ತುಮಕೂರು:ಮಾಜಿ ಸಚಿವ ಸೊಗಡು ಶಿವಣ್ಣ ಅವರು ಜಿಲ್ಲೆಗೆ ಹಾಗೂ ಪಕ್ಷಕ್ಕೆ ನೀಡಿದ ಕೊಡುಗೆ ಪರಿಗಣಿಸಿ ವಿಧಾನ ಪರಿಷತ್ ಸದಸ್ಯ ಸ್ಥಾನ ನಿಡಬೇಕು ಎಂದು ಬಿಜೆಪಿಯ ವಿವಿಧ ಮುಖಂಡರು, ಹಲವು ಸಮಾಜದ ಮುಖಂಡರು ಜಿಜೆಪಿ ವರಿಷ್ಠರಿಗೆ ಮನವಿ ಮಾಡಿದ್ದಾರೆ.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ರಾಜ್ಯದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬಾರದಿದ್ದ ಕಾಲದಿಂದಲ್ಲೂ ತುಮಕೂರಿನಲ್ಲಿ ಬಿಜೆಪಿಯಿಂದ ಶಾಸಕರಾಗಿ ನಾಲ್ಕು ಬಾರಿ ವಿಧಾನ ಸಭೆಗೆ ಆಯ್ಕೆಯಾಗಿದ್ದ ಸೊಗಡು ಶಿವಣ್ಣನವರು,ಎರಡು ಬಾರಿ ಸಚಿವರಾಗಿದ್ದರು. ಜನಪರ ಹೋರಾಟಗಳ ಮೂಲಕ ಜನಾನುರಾಗಿ ನಾಯಕರಾಗಿ ಎಲ್ಲಾ ವರ್ಗದ ಜನರ ವಿಶ್ವಾಸದೊಂದಿಗೆ ಇಂದಿಗೂ ಜನಪರ ಕೆಲಸ ಮಾಡುತ್ತಿದ್ದಾರೆ. ಇವರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕು ಎಂದು ಕೋರಿದರು.
ವೀರಶೈವ ಸಮಾಜ ಸೇವಾ ಸಮಿತಿ ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ ಮಾತನಾಡಿ, ಸೊಗಡು ಶಿವಣ್ಣನವರು ಶಾಸಕರಾಗಿದ್ದ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಜಾತಿಬೇಧ ಮಾಡದೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಜನಸಾಮಾನ್ಯರ ನಾಯಕರಾಗಿ ಹೆಸರಾಗಿದ್ದರೆ. ಇವರಿಗೆ ಬಿಜೆಪಿ ಸೂಕ್ತವಾದ ಸ್ಥಾನಮಾನ ನೀಡಿ ಅವರ ಕೊಡುಗೆ, ಹಿರಿತನವನ್ನು ಗೌರವಿಸಬೇಕು ಎಂದು ಹೇಳಿದರು.
ಸತತ ನಾಲ್ಕು ಬಾರಿ ತುಮಕೂರು ಕ್ಷೇತ್ರದಿಂದ ಗೆದ್ದು ಶಾಸಕರಾಗುವ ಜೊತೆಗೆ ಜಿಲ್ಲೆಯಲ್ಲಿ ಬಿಜೆಪಿಯ ಸಂಘಟನೆಯಲ್ಲೂ ಸೊಗಡು ಶಿವಣ್ಣನವರ ಕೊಡುಗೆ ಅಪಾರವಾಗಿದೆ. ಪಕ್ಷದ ಬೆಳವಣಿಗೆಗೆ ನೆರವಾದ ಇವರಿಗೆ ಪಕ್ಷವೂ ಸೂಕ್ತ ಸ್ಥಾನ ಕೊಟ್ಟು ಇವರ ಸೇವೆ ಸ್ಮರಿಸಬೇಕು ಎಂದರು.
ವೀರಶೈವ ಸಮಾಜ ಮುಖಂಡ ಹೆಬ್ಬಾಕ ಮಲ್ಲಿಕಾರ್ಜುನ್ ಮಾತನಾಡಿ, ಬಿಜೆಪಿ ಬೆಳವಣಿಗೆಗೆ ಸಾಮಾನ್ಯ ಕಾರ್ಯಕರ್ತರಾಗಿ ದುಡಿದ ಸೊಗಡು ಶಿವಣ್ಣನವರು ಪಕ್ಷವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ದು ಸಂಘಟನೆ ಮಾಡಿದವರು, ಇಂತಹವರು ಪಕ್ಷದಲ್ಲಿ ಜವಾಬ್ದಾರಿ ಸ್ಥಾನ ನೀಡಿದರೆ ಪಕ್ಷದ ಬಲವರ್ಧನೆಗೆ ಅನುಕೂಲವಾಗುತ್ತದೆ. ಇದೆಲ್ಲವನ್ನೂ ಪರಿಗಣಿಸಿ ಸೊಗಡು ಶಿವಣ್ಣನವರಿಗೆ ಈ ಬಾರಿ ವಿಧಾನ ಪರಿಷತ್ ಪದವಿ ನೀಡಲು ಬಿಜೆಪಿ ನಾಯಕರು ಸಹಕರಿಸಬೇಕು ಎಂದು ಕೋರಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ ಮಾತನಾಡಿ, ಪಕ್ಷ ಹಾಗೂ ಜನ ಸಂಕಷ್ಟದಲ್ಲಿದ್ದಾಗ ಎಂದೂ ಕೈ ಬಿಡದೆ ಬೆಂಬಲವಾಗಿ ನಿಲ್ಲುವ ಸಾಮಥ್ರ್ಯವಿರುವ ಸೊಗಡು ಶಿವಣ್ಣನವರು ಈ ಜಿಲ್ಲೆಯ ಬಿಜೆಪಿಯ ಸಮರ್ಥ ನಾಯಕ. ಇವರಿಗೆ ಸರಿಯಾದ ಸ್ಥಾನಮಾನ ನೀಡಿದರೆ ಪಕ್ಷಕ್ಕೂ ದೊಡ್ಡ ಶಕ್ತಿ ಬರುತ್ತದೆ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿಗೆ ಸಹಾಯವಾಗುತ್ತದೆ ಎಂದು ಹೇಳಿದರು.
ಜಿಲ್ಲೆಯ ಜನರ ಕುಡಿಯುವ ನೀರಿಗೆ ಮಾರಕವಾಗಲಿರುವ ಮಾಗಡಿ, ಕನಕಪುರಕ್ಕೆ ಹೇಮಾವತಿ ನೀರು ತೆಗೆದುಕೊಂಡುಹೋಗುವ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆ ವಿರುದ್ಧ ಹೋರಾಟಕ್ಕಿಳಿದಿರುವ ಸೊಗಡು ಶಿವಣ್ಣನವರಿಗೆ ಜಿಲ್ಲೆಯ ಜನ ಬೆಂಬಲ ನೀಡಿ ಅವರೊಂದಿಗೆ ಹೋರಾಟಕ್ಕಿಳಿಯಬೇಕು. ಬಿಜೆಪಿ ಪಕ್ಷವೂ ಶಿವಣ್ಣನವರಿಗೆ ಯೋಗ್ಯಸ್ಥಾನ ನೀಡಿ ಅವರ ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದು ಹೇಳಿದರು.
ಕನ್ನಡ ಸೇನೆಯ ಜಿಲ್ಲಾ ಅಧ್ಯಕ್ಷ ಧನಿಯಾಕುಮಾರ್ ಮಾತನಾಡಿದರು.
ಸ್ನೇಹಸಂಗಮ ಸಹಕಾರ ಸಂಘದ ಅಧ್ಯಕ್ಷ ಬಾವಿಕಟ್ಟೆ ಮಂಜುನಾಥ್, ಮುಖಂಡರಾದ ನಂಜುಂಡಪ್ಪ, ಪುರವರ ಮೂರ್ತಿ, ಡೆಲ್ಟಾ ರವಿ, ಪ್ರಭಾಕರ್, ಯಶಸ್, ಏಕಾಂತ್, ಮಹದೇವಯ್ಯ, ರವಿಕುಮಾರ್, ಮಂಜುನಾಥ್ ಮೊದಲಾದವರು ಹಾಜರಿದ್ದರು.