ತುಮಕೂರು.:ಹಾಸನದ ಪೆನ್ ಡ್ರೈವ್ ಲೈಂಗಿಕ ಹತ್ಯಾಕಾಂಡದ ಪ್ರಮುಖ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕೆ ಒತ್ತಾಯಿಸಿ, ಹಾಗೂ ಸಂತ್ರಸ್ಥ ಮಹಿಳೆಯರಿಗೆ ನೈತಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ವತಿಯಿಂದ ಮೇ.30ರ ಗುರುವಾರದಂದು ಹಾಸನ ಚಲೋ ಅಂದೋಲನ ಹಮ್ಮಿ ಕೊಂಡಿದ್ದು,ಸಂತ್ರಸ್ಥ ಮಹಿಳೆಯರ ಘನತೆ,ಗೌರವ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸ್ವಯಂ ಪ್ರೇರಿತರಾಗಿ ಭಾಗವಹಿಸುವಂತೆ ಒಕ್ಕೂಟದ ಇಂದಿರಮ್ಮ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಘಟನೆ ನಡೆದು ಒಂದು ತಿಂಗಳು ಕಳೆದರೂ ಆರೋಪಿಯನ್ನು ಬಂಧಿಸಿಲ್ಲ. ಪೆನ್‍ಡ್ರೈವ್ ನನ್ನು ಹಾದಿ ಬೀದಿಯಲ್ಲಿ ಹಂಚಿದವರನ್ನು ಬಂಧಿಸಿಲ್ಲ.ಜಾತಿಯ ಕಾರಣಕ್ಕೆ ಸಂತ್ರಸ್ಥ ಮಹಿಳೆಯರು ಕೌಟುಂಬಿಕ ಮರ್ಯಾದೆ ಮತ್ತಿತರರ ಕಾರಣಗಳಿಂದ ಎಸ್.ಐ.ಟಿ ಮುಂದೆ ದೂರು ನೀಡಲು ಮುಂದೆ ಬರುತ್ತಿಲ್ಲ. ಈಗ ದೂರು ನೀಡಿದವರಿಗೂ ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನು ಸರಕಾರ ಮಾಡಿಲ್ಲ. ಕಾನೂನು ಸುವ್ಯವಸ್ಥೆಯ ಜೊತೆಗೆ, ಹೆಣ್ಣು ಮಕ್ಕಳ ಘನತೆ,ಗೌರವ ಕಾಪಾಡುವಲ್ಲಿಯೂ ಸರಕಾರ ವಿಫಲವಾಗಿದೆ.ಮುಖ್ಯಮಂತ್ರಿ ಹಾಗೂ ಗೃಹಸಚಿವರು ಕೂಡಲೇ ಸಂತ್ರಸ್ಥರ ಮಹಿಳೆಯರನ್ನು ಭೇಟಿಯಾಗಿ ಅವರಿಗೆ ಧೈರ್ಯ ತುಂಬವ ಕೆಲಸ ಮಾಡಬೇಕಿತ್ತು.ಆದರೆ ಇದುವರೆಗೂ ಅದು ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಚುನಾವಣೆಯಲ್ಲಿ ಲೈಂಗಿಕ ಹತ್ಯಾಕಾಂಡದ ಆರೋಪಿ ಸಂಸದನೊಂದಿಗೆ ಮೈತ್ರಿ ಮಾಡಿಕೊಂಡ ಸರಕಾರಕ್ಕೆ ಮೂರು ತಿಂಗಳ ಮುಂಚಿತವಾಗಿಯೇ ಇಂತಹದೊಂದು ಮಹಾ ದುರಂತ ನಡೆದಿರುವುದರ ಅರಿವಿಗೆ ಬಂದಿದ್ದರೂ ರಾಜಕೀಯ ಲಾಭಕೋ ಸ್ಕರÀ ಆತನಿಗೆ ಮತ್ತೆ ಟಿಕೇಟ್ ನೀಡಿ,ಇಡೀ ಸಂಸತ್ತಿನ ಮಾನ, ಮಾರ್ಯದೆಯನ್ನೇ ಹಾರಾಜು ಹಾಕಿದೆ.ಅಲ್ಲದೆ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ತಲೆತಪ್ಪಿಸಿಕೊಂಡು 33 ದಿನಗಳು ಕಳೆದರೂ ಆತನ ಪಾಸ್‍ಪೋರ್ಟ್, ವೀಸಾ ರದ್ದು ಮಾಡದೆ, ರೆಡ್ ಕಾರ್ನರ್ ನೊಟೀಷ್ ಹೊರಡಿಸದೆ, ದಿನ ಕಳೆಯುತ್ತಿರುವುದರ ಹಿಂದಿನ ಹುನ್ನಾರ, ಆರೋಪಿಯನ್ನು ರಕ್ಷಿಸುವುದೇ ಆಗಿದೆ.ಇದರ ವಿರುದ್ದ ಜನಾಂದೋಲನ ರೂಪಿಸಿ, ಆರೋಪಿಯನ್ನು ಬಂಧಿಸುವಂತೆ ಸರಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಮೇ.30 ರಂದು ಇಡೀ ರಾಜ್ಯದ ಮೂಲೆ ಮೂಲೆಯಿಂದ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಹೆಸರಿನಲ್ಲಿ ಜನವಾದಿ ಮಹಿಳಾ ಸಂಘಟನೆಗೆ ಸೇರಿದಂತೆ ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿರುವ ಎಲ್ಲಾ ಸಂಘಟನೆಗಳು ಹೋರಾಟಕ್ಕೆ ಮುಂದಾಗಿವೆ ಎಂದು ಇಂದಿರಮ್ಮ ನುಡಿದರು.
ಪ್ರಜ್ವಲ್ ರೇವಣ್ಣ ಎಂಬ ಸಂಸದನಿಂದ ಮಹಿಳಾ ಅಧಿಕಾರಿಗಳು, ವಿವಿಧ ಸ್ಕೀಂಗಳಲ್ಲಿ ಕೆಲಸ ಮಾಡುವ ಕಾರ್ಯಕರ್ತೆಯರು ಸೇರಿದಂತೆ ಹಲವರು ಸಂತ್ರಸ್ಥರಿದ್ದಾರೆ.ಸಂಸದನ ಕಚೇರಿಯನ್ನೇ ತನ್ನ ಆಟೋಟೋಪಗಳಿಗೆ ಬಳಸಿಕೊಂಡು,ಸಂಸದ ಎಂಬ ಪದದ ಘನತೆಗೆ ಧಕ್ಕೆ ತಂದಿರುವ ವ್ಯಕ್ತಿಗಳನ್ನು ಬಂಧಿಸಿ,ಆತನ ವಿರುದ್ದ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕು. ರಾಜಕೀಯ ಮತ್ತಿತರರ ಲಾಭಗಳಿಗೋಸ್ಕರ ಪೆನ್‍ಡ್ರೈವ್ ಹಂಚಿಕೆ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು.ಸಂತ್ರಸ್ಥರಿಗೆ ಸೂಕ್ತ ಭದ್ರತೆಯ ಜೊತೆಗೆ,ಪರಿಹಾರ ನೀಡಬೇಕು, ಹಾಗೆಯೇ ಸಂತ್ರಸ್ಥೆಯರನ್ನೇ ಅಪರಾಧಿಗಳೆಂಬಂತೆ ಬಿಂಬಿಸುವ ಕೆಲಸ ನಿಲ್ಲಬೇಕೆಂಬುದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಒತ್ತಾಯವಾಗಿದೆ ಎಂದು ಹೇಳಿದರು.
ಮೇ.30ರಂದು 10 ಸಾವಿರಕ್ಕೂ ಹೆಚ್ಚು ಜನ ಸಮಾವೇಶಗೊಂಡು,ಹಾಸನದ ಹೇಮಾವತಿ ಪ್ರತಿಮೆಯಿಂದ ಹೊಸ ಬಸ್ ನಿಲ್ದಾಣದವರೆಗೆ ಬೃಹತ್ ಪ್ರತಿಭಟನೆ ಮತ್ತು ಬಹಿರಂಗ ಸಭೆಯನ್ನು ಆಯೋಜಿಸಲಾಗಿದೆ. ತುಮಕೂರು ಜಿಲ್ಲೆಯಿಂದ ಪ್ರತಿ ತಾಲೂಕಿಗೆ 50 ಜನರಂತೆ ಸುಮಾರು 500ಕ್ಕೂ ಹೆಚ್ಚು ಜನರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಇಂದಿರಮ್ಮ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಿಂತಕ ಕೆ.ದೊರೆರಾಜು, ಸಂಯುಕ್ತ ಹೋರಾಟ-ಕರ್ನಾಟಕದ ಸಿ.ಯತಿರಾಜು, ಜಿಲ್ಲಾ ಲೇಖಕಿರ ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು, ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಬಾ.ಹ.ರಮಾಕುಮಾರಿ,ಮಹಿಳಾ ಹೋರಾಟಗಾರತಿ ಬಿ.ಸಿ.ಶೈಲಾನಾಗರಾಜು, ಆರ್.ರಾಮಕೃಷ್ಣಪ್ಪ, ಪಿ.ಎನ್.ರಾಮಯ್ಯ, ಸೈಯದ್ ಮುಜೀಬ್, ಎಐಎಂಎಸ್‍ಎಸ್‍ನ ಕಲ್ಯಾಣಿ, ಮಂಜುಳ ಗೋನಾವರ್ ಮೇ.30ರ ಹಾಸನ ಚಲೋ ಕುರಿತು ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ(ಎಂ)ನ ಸೈಯದ್ ಮುಜೀಬ್,ಎನ್.ಕೆ.ಸುಬ್ರಮಣ್ಯ, ಎ.ಲೋಕೇಶ್,ಡೊಂಬತ್ತನಹಳ್ಳಿ ನಾಗರಾಜು, ರಾಣಿಚಂದ್ರಶೇಖರ್, ಟಿ.ಆರ್.ಕಲ್ಪನ ಸೇರಿದಂತೆ ಹಲವರು ಉಪಸ್ಥಿತರಿದ್ದರು.