ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಹೋರಾಟಕ್ಕೆ ಬೆಂಬಲ ಸೂಚಿಸುವುದಿಲ್ಲ-ಶಾಸಕ ಎಸ್.ಆರ್.ಶ್ರಿನಿವಾಸ್

ತುಮಕೂರು- ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಮೊದಲಿನಿಂದಲೂ ನನ್ನ ವಿರೋಧವಿದೆ. ಹಾಗಂತ ಇವರು ಯಾರೋ ಮಾಡುವ ಹೋರಾಟಕ್ಕೆ ಬೆಂಬಲ ಸೂಚಿಸುವುದಿಲ್ಲ. ಬದಲಾಗಿ ಅಗತ್ಯ ಬಿದ್ದರೆ ಪ್ರತ್ಯೇಕವಾಗಿ ಹೋರಾಟ ಮಾಡುತ್ತೇನೆ ಎಂದು ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.

ಜಿಲ್ಲೆಯ ಜನರು, ರೈತರ ಹಿತ ಕಾಯುವುದು ನಮ್ಮೆಲ್ಲರ ಕರ್ತವ್ಯ. ಮುಖ್ಯಮಂತ್ರಿಗಳು ಸಭೆ ಕರೆದು ಚರ್ಚಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಆ ಕೆಲಸ ಆಗದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಸರ್ಕಾರದ ಭಾಗವಾಗಿರುವುದರಿಂದ ಈ ರೀತಿಯ ಕ್ರಮಗಳು ಕೈಗೊಂಡರೆ ಮುಜುಗರವಾಗುತ್ತದೆ. ಹಾಗಾಗಿ ಮೊದಲು ಸಭೆ ಕರೆದು ಕುಣಿಗಲ್‍ಗೆ 3 ಟಿಎಂಸಿ ನೀರು ಅಲೋಕೇಷನ್ ಆಗಿರುವ ಬಗ್ಗೆ ಜಿಲ್ಲೆಯ ರೈತರಿಗೆ ಮನವರಿಕೆ ಮಾಡಬೇಕು ಎಂದು ಹೇಳಿದ್ದೇವೆ. ಇದಕ್ಕೆ ಮುಖ್ಯಮಂತ್ರಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿ ಸಭೆ ಕರೆದು ಚರ್ಚಿಸುವುದಾಗಿ ಹೇಳಿದ್ದಾರೆ. ಅಲ್ಲಿಯವರೆಗೂ ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸುವಂತೆಯೂ ತಿಳಿಸಲಾಗಿದೆ ಎಂದರು.

ನಾನು ಯಾರಿಗೋ ಹೆದರಿಕೊಂಡು, ಯಾರನ್ನೋ ಮೆಚ್ಚಿಸುವ ಸಲುವಾಗಿ ಕೆಲಸ ಮಾಡುವವನಲ್ಲ. ನಾನು ಏನು ಎನ್ನುವುದು ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ರವರಿಗೂ ಗೊತ್ತಿದೆ. ವಿನಾ ಕಾರಣ ನನ್ನ ಬಗ್ಗೆ ಎಲ್ಲೆಂದರಲ್ಲಿ ಮಾತನಾಡಿದರು ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

ನಾನು ಹೇಮಾವತಿ ಚಾನಲ್ ಮೇಲೆ ಓಡಾಡಿಕೊಂಡು ಗುಬ್ಬಿ ತಾಲ್ಲೂಕಿಗೆ ಹೇಮಾವತಿ ನೀರು ಬಿಡಿಸಿದ ವ್ಯಕ್ತಿ. ನಮ್ಮ ತಾಲ್ಲೂಕಿನ ರೈತರ ಹಿತವನ್ನು ಯಾವ ರೀತಿ ಕಾಯಬೇಕು ಎಂಬುದು ನನಗೆ ಗೊತ್ತಿದೆ ಎಂದು ಅವರು ಎಂಟಿಕೆ ಹೇಳಿಕೆಗೆ ತಿರುಗೇಟು ನೀಡಿದರು.

ಕುಣಿಗಲ್‍ಗೆ 3 ಟಿಎಂಸಿ ನೀರು ಅಲೋಕೇಷನ್ ಆಗಿದೆ ಎಂದು ಅವರು ಹೇಳುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ನಮ್ಮ ಜಿಲ್ಲೆಯ ರೈತರು, ಜನಸಾಮಾನ್ಯರ ಸಭೆ ಕರೆದು ಮನವರಿಕೆ ಮಾಡಿಕೊಡಬೇಕು. ಮೊದಲ ಈ ಕೆಲಸ ಆಗಬೇಕಾಗಿದೆ ಎಂದರು.

ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಕಾಮಗಾರಿಯಲ್ಲಿ ಲೋಪವಾಗಿರುವ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೇನೆ. ಅದರ ಆಧಾರದ ಮೇಲೆ ಕೂಲಂಕುಷವಾಗಿ ಕಾಮಗಾರಿ ಪರಿಶೀಲಿಸಿ ವರದಿ ನೀಡುವಂತೆ ಕೆಎಸ್ಸಾರ್ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದರು.

Leave a Reply

Your email address will not be published. Required fields are marked *