ಶ್ರೀರಂಗ ಏತನೀರಾವರಿ ಯೋಜನೆ ನಿಲ್ಲಿಸದಿದ್ದರೆ ಮೇ 16ರಿಂದ ಹೋರಾಟ

ತುಮಕೂರು :ತುಮಕೂರು ಜಿಲ್ಲೆಗೆ ಮಂಜೂರಾಗಿರುವ 24.08 ಟಿ.ಎಂ.ಸಿ ನೀರಿನಲ್ಲಿಯೇ ಏಕ್ಸ್‍ಪ್ರೆಸ್ ಕೇನಾಲ್ ಮೂಲಕ ರಾಮನಗರ ಜಿಲ್ಲೆ ಮಾಗಡಿ ತಾಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಶ್ರೀರಂಗ ಏತನೀರಾ ವರಿ ಯೋಜನೆಯನ್ನು ಮೇ.15ರೊಳಗೆ ಸಂಪೂರ್ಣವಾಗಿ ಸ್ಥಗಿತಗೊಳಿಸದಿದ್ದರೆ, ಮೇ.16ರಿಂದ ತುಮಕೂರು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು,ರೈತ ಸಂಘಟನೆಗಳು,ಮಠಾಧೀಶರುಗಳ ಪಕ್ಷಾತೀತವಾಗಿ ಏಕ್ಸ್‍ಪ್ರೆಸ್ ಕೇನಾಲ್ ಮುಚ್ಚುವ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಹೇಮಾವತಿ ಜಲಾಶಯದಿಂದ ಕುಣಿಗಲ್ ತಾಲೂಕಿಗೆ 3 ಟಿ.ಎಂ.ಸಿ ನೀರು ಹಂಚಿಕೆಯಾಗಿದ್ದು,ನಾಲೆಯ 0-241 ಕಿ.ಮಿ.ವರೆಗೆ ನೀರು ತೆಗೆದುಕೊಂಡು ಹೋಗಲು ಸುಮಾರು 751 ಕೋಟಿ ರೂಗಳನ್ನು ಖರ್ಚು ಮಾಡಿ 72-241ರವರೆಗೆ ನಾಲೆಯ ಅಧುನೀಕರಣ ಕಾಮಗಾರಿ ಸಹ ಚಾಲ್ತಿಯಲಿದೆ.ಹಾಗಿದ್ದಾಗ್ಯೂ ನೆರೆಯ ಮಾಗಡಿ ತಾಲೂಕಿಗೆ ನೀರು ತೆಗೆದುಕೊಂಡು ಹೋಗಲು,ಕೆಡಿಪಿ ಸಭೆಯ ನಿರ್ಣಯವನ್ನು ಲಕ್ಕಿಸದೆ ಸರಕಾರಿ ಭೂಮಿ ಇರುವ ಕಡೆ ಕಾಮಗಾರಿಯನ್ನು ಹೇಮಾವತಿ ನಾಲಾ ಅಧಿಕಾರಿಗಳು ಕಾಮಗಾರಿ ಕೈಗೊಂಡಿದ್ದಾರೆ.ಇದರಿಂದ ಜಿಲ್ಲೆಗೆ ಜನರಿಗೆ ಬಹಳ ಅನ್ಯಾಯವಾಗಲಿದೆ ಎಂದರು.

ಏಕ್ಸ್‍ಪ್ರೆಸ್ ಕೆನಾಲ್ ಆರಂಭವಾದರೆ 72 ಕಿ.ಮಿ.ಗಿಂತ ಹಿಂದೆ ಇರುವ ಗುಬ್ಬಿ,ಮಧುಗಿರಿ,ಕೊರಟಗೆರೆ,ತುಮಕೂರು ನಗರ, ಗ್ರಾಮಾಂತರ ತಾಲೂಕುಗಳಿಗೆ ನೀರಿನ ಸಮಸ್ಯೆ ಎದುರಾಗಲಿದೆ.ಕಾಮಗಾರಿ ನಿಲ್ಲಿಸುವಂತೆ ಜಿಲ್ಲೆಯ ಇಬ್ಬರು ಮಂತ್ರಿಗಳಿಗೆ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಮಾಡಲಾಗಿದೆ.ಸರಕಾರ ಮೇ.15ರೊಳಗೆ ಕಾಮಗಾರಿ ನಿಲ್ಲಿಸದಿ ದ್ದರೆ ಮೇ.16 ರಂದು ಆರಂಭವಾಗಿರುವ ಕಾಮಗಾರಿಯನ್ನು ಮುಚ್ಚುವ ಹೋರಾಟವನ್ನು ಜಿಲ್ಲೆಯ ಜನರೊಂದಿಗೆ ಹಮ್ಮಿಕೊಳ್ಳುವುದಾಗಿ ಸೊಗಡು ಶಿವಣ್ಣ ತಿಳಿಸಿದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ,ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರುವ ನೀರಿನಲ್ಲಿಯೇ ತರಾತುರಿಯಲ್ಲಿ ಮಾಗಡಿಗೆ ನೀರು ತೆಗೆದುಕೊಂಡು ಹೋಗಲು ಹಾಲಿ ಇರುವ ನಾಲೆಯ ಮಾರ್ಗವನ್ನು ಬದಲಾಯಿಸಲು ಹೊರಟಿದ್ದಾರೆ.ಜಿಲ್ಲಾ ಕೆಡಿಪಿ ಸಭೆಯ ನಿರ್ಣಯಕ್ಕೂ ಬೆಲೆ ಇಲ್ಲದಂತೆ ಖಾಸಗಿ ಜಮೀನುಗಳನ್ನು ಹೊರತು ಪಡಿಸಿ,ಸರಕಾರಿ ಭೂಮಿಯಲ್ಲಿ ಕಾಮಗಾರಿ ನಡೆಸುತಿದ್ದಾರೆ.ನ್ಯಾಯೋಚಿತವಾಗಿ ಕಾಮಗಾರಿಯನ್ನು ನಿಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು,ಸಹಕಾರಿ ಸಚಿವ ರೊಂದಿಗೆ ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೂ ಮನವಿ ಸಲ್ಲಿಸಿದ್ದೇವೆ. ಸರಕಾರಕ್ಕೆ ಮೇ.15ರವರೆಗೆ ಗಡುವು ನೀಡಿದ್ದು,ಮೇ.16 ರಿಂದ ಜಿಲ್ಲೆಯ ರೈತರು,ಜನಪ್ರತಿನಿಧಿಗಳು,ಮಠಾಧೀಶರೊಂದಿಗೆ ಈಗಾಗಲೇ ನಡೆದಿರುವ ಕಾಮಗಾರಿ ಯನ್ನು ಮುಚ್ಚುವ ಕೆಲಸ ಮಾಡಲಿದ್ದೇವೆ.ಇದಕ್ಕಾಗಿ ಯಾವ ರೀತಿಯ ಹೋರಾಟಕ್ಕೂ ಸಿದ್ದ.ಜಿಲ್ಲೆಯ ಜನರಿಗೋಸ್ಕರ ಜೈಲಿಗೆ ಹೋಗಲು ತಯಾರಿದ್ದೇವೆ ಎಂದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶಗೌಡ ಮಾತನಾಡಿ, ಜಿಲ್ಲೆಗೆ ಹಂಚಿಕೆಯಾಗಿರುವ ನೀರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇದೊಂದು ನಿರ್ಣಾಯಕ ಹೋರಾಟವಾಗಿದೆ.ಜಿಲ್ಲೆಯ ಉಸ್ತುವಾರಿ ಸಚಿವರು, ಸಹಕಾರಿ ಸಚಿವರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು,ಹೋರಾಟಗಾರರು ಈ ಅನ್ಯಾಯವನ್ನು ತಡೆಯುವ ನಿಟ್ಟಿನಲ್ಲಿ ಹೋರಾಟದಲ್ಲಿ ಭಾಗಿಯಾಗಬೇಕಿದೆ ಎಂದರು.

ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ,ಜಿಲ್ಲೆಗೆ ಹಂಚಿಕೆಯಾಗಿರುವ 24.08 ಟಿ.ಎಂ.ಸಿ ನೀರೇ ಸಾಕಾಗುತ್ತಿಲ್ಲ.ಇಂತಹ ಸಂದರ್ಭದಲ್ಲಿ ನಾಲೆಯನ್ನೇ ಡೈವರ್ಟ್ ಮಾಡಿ ಬೇರೆ ಜಿಲ್ಲೆಗೆ ನೀರು ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಟ್ಟರೆ, ಮುಂದಿನ ಪೀಳಿಗೆಗೆ ನಮಗೆ ಶಾಪ ಹಾಕದೆ ಬಿಡದು. ಹಾಗಾಗಿ ಮಾಗಡಿ ತಾಲೂಕಿಗೆ ನೀರು ಹರಿಸಲು ಹಲವು ಮಾರ್ಗಗಳಿವೆ.ಏಕ್ಸ್‍ಪ್ರೆಸ್ ಕೆನಾಲ್ ಕಾಮಗಾರಿ ರದ್ದು ಮಾಡಿ, ಬೇರೆ ಮೂಲದಿಂದ ನೀರು ತರಲು ಪ್ರಯತ್ನಿಸಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವೈ.ಹೆಚ್.ಹುಚ್ಚಯ್ಯ,ಪಿ.ಸಿ.ಲೋಕೇಶ್ವರ್,ದಲೀಪ್‍ಕುಮಾರ್,ಪಂಚಾಕ್ಷರಯ್ಯ,ಪ್ರಭಾಕರ, ಡಾ.ಸಂಜಯನಾಯಕ್,ಸೌಮ್ಯ, ಪುಟ್ಟಕಾಮಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *