ತುಮಕೂರು: ಡಾ. ಬಿ. ಆರ್. ಅಂಬೇಡ್ಕರ್ ಸಮಾಜ ಸುಧಾರಣೆಯ ನೇತಾರರಾಗಿ ಜಾತಿ, ಧರ್ಮವನ್ನು ಮೀರಿ ಬೆಳೆದ ನಾಯಕ ಎಂದು ಬೆಂಗಳೂರಿನ ನಾಗರಿಕ ಹಕ್ಕುಗಳು ಮತ್ತು ಜಾರಿ ನಿರ್ದೇಶನಾಲಯದ ಆರಕ್ಷಕ ಅಧೀಕ್ಷಕರಾದ ಎಚ್. ಡಿ. ಆನಂದಕುಮಾರ್ ಹೇಳಿದರು.
ತುಮಕೂರು ವಿವಿಯ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರವು ಮಂಗಳವಾರ ಆಯೋಜಿಸಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರ 133ನೇ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜವನ್ನು ಸಮಾಜದಿಂದಲೇ ತಿದ್ದುವ ಉತ್ತಮ ಕಾರ್ಯವನ್ನು ಬಾಬಾ ಸಾಹೇಬರು ಮಾಡಿದರು. ವಿದ್ಯಾವಂತ ಸಮಾಜದಿಂದ ಮಾತ್ರ ಸಮಾಜ ಬದಲಾಗಲು ಸಾಧ್ಯ ಎಂದು ನಂಬಿದ್ದರು. ಜಾತಿ, ಧರ್ಮಕ್ಕೆ ಬಾಬಾ ಸಾಹೇಬರನ್ನು ಸೀಮಿತ ಮಾಡಿರುವುದು ವಿಪರ್ಯಾಸವೆಂದರು.
ಪುರುಷರ ಸಮನಾಗಿ ಮಹಿಳೆಯರು ಎಲ್ಲ ಸ್ತರಗಳಲ್ಲೂ ಕಾರ್ಯನಿರ್ವಹಿಸಲು ಕಾರಣ ಅಂಬೇಡ್ಕರ್. ಮಹಿಳಾ ಮಾತೃತ್ವ ರಜೆ, ಪವರ್ ಗ್ರಿಡ್ ಯೋಜನೆಗಳು, ವಿವಿಧೋದ್ದೇಶ ಅಣೆಕಟ್ಟು ಯೋಜನೆಗಳು, ವಿದ್ಯುತ್ ಉತ್ಪಾದನಾ ಯೋಜನೆಗಳು, ನೀರಾವರಿ ಯೋಜನೆಗಳು- ವಿವಿಧ ಅಭಿವೃದ್ಧಿ ಯೋಜನೆಯ ಹರಿಕಾರರು ಅಂಬೇಡ್ಕರ್ ಎಂದು ತಿಳಿಸಿದರು.
ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಅಪ್ಪಗೆರೆ ಸೋಮಶೇಖರ್ ಮಾತನಾಡಿ, ಶೋಷಿತರ, ದಮನಿತರ ಧ್ವನಿಯಾದವರು ಅಂಬೇಡ್ಕರ್. ‘ಮಾನಸಿಕ ಗುಲಾಮಗಿರಿಯಿಂದ ಬಿಡುಗಡೆಗೊಳ್ಳದೆ ಯಾವುದೇ ಸಮುದಾಯ ಮುನ್ನೆಲೆಗೆ ಬರುವುದಿಲ್ಲ’ ಎಂದು ಸಮಾಜಕ್ಕೆ ತಿಳಿಸಿದವರು ಅಂಬೇಡ್ಕರ್ ಎಂದರು.
ಅಂಬೇಡ್ಕರ್ ಅವರನ್ನು ಮರೆತ ಭಾರತಕ್ಕಾಗಲಿ, ಭಾರತೀಯರಿಗಾಗಲಿ ಭವಿಷ್ಯವಿಲ್ಲ. ಸಂವಿಧಾನ ಪೂರ್ವ ಭಾರತದಲ್ಲಿ ಶೋಷಿತರ ಅಕ್ಷರಾಭ್ಯಾಸ ನಿಷೇದಿಸಲಾಗಿತ್ತು. ಅಸಮಾನತೆ ತಾಂಡವವಾಡುತ್ತಿತ್ತು. ಅಂಬೇಡ್ಕರ್ ಅವರ ಸಂವಿಧಾನ ಇವೆಲ್ಲ ಅನ್ಯಾಯಗಳಿಗೂ ತೆರೆ ಎಳೆಯಿತು ಎಂದರು.
ಅಂಬೇಡ್ಕರ್ ಕೃಷಿ ತಜ್ಞರಾಗಿ, ಕಾರ್ಮಿಕ ತಜ್ಞರಾಗಿ, ಅಹಿಂಸಾವಾದಿಯಾಗಿ ಭಾರತದ ಪ್ರಜೆಗಳಿಗೆ ತಮ್ಮ ಹಕ್ಕುಗಳನ್ನು ತಿಳಿಸಿಕೊಟ್ಟರು. ಎಲ್ಲ ಸವಲತ್ತುಗಳನ್ನು ಪಡೆದ ಭಾರತದ ಪ್ರಜೆಗಳನ್ನು ಸಂವಿಧಾನ ಅನಕ್ಷರಸ್ತ ಭಾರತದ ಪ್ರಜೆಗಳೆಂದು ಕರೆಯುವ ಪರಿಸ್ಥಿತಿ ಈಗ ಎದುರಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ಸಂವಿಧಾನದ ಹಕ್ಕಿನೊಂದಿಗೆ ಪ್ರತಿ ಪ್ರಜೆಗೂ ಜವಾಬ್ದಾರಿ ಇರುತ್ತದೆ. ಅಂಬೇಡ್ಕರ್ ಅವರನ್ನು ಜಾತಿ, ಧರ್ಮಗಳಿಗೆ ಸೀಮಿತ ಮಾಡಿದವರು ಸಂಕುಚಿತರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ವಸತಿ, ಊಟದ ಸೌಲಭ್ಯಗಳನ್ನು ವಿವಿಯು ನೀಡಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ದಾರಿದೀಪವಾಗುತ್ತಿದೆ ಎಂದರು.
ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಪೀಠದ ಸಂಯೋಜಕ ಪ್ರೊ. ಕೇಶವ ಸ್ವಾಗತಿಸಿದರು. ಪ್ರೊ. ರಮೇಶ್ ಬಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಬಸವರಾಜ ಜಿ. ವಂದಿಸಿದರು. ಡಾ. ರೂಪೇಶ್ ಕುಮಾರ್ ಎ. ನಿರೂಪಿಸಿದರು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ., ಸಿಂಡಿಕೇಟ್ ಸದಸ್ಯ ದೇವರಾಜ್ ಎಸ್., ಪತ್ರಕರ್ತ ರಾಜೇಶ್ ಉಪಸ್ಥಿತರಿದ್ದರು.