ತುಮಕೂರು- ಚುನಾವಣೆಗಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದನ್ನು ಸ್ವಾಗತಿಸುತ್ತೇನೆ. ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಇನ್ನು ಸಮಯ ಇರುವುದರಿಂದ ಮೈತ್ರಿ ಪಕ್ಷಗಳ ನಾಯಕರು ಪ್ರಜ್ವಲ್ ರೇವಣ್ಣ ರವರ ಪೋಟೋ ಹಾಕಿಕೊಂಡು ಮತ ಕೇಳಲಿ, ನಮ್ಮದೇನೂ ಅಭ್ಯಂತರವಿಲ್ಲ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ಬಾಬು ವ್ಯಂಗ್ಯವಾಡಿದರು.
ಈಗಾಗಲೇ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಈ ಎರಡೂ ಪಕ್ಷಗಳ ಮೈತ್ರಿಗೆ ಪ್ರಬುದ್ಧ ಶಿಕ್ಷಕ ಮತದಾರರು ಉತ್ತರ ನೀಡಿದ್ದಾರೆ. ಇನ್ನುಳಿದ ಚುನಾವಣೆಗಳಲ್ಲಿ ಪ್ರಜ್ವಲ್ ರವರ ಫೋಟೋ ಹಾಕಿಕೊಂಡು ಮತ ಕೇಳಲು ಹೋಗಲಿ ಎಂದರು.
ರಮೇಶ್ಬಾಬು ಸಹ ಜೆಡಿಎಸ್ ಪಕ್ಷದಿಂದ ಬಂದವರಲ್ವಾ ಎಂಬ ಪತ್ರಕರ್ತ ಪ್ರಶ್ನೆಗೆ, ದೇವೇಗೌಡರು ಸಹ ಮೂಲ ಕಾಂಗ್ರೆಸ್ ಪಕ್ಷದಿಂದ ಬಂದವರು. ಈ ದೇಶದಲ್ಲಿ ಎಲ್ಲಾ ಪಕ್ಷಗಳಿಗೂ ಮಾತೃ ಪಕ್ಷ ಕಾಂಗ್ರೆಸ್. ಹಾಗಾಗಿ ದೇವೇಗೌಡರು ಸಹ ಕಾಂಗ್ರೆಸ್ ಪಕ್ಷದಿಂದ ಬಂದವರು ಎಂದು ಉತ್ತರಿಸಿದರು.
ನಾನು, ಎಸ್.ಆರ್. ಶ್ರೀನಿವಾಸ್, ಮಧು ಬಂಗಾರಪ್ಪ, ಎಂ.ಸಿ. ನಾಣಯ್ಯ, ಪಿ.ಜಿ.ಆರ್. ಸಿಂಧ್ಯಾ ರವರನ್ನೆಲ್ಲಾ ಕುಮಾರಸ್ವಾಮಿ ಅವರು ಆಚೆ ಕಳುಹಿಸುವಂತಹ ವಾತಾವರಣ ಸೃಷ್ಠಿ ಮಾಡಿದರು. ನಾವ್ಯಾರು ನಾವಾಗಿಯೇ ಆಚೆ ಬಂದವರಲ್ಲ ಎಂದರು.
ಜೆಡಿಎಸ್ನಲ್ಲಿ ಕುಮಾರಸ್ವಾಮಿರವರಿಗಿಂತ ನಾನೇ ಸೀನಿಯರ್. ಅವರು ನಡೆಸಿಕೊಂಡ ರೀತಿಯಿಂದ ಎಲ್ಲರೂ ಬೇಸರಗೊಂಡು ಜೆಡಿಎಸ್ ಪಕ್ಷವನ್ನು ಬಿಟ್ಟು ಬಂದಿದ್ದೇವೆ ಎಂದರು.