ಸೊಗಡು ಶಿವಣ್ಣ ಲಾರಿಗೆ ಅಡ್ಡ ಮಲಗಿದ್ದೇಕೆ, ಅಮೇಲೇನಾಯಿತು.

ತುಮಕೂರು: ಮಾಗಡಿ, ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುವ ಹೇಮಾವತಿ ನಾಲೆಯ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗಾಗಿ ಬೃಹತ್ ಪೈಪ್‍ಗಳನ್ನು ಹೊತ್ತು ತರುತ್ತಿದ್ದ ಲಾರಿಗಳನ್ನು ಭಾನುವಾರ ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಬಳಿ ರೈತರು ತಡೆದು ಲಾರಿಗಳನ್ನು ವಾಪಸ್ ಕಳಿಸಿದರು. ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಪ್ರತಿಭಟನೆ ನಡೆಸಿ ಲಾರಿಗಳನ್ನು ತಡೆದರು. ಮಾಜಿ ಸಚಿವ ಸೊಗಡು ಶಿವಣ್ಣ ಲಾರಿಗೆ ಅಡ್ಡ ಮಲಗಿ ಪ್ರತಿಭಟಿಸಿದರು. ಯಾವುದೇ ಕಾರಣಕ್ಕೂ ಈ ಕೆನಾಲ್ ಕಾಮಗಾರಿ ಮುಂದುವರೆಸಲು ಬಿಡುವುದಿಲ್ಲ ಎಂದರು.

ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಗೊಳಿಸಲು ಒತ್ತಾಯಿಸಿ ನಡೆದಿರುವ ಹೋರಾಟ ತೀವ್ರಗೊಂಡಿದೆ. ಇತ್ತೀಚೆಗೆ ಗುಬ್ಬಿ ತಾಲ್ಲೂಕು ಡಿ.ರಾಂಪುರ ಸಮೀಪ ಕೆನಾಲ್ ಕಾಮಗಾರಿ ನಡೆದಿರುವ ಸ್ಥಳದಲ್ಲಿ ವಿವಿಧ ಪಕ್ಷಗಳ ಶಾಸಕರು, ಮುಖಂಡರು, ರೈತ ಸಂಘಟನೆ, ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ಕೆನಲ್ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದರು. ಈ ನಡುವೆ ಭಾನುವಾರ ನಾಲೆ ನಿರ್ಮಾಕ್ಕಾಗಿ ಸುಮಾರು ಹನ್ನೆರಡು ಅಡಿ ಎತ್ತರದ ಬೃಹತ್ ಪೈಪ್‍ಗಳನ್ನು ಲಾಗಿಗಳಲ್ಲಿ ತರಲಾಗುತ್ತಿತ್ತು. ಪೈಪ್ ತರುತಿದ್ದ ಸುಮಾರು 20 ಲಾರಿಗಳನ್ನು ಮಾರ್ಗ ಮಧ್ಯದಲ್ಲಿ ಸಿ.ಎಸ್.ಪುರ ಬಳಿ ರೈತರು ತಡೆದು ಪ್ರತಿಭಟನೆ ನಡೆಸಿದರು.

ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ವಿವಿಧ ಸಂಘÀಟನೆಗಳ ಮುಖಂಡರು ರೈತರ ಹೋರಾಟದಲ್ಲಿ ಪಾಲ್ಗೊಂಡು ಲಾರಿಗಳನ್ನು ತಡೆದು ವಾಪಸ್ ಕಳುಹಿಸಿದರು.

ಈ ವೇಳೆ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ, ಈ ತಿಂಗಳ 6ರಂದು ಪ್ರತಿಭಟನೆ ನಡೆಸಿದಾಗ ಕಾಮಗಾರಿ ಮುಂದುವರೆಸುವುದಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೂ ಇಂದು ಪೈಪ್‍ಗಳನ್ನು ತಂದು ಕೆಲಸ ಮುಂದುವರೆಸುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ, ಯಾವುದೇ ಕಾರಣಕ್ಕೂ ಕಾಮಗಾರಿ ನಡೆಯಕೂಡದು ಎಂದು ಹೇಳಿದರು.

ಇಷ್ಟು ದೊಡ್ಡ ಪ್ರಮಾಣದ ಪೈಪ್‍ಗಳಲ್ಲಿ ತಂದು ನೀರು ತೆಗೆದುಕೊಂಡು ಹೋದರೆ ಜಿಲ್ಲೆಯ ಜನರಿಗೆ ಹನಿ ನೀರೂ ಸಿಗುವುದಿಲ್ಲ, ನಮ್ಮ ಜನರಿಗೆ ಅನ್ಯಾಯ ಮಾಡಿ ಮಾಗಡಿ, ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುದನ್ನು ನೋಡಿಕೊಂಡು ಸುಮ್ಮನಿರಲಾಗುವುದಿಲ್ಲ. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಸರ್ಕಾರದ ಜೊತೆ ಸೇರಿಕೊಂಡು ರಾಜಕೀಯ ಮಾಡುತ್ತಿದ್ದಾರೆ, ನಾಲಿಗೆ ಮೇಲೆ ಹಿಡಿತವಿಲ್ಲದೆ ಮಾತನಾಡುತ್ತಿದ್ದಾರೆ. ಜನರಿಗೆ ಅನ್ಯಾಯವಾದಾಗ ಪಕ್ಷಬೇಧ ಮರೆತು ಹೋರಾಟ ಮಾಡಬೇಕು ಎಂದು ಹೇಳಿದರು.

ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಜಿಲ್ಲೆಯ ಪಾಲಿನ ನೀರು ಯಾವುದೇ ಸರ್ಕಾರ ಹಂಗು ಅಲ್ಲ, ಅನೇಕ ಮಹನೀಯರು ಹೋರಾಟ ಮಾಡಿ ಜಿಲ್ಲೆಗೆ ನೀರು ಬರಲು ಕಾರಣರಾಗಿದ್ದಾರೆ. ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪಿನ ಕಾರಣ ನಮಗೆ ಹೇಮಾವತಿ ನೀರು ಬರುತ್ತಿದೆ. ಮಾಗಡಿ, ರಾಮನಗರಕ್ಕೆ ಪ್ರತ್ಯೇಕ ನೀರಾವರಿ ಯೋಜನೆ ರೂಪಿಸಲಿ, ನಮ್ಮ ಪಾಲಿನ ನೀರನ್ನು ಕೊಡುವುದಿಲ್ಲ ಎಂದು ಹೇಳಿದರು.

ಈ ಕಾಮಗಾರಿ ಸ್ಥಗಿತಗೊಳಿಸದಿದ್ದರೆ ಯಾವುದೇ ರೀತಿಯ ಹೋರಾಟಕ್ಕೂ ನಾವು ಸಿದ್ಧ. ರೈತರು ರೊಚ್ಚಿಗೆದ್ದು ಕಾನೂನು ವ್ಯವಸ್ಥೆ ಕೆಟ್ಟರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದರು.

ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ, ತುಮಕೂರು ಜಿಲ್ಲೆಗೆ ಹೇಮಾವತಿ ನೀರೇ ಆಧಾರ. ಜಿಲ್ಲೆಯ ಎಲ್ಲಾ ಪಕ್ಷಗಳ ಶಾಸಕರು, ಮುಖಂಡರು, ರೈತರು, ಸಂಘಟನೆಗಳು ಸಾರ್ವಜನಿಕರು ಒಗ್ಗಟಾಗಿ ಹೋರಾಟ ಮಾಡಿ ನಮ್ಮ ಪಾಲಿನ ನೀರನ್ನು ನಾವು ಕಾಪಾಡಿಕೊಳ್ಳಬೇಕಾಗಿದೆ. ರಾಜಕೀಯ ನಾಯಕರು, ಚುನಾಯಿತ ಪ್ರತಿನಿಧಿಗಳು ಈ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕಾಮಗಾರಿ ನಿಲ್ಲಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಹೇಳಿದರು.

ಪ್ರತಿಭಟನಾಕಾರರು ರಸ್ತೆ ತಡೆದ ಕಾರಣ ಹೆಬ್ಬೂರು-ಸಿ.ಎಸ್.ಪುರ ರಸ್ತೆಯಲ್ಲಿ ಕೆಲ ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.

Leave a Reply

Your email address will not be published. Required fields are marked *