ತುಮಕೂರು:ಹೇಮಾವತಿ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರ ಗೊಲ್ಲಹಳ್ಳಿ ನಿವಾಸದ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲು ತೆರಳಿದ್ದ ಮಾಜಿ ಸಚಿವ ಸೊಗಡು ಶಿವಣ್ಣ,ಶಾಸಕರಾದ ಎಂ.ಟಿ.ಕೃಷ್ಣಪ್ಪ,ಬಿ.ಸುರೇಶಗೌಡ ಸೇರಿದಂತೆ 40ಕ್ಕು ಹೆಚ್ಚು ಜನರನ್ನು ಬಂಧಿಸಿದರಲ್ಲದೆ, ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಬೀಸಿದ್ದರಿಂದ ಕೆಲವರಿಗೆ ಗಾಯಗಳಾದ ಘಟನೆ ನಡೆಯಿತು.
ಗೃಹ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಬಂಧಿಸಲು ಪೊಲೀಸರು ಮುಂದಾದಾಗ ಪ್ರತಿರೋಧ ಒಡ್ಡಿದ್ದರಿಂದ ಲಾಠಿ ಬೀಸಿದ ಪೊಲೀಸರಿಂದ ಕೆಲವರಿಗೆ ಗಾಯಗಳಾದವು, ಒಬ್ಬರಿಗೆ ಕಣ್ಣು ಬಳಿ ಏಟು ಬಿದ್ದು ರಕ್ತಸ್ರಾವವಾಯಿತು.
ಹೇಮಾವತಿ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಗೊಳಿಸಿ,ಅವೈಜ್ಞಾನಿಕವಾಗಿರುವ ಈ ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಿ ಮಾಜಿ ಸಚಿವ ಸೊಗಡು ಶಿವಣ್ಣ ಅವರ ನೇತೃತ್ವದಲ್ಲಿ ವಿವಿಧ ಪಕ್ಷಗಳ ಹಾಲಿ ಮತ್ತು ಮಾಜಿ ಶಾಸಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರ ಮನೆ ಮುಂದೆ ಹೋರಾಟಕ್ಕೆ ಕರೆ ನೀಡಿದ್ದರು.ಅದರಂತೆ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಪ್ರತಿಭಟನಾ ಸ್ಥಳದ ಸಿದ್ದತೆಗಳ ಪರಿಶೀಲನೆಗೆ ಮುಖಂಡರಾದ ಪ್ರಭಾಕರ್ ಅವರೊಂದಿಗೆ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಸಚಿವ ಡಾ.ಜಿ.ಪರಮೇಶ್ವರ್ ಅವರ ಗೊಲ್ಲಹಳ್ಳಿಯ ನಿವಾಸದ ಬಳಿ ತೆರಳಿದ್ದ ಸಂದರ್ಭದಲ್ಲಿ ಪೊಲೀಸರು ಅವರನ್ನು ಬಂಧಿಸಿ,ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನ(ಡಿ.ಆರ್.ಗ್ರೌಂಡ್)ಬಳಿ ಕರೆತಂದರು.

ನಮ್ಮ ಜಿಲ್ಲೆಯ ನೀರನ್ನು ಅವೈಜ್ಞಾನಿಕ ಯೋಜನೆಯ ಮೂಲಕ ಬೇರೊಂದು ಜಿಲ್ಲೆಗೆ ತೆಗೆದುಕೊಂಡು ಹೋಗಲು ಹೊರಟಿರುವ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಕ್ಕೆ ಒತ್ತಾಯಿಸಿ,ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದ ನಮ್ಮನ್ನು ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ. ಇದು ಖಂಡನೀಯ ಎಂದು ಡಿ.ಆರ್.ಗ್ರೌಂಡ್‍ನಲ್ಲಿಯೇ ಮಾಜಿ ಸಚಿವ ಸೊಗಡು ಶಿವಣ್ಣ ಉಪಹಾರ, ನೀರು ಸೇವಿಸದೆ ಧರಣಿ ನಡೆಸಿದರು.

ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ವಿಡಿಯೋ ಮಾಡಿ, ಮೊಬೈಲ್ ಕಸಿದು ನಮ್ಮನ್ನು ಬೇರೊಂದು ರೀತಿಯಲ್ಲಿ ಪೆÇಲೀಸರು ಪ್ರಚೋದಿಸುತ್ತಿದ್ದಾರೆ.ಆಧುನಿಕ ಚಾನಲ್ ಮೂಲಕ ಕುಣಿಗಲ್‍ಗೆ ನೀರು ತೆಗೆದುಕೊಂಡು ಹೋಗಲು ನಾವೇ ಮುಂದೆ ನಿಂತು ಸಹಕರಿಸುತ್ತೇನೆ. ಆದರೆ ಪೈಪ್‍ಲೈನ್ ಮೂಲಕ ನೀರು ಕೊಂಡೊಯ್ಯಲು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟ ನಡೆಸಲು ಮುಂದಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣರವರನ್ನು ಬಂಧಿಸಿರುವ ಪೆÇಲೀಸರ ಕ್ರಮವನ್ನು ಖಂಡಿಸಿ ಹಾಗೂ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬಿಜೆಪಿ ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಗರದ ಡಿಎಆರ್ ಕಚೇರಿ ಮುಂದೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.ಡಿಎಆರ್ ಕಚೇರಿ ಮುಂಭಾಗ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದ ಮುಖಂಡರಾದ ಧನಿಯಾಕುಮಾರ್, ಕೆ.ಪಿ. ಮಹೇಶ್, ಕುಮಾರಸ್ವಾಮಿ, ಶಬ್ಬೀರ್, ರಾಮಚಂದ್ರರಾವ್, ನವೀನ್, ಶಂಕರಪ್ಪ, ಏಕಾಂತಯ್ಯ, ಜಯಪ್ರಕಾಶ್, ನಾರಾಯಣರಾವ್, ಊರುಕೆರೆ ನಂಜುಂಡಪ್ಪ, ಟಿ.ಜೆ.ಸನತ್, ಗಣೇಶ್ ಸೇರಿದಂತೆ ಮತ್ತಿತರರನ್ನು ಎಸ್ಪಿ ಅಶೋಕ್ ಸೂಚನೆ ಮೇರೆಗೆ ಪೆÇಲೀಸರು ಬಂಧಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸೇನೆಯ ಧನಿಯಾಕುಮಾರ್, ನಮ್ಮ ಹೋರಾಟ ಹತ್ತಿಕ್ಕುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ತುಮಕೂರು ಬಂದ್‍ಗೆ ಕರೆ ನೀಡಲಾಗುವುದು.ಸೋಮವಾರ ತುಮಕೂರು ಬಂದ್ ನಡೆಸಲಾಗುವುದು. ಅಂದು ಬೆಳಗ್ಗೆ 8 ಗಂಟೆಯಿಂದಲೇ ಶಾಂತಿಯುತವಾಗಿ ಬಂದ್ ನಡೆಸಲಾಗುವುದು ಎಂದು ಅವರು ಹೇಳಿದರು.
ಇದೇ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಲು ಮುಂದಾದ ಶಾಸಕರಾದ ಎಂ.ಟಿ.ಕೃಷ್ಣಪ್ಪ ಅವರ ದಾರಿಯ ಮದ್ಯದಲ್ಲಿಯೇ ಬಂಧಿಸಿದ ಪೊಲೀಸರು,ಅವರನ್ನು ಸಹ ಡಿ.ಆರ್.ಗ್ರೌಂಡ್‍ಗೆ ಕರೆತಂದರು.
ಪೊಲೀಸರ ಕಣ್ತಪ್ಪಿಸಿ ಪ್ರತಿಭಟನೆ ನಡೆಸಿದ ಶಾಸಕ ಬಿ.ಸುರೇಶಗೌಡ:
ಗೃಹ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸುವುದನ್ನು ತಡೆಯುವ ಸಲುವಾಗಿ ಇಂದು ಬೆಳಗ್ಗೆಯಿಂದಲೇ ಪೊಲೀಸರು ತುಮಕೂರು ಗ್ರಾಮಾಂತರ ಶಾಸಕ ಬಿಜೆಪಿಯ ಬಿ.ಸುರೇಶಗೌಡ ಅವರನ್ನು ಬಂಧಿಸಲು ಕುಣಿಗಲ್ ರಸ್ತೆಯ ಬಾಣಾವಾರ ಸಮೀಪದ ಬಿಜೆಪಿ ಕಚೇರಿ ಬಳಿ ತೆರಳಿದ್ದರು. ಆದರೆ ಪೊಲೀಸರ ಕಣ್ತಪ್ಪಿಸಿ,ಕಾರು ಬಿಟ್ಟು ತಲೆಗೆ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಏರಿ ಗೊಲ್ಲಹಳ್ಳಿಯಲ್ಲಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಮನೆ ತಲುಪಿದ ಶಾಸಕರು,ವಾಹನದಿಂದ ಇಳಿದು ಪ್ರತಿಭಟನೆ ಕೂಗುತಿದ್ದಂತೆಯೇ ಆವರನ್ನು ಬಂಧಿಸಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನಕ್ಕೆ ಕರೆತರಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಬಿ.ಸುರೇಶಗೌಡ,ತುಮಕೂರು ಹೇಮಾವತಿ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಸಾಂಕೇತಿಕವಾಗಿ ಸಚಿವ ಪರಮೇಶ್ವರ್ ಅವರ ಮನೆ ಮುಂದೆ ಹೋರಾಟ ಹಮ್ಮಿಕೊಂಡಿ ದ್ದೆವು.ಹೋರಾಟಕ್ಕೆ ಮುಂದಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ಬೆಳಗುಂಬ ಪ್ರಭಾಕರ್ ಅವರನ್ನು ಏಕಾಏಕಿ ಬಂಧಿಸಿರುವುದು ಕಾನೂನು ಬಾಹಿರ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಸರ್ವೆ ಸಾಮಾನ್ಯ.ನಮ್ಮ ಹಕ್ಕುಗಳನ್ನು ಕೇಳುವ ಸಂದರ್ಭದಲ್ಲಿ ಬಂಧಿಸಿರುವುದು ಖಂಡನೀಯ.ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಶಾಸಕ ಬಿ.ಸುರೇಶಗೌಡ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.ಅರಾಜಕತೆ ಸೃಷ್ಠಿಯಾಗಿದೆ. ಇದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‍ರವರೇ ನೇರ ಹೊಣೆ ಎಂದು ಆರೋಪಿಸಿದರು.ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಾರೆ.ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಎಸ್ಪಿ ಮದ್ಯಸ್ತಿಕೆ ಫಲಪ್ರದ,ಪ್ರತಿಭಟನೆ ತಾತ್ಕಾಲಿಕ ಸ್ಥಗಿತ:
ಪ್ರತಿಭಟನಾ ನಿರತ ಜನಪ್ರತಿನಿಧಿಗಳು ಹಾಗೂ ರೈತರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕೆ.ವಿ. ಅವರು,ಜೂನ್ 06ರವರೆಗೆ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್‍ನ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಜೂನ್ 06ರ ನಂತರ ಮುಖಂಡರುಗಳ ಸಭೆ ಕರೆದು ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.