ಎಸ್.ಪಿ.ಮುದ್ದಹನುಮೇಗೌಡರನ್ನು ಕರೆ ತಂದು ಹರಕೆಯ ಕುರಿ ಮಾಡಿ ಬಲಿ ಕೊಟ್ಟ ಕಾಂಗ್ರೆಸ್ ನಾಯಕರು ಯಾರು..?..!

ತುಮಕೂರು : ತುಮಕೂರು ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಎಸ್ .ಪಿ. ಮುದ್ಧನಮೇಗೌಡ ರವರನ್ನು ಕರೆತಂದು ಹರಕೆಯ ಕುರಿ ಮಾಡಿದವರು ಯಾರು…?…! ಎಂಬ ಚರ್ಚೆ ಈಗ ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಾ ಇದೆ.

ಕಳೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಎಸ್ ಪಿ ಮುದ್ದಹನುಮೇಗೌಡರನ್ನು ಮತ್ತೊಮ್ಮೆ ಕಾಂಗ್ರೆಸ್‍ಗೆ ಕರೆದುಕೊಂಡು ಬರುವಲ್ಲಿ ಸಹಕಾರಿ ಸಚಿವ ಕೆ ಎನ್ ರಾಜಣ್ಣ ಅವರ ಪಾತ್ರ ಬಹುಮುಖ್ಯವಾಗಿದೆ. ಇದಕ್ಕೆ ಶಾಸಕ ಎಸ್ ಆರ್ ಶ್ರೀನಿವಾಸ್ ಕೂಡ ಬೆಂಬಲವಾಗಿ ನಿಂತಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ಎಸ್ ಪಿ ಮುದ್ದಹನುಮೇಗೌಡ ಅವರು, ತುಮಕೂರು ಗ್ರಾಮಾಂತರ ಅಭ್ಯರ್ಥಿ ಬಿ ಸುರೇಶ್ ಗೌಡ ಅವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

ಆದರೆ ಲೋಕಸಭಾ ಚುನಾವಣೆ ಬರುವ ವೇಳೆಗೆ ಎಸ್. ಪಿ.ಮುದ್ದಹನುಮೇಗೌಡ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಗುವುದಿಲ್ಲ ಎಂದು ಅರಿವಾದ ಕೂಡಲೇ ಕಾಂಗ್ರೆಸ್ ಬಾಗಿಲನ್ನು ತಟ್ಟಲು ಪ್ರಾರಂಭಿಸಿದರು.

ಎಸ್. ಪಿ.ಮುದ್ದನುಮೇಗೌಡರನ್ನು ಕಾಂಗ್ರೆಸ್‍ಗೆ ಕರೆ ತರಲು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರಿಗೆ ಅಷ್ಟಾಗಿ ಇಷ್ಟವಿಲ್ಲದಿದ್ದರೂ, ಸಹಕಾರಿ ಸಚಿವ ಕೆ ಎನ್ ರಾಜಣ್ಣ ಅವರ ಮುಂದಾಳತ್ವದಲ್ಲಿ ಎಸ್. ಪಿ.ಮುದ್ದನುಮೇಗೌಡ ಅವರನ್ನು ಕಾಂಗ್ರೆಸ್ಸಿಗೆ ಕರೆದುಕೊಂಡು ಬಂದರು.

ಮುದ್ದಹನುಮೇಗೌಡರು ಕಾಂಗ್ರೆಸ್ ಸೇರ್ಪಡೆಯಾಗುವ ದಿನ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಅವರು ಗೈರಾಜರಾಗಿದ್ದರು.

ಜಿಲ್ಲೆಯಲ್ಲಿ ಎಸ್. ಪಿ.ಮುದ್ದನುಮೇಗೌಡ ಅವರಿಗೆ ಕಾಂಗ್ರೆಸ್‍ನಿಂದ ಟಿಕೆಟ್ ನೀಡಲು ತೀವ್ರ ವಿರೋಧವಿದ್ದರೂ ಅವರಿಗೆ ಮೊದಲ ಪಟ್ಟಿಯಲ್ಲಿಯೇ ಹೆಸರು ಘೋಷಿಸಿ ಟಿಕೆಟ್ ನೀಡಲಾಯಿತು.

ಎಸ್. ಪಿ.ಮುದ್ದನುಮೇಗೌಡರಿಗೆ ಟಿಕೆಟ್ ನೀಡಿದ್ದರಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಿದ ಅವರನ್ನು ಕರೆ ತಂದಿರುವುದು ಕಾಂಗ್ರೆಸ್‍ನ ಕೆಲ ನಾಯಕರಿಗೆ ತೀವ್ರ ಅಸಮಾಧಾನ ಉಂಟಾಯಿತು.

ಚುನಾವಣ ಪ್ರಚಾರ ಸಭೆಗಳನ್ನು ಸಹ ಕಾಂಗ್ರೆಸ್ಸಿನ ಎಲ್ಲಾ ಶಾಸಕರುಗಳು ಒಗ್ಗಟ್ಟಾಗಿ ಯಾಚಿಸುವಲ್ಲಿ ವಿಫಲರಾದರು.


ತುಮಕೂರು ಮತ್ತು ತಿಪಟೂರುಗಳಲ್ಲಿ ಚುನಾವಣಾ ರ್ಯಾಲಿಗಳನ್ನು ಮಾಡುವಲ್ಲಿ ವಿಫಲವಾಗಿದ್ದಲ್ಲದೆ, ಅಲ್ಲಿಯ ಕಾಂಗ್ರೆಸ್ ನಾಯಕರುಗಳನ್ನು ಒಟ್ಟಾಗಿ ಕೆಲಸ ಮಾಡುವಂತೆ ಸೂಚಿಸುವಲ್ಲಿಯೂ ಸಹ ವಿಫಲರಾದರು.

ಎಸ್. ಪಿ.ಮುದ್ದನುಮೇಗೌಡರಿಗೆ ಟಿಕೆಟ್ ಕೊಡಿಸಿಕೊಂಡು ಬಂದ ಸಹಕಾರಿ ಸಚಿವರು ಶಕ್ತಿ ಮೀರಿ ಕೆಲಸ ಮಾಡುವಲ್ಲಿ ವಿಫಲರಾದರು ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಎಸ್.ಪಿ.ಮುದ್ದಹನುಮೇಗೌಡರು ಕಾಂಗ್ರೆಸಿಗೆ ಬಂದು ಹರಕೆಯ ಕುರಿಯಾದರೆ ಎಂಬ ಚರ್ಚೆಗಳು ನಡೆಯುತ್ತಿವೆ.

ಟಿಕೆಟ್ ನೀಡಿದ ನಂತರ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಎಸ್.ಪಿ.ಎಂ.ಬೆಂಬಲಕ್ಕೆ ನಿಂತು ಪ್ರಚಾರ ಸಭೆಗಳನ್ನು ಮಾಡಿದರು, ಆದರೆ ಇತರೆ ಶಾಸಕರುಗಳು ಮತ್ತು ಕಾಂಗ್ರೆಸ್ಸಿನ ನಾಯಕರುಗಳು ಇವರಿಗೆ ಸಾಥ್ ನೀಡುವಲ್ಲಿ ವಿಫಲರಾದರು.

ಎಸ್. ಪಿ.ಮುದ್ದನುಮೇಗೌಡರು ಸಹ ತಮ್ಮ ಕಾರ್ಯಕರ್ತರಿಗೆ ಸಿಕ್ಕಿ, ಅವರ ಅಹವಾಲುಗಳನ್ನು ಆಲಿಸಿ ಚುನಾವಣೆಯ ತಂತ್ರಗಳನ್ನು ಎಣೆಯುವಲ್ಲಿ ವಿಫಲರಾದರು ಎನ್ನಲಾಗುತ್ತಿದೆ.

ಚುನಾವಣೆಗೂ ಮುನ್ನವೇ ಎಸ್. ಪಿ.ಮುದ್ದನುಮೇಗೌಡರ ಬಳಿ ಚುನಾವಣೆ ನಡೆಸಲು ದುಡ್ಡಿಲ್ಲ ಎಂಬ ಪ್ರಚಾರವನ್ನು ಕಾಂಗ್ರೆಸ್ಸಿನವರೇ ಹಬ್ಬಿಸುತ್ತಾ ಬಂದರು, ಇದಲ್ಲದೆ ಎಸ್. ಪಿ.ಮುದ್ದಹನುಮೇಗೌಡರಿಗೆ ಯಾರು ಕರೆದುಕೊಂಡು ಬಂದರೋ, ಟಿಕೆಟ್ ಕೊಡಿಸಿದರೋ ಅವರೂ ಬೆಂಬಲವಾಗಿ ನಿಲ್ಲಲಿಲ್ಲ, ಎಸ್.ಪಿ.ಎಂ.ಗೆ ಬೆನ್ನೆಲುಬಾಗಿ ನಿಲ್ಲಬೇಕಾಗಿದ್ದ ಒಕ್ಕಲಿಗ ಸಮುದಾಯವೂ ನಿಲ್ಲಲಿಲ್ಲ ಎಂದು ಮತದಾನ ನಡೆದ ದಿನವೇ ಕಂಡು ಬಂದಿತು.

2019ರಲ್ಲಿ ದೊಡ್ಡಗೌಡರಾದ ಎಚ್ ಡಿ ದೇವೇಗೌಡರನ್ನು ಸೋಲಿಸುವಲ್ಲಿ ಎಸ್.ಪಿ.ಮುದ್ದಹನುಮೇಗೌಡ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಒಕ್ಕಲಿಗರ ಮನಸ್ಸಿನಲ್ಲಿ ಬೇರೂರಿ ಈ ಬಾರಿ ಒಕ್ಕಲಿಗರು ಎಸ್. ಪಿ.ಮುದ್ದಹನುಮೇಗೌಡರನ್ನು ಕೈ ಹಿಡಿಯಲಿಲ್ಲ ಎಂದು ಹೇಳಲಾಗುತ್ತಿದೆ.

ಎಸ್. ಪಿ.ಮುದ್ದಹನುಮೇಗೌಡರನ್ನು ಕಾಂಗ್ರೆಸ್ಸಿಗೆ ಕರೆ ತಂದ ಜಿಲ್ಲಾ ಕಾಂಗ್ರೆಸ್ ನಾಯಕರುಗಳು ತೆರೆ ಮರೆಯಲ್ಲಿ ಬಿಜೆಪಿಯೊಂದಿಗೆ ಒಳ-ಹೊರಗಿನ ಆಟವನ್ನು ಆಡುತ್ತಿದ್ದರು ಎನ್ನಲಾಗುತ್ತಿದೆ.

2019ರಲ್ಲಿಯೂ ಸಹ ಜಿಲ್ಲೆಯ ಕೆಲ ಕಾಂಗ್ರೆಸ್ ನಾಯಕರು ದೇವೇಗೌಡರನ್ನು ಸೋಲಿಸಲು ಬಿಜೆಪಿಯೊಂದಿಗೆ ಒಳ ಹೊರಗಿನ ಆಟವನ್ನು ಆಡಿದ್ದರು. ಈ ಬಾರಿಯೂ ಅದೇ ಆಟವನ್ನು ಆಡಿ ಎಸ್ ಪಿ ಮುದ್ದಹನುಮೇಗೌಡರನ್ನು ಸೋಲಿಸಿ ಅವರ ರಾಜಕೀಯ ಕೊನೆಯ ಆಟಕ್ಕೆ ಕೊನೆ ಮೊಳೆ ಹೊಡೆದು, ಅವರ ರಾಜಕೀಯವನ್ನು ಮುಗಿಸಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಎಸ್. ಪಿ.ಮುದ್ದಹನುಮೇಗೌಡರನ್ನು ಕರೆ ತಂದ ಕಾಂಗ್ರೆಸ್ ನಾಯಕರು, ಊರಿನ ಜಾತ್ರೆಗೆ ಕರೆ ತರುವ ಹರೆಕೆಯ ಕುರಿ ಮಾಡಿರುವ ಜಿಲ್ಲಾ ಕಾಂಗ್ರೆಸ್ ನಾಯಕರುಗಳು ಈ ಸೋಲನ್ನು ಯಾವ ರೀತಿ ಆರಗಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

-ಹೊವೆಂವೆಂ

Leave a Reply

Your email address will not be published. Required fields are marked *