ಸ್ವಾಧೀನ ಭೂಮಿಗೆ-ಪರಿಹಾರಕ್ಕೆ ಜಿಲ್ಲಾಧಿಕಾರಿ ಸೂಚನೆ

ತುಮಕೂರು : ಜಿಲ್ಲೆಯಲ್ಲಿ ಕೈಗೊಂಡಿರುವ ರಾಷ್ಟ್ರೀಯ ಹೆದ್ದಾರಿ-206, ಎತ್ತಿನ ಹೊಳೆ, ಭದ್ರಾ ಮೇಲ್ದಂಡೆ, ಹೇಮಾವತಿ ನಾಲೆ, ತುಮಕೂರು-ರಾಯದುರ್ಗ ಹಾಗೂ ತುಮಕೂರು-ದಾವಣಗೆರೆ ರೈಲ್ವೆ ಅಭಿವೃದ್ಧಿ, ಕೈಗಾರಿಕಾ ಪ್ರದೇಶಾಭಿವೃದ್ಧಿ ಯೋಜನೆಗಳಿಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಯ ಮಾಲೀಕರಿಗೆ ಶೀಘ್ರ ಪರಿಹಾರವನ್ನು ಪಾವತಿಸಿ ವರದಿ ನೀಡಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಭೂ-ಪರಿಹಾರ ಕುರಿತು ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ-206ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕೈಗೊಂಡಿರುವ 52 ಕಿ.ಮೀ. ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುವುದರಿಂದ ಬಾಕಿ ಇರುವ ಪರಿಹಾರ ಮೊತ್ತವನ್ನು ಕೂಡಲೇ ಸಂಬಂಧಿತ ಭೂ ಮಾಲೀಕರಿಗೆ ಪಾವತಿಸಬೇಕೆಂದು ಸೂಚನೆ ನೀಡಿದಾಗ, ವಿಶೇಷ ಭೂಸ್ವಾಧೀನಾಧಿಕಾರಿ ಎಸ್.ಎ. ಜಗದೀಶ್ ಮಾಹಿತಿ ನೀಡುತ್ತಾ, ಗುಬ್ಬಿ ತಾಲ್ಲೂಕು ಹಿಂಡಿಗನಹಳ್ಳಿ ಹಾಗೂ ತಿಪಟೂರು ತಾಲ್ಲೂಕು ಬಿಳಿಗೆರೆ ಗ್ರಾಮದ ರೈತರಿಗೆ ಪರಿಹಾರ ನೀಡಲು ಬಾಕಿ ಇದೆ. ಕಳೆದ ಸಭೆಯಲ್ಲಿ ಸೂಚನೆ ನೀಡಿದಂತೆ 1.47ಕೋಟಿ ರೂ.ಗಳ ಭೂ-ಪರಿಹಾರವನ್ನು ಈಗಾಗಲೇ ರೈತರಿಗೆ ಪಾವತಿಸಲಾಗಿದೆ. ಶೀಘ್ರದಲ್ಲೇ ಉಳಿದ ಪರಿಹಾರ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಎತ್ತಿನ ಹೊಳೆ ಯೋಜನೆಗೆ ಸಂಬಂಧಿಸಿದಂತೆ ಪ್ರತೀ ವಾರ 10 ಕೋಟಿ ರೂ.ಗಳ ಭೂ-ಪರಿಹಾರ ವಿತರಿಸಲು ಗುರಿ ನೀಡಲಾಗಿದ್ದು, ಆದರೆ ಕಳೆದೆರಡು ವಾರದ ಅವಧಿಯಲ್ಲಿ ನ್ಯಾಯಾಲಯಕ್ಕೆ ಠೇವಣಿ ಇಟ್ಟಿರುವ ಮೊತ್ತ ಸೇರಿ ಒಟ್ಟು 15.40ಕೋಟಿ ರೂ.ಗಳನ್ನು ಮಾತ್ರ ರೈತರಿಗೆ ಪರಿಹಾರ ವಿತರಿಸಲಾಗಿದೆ. ಭೂ-ಪರಿಹಾರ ಪಾವತಿಯನ್ನು ಇನ್ನಷ್ಟು ಚುರುಕುಗೊಳಿಸುವುದರೊಂದಿಗೆ ಬಾಕಿ ಇರುವ ಕಡತಗಳನ್ನು ಬೇಗ ವಿಲೇವಾರಿ ಮಾಡಲು ಕ್ರಮಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.

ಎತ್ತಿನ ಹೊಳೆ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಜಮೀನಿನ ರೈತರಿಗೆ ಭೂ ಪರಿಹಾರ ನೀಡಲು ಸರ್ಕಾರದಿಂದ 200 ಕೋಟಿ ರೂ. ಹಣ ಬಿಡುಗಡೆಯಾಗಿದ್ದು, ಬೇಗನೆ ಅವಾರ್ಡ್ ಮಾಡಿ ರೈತರಿಗೆ ಪರಿಹಾರವನ್ನು ತಲುಪಿಸಬೇಕೆಂದು ನಿರ್ದೇಶನ ನೀಡಿದರು.

ಗುಬ್ಬಿ ತಾಲ್ಲೂಕಿನ ಹರೇನಹಳ್ಳಿ ಹಾಗೂ ತಿಪಟೂರು ತಾಲ್ಲೂಕಿನ ಕರಡಿ ನ್ಯಾಕೇನಹಳ್ಳಿ, ಬೊಮ್ಮಲಾಪುರ, ಚಿಕ್ಕನಾಯಕನಹಳ್ಳಿಯ ಗ್ಯಾರೇಹಳ್ಳಿ, ಮಲಗೊಂಡನಹಳ್ಳಿ, ತುಮಕೂರು ತಾಲ್ಲೂಕಿನ ಗಂಗನಾಳ ಹಾಗೂ ಬೊಮ್ಮನಹಳ್ಳಿ ರೈತರಿಂದ ಅಗತ್ಯ ದಾಖಲೆಗಳನ್ನು ಪಡೆದು ಪರಿಹಾರ ವಿತರಿಸಬೇಕೆಂದು ಸೂಚಿಸಿದರು.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ವಸಂತ ನರಸಾಪುರದಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ 5ನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ವಿಶೇಷ ಭೂಸ್ವಾಧೀನಾಧಿಕಾರಿ ಸೋಮಪ್ಪ ಕಡಕೋಳ ಅವರಿಗೆ ನಿರ್ದೇಶನ ನೀಡಿದರು.

ಕೊಳಗೇರಿ ನಿವಾಸಿಗಳಿಗಾಗಿ ನಗರದ ದಿಬ್ಬೂರಿನಲ್ಲಿ ನಿರ್ಮಿಸಿರುವ 1200 ಮನೆಗಳ ಪೈಕಿ 500 ಫಲಾನುಭವಿಗಳಿಗೆ ಮಾತ್ರ ಹಂಚಿಕಾತಿ ಪತ್ರ ನೀಡಲಾಗಿದೆ. ಉಳಿದ 700 ಫಲಾನುಭವಿಗಳಿಗೆ ಹಂಚಿಕಾತಿ ಪತ್ರವನ್ನು ಆದಷ್ಟು ಬೇಗ ನೀಡಬೇಕೆಂದು ಕೊಳಚೆ ಅಭಿವೃದ್ಧಿ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿವೇಕಾನಂದ ವಾರ್‍ಕರ್ ಅವರು ನಿರ್ದೇಶಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪವಿಭಾಗಾಧಿಕಾರಿ ಗೌರವ ಕುಮಾರ್ ಶೆಟ್ಟಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಾರದಮ್ಮ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ರವೀಶ್, ಕೆಐಎಡಿಬಿ ಕಾರ್ಯನಿರ್ವಾಹಕ ಇಂಜಿನಿಯರ್ ಲಕ್ಷ್ಮೀಶ್ ಸೇರಿದಂತೆ ಅರಣ್ಯ, ಮತ್ತಿತರ ಇಲಾಖಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *