ಕೇಂದ್ರ ಸಚಿವರು ಆಸ್ಪತ್ರೆಗೆ ಭೇಟಿ ಸಂದರ್ಭದಲ್ಲಿ ಅಧಿಕಾರಿಗಳು ಹಾಜರಿರಲಿಲ್ಲವೆಂಬುದು ಶಿಷ್ಟಾಚಾರದ ಉಲ್ಲಂಘನೆಯಾಗಿಲ್ಲ-ಡಾ.ಜಿ.ಪರಮೇಶ್ವರ್

ತುಮಕೂರು : ಕೇಂದ್ರ ಸಚಿವ ವಿ.ಸೋಮಣ್ಣ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕಾರಿಗಳು ಹಾಜರಿರಲಿಲ್ಲ ಎಂಬುದು ಶಿಷ್ಟಾಚಾರದ ಉಲ್ಲಂಘನೆಯಾಗಿಲ್ಲ. ಶಿಷ್ಟಾಚಾರದ ಪಾಲನಾ ನಿಯಮದ ಪ್ರಕಾರವೇ ಅಧಿಕಾರಿಗಳು ನಡೆದುಕೊಂಡಿದ್ದಾರೆ. ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ಮುಂಚೆಯೇ ನಿಗಧಿಯಾಗಿದ್ದ ಜಿಲ್ಲಾ ಸಚಿವರ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಶಿಷ್ಟಾಚಾರದಂತೆಯೇ ಭಾಗಿಯಾಗಿದ್ದಾರೆ ಹೊರತು ಯಾರನ್ನೂ ಮೆಚ್ಚಿಸಲು ಅಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರು ಹೇಳಿದರು.

ವಾಂತಿ-ಭೇದಿಯಿಂದ ದಾಖಲಾದವರ ಚಿನ್ನೇನಹಳ್ಳಿ ಗ್ರಾಮಸ್ಥರ ಆರೋಗ್ಯ ವಿಚಾರಿಸಲು ಜಿಲ್ಲಾಸ್ಪತ್ರೆ ಶುಕ್ರವಾರ ಬೆಳಿಗ್ಗೆ ನೂತನ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಯಾವೊಬ್ಬ ಅಧಿಕಾರಿಯೂ ಹಾಜರಾಗದೆ ಶಿಷ್ಟಾಚಾರ ಪಾಲಿಸಿಲ್ಲವೆಂದು ಆರೋಪಿಸಲಾಗಿದೆ ಎನ್ನುವ ಮಾಧ್ಯಮದವರ ಮಾತಿಗೆ ಉತ್ತರಿಸಿದ ನನ್ನ ಎಷ್ಟೋ ಕಾರ್ಯಕ್ರಮಗಳಲ್ಲಿ ಕೆಲಸದ ಒತ್ತಡದಿಂದ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಜರಿರುವುದಿಲ್ಲ. ನಾನೆಂದೂ ತಪ್ಪು ತಿಳಿದಿಲ್ಲವೆಂದು ಸ್ಪಷ್ಟನೆ ನೀಡಿದರು.

ಮಧುಗಿರಿ ತಾಲೂಕು ಚಿನ್ನೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವರದಿಯಾದ ವಾಂತಿ-ಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತೀ ದಿನ ಭೇಟಿ ನೀಡಿ ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ನೀಡಲು ಹಾಗೂ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.

ಚಿನ್ನೇನಹಳ್ಳಿಯಲ್ಲಿ ವಾಂತಿ-ಭೇದಿಯಿಂದ 6 ಮಂದಿ ದುರ್ಮರಣವನ್ನಪ್ಪಿದ್ದರೂ ಜಿಲ್ಲಾಡಳಿತದಿಂದ ಕೇವಲ 2 ಮಂದಿ ಮಾತ್ರ ಮೃತಪಟ್ಟಿದ್ದಾರೆಂದು ಮಾಹಿತಿ ನೀಡಲಾಗುತ್ತಿದೆ ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಜಿಲ್ಲಾಸ್ಪತ್ರೆಯಲ್ಲಿ ವಾಂತಿ-ಭೇದಿಯಿಂದ ಇಬ್ಬರು ವಯೋವೃದ್ಧರು ಮಾತ್ರ ಮೃತಪಟ್ಟಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ವರು ಯಾವ ಕಾರಣದಿಂದ ಮೃತಪಟ್ಟಿದ್ದಾರೆಂದು ಪುನರ್‍ಪರಿಶೀಲಿಸಿ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ವಾಂತಿ-ಭೇದಿಗೆ ಮೂಲ ಕಾರಣವನ್ನು ಪತ್ತೆ ಹಚ್ಚಲು ಕುಡಿಯುವ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಪೂರ್ಣ ವರದಿಯಿನ್ನೂ ಬಂದಿರುವುದಿಲ್ಲ. ಕೆಲ ಗ್ರಾಮಸ್ಥರು ಓವರ್ ಹೆಡ್ ಟ್ಯಾಂಕ್ ನೀರು ಕುಡಿದಿದ್ದೇವೆಂದು, ಕೆಲ ಗ್ರಾಮಸ್ಥರು ಪವಿತ್ರವೆನ್ನಲಾಗುವ ಬೆಟ್ಟದ ಮೇಲಿಂದ ತಂದ ನೀರಿನಿಂದ ಮಾಡಿದ ತಂಬಿಟ್ಟು ಸೇವಿಸಿದ್ದೇವೆಂದು ಹೇಳುತ್ತಿದ್ದಾರೆ. ನೀರಿನ ಮಾದರಿ ಪೂರ್ಣ ಪರೀಕ್ಷಾ ವರದಿ ಬಂದ ನಂತರವಷ್ಟೇ ಮೂಲ ಕಾರಣವನ್ನು ಅರಿಯಲು ಸಾಧ್ಯವೆಂದು ತಿಳಿಸಿದರು.

.

Leave a Reply

Your email address will not be published. Required fields are marked *