ತುಮಕೂರು : ಹಾವುಗಳು ಸೇರಿ ವನ್ಯ ಜೀವಿ ಸಂಪತ್ತನ್ನು ಸಂರಕ್ಷಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಬೇಕು ಎಂದು ವನ್ಯ ಜೀವಿ ಜಾಗೃತಿ ಸಂಸ್ಥೆಯ ಅಧ್ಯಕ್ಷ ಗುಂಡಪ್ಪ ಅಭಿಪ್ರಾಯಪಟ್ಟರು.
ನಗರದ ತುಮಕೂರು ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಸಭಾಂಗಣದಲ್ಲಿಂದು ಮಾನವ ಹಾವುಗಳ ಸಂಘರ್ಷ ನಿರ್ವಹಣೆ ಮತ್ತು ಉಪಶಮನ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತರಬೇತಿ ಹೊಂದಿದವರು ಮಾತ್ರ ಹಾವುಗಳನ್ನು ಹಿಡಿಯಬೇಕು. ನಗರ ಪ್ರದೇಶದಲ್ಲಿ ಹಾವುಗಳನ್ನು ಕಂಡವರು ಭಯಪಡದೆ ತರಬೇತಿ ಹೊಂದಿದವರಿಗೆ ಮಾಹಿತಿ ನೀಡಬೇಕು. ಹಾವುಗಳನ್ನು ಹಿಡಿದವರು ಹಾವಿನ ಜೀವಕ್ಕೆ ಹಾನಿ ಮಾಡದೆ ಸುರಕ್ಷಿತ ಸ್ಥಳಕ್ಕೆ ಬಿಡಬೇಕು ಎಂದು ತಿಳಿಸಿದರು.
ಪ್ರಾದೇಶಿಕ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ ಎಚ್. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಾವನ್ನು ಹಿಡಿಯುವ ದೃಶ್ಯಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡರೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಅನುಮತಿ ಇಲ್ಲದೆ ಅನಧಿಕೃತವಾಗಿ ಹಾವುಗಳನ್ನು ಹಿಡಿದವರಿಗೆ ಕಾನೂನು ಉಲ್ಲಂಘನೆಯಡಿ 3 ರಿಂದ 7 ವರ್ಷ ಶಿಕ್ಷೆ ವಿಧಿಸಲಾಗುವುದು. ಸಾಮಾನ್ಯವಾಗಿ ಮನೆಗಳಿಗೆ ಹಾವುಗಳು ಬಂದರೆ ನನಗೆ ಹಾವು ಹಿಡಿಯುವ ಕೌಶಲ್ಯ ತಿಳಿದಿದೆ ಎಂದು ಹಿಡಿಯಲು ಹೋಗುವಂತಿಲ್ಲ. ಮೊದಲು ತಮ್ಮ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರಲ್ಲದೆ, ಜಿಲ್ಲೆಯಲ್ಲಿ è WARCO(Wildlife awareness & reptile conservation organization ) ಮತ್ತು WE ROAR ಎಂಬ ಎರಡು ಸಂಸ್ಥೆಗಳಿಂದ ಹಾವು ಹಿಡಿಯುವ ಕೌಶಲ್ಯ, ತರಬೇತಿ ಬಗ್ಗೆ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.
ಈ ಸಂದರ್ಭ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನ್, ಮಹೇಶ್ ಮಾಲಗತ್ತಿ, ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ, WARCO ಮತ್ತು WE ROAR ತಂಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.