ರಾಷ್ಟ್ರಪತಿ ದ್ರೌಪದಿ ಮುರ್ಮುರವರಿಗೆ ಪ್ರಧಾನಿ ಮೋದಿ ರಾಜೀನಾಮೆ

ನವದೆಹಲಿ : ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಒಂದು ದಿನದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ 17ನೇ ಲೋಕಸಭೆಯನ್ನು ವಿಸರ್ಜಿಸಲು ಶಿಫಾರಸು ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿ, 17ನೇ ಲೋಕಸಭೆ ವಿಸರ್ಜನೆಗೆ ಶಿಫಾರಸ್ಸು ಮಾಡಿದರು. ಜೊತೆಗೆ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆಯನ್ನು ಮೋದಿ ನೀಡಿದ್ದಾರೆ. ಅವರ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿಗಳು, 17ನೇ ಲೋಕಸಭೆಯನ್ನು ವಿಸರ್ಜನೆ ಮಾಡಿದ್ದು, ಹೊಸ ಸರ್ಕಾರ ರಚನೆಯತನಕ ಹಂಗಾಮಿ ಪ್ರಧಾನಿಯಾಗಿ ಮುಂದುವರೆಯುವಂತೆ ನರೇಂದ್ರ ಮೋದಿಯವರಿಗೆ ಸೂಚನೆ ನೀಡಿದ್ದಾರೆ.

ಮೂಲಗಳ ಪ್ರಕಾರ, ಸಂಭಾವ್ಯ “ಕಿಂಗ್ ಮೇಕರ್ಸ್” ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನತಾದಳ-ಯುನೈಟೆಡ್ (ಜೆಡಿಯು) ಹಸಿರು ನಿಶಾನೆ ತೋರಿದ್ದರಿಂದ, ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‍ಡಿಎ) ಸರ್ಕಾರ ರಚನೆ ಮತ್ತು ಪ್ರಧಾನಿ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜೂನ್ 8 ರಂದು ನಡೆಯುವ ಸಾಧ್ಯತೆಯಿದೆ. ಮೈತ್ರಿಯ ಸಭೆಯಲ್ಲಿ ಎರಡೂ ಪಕ್ಷಗಳು ಬಿಜೆಪಿಗೆ ಔಪಚಾರಿಕ ಬೆಂಬಲ ಪತ್ರಗಳನ್ನು ಸಲ್ಲಿಸುವ ನಿರೀಕ್ಷೆಯಿದೆ.

ಲೋಕಸಭಾ ಚುನಾವಣೆಯ ಫಲಿತಾಂಶದ ಪ್ರಕಾರ, ಭಾರತದ ಚುನಾವಣಾ ಆಯೋಗವು 543 ಲೋಕಸಭಾ ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳಿಗೆ ಫಲಿತಾಂಶಗಳನ್ನು ಪ್ರಕಟಿಸಿದ್ದು, ಬಿಜೆಪಿ 240 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದಿದೆ.

ಬಿಜೆಪಿ 2019 ರಲ್ಲಿ 303 ಮತ್ತು 2014 ರಲ್ಲಿ ಗೆದ್ದ 282 ಸ್ಥಾನಗಳಿಗಿಂತ ಬಹಳ ಕಡಿಮೆಯಾಗಿದೆ. ಮತ್ತೊಂದೆಡೆ, ಕಾಂಗ್ರೆಸ್ 2019 ರಲ್ಲಿ 52 ಮತ್ತು 2014 ರಲ್ಲಿ 44 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಈ ಬಾರಿ 99 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ.

ಚುನಾವಣೋತ್ತರ ಸಮೀಕ್ಷೆಗಳ ಎಲ್ಲಾ ಊಹೆಗಳನ್ನು ಧಿಕ್ಕರಿಸಿ, ತೀವ್ರ ಸ್ಪರ್ಧೆಯನ್ನು ಒಡ್ಡಿದ ಇಂಡಿಯಾ ಬಣವು 230 ರ ಗಡಿಯನ್ನು ದಾಟಿದೆ.

Leave a Reply

Your email address will not be published. Required fields are marked *