ಬೆಳೆ ನಷ್ಟ ಹೊಂದಿದ ರೈತರ ಜಮೀನಿಗೆ ಡೀಸಿ ಭೇಟಿ – ತ್ವರಿತ ಪರಿಹಾರಕ್ಕೆ ಸೂಚನೆ

ತುಮಕೂರು : ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಜಿಲ್ಲೆಯ ಕೊರಟಗೆರೆ, ಮಧುಗಿರಿ ಹಾಗೂ ಶಿರಾ ತಾಲೂಕಿನಲ್ಲಿ ಶುಕ್ರವಾರ ಬೆಳಿಗ್ಗೆ ಪ್ರವಾಸ ಕೈಗೊಂಡು ರೈತ ಸಂಪರ್ಕ ಕೇಂದ್ರ, ಎಪಿಎಂಸಿ, ಮೇವು ಬ್ಯಾಂಕ್, ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲೆಯ ಮಧುಗಿರಿ ತಾಲ್ಲೂಕು ಪುರವರ ಗ್ರಾಮ ಪಂಚಾಯತಿ ವ್ಯಾಪ್ತಿ ದೊಡ್ಡಹೊಸಹಳ್ಳಿಯ ನರಸಿಂಹಮೂರ್ತಿ ಅವರ ಬಾಳೆ ತೋಟಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮಳೆ-ಗಾಳಿಯಿಂದ 1.5 ಎಕರೆಯಲ್ಲಿ ಬೆಳೆದಿದ್ದ   ಬಾಳೆ ಗಿಡಗಳು ಮುರಿದು ಬಿದ್ದು ನಷ್ಟ ಉಂಟಾಗಿದ್ದು,   ಪರಿಹಾರ ಒದಗಿಸಬೇಕೆಂದು ರೈತ ಮನವಿ ಮಾಡಿದಾಗ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸ್ಥಳದಲ್ಲಿದ್ದ ಮಧುಗಿರಿ ತಾಲೂಕು ತೋಟಗಾರಿಕಾ ಸಹಾಯಕ ನಿರ್ದೇಶಕ ಸ್ವಾಮಿ ಅವರಿಗೆ ಕೂಡಲೇ ನಷ್ಟವುಂಟಾಗಿರುವ ಬೆಳೆಯ ವಿವರವನ್ನು ಸಲ್ಲಿಸಿ ತ್ವರಿತವಾಗಿ ಪರಿಹಾರ ನೀಡಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.

ಮೇವು ಬ್ಯಾಂಕುಗಳಿಗೆ ಭೇಟಿಃ
ಮಧುಗಿರಿ ತಾಲೂಕು ಹಂದ್ರಾಳು ಗ್ರಾಮದ ಶ್ರೀ ಲಕ್ಷ್ಮಿರಂಗನಾಥ ಕಲ್ಯಾಣ ಮಂಟಪ, ಕೊರಟಗೆರೆ ತಾಲೂಕು ಶ್ರೀ ಬೈಲಾಂಜನೇಯ ಸ್ವಾಮಿ ದೇವಸ್ಥಾನ, ಶಿರಾ ತಾಲೂಕಿನ ಚಿಕ್ಕನಹಳ್ಳಿಯಲ್ಲಿ ತೆರೆದಿರುವ ಜಾನುವಾರುಗಳ ಮೇವು ಬ್ಯಾಂಕುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಮೇವು ಬ್ಯಾಂಕುಗಳಲ್ಲಿ ಮೇವು ವಿತರಣೆಯಲ್ಲಿ ತೂಕದ ವ್ಯತ್ಯಾಸವಾಗಬಾರದು ಎಂದು ವಿತರಣಾ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರಲ್ಲದೆ ಮೇವು ವಿತರಣಾ ವಹಿ, ಹಣ ಸಂದಾಯ ರಸೀದಿ, ಮೇವು ವಿತರಣಾ ಕಾರ್ಡ್, ಟೋಕನ್ ವಿತರಣೆಯನ್ನು ಪರಿಶೀಲಿಸಿದ ಅವರು ಸಮರ್ಪಕವಾಗಿ ಮೇವು ವಿತರಣೆಯಾಗುತ್ತಿರುವ ಬಗ್ಗೆ ಸ್ಥಳೀಯ ರೈತರಿಂದ ಮಾಹಿತಿ ಪಡೆದರು.

ಮೇವು ಪಡೆಯಲು ಸ್ಥಳಕ್ಕೆ ಬಂದಿದ್ದ ಪೂಜಾರಹಳ್ಳಿ ರೈತ ಮಹಿಳೆ ಶ್ರೀಲಕ್ಷ್ಮಮ್ಮ ತಮ್ಮ ಜಮೀನು ಪರಕೀಯ ಭೂಮಿ ಎಂದು ದಾಖಲೆಯಲ್ಲಿ ತೋರಿಸುತ್ತಿರುವುದರಿಂದ ಬೆಳೆ ಪರಿಹಾರ ತಮ್ಮ ಖಾತೆಗೆ ಜಮೆಯಾಗಿಲ್ಲ. ಇದನ್ನು ಸರಿಪಡಿಸಿ ಪರಿಹಾರ ದೊರಕುವಂತೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಅಹವಾಲು ಸಲ್ಲಿಸಿದರು.  ಕಾರಣ ತಿಳಿದು ಕೂಡಲೇ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಕೃಷಿ ಇಲಾಖೆ ಅಧಿಕಾರಿಗೆ ನಿರ್ದೇಶನ ನೀಡಿದರು. 

ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿಃ

ಮಧುಗಿರಿ ತಾಲೂಕು ಪುರವರ ಹಾಗೂ ಶಿರಾ ತಾಲೂಕು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಬರ ಪರಿಹಾರದ ಹಣ ಜಮೆಯಾದ ರೈತರ ಪಟ್ಟಿಯನ್ನು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಚುರಪಡಿಸಬೇಕು. ಇದುವರೆಗೂ ಪರಿಹಾರದ ಹಣ ಜಮೆಯಾಗದವರಿಗೆ ಬಾಕಿ ಉಳಿಯಲು ಕಾರಣವೇನೆಂದು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾಕಷ್ಟು ರೈತರಿಗೆ ಆಧಾರ್ ಜೋಡಣೆಯಾಗದ ಕಾರಣ ಪರಿಹಾರ ಹಣ ರೈತರ ಖಾತೆಗೆ ಜಮೆಯಾಗಿಲ್ಲ. ಕೂಡಲೇ ಆಧಾರ್ ಜೋಡಣೆ ಕಾರ್ಯ ಪೂರ್ಣಗೊಳಿಸಲು ತಹಶೀಲ್ದಾರ್‍ಗಳಿಗೆ ನಿರ್ದೇಶನ ನೀಡಿದರು.

ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಪರಿಶೀಲಿಸಿದ ಅವರು ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜವನ್ನೇ ಪೂರೈಸಬೇಕು. ಬಿತ್ತನೆ ಬೀಜಗಳಿಗೆ ಊಜಿ, ಮತ್ತಿತರ ಹುಳುಗಳು ಬೀಳದಂತೆ ವೈಜ್ಞಾನಿಕವಾಗಿ ಸಂರಕ್ಷಿಸಬೇಕು ಎಂದು ಪುರವರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉತ್ತಮ ಪಡಿತರ ವಿತರಣೆಗೆ ನಿರ್ದೇಶನಃ

ನಂತರ ಮಧುಗಿರಿ ತಾಲೂಕು ತಗ್ಗೀಹಳ್ಳಿ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಬಿಪಿಎಲ್ ಕಾರ್ಡುದಾರರಿಗೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸುತ್ತಿರುವ ಬಗ್ಗೆ ಪರಿಶೀಲಿಸಿದ ಅವರು, ಗ್ರಾಹಕರಿಗೆ ಹುಳು ಬಿದ್ದಿರುವ ಅಕ್ಕಿಯನ್ನು ನೀಡಬಾರದು.  ಉತ್ತಮ ಪಡಿತರವನ್ನೇ ವಿತರಣೆ ಮಾಡಬೇಕೆಂದು ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ನಿರ್ದೇಶನ ನೀಡಿದರು.

ಸ್ವಚ್ಛತೆ ಕಾಪಾಡಲು ಸೂಚನೆಃ

ಮಧುಗಿರಿ ತಾಲೂಕು ಬ್ಯಾಲ್ಯಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು ಹೆರಿಗೆ ಹಾಗೂ ಶಸ್ತ್ರಚಿಕಿತ್ಸೆ ಕೊಠಡಿ ಪರಿಶೀಲಿಸಿದರು. ಆರೋಗ್ಯ ಕೇಂದ್ರದ ಪ್ರಯೋಗಾಲಯದಲ್ಲಿ ಸ್ವಚ್ಛತೆಯಿಲ್ಲದೆ ಧೂಳಿನಿಂದ ಕೂಡಿದ ಆಸ್ಪತ್ರೆ ಉಪಕರಣಗಳನ್ನು ಕಂಡ ಅವರು ಗ್ರೂಪ್ ಡಿ ಸಿಬ್ಬಂದಿ ಮಂಜುಳ ಅವರಿಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಬಿಟ್ಟು ಬಿಡಿ. ಇದೇ ರೀತಿ ಮರುಕಳಿಸಿದರೆ ಸೇವೆಯಿಂದ ಅಮಾನತ್ತು ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು. ವೈದ್ಯಾಧಿಕಾರಿ ಡಾ: ಸಿಂಧು ಮಾತನಾಡಿ, ಆರೋಗ್ಯ ಕೇಂದ್ರದಲ್ಲಿ ಖಾಲಿಯಿರುವ ಹುದ್ದೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಆಸ್ಪತ್ರೆ ಹೊರಭಾಗದಲ್ಲಿ ಕೊಳೆತು ನಾರುತ್ತಿದ್ದ ಕಸದ ರಾಶಿಯನ್ನು ಕೂಡಲೇ ಸ್ವಚ್ಛಗೊಳಿಸಬೆಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.

ನಿಗಧಿಪಡಿಸಿದ ದರದಲ್ಲಿಯೇ ಮಾರಾಟ ಮಾಡಬೇಕುಃ

ಇದಕ್ಕೂ ಮುನ್ನ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯ ಕೊರಟಗೆರೆ ಹಾಗೂ ಕುಣಿಗಲ್ ತಾಲೂಕು ಹೊರತುಪಡಿಸಿ ಎಲ್ಲಾ ತಾಲ್ಲೂಕಿನಲ್ಲಿಯೂ ವಾಡಿಕೆ ಮಳೆಗಿಂತ ಅಧಿಕ ಮಳೆಯಾಗಿದೆ. ಮಳೆಯಿಂದ ಮುಂಗಾರು ಬಿತ್ತನೆಗೆ ಭೂಮಿ ಹದವಾಗಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅಗತ್ಯ ಸಿದ್ಧತೆಗೆ ಮುಂದಾಗಿದ್ದಾರೆ. ರೈತರ ಬೇಡಿಕೆಗನುಗುಣವಾಗಿ ಕೊರತೆ ನಿರ್ಮಾಣವಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು, ರಸಗೊಬ್ಬರವನ್ನು ನಿಗಧಿತ ದರದಲ್ಲೆಯೇ ಮಾರಾಟ ಮಾಡಬೇಕೆಂದು ಖಾಸಗಿ ಗೊಬ್ಬರ ಮಾರಾಟ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಸಮಸ್ಯೆ ಕಂಡು ಬಂದರೆ ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ 0816-2278718ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ಜಿಲ್ಲೆಯ ರೈತರ ಬೇಡಿಕೆಗೆ ಅನುಗುಣವಾಗಿ 20 ಮೇವು ಬ್ಯಾಂಕುಗಳನ್ನು ತೆರೆಯಲಾಗಿದ್ದು, ರೈತರು ಮೇವು ಬ್ಯಾಂಕಿನ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದರು.

ತುರ್ತು ಸಂದರ್ಭಗಳಲ್ಲಿ ಕೊಳವೆ ಬಾವಿ ಕೊರೆಸಿಃ

ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ಮಳೆಯಿಲ್ಲದೆ ಬತ್ತಿ ಹೋಗಿರುವ ಕೊಳವೆ ಬಾವಿಗಳು ಮರುಪೂರಾಣವಾಗುತ್ತಿದ್ದು, ನೀರಿನ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಆದಾಗ್ಯೂ ಕುಡಿಯುವ ನೀರಿನ ಸಮಸ್ಯೆ ಇರುವಲ್ಲಿ ಹೊಸ ಕೊಳವೆ ಬಾವಿ ಕೊರೆಸಲು ಪ್ರತಿ ತಾಲೂಕಿಗೂ 85 ಲಕ್ಷ ರೂ.ಗಳ ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಜಲ್ ಜೀವನ್ ಮಿಷನ್, ತುರ್ತು ಕ್ರಿಯಾ ಯೋಜನೆಯಡಿ ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಲಮೂಲಗಳನ್ನು ಪರೀಕ್ಷೆಗೊಳಪಡಿಸಿಃ

ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಎಲ್ಲ ಜಲಮೂಲಗಳ ಗುಣಮಟ್ಟದ ಬಗ್ಗೆ ಪರೀಕ್ಷೆಗೊಳಪಡಿಸಲು ಸೂಚಿಸಿಲಾಗಿದೆ. ಅಲ್ಲದೆ ಮುಂದಿನ ವಾರ ಶಾಲೆ/ ವಸತಿ ನಿಲಯಗಳು ಪ್ರಾರಂಭವಾಗುವುದರಿಂದ ಶಾಲೆ/ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಕುಡಿಯುವ ನೀರಿನ ಪರೀಕ್ಷೆ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಕೆರೆ ಒತ್ತುವರಿ ತೆರವಿಗೆ ಕ್ರಮಃ

ಕೆರೆ ಒತ್ತುವರಿ ತೆರವಿಗೆ ಕೈಗೊಂಡ ಕ್ರಮದ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಉತ್ತರಿಸಿದ ಜಿಲ್ಲಾಧಿಕಾರಿ ಯಾರೇ ಆಗಲಿ ಕೆರೆ ಒತ್ತುವರಿ ಮಾಡಿಕೊಳ್ಳುವಂತಿಲ್ಲ. ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ನಂತರ ಶಿರಾ ಪಟ್ಟಣದ ಎಪಿಎಂಸಿ, ಖಾಸಗಿ ರಸಗೊಬ್ಬರ ಮಾರಾಟ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ವಿವಿಧ ತಾಲೂಕಿನ ತಹಶೀಲ್ದಾರರು, ಕೃಷಿ, ಬೆಸ್ಕಾಂ, ಗ್ರಾಮ ಪಂಚಾಯತಿ, ತೋಟಗಾರಿಕೆ, ಪಶುವೈದ್ಯ, ಗ್ರಾಮೀಣ ಮತ್ತು ನೀರು ನೈರ್ಮಲ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *