ್ಯಮ ಅಕಾಡಮಿ ಅಧ್ಯಕ್ಷರಾದ ಎಂ.ಸಿದ್ದರಾಜುರವರು ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಕೆ.ಬಿ.ಸಿದ್ದಯ್ಯ, ಕವಯತ್ರಿ ಅನ್ನಪೂರ್ಣವೆಂಕಟನಂಜಪ್ಪ, ಕೈಗಾರಿಕೋದ್ಯಮಿ ಡಿ.ಟಿ.ವೆಂಕಟೇಶ್, ಸಾಹಿತಿ ಎನ್.ನಾಗಪ್ಪ, ಮೈತ್ರಿನ್ಯೂಸ್ ಪತ್ರಿಕೆ ಸಂಪಾದಕರಾದ ವೆಂಕಟಾಚಲ.ಹೆಚ್.ವಿ., ಪತ್ರಿಕೆಯ ಉಪಸಂಪಾದಕರಾದ ಕೆ.ಎಸ್.ರಾಘವೇನದ್ರ ಇದ್ದಾರೆ.

1988ರಲ್ಲಿ ಕುವೆಂಪು ಅವರನ್ನು ಭೇಟಿಯಾದಾಗ ಅವರು ವಿಶ್ವಮಾನವ ಗೀತೆಯನ್ನು ಸ್ವತಃ ಅವರೇ ಓದಿ ನಮಗೆ ಹೇಳಿದ್ದು ನನ್ನ ಮೇಲೆ ಬಹಳ ಪ್ರಭಾವ ಬೀರಿತು. ನಾನು ಕವಿಯಾಗಬೇಕು, ಸಾಹಿತಿ ಆಗಬೇಕೆಂದು ಬಹುತೇಕ ಎಲ್ಲಾ ಸಾಹಿತಿಗಳ, ಕವಿಗಳ, ಕವಿಯತ್ರಿಯರ ಒಡನಾಡ ನನಗೆ ಬೆಳೆಯಿತು.

2017 ರಲ್ಲಿ ಕೆ.ಬಿ.ಸಿದ್ದಯ್ಯನವರ ಅಧ್ಯಕ್ಷತೆಯಲ್ಲಿ ಮೈತ್ರಿನ್ಯೂಸ್ ಪತ್ರಿಕೆ ಸಹಭಾಗಿತ್ವದಲ್ಲಿ ನಡೆದ ಬುದ್ಧಜಯಂತಿ ಕವಿಗೋಷ್ಠಿ.

ಆ ದಿನಗಳಲ್ಲಿ ದಲಿತ ಚಳುವಳಿ, ರೈತ ಚಳುವಳಿ, ಬಂಡಾಯ ಸಾಹಿತ್ಯದ ಚಳುವಳಿ, ಉತ್ತಂಗದಲ್ಲಿತ್ತು. ಲಂಕೇಶ್ ಪತ್ರಿಕೆಯನ್ನು ಓದೋದು, ಲೋಹಿಯಾ, ಗಾಂಧಿ, ಅಂಬೇಡ್ಕರ್, ಎಲ್ಲಾ ಓದಿಕೊಂಡು ಇನ್ನ ಕ್ರಾಂತಿಗೆ ಮೂರೇಗೇಣು ಅಂತ ತುಮಕೂರಿನ ಪ್ರಮುಖ ರಸ್ತೆಗಳಲ್ಲಿ ಸೈಕಲನ್ನು ರೊಯ್ಯನೇ ತುಳಿಯೋದು.

ಆ ನಂತರ ಅಂತರ್ಜಾತಿ ವಿವಾಹ, ಪ್ರೇಮ ವಿವಾಹ ಎಲ್ಲಾ ಮಾಡಿಸಿ ಪೊಲೀಸ್ ಠಾಣೆ, ಎಸ್ಪಿ ಕಛೇರಿ ಎಲ್ಲಾ ತಿರುಗೋದು ವಾದ ಮಾಡೋದು, ಇಂತಹ ಸಮಯದಲ್ಲೂ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆವು, ಆಗಿನ ಕಾಲಕ್ಕೆ ಎಸ್‍ಎಫ್‍ಐ, ಎಬಿವಿಪಿ, ಡಿಎಸ್‍ಫ್ ಮತ್ತು ಸಮತಾ ವಿದ್ಯಾರ್ಥಿ ಒಕ್ಕೂಟಗಳು ದೇಶದ ಹಲವಾರು ವಿಷಯಗಳನ್ನಿಟ್ಟುಕೊಂಡು ಚಳುವಳಿ, ಹೋರಾಟ ಮಾಡುತ್ತಿದ್ದವಲ್ಲದೆ, ರಾಜ್ಯದ ಪ್ರಗತಿ ಪರರನ್ನು ಕರೆಸಿ ದೊಡ್ಡ ದೊಡ್ಡ ವಿಚಾರ ಸಂಕೀರ್ಣಗಳನ್ನು ಎರಡು ಮೂರು ದಿನ ಮಾಡುತ್ತಿದ್ದೆವು.

ಸೊಗಡು ಪತ್ರಿಕಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿತ್ರ. ಮಣ್ಣೆರಾಜು, ಮೇಘ ಗಂಗಾಧರನಾಯ್ಕ ಚಿತ್ರದಲ್ಲಿದ್ದಾರೆ.

ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ 1989ರಲ್ಲಿ ಪ್ರಜಾ ಸೋಷಲಿಷ್ಟ್ ಪಕ್ಷದಿಂದ ನಿಂತು ಸೋತಿದ್ದರು, ಅವರನ್ನು ತುಮಕೂರಿಗೆ ಎರಡು ದಿನ ವಿಚಾರ ಸಂಕೀರ್ಣಕ್ಕೆ ಕರೆಸಿದ್ದೆವು, ಅವರ ಅಂಗಿ ತೋಳಿನ ಕೆಳಗೆ ಹರಿದು ಹೋಗಿತ್ತು, ನಮ್ಮ ಹಿರಿಯರನ್ನು ಕೇಳಿದಾಗ ಸಮಾಜವಾದಿಗಳು ಹಾಗೆ ಕಣಯ್ಯ ಅಂದಿದ್ದರು, ಸಿದ್ದರಾಮಯ್ಯನವರು ಆಗ ಚೈನ್ ಸ್ಮೋಕರ್ ಅವರಿಗೆ ಸಿಗರೇಟ್ ತಂದು ಕೊಟ್ಟೇ ಸಾಕಾಗಿತ್ತು.

ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಪತ್ರಿಕೆ ವತಿಯಿಂದ ಗಾಂಧಿ ಕಥನ ಪುಸ್ತಕ ನೀಡಿದ್ದು.

ಹೀಗೆ ಸಾಗಿದ ನಮ್ಮ ಪತ್ರಿಕಾ ವೃತ್ತಿ ಪದವಿ ಮುಗಿಯುವ ಹಂತದಲ್ಲಿ ಪ್ರಜಾಪ್ರಗತಿಯಲ್ಲಿ ವರದಿಗಾರನಾಗಿ ಹೊರಗಿನಿಂದಲೇ ಕಾರ್ಯ ನಿರ್ವಹಿಸುತ್ತಿದ್ದೆ, ಯಾವುದೋ ಕಾರಣಕ್ಕೆ ಸಿಕ್ಕಿದ್ದ ಬಿಎಡ್ ಸೀಟ್‍ಗೆ ಸೇರಿಕೊಳ್ಳಲಾಗಲಿಲ್ಲ, ಏನಾದರೂ ಕೆಲಸ ಮಾಡಬೇಕಲ್ಲ, ಆಸಕ್ತಿಯಿದ್ದ ಪತ್ರಿಕೋದ್ಯಮಕ್ಕೆ ಕಾಲಿಟ್ಟು ಸೊಗಡು ಪತ್ರಿಕೆಗೆ ಸೇರಿಕೊಂಡು ಸತತವಾಗಿ 15 ವರ್ಷಗಳ ಕಾಲ ವರದಿಗಾರನಾಗಿ, ಉಪಸಂಪಾದಕನಾಗಿ ಕಾರ್ಯನಿರ್ವಹಿಸಿದೆ.

ಸೊಗಡು ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುವಾಗಲೇ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಜರ್ನಲಿಸಂ ಓದಿದ್ದಾಯಿತು. ಮಹೇಶ್ಚಂದ್ರಗುರು, ನಿರಂಜನ್ ವಾನಳ್ಳಿ ಅವರುಗಳು ಪತ್ರಿಕೋದ್ಯಮದ ಬಗ್ಗೆ ಹಲವಾರು ಮಜಲುಗಳನ್ನು ಕಲಿಸಿದರು.

ರಾಜಕೀಯ, ಸಾಹಿತ್ಯ, ವಿಶ್ಲೇಷಣೆ, ಸಂದರ್ಶನ ಮಾಡುವುದೇಗೆ, ಸಂದರ್ಶನ ಮಾಡಲು ಹೋಗುವ ಮುನ್ನ ಹೇಗೆ ತಯಾರಿ ನಡೆಸಬೇಕು, ವ್ಯಕ್ತಿಯ ಬಗ್ಗೆ ಯಾವ ರೀತಿ ತಯಾರಿ ನಡಸಬೇಕು ಎಂಬುದರ ಜೊತೆಗೆ, ಕ್ರೈಂ, ಅಪಘಾತ ಸುದ್ದಿಗಳನ್ನು, ವ್ಯಕ್ತಿಚಿತ್ರಗಳನ್ನು ಬರೆಯುವುದು, ಸಂಪಾದಕೀಯವನ್ನು ಬರೆಯುವ ಬಗ್ಗೆ ತಿಳಿಸಿದ್ದಲ್ಲದೆ, ಒಬ್ಬ ಪತ್ರಕರ್ತನಾದವನಿಗೆ ಭಾಷೆ ಬಹಳ ಮುಖ್ಯ, ಇದರ ಜೊತೆಗೆ ಸುದ್ದಿಯ ಮೂಲವನ್ನು ಗೌಪ್ಯವಾಗಿಟ್ಟಿರಬೇಕು, ಪತ್ರಕರ್ತ ಪ್ರಶ್ನೆ ಕೇಳುವಾಗ ಆ ವಿಷಯದ ಬಗ್ಗೆ ತಿಳಿದಿರಬೇಕು, ಖಚಿತವಾಗಿರಬೇಕು. ಹೇಗೆ, ಯಾವ ರೀತಿ ಎಂಬುದನ್ನು ಕಲಿಸಿದರು.

ಸಾಹಿತಿ ಬಕಾಲ ಕವಿ ಕೆ.ಬಿ.ಸಿದ್ದಯ್ಯನವರ ನೆನಪಿನ ಸಂಚಿಕೆಯನ್ನು ಬೆಂಗಳೂರಿನ ಗಾಂಧಿಭವನದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಬಿಡುಗಡೆಗೊಳಿಸಿದರು.ಚಿತ್ರದಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ, ಜಿ.ಪಂ.ಮಾಜಿ ಸದಸ್ಯರಾದ ಹೆಚ್.ಕೆಂಚಮಾರಯ್ಯ, ರಾಜ್ಯಸಭಾ ಸದಸ್ಯರಾಗಿದ್ದ ಎಲ್.ಹನುಮಂತಯ್ಯ, ಡಿಎಎಸ್‍ಎಎಸ್‍ನ ಮಾವಳ್ಳಿ ಶಂಕರ್ ಇನ್ನೂ ಮುಂತಾವರಿದ್ದಾರೆ.

ನಾನು ಬಿಎಸ್ಸಿ ವಿಜ್ಞಾನ ಪದವಿ ಪಡೆದಿದ್ದರೂ ಪತ್ರಿಕೋದ್ಯಮದಲ್ಲಿ ಸ್ನಾತಕೋತರ ಪದವಿ ಪಡೆದಿದ್ದಾಯಿತು.

ಪಿಯುಸಿಯಲ್ಲೇ ಪೇಮ ಕವನಗಳು,ಪ್ರೇಮ ಪತ್ರಗಳು, ಪರಿಸರ ಕವನಗಳು ಬರೆಯುತ್ತಿದ್ದರಿಂದ ನಾನು ಸ್ವಲ್ಪ ಕವಿಯೂ, ಸಾಹಿತಿಯೂ ಆಗಿ ಸಾಹಿತಿಗಳ ಜೊತೆ ಇಂದಿಗೂ ಒಡನಾಟವಿದೆ. ಅಲ್ಲಿಂದ ಪ್ರಾರಂಭವಾದ ನನ್ನ ಪಯಾಣ (ಜರ್ನಿ) ಪತ್ರಕರ್ತನಾಗುವಂತೆ ಪ್ರೇರೇಪಿಸಿತು. ಈ ಪತ್ರಿಕಾ ವೃತ್ತಿ ಇದೆಯಲ್ಲಾ ಅದೊಂದು ತರಹ ಅಫೀಂ ಇದ್ದ ಹಾಗೆ ಒಮ್ಮೆ ಒಳಗೆ ಬಂದು ಬಿಟ್ಟರೆ ಹೊರಗೆ ಹೋಗುವುದು ತುಂಬಾ ಕಷ್ಟ.

ನಾನು ಈ ಪತ್ರಿಕಾ ವೃತ್ತಿ ಬೇಡ ಅಂತ ಮಿಲಿಟರಿ ಹೋಟೆಲ್ ಮಾಡಿದೆ, ಒಂದು ಬ್ಯಾಂಕ್‍ನಲ್ಲಿ ಕೆಲಸ ಮಾಡಿದೆ, ಆದರೆ ನನಗೆ ಪತ್ರಿಕಾ ವೃತ್ತಿಯಲ್ಲಿ ಸಿಗುತ್ತಿದ್ದಷ್ಟು ಖುಷಿ, ಸಂತೋಷ, ಒಂದು ತರಹದ ವಿರಹ ವೇದನೆ ಎಲ್ಲಿಯೂ ಸಿಗಲಿಲ್ಲ, ಈ ಪತ್ರಿಕಾ ವೃತ್ತಿ ಹೊಸದಾಗಿ ಚಿಗುರು ಮೀಸೆ ಬಂದ ಹುಡುಗನಿಗೆ ಹುಡುಗಿಯೊಬ್ಬಳು ಬರೆದ ಪತ್ರ ಅಥವಾ ಮೆಸೇಜ್‍ನ್ನು ಮತ್ತೆ ಮತ್ತೆ ಓದವಂತೆ ತುಡಿಯುವ ಚಿಗುರೆಯ ಓಟದಂತೆ. ಎಷ್ಟು ಬರೆದರೂ ಸಾಕೆನಿಸುತ್ತಿಲ್ಲ, ಹೊಸ ಹೊಸ ಆಲೋಚನೆಗಳು, ಹೊಸ ಜಗತ್ತು ಈ ಪತ್ರಿಕಾ ಲೋಕದಲ್ಲಿ ಹುಟ್ಟುತ್ತಲೇ ಇರುತ್ತವೆ.

ನಾವೆಲ್ಲಾ ಮೊಳೆ ಜೋಡಿಸುತ್ತಿದ್ದ ಕಾಲದಿಂದ ಬಂದವರು, ಕಂಪ್ಯೂಟರ್ ಬಂತು, ನಂತರ ಪ್ಯಾಕ್ಸ್, ಪೇಜರ್, ಮೊಬೈಲ್, ಇ-ಮೇಲ್, ಇಂಟರ್ ನೆಟ್, ನಂತರ ಫೆಸ್‍ಬುಕ್, ಟ್ಯೂಟರ್, ವಾಟ್ಸ್ ಆಫ್, ಇನಸ್ಟ್ರಾಗ್ರಾಂ ಈಗ ಏನಿಲ್ಲ ಭೂಮಿಯಿಂದ ಹಿಡಿದು, ಚಂದ್ರ, ಮಂಗಳ ಗಾಹದವರೆಗೆ ಕ್ಷಣ ಮಾತ್ರದಲ್ಲಿ ಸುದ್ದಿಯನ್ನು ಕಳಿಸಬಹುದು.

ಇಷ್ಟು ಜರ್ನಿಯಲ್ಲಿ ಹಲವಾರು ಯುವಕರಿಗೆ, ಸಹೋದ್ಯೋಗಿಗಳಿಗೆ ಸುದ್ದಿ ಬರೆಯುವಿಕೆ, ಪ್ರೂಪ್ ತಿದ್ದುವಿಕೆ, ವಿಶ್ಲೇಷಣೆ ಬರೆಯುವಿಕೆ ಸೇರಿದಂತೆ ಪತ್ರಿಕೋದ್ಯಮದ ಹಲವಾರು ಆಯಾಮಗಳನ್ನು ಹೇಳಿ ಕೊಟ್ಟಿದ್ದೇನೆ, ತಿದ್ದಿದ್ದೇನೆ, ಈಗಿನ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಚಿ.ನಿ.ಪುರುಷೋತಮ್ ಇರಬಹುದು, ಈ ಹಿಂದಿನ ಅಧ್ಯಕ್ಷರಾದ ಸೊಗಡು ವೆಂಕಟೇಶ್ ಇರಬಹುದು ಮುಂತಾದವರಿಗೆ ಸುದ್ದಿಯ ಬರಹ ಮತ್ತು ಅದರ ಆಳ-ಅಗಳ ಹೇಗಿರಬೇಕು ಎಂಬುದನ್ನೆಲ್ಲಾ ಹೇಳಿ ಕೋಟ್ಟಿದ್ದೇನೆ, ಇವರೆಲ್ಲಾ ಗ್ರಾಮಾಂತರ ಸುದ್ದಿಗಳನ್ನು ಐದಾರು ಪುಟಗಳನ್ನು ಬರೆದು ಕಳಿಸುತ್ತಿದ್ದನ್ನು ತಿದ್ದಿ-ತೀಡಿ ಅಚುಕಟ್ಟಾಗಿ, ಓದುವಂತೆ ಮಾಡುವ ಕೆಲಸ ನಮ್ಮಂತಹವರದಾಗಿತ್ತು.

ಯಾಕೋ ಎಲ್ಲಾ ಮಾಡಿದ್ದಾಯಿತು ನನ್ನದೇ ಪತ್ರಿಕೆಯನ್ನು ಏಕೆ ಪ್ರಾರಂಭ ಮಾಡಬಾರದು ಎಂದು 2014ರಲ್ಲಿ ನನ್ನದೇ ಆದ ಮೈತ್ರಿನ್ಯೂಸ್ ಪತ್ರಿಕೆಯನ್ನು ಹೊರ ತಂದಾಗ ನನಗೆ ನನ್ನ ಹೋರಾಟದ ದಿನಗಳಿಂದ ಜೊತೆ ಇದ್ದವರು, ಸಾಹಿತಿಗಳು, ಗೆಳೆಯರು, ರಾಜಕಾರಣಿಗಳು, ತುಮಕೂರು ವಿಶ್ವ ವಿದ್ಯಾನಿಲಯದ ಹಲವಾರು ಅಧ್ಯಾಪಕರುಗಳು, ನನ್ನದೇ ಆದ ನನ್ನೆಲ್ಲಾ ಆಗು-ಹೋಗುಗಳಿಗೆ ಬೆನ್ನುಲುಬಾಗಿ ಸದಾ ನಿಲ್ಲುವ ಹಿರಿಯ ಗೆಳೆಯರ ಸಹಕಾರದಿಂದ ಈ ಪತ್ರಿಕೆ ಹತ್ತು ವರ್ಷಗಳ ಕಾಲ ನಡೆಯುತ್ತಾ ಬಂದಿರುವುದಲ್ಲದೆ, ನನಗೆ ಧೈರ್ಯ ಮತ್ತು ಆಗಾಗ ನನ್ನ ಬಗ್ಗೆ ಬಹಳ ಆಸಕ್ತಿಯಿಂದ ತುಮಕೂರಿನ ಹಿರಿಯರು ನನ್ನನ್ನು ಸದಾ ಕಾಯುತ್ತಾ ಬಂದಿದ್ದಾರೆ ಅವರಿಗೆ ನಾನು ಚಿರಋಣಿಯಾಗಿದ್ದೇನೆ.

ಜನತಾದಳವು ಇಬ್ಭಾಗವಾದಾಗ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ದಳ ಇಬ್ಭಾಗವಾಗಲು ದೇವೇಗೌಡರೇ ಕಾರಣವಂತಲ್ಲಾ ಎಂದು ಪ್ರಶ್ನೆ ಕೇಳಿದ ನನ್ನ ಮೇಲೆ ಅವರ ಮುಂದಿದ್ದ ಪೇಪರ್‍ಗಳನ್ನೆಲ್ಲಾ ತೂರಿ ಡೆಲ್ಲಿಯಲ್ಲೇ ಪ್ರಶ್ನಿಸಲಿಲ್ಲ ಎಂದು ಟವಲ್ಲು ಕೊಡವಿದಾಗ ಎಲ್ಲಾ ಪತ್ರಕರ್ತರು ದೇವೇಗೌಡರಿಗೆ ತರಾಟೆ ತಗೊಂಡಾಗ ಕ್ಷಮೆ ಕೇಳಿ ನನ್ನನ್ನು ಪಕ್ಕಕ್ಕೆ ಕರೆಸಿಕೊಂಡು ನನ್ನ ನೋಡಿ ನಕ್ಕು ಕೈ ಕೊಟ್ಟರು.

ಸಿದ್ದರಾಮಯ್ಯನವರು ಜೆಡಿಎಸ್‍ನಿಂದ ಉಚ್ಛಾಟನೆಯಾದಾಗ ತುಮಕೂರಿನಲ್ಲಿ ಅಹಿಂದ ಸಮಾವೇಶ ನಡೆದಾಗ ಇದಕ್ಕೆ ಪರ್ಯಾಯವಾಗಿ ಜೆಡಿಎಸ್‍ನಿಂದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು, ಸಮಾವೇಶದ ಉಸ್ತುವಾರಿಯನ್ನು ಆಗಿನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾರ್ಮಿಕ ಮಂತ್ರಿಯಾಗಿದ್ದ ಬಿ.ಸತ್ಯನಾರಾಯಣ ಅವರು ನನ್ನ ಕರೆದುಕೊಂಡು ಹೋಗಿ ಒಳ್ಳೆ ಊಟ ಕೊಡಿಸಿ, ನಾಳೆ ಹೆಚ್.ಡಿ.ಕುಮಾರಸ್ವಾಮಿಯವರ ಪತ್ರಿಕಾಗೋಷ್ಠಿ ಇದೆ ನೀನೊಂದು ಪ್ರಶ್ನೆ ಕೇಳಬೇಕು, ಒಂದು ವಾರದಲ್ಲಿ ನೀವು ಮುಖ್ಯಮಂತ್ರಿಯಾಗುತ್ತಿರಾ ನಿಜಾನಾ ಅಂತ ಕೇಳು ಅಂದರು.

ನಾನು ಅವರ ಮುಖ ದಿಟ್ಟಿಸಿ ನೋಡಿದಾಗ ನೀನು ಕೇಳಪ್ಪ ಹೆದರಿಕೆ ಬ್ಯಾಡ ಎಂದರು, ಕುಮಾರಸ್ವಾಮಿಯವರ ಪತ್ರಿಕಾಗೋಷ್ಠಿಯಲ್ಲಿ ನೀವು ಒಂದು ವಾರದಲ್ಲಿ ಮುಖ್ಯಮಂತ್ರಿಯಾಗಲು ಹುನ್ನಾರ ನಡೆಸಿದ್ದೀರಲ್ಲ ಎಂದು ಪ್ರಶ್ನಿಸಿದಾಗ ನನ್ನನ್ನೇ ದರುಗುಟ್ಟಿ ನೋಡಿದ ಕುಮಾರಸ್ವಾಮಿ ಹಂಗೇನಿಲ್ಲ ಬ್ರದರ್ ಎಂದರು.

ಪತ್ರಿಕಾಗೋಷ್ಠಿಯ ನಂತರ ನನ್ನ ರೂಂ ಒಳಗೆ ಕರೆಸಿಕೊಂಡ ಕುಮಾರಸ್ವಾಮಿ ಎಲ್ಲರನ್ನೂ ಹೊರ ಕಳಿಸಿದರು. ನನ್ನ ಎಲ್ಲಾ ಇತಿಹಾಸವನ್ನೆಲ್ಲಾ ತಿಳಿದುಕೊಂಡ ಕುಮಾರಸ್ವಾಮಿಯವರು, ಈ ವಿಷಯ ನಿಮಗೆ ಹೇಗೆ ತಿಳಿಯಿತು ಎಂದು ಕೇಳಿದರು, ನಾನು ನನ್ನ ಪತ್ರಿಕಾ ಧರ್ಮ ಕಾಪಾಡಬೇಕಾಗಿರುವುದರಿಂದ ಸುದ್ದಿಯ ಮೂಲ ತಿಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ, ಒಂದು ಗಂಟೆ ನನ್ನ ಅವರ ಮಾತುಕತೆ ನಡೆಯಿತು, ನನ್ನ ಜೊತೆ ಬನ್ನಿ ಬ್ರದರ್ ನಿಮಗೆ ಏನು ಬೇಕೋ ಅದೆಲ್ಲಾ ನಾನು ಮಾಡುತ್ತೇನೆ ಅಂದರು, ನಾನು ಯಾವುದಕ್ಕೂ ಜಗ್ಗದಿದ್ದಾಗ ಒಳ್ಳೆಯದಾಗಲಿ ಬ್ರದರ್ ಎಂದು ಕಳಿಸಿದರು, ಅದಾದ ಒಂದೇ ವಾರಕ್ಕೆ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಅವರನ್ನು ಇಳಿಸಿ, ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು, ಬಿ.ಎಸ್.ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾದರು.

ವಾಟಳ್ ನಾಗರಾಜು ಅವರು ಬೆಂಗಳೂರು ಬಿಟ್ಟು ತುಮಕೂರಿನಲ್ಲಿ ತಮಟೆ ಚಳುವಳಿ, ಕತ್ತೆಗಳ ಮೆರವಣಿಗೆ ಮಾಡುತ್ತಿದ್ದರು, ವಾರಕ್ಕೊಮ್ಮೆ ಚಳುವಳಿ ಅಂತ ಪತ್ರಿಕಾಗೋಷ್ಠಿ ಕರೆಯುತ್ತಿದ್ದರು, ಪತ್ರಿಕಾಗೋಷ್ಠಿಯೊಂದರಲ್ಲಿ ಬೆಂಗಳೂರು ಬಿಟ್ಟು ತುಮಕೂರಿಗೆ ಬಂದಿದ್ದೀರಾ ಬೆಂಗಳೂರಲ್ಲಿ ತಮಟೆ ಬಡಿಯುವವರು, ಕತ್ತೆಗಳು ಚಳುವಳಿ ಮಾಡಲು ಸಿಗುತ್ತಿಲ್ಲವೆ ಎಂದು ಕೇಳಿದಾಗ ಕೆಂಡಮಂಡಲರಾಗಿ ಪತ್ರಿಕಾಗೋಷ್ಠಿ ಬರಕಾಸ್ತು ಮಾಡಿ ಹೊರಟು ಹೋದವರು ಇಂದಿನವರೆಗೂ ಅವರು ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿಲ್ಲ.

1999ರಲ್ಲಿ ಎಸ್.ಎಂ.ಕೃಷ್ಣ ಅವರು ತುಮಕೂರಿನಲ್ಲಿ ಶಂಖನಾದದ ಮೂಲಕ ಚುನಾವಣಾ ಪ್ರಚಾರ ಆರಂಭಿಸಲು ಪತ್ರಿಕಾಗೋಷ್ಠಿ ಕರೆದಿದ್ದರು, ನನ್ನ ಗೆಳೆಯರೊಬ್ಬರು ದೆಹಲಿ ಎಐಸಿಸಿ ಕಚೇರಿಯಿಂದ ಪೋನ್ ಮಾಡಿ ಇನ್ನ 3 ದಿನದಲ್ಲಿ ಎಸ್.ಎಂ.ಕೃಷ್ಣ ಅವರು ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಪ್ರಶ್ನಿಸು ಅಂದರು, ಈ ಪ್ರಶ್ನೆಯನ್ನು ಅವರಿಗೆ ಕೇಳಿದಾಗ ನಾನು ಅಂತಹ ಪ್ರಯತ್ನ ಮಾಡಿಲ್ಲ ಎಂದರು, ಅದಾದ ಮೂರೇ ದಿನದಲ್ಲಿ ಅವರು ಕೆಪಿಸಿಸಿ ಅಧ್ಯಕ್ಷರಾದರು, ಚುನಾವಣಾ ಪ್ರಚಾರದ ಶಂಖನಾದ ಉದ್ಘಾಟನೆಗೆ ಮತ್ತೆ ಬಂದಾಗ ನೀವು ಕೆಪಿಸಿಸಿ ಅಧ್ಯಕ್ಷರಾಗಲು ಲಾಭಿ ನಡೆಸಿಲ್ಲ ಅಂದ್ರಲ್ಲ ಅಂದಿದ್ದಕ್ಕೆ ಹೈಕಮಾಂಡ್‍ನತ್ತ ಕೈ ತೋರಿಸಿ, ಪತ್ರಿಕಾಗೋಷ್ಠಿ ನಂತರ ನನಗೆ ಕೈ ಕುಲಕಿ ನಿಮ್ಮಂತ ಪತ್ರಕರ್ತರು ಇರಬೇಕೆಂದರು. ಹೀಗೆ ಹೇಳುತ್ತಾ ಹೋದರೆ ನೂರು ಪುಟಗಳನ್ನು ಬರೆಯಬಹುದು.

ಮೈತ್ರಿನ್ಯೂಸ್ ಪತ್ರಿಕೆಗೆ ಈಗ 10 ವರ್ಷ ತುಂಬಿತು, ಮೈತ್ರಿ ವೆಬ್ ಪೋರ್ಟಲ್‍ಗೆ 2ವರ್ಷ ತುಂಬಿತು. ನನ್ನ ಪತ್ರಿಕಾ ವೃತ್ತಿಯ ಜರ್ನಿಗೆ ಬರೋಬರಿ 36 ವರ್ಷ ತುಂಬಿತು, ನಾನು ಪತ್ರಕರ್ತ ಎಂದು ಕಿರೀಟ ಇಟ್ಟುಕೊಳ್ಳಲಿಲ್ಲ, ಪೀತ ಪತ್ರಿಕೋದ್ಯಮ ಮಾಡಲಿಲ್ಲ, ಆದಷ್ಟು ಜನರ, ಈ ದೇಶದ, ಈ ನೆಲದ, ಪ್ರಜಾಪ್ರಭುತ್ವದ ಮತ್ತು ಸಂವಿಧಾನದಡಿಯಲ್ಲಿ ಪತ್ರಿಕೆ ಮತ್ತು ಪತ್ರಕರ್ತನಾಗಿ ಕಾರ್ಯ ನಿರ್ವಹಿಸಿದ್ದೇನೆ, ಇದುವರೆವಿಗೂ ಯಾರ ಬಳಿಯೂ ಹೋಗಿ ಸಲಾಮು ಹೊಡೆದಿಲ್ಲ, ಯಾರ ಮುಲಾಜಿಗೂ ಒಳಗಾಗಿಲ್ಲ, ಯಾರನ್ನೂ ಒಲೈಸಿಲ್ಲ, ಯಾರ ಮುಂದೆಯೂ ತಲೆಬಾಗಿಲ್ಲ ಇದುವರೆವಿಗೂ, ನನ್ನದೇ ಆದ ಒಂದು ಸಿದ್ಧಾಂತದಡಿ ಪತ್ರಕರ್ತನಾಗಿ ನಡೆಯುತ್ತಾ ಇದ್ದೇನೆ, ನನಗೆ ಜಾತಿ, ಧರ್ಮ ಇಲ್ಲ, ನನಗಿರುವುದು ಪತ್ರಿಕಾ ಧರ್ಮವೊಂದೇ.

ನನ್ನ ಪತ್ರಿಕಾ ಸೇವೆ ಪರಿಗಣಿಸಿ ಉತ್ತಮ ಪರಿಸರ ವರದಿಗಾಗಿ ವೈ.ಕೆ.ರಾಮಯ್ಯ ಪ್ರಶಸ್ತಿಯನ್ನು ಕಾರ್ಯನಿರತ ಪತ್ರಕರ್ತರ ಸಂಘ, ತುಮಕೂರು, ಅವರು ನೀಡಿ ಸನ್ಮಾನಿಸಿರುವುದು.

ಪತ್ರಕರ್ತನಾಗಿ ನನಗಲ್ಲದಿದ್ದರೂ ಹಲವರಿಗೆ ನನ್ನ ಬಳಿ ಬಂದವರಿಗೆ ನನ್ನ ಕೈಲ್ಲಾದ ಸಹಾಯ ಹಸ್ತ ನೀಡಿದ್ದೇನೆ, ನನ್ನ ಕೈಯಲ್ಲಿ ಆಗದಿದ್ದರೆ ಆಗುವವರಿಗೆ ಮಾಡಿ ಕೊಡಿ ಎಂದು ಜಬರ್‍ದಸ್‍ನಿಂದ ಹೇಳಿದ್ದೇನೆ. ಆ ಮುಗ್ಧ ಜನರ ಕೆಲಸವಾದಾಗ ಬಂದು ವಿನಮ್ರದಿಂದ ನನಗೆ ತೋರಿಸುವ ಪ್ರೀತಿ, ಅವರು ಬೆಳೆದ ಹಣ್ಣೋ, ದವಸವನ್ನೋ, ಕೋಳಿಯನ್ನೋ ತಂದು ಮುಂದೆ ನಿಂತಾಗ ನನಗೆ ಮಾತನಾಡಲು ಬಾಯಿ ಬರುವುದಿಲ್ಲ ಏಕೆಂದರೆ ಅವರದ್ದು ಕಲ್ಮಶವಿಲ್ಲದ ಪ್ರೀತಿ.

ನನಗೆ ಅಪಾರ ಗೆಳೆಯರಿದ್ದಾರೆ, ಆ ಗೆಳೆಯರೆಲ್ಲಾ ಒಂದು ತಾತ್ವಿಕ ನೆಲೆಯಿಂದ ಬಂದವರು, ನಾವೆಲ್ಲಾ ಸಮಾಜಕ್ಕೆ, ಈ ನೆಲದ ಮಣ್ಣಿಗೆ ಏನಾದರೂ ಮಾಡೋಣ ಎಂದುಕೊಂಡು ಸಾಗುತ್ತಿರುವವರು, ನನಗೆ ಹಲವಾರು ಜನ ಕೇಳುತ್ತಾರೆ ದುಡ್ಡು ಏಕೆ ಮಾಡಲಿಲ್ಲ ಅಂತ, ನನಗೆ ದುಡ್ಡಿಲ್ಲ ಅಂತ ಎಂದೂ ಅನ್ನಿಸಿಲ್ಲ, ದುಡ್ಡು ಪ್ರೀತಿ, ಕರುಣೆ, ಮೈತ್ರಿಯನ್ನು ನೀಡಲಾರದು, ಹಸಿದವನಿಗೆ ಊಟ ಕೊಟ್ಟಾಗ, ಬಾಯಾರಿದವೆನಿಗೆ ನೀರು ಕೊಟ್ಟಾಗ ಮಾತ್ರ ನಮ್ಮಲ್ಲಿ ಮನುಷ್ಯತ್ವ ಇದೆ ಅಂದುಕೊಳ್ಳಲು ಸಾಧ್ಯ.

ಇಂದಿಗೂ ನನಗೆ ಪತ್ರಕರ್ತನಾಗಿ ನನಗೆ ಅನ್ನಿಸಿದ್ದನ್ನು ಬರೆಯುವುದು, ಹಂಚಿಕೊಳ್ಳುವುದು ತುಂಬಾ ಪ್ರೀತಿಯದು, ನಾನು ಇಷ್ಟು ದೂರ ಜರ್ನಿ ಮಾಡಲು ನನಗೆ ಪ್ರೀತಿ, ಬೈಗುಳ, ಜಗಳ, ಮುನಿಸು, ಕಟೋರವಾಗಿ ಕೆಲ ಸತ್ಯಗಳನ್ನು ಹೇಳಿದ ನನ್ನ ಗೆಳೆಯರು, ಹಿತೈಷಿಗಳಿಗೆ ಚಿರಋಣಿ.

ಪತ್ರಕರ್ತನಾದವನು ಓದಬೇಕು, ಯಾರೇ ಪತ್ರಿಕಾಗೋಷ್ಠಿ ಕರೆಯಲಿ, ಸಂದರ್ಶನಕ್ಕೆ ಹೋಗುವಾಗ ಅಧ್ಯಯನ ಮತ್ತು ವಿಷಯ ತಿಳುವಳಿಕೆ ಮುಖ್ಯ. ಆ ಸಮಯಕ್ಕಷ್ಟೇ ನೂಲುವುದು ಪತ್ರಿಕಾ ಧರ್ಮವಲ್ಲ. ನಿಜವಾದ ಪತ್ರಕರ್ತ ಆಮಿಷಗಳಿಗೆ ಒಳಗಾಗಲಾರ, ಒಲೈಸಲಾರ. ಧೃಡತೆಯಿಂದ ಮಾತ್ರ ಅವನು ಪತ್ರಿಕಾ ಕ್ಷೇತ್ರದಲ್ಲಿ ಉಳಿಯ ಬಲ್ಲ.

ಮುಂದೆಯೂ ನನ್ನ ಪತ್ರಿಕೆಗೆ, ನನಗೆ ನಿಮ್ಮ ಪ್ರೀತಿ ಹೀಗೆಯೇ ಇರಲಿ. ಸಿಕ್ಕಾಗ ನಗೋಣ, ಕಿಚಾಯಿಸೋಣ, ಬೇಜಾಗಿದ್ದರೆ ಅದನ್ನು ಆಚೆ ಹಾಕೋಣ.

ಪ್ರೀತಿಯಿಂದ
ವೆಂಕಟಾಚಲ.ಹೆಚ್.ವಿ.
ಸಂಪಾದಕರು, ಮೈತ್ರಿನ್ಯೂಸ್,
ತುಮಕೂರು.

Leave a Reply

Your email address will not be published. Required fields are marked *