ಸುಪ್ರೀಂ ಕೋರ್ಟೇ ದಂಡ ಹಾಕುತ್ತೆ – ಮೆಟ್ಟು ನೆನೆಯುತ್ತವೆಂದು ಒಳಗೆ ಬಿಟ್ಟುಕೊಳ್ಳುವರು, ಮುಟ್ಟಾದ ಮಹಿಳೆಯನ್ನು. ಹಟ್ಟಿ ಹೊರಗಾಕುವರು

ಸುಪ್ರೀಂ ಕೋರ್ಟೇ ದಂಡ ಹಾಕುತ್ತೆ. ನಾವು ದಂಡ ಹಾಕಬಾರದೇ, ತಪ್ಪೇ? ಎಂದು ಪ್ರಶ್ನಿಸಿದ ಚಿತ್ತಯ್ಯನ ಮುಖಕ್ಕೆ ಏನು ಹೇಳುವುದು ತಕ್ಷಣಕ್ಕೆ. ನಮಗೆ ಮುನ್ಸೀಫ್ ಕೋರ್ಟ್ ಗೊತ್ತು. ಆತ ಸುಪ್ರೀಂ ಕೋರ್ಟ್ ವರಗೆ ಮಾತು ಬೆಳೆಸಿದ. ಠಾಣಾಧಿಕಾರಿಯ ಸಕ್ಷಮದಲ್ಲಿ ಬಲ್ಲಪ್ಪನಹಟ್ಟಿ ಅಂಗಳದಲ್ಲಿ ಆಗತಾನೆ ಕೆಲವು ಗಂಟೆಗಳ ಹಿಂದೆ ಮುಟ್ಟಾದ ಮಹಿಳೆಯರನ್ನು ಹಟ್ಟಿಯ ಹೊರಗೆ ಕಳುಹಿಸಿ ಲಿಂಗತಾರತಮ್ಯ ಮಾಡದೆ ಸಂವಿಧಾನ ಗೌರವಿಸುತ್ತೇವೆ ಎಂದು ಹಟ್ಟಿಯವರಿಗೆ ಸ್ವತಃ ಪ್ರತಿಜ್ಞಾ ವಿಧಿ ಹೇಳಿಕೊಟ್ಟ ನನಗೆ ಚಿತ್ತಯ್ಯನ ಮಾತುಗಳು ತುಂಬಾ ಆತಂಕಕಾರಿಯಾಗಿ ಕಂಡವು. ಆತನ ಮಾತು ಕೇಳಿ ನೆಲಕ್ಕಿಳಿದಂತಾಯಿತು, ಹಾಗೆಯೇ ಗಪ್ಪಾದೆ.

ಹಟ್ಟಿ ಯಜಮಾನಿಕೆ ದಂಡ, ದಡೂತಿ, ನ್ಯಾಯ, ಪಂಚಾಯ್ತಿ ಮಾಡಲಿಕ್ಕೇ ಇರುವುದೆಂದು ಆತ ಗಂಟೆಗಟ್ಟಲೆ ವಾದಿಸತೊಡಗಿದ. ಕೋರ್ಟಲ್ಲಿ, ವಾದ ಪ್ರತಿವಾದ ಆಲಿಸುವ ಸರ್ವೋಚ್ಚ ವ್ಯವಸ್ಥೆ ಇರುತ್ತದೆ. ನೀನೇನು? ದಂಡ, ದಡೂತಿ ವಿಧಿಸಲು. ತಡವೊತ್ತಿನ ತನಕವೂ ವಾಗ್ವಾದಗಳು ನಡೆಯುತ್ತಲೇ ಹೋದವು.

ಅಲೆಮಾರಿ/ ಅರೆಅಲೆಮಾರಿ ಕೆಲವು ಸಮುದಾಯಗಳ ಶತಮಾನಗಳಷ್ಟು ಹಳತಾದ ಅಸಂವಿಧಾನಿಕ ನಂಬಿಕೆಗಳು ಆತನ ಎದೆ ಹೊಕ್ಕು, ಆತ ಹಾಗೆ ಮಾತನಾಡುತ್ತಿರುವ ಎನ್ನಿಸಿತಾದರೂ ಆತನೇನು ಕಾನೂನು, ಠಾಣೆಗಳ ಪರಿಚಯವಿರದವನೇನಲ್ಲ ಎಂತಲೂ ಕ್ರಮೇಣ ನನಗೆ ಖಾತರಿ ಆಯಿತು. ಕಾನೂನು, ಠಾಣೆಗಳ ಬಗೆಗಿನ ಅವನ ತಾತ್ಸಾರ ಅರ್ಥವಾಗತೊಡಗಿತು.

ಮೂಡನಂಬಿಕೆಗಳನ್ನು ಸಮರ್ಥಿಕೊಳ್ಳವ ಅವನ ಮಾತುಗಳು ಅತ್ಯಂತ ಆಕ್ರಮಣಕಾರಿಯಾಗಿದ್ದವು. ಅವನು ಒಗೆಯುವ ಮಾತುಗಳು ವ್ಯಘ್ರವಾಗಿದ್ದವು. ನಮಗೆ ಮಹಿಳೆಯರು, ಮಕ್ಕಳ ಜೀವದ ಚಿಂತೆ. ಅವರಿಗೆ ಅವರ ಕುಟುಂಬಗಳ ಮಹಿಳೆಯರು, ಮಕ್ಕಳೇ ಅಸ್ಪೃಶ್ಯರು. ಮಳೆ ಚಳಿ ಬಿಸಿಲಿನ ಪರಿತಾಪಗಳಿಂದ ಬದುಕಿ ಉಳಿದರೆ ಒಳಗೆ ಬನ್ನಿ, ಇಲ್ಲವಾದರೆ ಸತ್ತೇ ಹೋಗಿ ಎಂದು ಬಾಣಂತಿ ತಾಯಿ, ಮಗುವನ್ನು ತಿಂಗಳುಗಟ್ಟಲೆ ಹೊರಹಾಕುವ ಅಪದ್ದವಾದ ನಂಬಿಕೆಗಳು. ಹಟ್ಟಿ ಪಾಲಿಸಬೇಕೆಂಬುದು ಹಟ್ಟಿ ಯಜಮಾನಿಕೆಯ ಒತ್ತಾಸೆ. ಹಟ್ಟಿ ಜನರ ಶೋಷಣೆಗೆ ನಿಂತಿರುವ ಇಂತಹವರಿಗೆ ಕಾನೂನು ಖಟ್ಲೆಗಳು ಎಂದರೆ ತಾತ್ಸಾರ. ಕೋರ್ಟಿನವರೆವಿಗೂ ಮಾತುಕತೆ ಮುಂದುವರಿಸಿದ್ದ ಚಿತ್ತಯ್ಯನ ನಂಬಿಕೆಗಳು ಜೀವ ವಿರೋಧಿ ತಿಳುವಳಿಕೆ ಮೊಂಡುತನಗಳು.

ಮೇಕೆ ಮೇಯಿಸಿಕೊಂಡು ಬಂದು ಗೂಡಿಗೆ ಕೂಡಿದ್ದ ಆಗಲೇ. ಆತನನ್ನು ಕಂಡು ಮಾತನಾಡಲು ಹೋದಾಗ ಅವನ ಮಾತುಗಳು ಹೆಣ್ಣು- ಗಂಡಿನ ನಡುವಿನ ಸಮಾನತೆಗೇ ಸವಾಲುಗಳೆಂಬಂತಿದ್ದವು. ಅμÉ್ಟೂತ್ತಿಗಾಗಲೇ ಹುಳಿಯಾರು ಠಾಣಾಧಿಕಾರಿ ಬಸವರಾಜು ಅವರು, ಪೆÇೀನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದರೇನೋ? ಜನ ಪಿಸುಗುಟ್ಟುತಿದ್ದರು.

ಹೊತ್ತು ಮುಳುಗಿ ಆಗಲೇ ಸ್ಯಾನೆ ಹೊತ್ತಾಗಿತ್ತು ಅವನ ಮನೆ ಹತ್ತಿರ ನಾವು ಹೋಗಿದ್ದಾಗ. ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಚಿಕ್ಕಣ್ಣನ ಜೊತೆಯಲ್ಲಿ ಮುಟ್ಟಾದ ಮಹಿಳೆಯರು ಹಟ್ಟಿ ಒಳಗೇ ಇರುವ ಕುರಿತು ವಾಗ್ವಾದಕ್ಕೆ ಮುಂದಾದ. ನೀನು ಬೆಂಗಳೂರಿನಲ್ಲಿ ಇದ್ದಾಗ, ಮುಟ್ಟಾದ ಹೆಂಡತಿಯ ಜೊತೆಯಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದೆ. ಅಲ್ಲಿಂದ ಬಂದ ಮೇಲೆ ಏಕೆ ಹೆಂಡತಿಯನ್ನು ಮನೆಯಿಂದ ಹೊರಗಿಟ್ಟೆ? ಎಂದು ಹೋರಾಟದ ಮುಂದಾಳು ದಸೂಡಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಚಿಕ್ಕಣ್ಣನ ಜೊತೆಯಲ್ಲಿ ಯಜಮಾನ್ ಚಿತ್ತಯ್ಯ ಮಾತಿನ ಚಕಮುಕಿಗೆ ಮುಂದಾದ. ಮಾತುಕತೆಗಳು ದಿಕ್ಕಾಪಾಲಾಗ ತೊಡಗಿದಾಗ ಚಿತ್ತಯ್ಯನ ಪ್ರಶ್ನೆಗಳು ನಮ್ಮ ಕಡೆ ತಿರುಗ ತೊಡಗಿದವು. ದೇವರು, ಧರ್ಮ, ಜಾತಿ, ಸೂತಕದ ಹೆಸರಿನಲ್ಲಿ ನೀನು ದಂಡ, ದಡೂತಿ ವಿಧಿಸಿ ಹಟ್ಟಿಯ ಜನರನ್ನು ಶೋಷಿಸವುದನ್ನು ಮುಂದುವರಿಸಬಾರದು. ಜೀವನದ ಈ ಇಳಿ ವಯಸ್ಸಿನಲ್ಲಿ ಮೇಕೆಗಳನ್ನು ಅಡವಿಗೆ ಬಿಟ್ಟು, ಜೈಲು ಪಾಲಾಗಬೇಕಾಗುತ್ತದೆ. ಇಲ್ಲಿ, ಸರ್ಕಾರ, ನ್ಯಾಯಾಲಯಗಳು ನಿನ್ನ ಈ ಮೂಡನಂಬಿಕೆಗಳನ್ನು ಗೌರವಿಸಲಾರವು. ಹಟ್ಟಿಗಳಲ್ಲಿ ಸೂತಕ ಆದವರನ್ನು ಹೊರಗೆ ಕಳುಹಿಸುವುದು ಯಜಮಾನಿಕೆ ಉಳಿಸಿಕೊಳ್ಳುವ ನಿನ್ನ ಸ್ವಾರ್ಥ. ಯಜಮಾನಿಕೆ ಗೌವಾರ್ಥ ಇದನ್ನು ಮುಂದುವರಿಸ ಬಾರದು. ಸ್ವಯಂಘೋಷಿತ ಅವನ ಯಜಮಾನಿಕೆಯ ಗತ್ತನ್ನು ಪ್ರಶ್ನಿಸಲು ಮುಂದಾಗ, ಅವನ ಮುಖ ಕಲ್ಲು ತಾಕಿದ ಮಾವಿನಕಾಯಿಯಂತಾಗತೊಡಗಿತು.

ಮೆಟ್ಟಲ್ಲಿ ಹೊಡೆದಾಡುವರು. ಮೆಟ್ಟು ಹಿಡಿದವರು ದೇವರು ಹೊರುವಾಗಿಲ್ಲ. ದೇವರು ಹೊರಲು ಜನ ಕಮ್ಮಿಯಾಗುತ್ತಾರೆ. ಮೆಟ್ಟು ಕೈಲಿಡಿದದ್ದಕ್ಕೆ ಕುರಿ ಬತ್ತೇವು ಕೇಳುತ್ತೇವೆ. ನಾನೇನು ಮನೆಮಕ್ಳ ಸಾಕುತ್ತೇನಾ? ಭಗವಂತನ ಮಖ ತೊಳಿಯೋಕೆ ದಂಡ ವೆಚ್ಚ ಮಾಡ್ತೇವೆ ಎಂದ.

ಅಲ್ಲ ಕಣಯ್ಯಾ ನಿನಗೂ ಇಬ್ಬರು ಪತ್ನಿಯರು. ನಿಮ್ಮ ಹಟ್ಟಿ ದೇವರು ಚಿತ್ತಯ್ಯನಿಗೂ ಇಬ್ಬರು ಪತ್ನಿಯರು. ನೀನು ಗೊಲ್ಲರೊಳಿಗೇ ಇಬ್ಬರು ಮಹಿಳೆಯರನ್ನು ಮದುವಾದೆ. ಚಿತ್ತಯ್ಯ ಹೊರ ಸಾಲಿನಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ. ನೀವು ಆರಾಧಿಸುವ ದೈವವೇ ಹೊರಸಾಲು ಮಾಡಿರುವಾಗ, ಹೊರಸಾಲು ಮಾಡಿರುವ ನಿನ್ನ ದೈವನಿಗೇನು ದಂಡ ಎಂದು ಚಿತ್ತಯ್ಯನ ಮುಖಕ್ಕೆ ಮುಖವೊಡ್ಡಿ ಮಾತನಾಡುವಾಗ, ಆರಂಭದಲ್ಲಿ ಕೋರ್ಟು, ದಂಡ, ದಡೂತಿಯ ಬಗ್ಗೆ ಮಾತನಾಡುತಿದ್ದವನು ತಣ್ಣಗಾಗತೊಡಗಿದ.

ಮಾತುಗಳು ಮತ್ತೆ ಪೆÇಲೀಸ್ ಸಬ್ ಇನ್ಸ್ ಪೆಕ್ಟರ್ ಕಡೆ ವಾಲತೊಡಗಿದವು. ಅಡವಿ ಮೇಲೆ ಮ್ಯಾಕೆ ಕಾಯ್ಯೊ ಹೊತ್ತೊಳಗೆ, ನನಗೆ ಆ ಸಬ್ ಇನ್ಸ್ ಪೆಕ್ಟರ್ ಎಷ್ಟು ಸಲ ಪೆÇೀನ್ ಮಾಡೋದು? ಎಂದು. ಅವನವು ಮತ್ತೆ ಎಂತೆಂತಹುಗಳೋ ಮಾತುಗಳು ಮುಂದುವರಿದವು. ಮುಟ್ಟಾದ ಹೆಂಡತಿಯನ್ನು ಹಟ್ಟಿ ಹೊರಗಟ್ಟಿ. ನೀನು ಮ್ಯಾಕೆ ಹೊಡ್ಕಂಡು ಕಾಯಾಕೋದರೆ, ಹಟ್ಟಿಗೆ ಬಂದ ಪೆÇಲೀಸರು, ನೀನು ನಿನ್ನ ಹೆಂಡತಿಯನ್ನು ಮೊದಲು ಮನೆ ಒಳಗೆ ಬಿಟ್ಕಳಲಿ ಎಂದು ಪೆÇೀನ್ ಮಾಡಿದ್ದಾರೆ.

ನೀನು ಮಾಡಬೇಕಾದ ಕೆಲ್ಸ. ಪಿ.ಎಸ್.ಐ ಬಂದು ಮಗು ಬಾಣಂತಿ ಮನೆಗೆ ಸೇರಿಸಿದ್ದಾರೆ. ನೀನೂ ನಂನ್ನಂತೆಯೇ ರಕ್ಷಣಾ ಅಕಾರಿಯಾಗು ಎಂದು ಆಶಿಸಿ ಹೋಗಿದ್ದಾರೆ. ಅದೇ ಕೆಲ್ಸ ನಿನ್ನಿಂದ ಆಗಿದ್ದರೆ ಏನಾಗುತಿತ್ತು ಚಿತ್ತಯ್ಯ? ಎಂದು ನಾನೂ ಆತನ ಮೊಂಡು ಪ್ರಶ್ನೆಗಳಿಗೆ ಒಂದೀಸು ಪ್ರಶ್ನೆಗಳನ್ನು ಎಸೆದಾಗ, ಎನಾಗುತಿತ್ತು? ಎಂದ.

ಆ ಮಗುವಿಗೆ ನೀನು ನನ್ನಂಗೆ ಆಡು ಕಾಯಿ ಎಂದು ಹೇಳುತಿದ್ದಾ? ಎಂದಾಗ ಅವಕ್ಕಾದ. ಮುಟ್ಟಾದ ಆತನ ಹೆಂಡತಿಯನ್ನೂ ಆತನ ಮನೆಗೆ ಕೂಡೋ ಹೊತ್ತಿಗೆ ತಡ ರಾತ್ರಿ ಆಗೊವೊಷ್ಟತ್ತಾಯಿತು. ತಲೆ ಚಿಟ್ಟಿಡಿಯುವಷ್ಟು ಆತನ ಮಾತುಗಳಿಗೆ ಸಾಕು ಎನ್ನಿಸಿ, ಮುಟ್ಟಾದ ಅವನಾಕೆಯನ್ನು ಒಳಗೆ ಕಳುಹಿಸಿ ಅಲ್ಲಿಂದ ಹೊರಡಲು ಅನುವಾದಗ, ಚಿತ್ತಯ್ಯ ತಡೆದ.

ಒಳ್ಳೆ ಕೆಲ್ಸ ಬಂದಿದ್ದೀರಾ. ತಡಿರಿ ಹೋಗ್ಬೇಡಿ. ಗೂಡೊಳ ಒಂದು ಮ್ಯಾಕೆ ಓತ್ಮರಿ ಕುಯ್ಯಣ. ಒಂದೆ ಮಖ ಉಂಡೋಗುವಿರಂತೆ ಎಂದ. ಅμÉ್ಟೂತ್ತಿಗಾಗಲೇ, ಇನ್ನೆಲ್ಲೋ, ಬಾಡು ಬೇಯುವ ವಾಸನೆ ಮೂಗಿಗೆ ಯಡತಾಕತೊಡಗಿತ್ತು. ಬ್ಯಾಟಗಾರರ ಮನೇಲಿ ಬಾಡಿಗ ಬಂಗವಾ? ಹಟ್ಟೀಲಿ ಬಾಡು ಬೇಯೋದೇನು ಸಾಮಾನ್ಯ.

ಬ್ಯಾಡ ಇನ್ನೊಂದು ಸಲ ಸೇರೋಣ. ರೊಂಪು, ಅಕನಾತಿ ಮಾಡಿಕೊಂಡು ಮಹಿಳೆಯರಿಗೆ ತೊಂದರೆ ಕೊಟ್ಟು ಮುಟ್ಟಾದಾಗ ಹಟ್ಟಿ ಹೊರಗೆ ಹಾಕಬಾರದು ಎಂದು ಕೊನೆಯ ಸೊಲ್ಲುಗಳ ಮಾತು ಮುಗಿಸಿ ಮಾಜಿ ಮೆಂಬರ್ ಬೆಂಗಳೂರ ಚಿಕ್ಕಣ್ಣನ ಮನೆ ಸೇರುವೊಷ್ಟರಲ್ಲಿ ನೆತ್ತಿ ನೆನಿಯೋಹಾಗೆ, ಹೆಜ್ಜೆಗೆ ನೀರು ಇಳಿಯೋ ತನಕ ತಿರುಗಾಡೊ ಹಾದಿಯೊಳಗೆ ನೀರು ಒಲ್ಡೊಯ್ದಂತೆ ಇಟ್ಟಾಡೋ ರೀತಿಯಲ್ಲಿ ಅಬ್ಬರಿಸಿ ರೋಹಿಣಿ ಮಳೆ ಸುರಿಯಿತು. ಫಳಾರಿಸಿ ಮಿಂಚಿ ಸಿಡಿಲು ಆಗಾಗ ಗರ್ಜಿಸಿ ಮಳೆ ಸುರಿಯಿತು. ಹಿರಿಕಟ್ಟೆ ಕೂನಿಕೆರೆ ರಾಮಣ್ಣನ ಹಿಂದೆ ನಾವೆಲ್ಲಾ ಚಿತ್ತಯ್ಯನ ಮನೆ ಆವರಣದಿಂದ ಹೊರಟೆವು.

ಮಳೆಯಲ್ಲಿ ನೆನೆಯುತ್ತವೆ ಎಂದು ಮೆಟ್ಟನ್ನ ಒಳಗೆ ಬಿಟ್ಟುಕೊಳ್ಳುವರು. ಮುಟ್ಟಾದ ಮಹಿಳೆಯನ್ನು. ಹಟ್ಟಿ ಹೊರಗಾಕುವರು. ನಂಬಿಕೆಗಳಿಗೆ ಹಟ್ಟಿ ಮಹಿಳೆಯರ ದಿಕ್ಕಾರವಿದೆ. ಹಟ್ಟಿಗಳ ಯಜಮಾನಿಕೆಯ ದರ್ಪವನ್ನು ಸಾಮಾನ್ಯರು ಪ್ರಶ್ನಿಸಲಾರದಂತಾಗಿದೆ. ದಂಡವಸೂಲಿಯ ದಬ್ಬಾಳಿಕೆಯೇ ಕಾರಣ. ಮೂಢನಂಬಿಕೆಗಳು ಹಟ್ಟಿ ಮಹಿಳೆಯರಿಗೆ ಬದುಕಿನ ಬಗ್ಗೆ ಅಪನಂಬಿಕೆ ಹುಟ್ಟಿಸಿವೆ.

ಮಹಿಳೆಯರು, ಮಕ್ಕಳು ಹಟ್ಟಿ ಯಜಮಾನಿಕೆಯ ವಿರುದ್ದ ಧ್ವನಿ ಎತ್ತರಿಸಿ ಮಾತನಾಡುಲು ರಕ್ಷಣಾಧಿಕಾರಿಗಳು, ದಂಡಾಧಿಕಾರಿಗಳ ಬೆಂಬಲಗಳ ಅಗತ್ಯವಿದೆ. ಇಲ್ಲವಾದರೆ ಹಟ್ಟಿಗಳಲ್ಲಿ ಮಹಿಳಾ ಸಬಲೀಕರಣ ಎಂಬುದು ಮರೀಚಿಕೆಯಾಗುತ್ತದೆ.

ಉಜ್ಜಜ್ಜಿ ರಾಜಣ್ಣ
05/ 06/ 2024

Leave a Reply

Your email address will not be published. Required fields are marked *