ಕೇಂದ್ರ ಸಚಿವ ವಿ.ಸೋಮಣ್ಣ ಸ್ವಾಗತಕ್ಕೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರಿಂದ ಸಂಭ್ರಮದ ಸಿದ್ಧತೆ

ತುಮಕೂರು: ಕೇಂದ್ರ ಸರ್ಕಾರದ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ವಿ.ಸೋಮಣ್ಣ ಅವರು, ಸಚಿವರಾದ ನಂತರ ಮೊದಲ ಬಾರಿಗೆ ಸ್ವಕ್ಷೇತ್ರ ತುಮಕೂರಿಗೆ ಇದೇ ಶುಕ್ರವಾರ (ಜೂನ್ 14) ಆಗಮಿಸಲಿದ್ದಾರೆ. ಸಚಿವರನ್ನು ಸಂಭ್ರಮದಿಂದ ಸ್ವಾಗತಿಸಿಲು ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸಂಭ್ರಮದಿಂದ ಸಿದ್ಧರಾಗಿದ್ದಾರೆ.

ಈ ಸಂಬಂಧ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ದಾಖಲೆಯ 1.75 ಲಕ್ಷ ಮತಗಳ ಅಂತರದಿಂದ ಗೆಲುವು ಪಡೆದ ಸೋಮಣ್ಣನವರು ಈ ಕ್ಷೇತ್ರಕ್ಕೆ ಮೊಟ್ಟಮೊದಲ ಬಾರಿಗೆ ಸಚಿವ ಸ್ಥಾನದ ದೊರಕಿಸಿಕೊಟ್ಟ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಭಿವೃದ್ಧಿ ಹರಿಕಾರರೆಂದೇ ಹೆಸರಾದ ಸೋಮಣ್ಣನವರಿಗೆ ಮಂತ್ರಿ ಪದವಿ ದೊರಕಿರುವುದು ಜಿಲ್ಲೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಅವರಿಂದ ನಿರೀಕ್ಷಿಸಬಹುದು ಎಂದರು.

ಸಚಿವ ಸೋಮಣ್ಣ ಅವರು ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ತಮ್ಮ ಆರಾಧ್ಯ ದೈವ ಡಾ.ಶಿವಕುಮಾರ ಸ್ವಾಮೀಜಿಗಳ ಗದ್ದಿಗೆಗೆ ಪೂಜೆ ಸಲ್ಲಿಸುವರು, ಶ್ರೀಮಠದ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆಯುವರು. ನಂತರ ಎಲೆರಾಂಪುರ ಮಠ, ಸಿದ್ಧರಬೆಟ್ಟದ ಮಠ, ಬೆಳ್ಳಾವಿ ಕಾರದೇಶ್ವರ ಮಠ, ಗೋಡೆಕೆರೆ ಮಠ, ತಿಪಟೂರು ಮಠ, ರಂಗಾಪುರ ಮಠ, ನೊಣವಿನಕೆರೆ ಮಠಗಳಿಗೆ ಭೇಟಿ ನೀಡಿ ಅಲ್ಲಿನ ಶ್ರೀಗಳ ಆಶೀರ್ವಾದ ಪಡೆಯುವರು ಎಂದು ಹೇಳಿದರು.

ಜೂ.16ರ ಭಾನುವಾರ ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಸಚಿವ ಸೋಮಣ್ಣ ಅವರು ಲೋಕಸಭಾ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಸಹಕರಿಸಿದ ಮತದಾರರಿಗೆ ಹಾಗೂ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವರು. ಇದೇ ವೇಳೆ ಬಿಜೆಪಿ ಹಾಗೂ ಜೆಡಿಎಸ್‍ನಿಂದ ವಿ.ಸೋಮಣ್ಣ ಅವರನ್ನು ಅಭಿನಂದಿಸಲಾಗುವುದು. ಕಾರ್ಯಕ್ರಮಕ್ಕೆ ಮುನ್ನಾ ನಗರದ ಎಸ್‍ಐಟಿ ಬ್ಯಾಕ್ ಗೇಟ್‍ನಿಂದ ಸೋಮಣ್ಣ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗುವುದು. ಎರಡೂ ಪಕ್ಷಗಳ ಕಾರ್ಯಕರ್ತರು ಬೃಹತ್ ಬೈಕ್ ರ್ಯಾಲಿ, ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ಸಚಿವರನ್ನು ಬರಮಾಡಿಕೊಳ್ಳಲಾಗುವುದು ಎಂದು ರವಿಶಂಕರ್ ಹೆಬ್ಬಾಕ ಹೇಳಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂದೀಪ್‍ಗೌಡ, ಉಪಾಧ್ಯಕ್ಷರಾದ ನಾಗರತ್ನಮ್ಮ, ಅನಿತಾ, ಕಾರ್ಯದರ್ಶಿಗಳಾದ ಕೆಂಪೇಗೌಡ, ಜ್ಯೋತಿ ತಿಪ್ಪೇಸ್ವಾಮಿ, ಜೆಡಿಎಸ್ ನಗರಾಧ್ಯಕ್ಷ ವಿಜಯ್‍ಗೌಡ, ವಕ್ತಾರ ಮೆಡಿಕಲ್ ಮಧು, ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಜೆ.ಜಗದೀಶ್ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *