ತುಮಕೂರು : ಕೇಂದ್ರ ಜಲಶಕ್ತಿ ಮತ್ತು ರೈಲ್ವೇ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣನವರ ಸೂಚನೆಯ ಮೇರೆಗೆ ಬೆಂಗಳೂರು ನೈರುತ್ಯ ರೈಲ್ವೆ ವಲಯದ ವಿಭಾಗಾಧಿಕಾರಿಗಳು ತುಮಕೂರಿಗೆ ಭೇಟಿ ನೀಡಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರೊಂದಿಗೆ ನಡೆಯುತ್ತಿರುವ ಹಾಗೂ ಮುಂದೆ ಆಗಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿ, ಸ್ಥಳ ಪರಿಶೀಲನೆ ನಡೆಸಿದರು.
ತುಮಕೂರು ನಗರ ರೈಲ್ವೆ ನಿಲ್ದಾಣದಲ್ಲಿ ಆಗಬೇಕಾಗಿರುವ ಪ್ರಯಾಣಿಕರ ಸೌಲಭ್ಯಗಳ ಉನ್ನತೀಕರಣದ ಬಗ್ಗೆ ಚರ್ಚಿಸಿದರು ಹಾಗೂ ರೈಲ್ವೆ ನಿಲ್ದಾಣದ ದಕ್ಷಿಣ ಭಾಗದಲ್ಲಿ ಎರಡನೇ ಪ್ರವೇಶ ದ್ವಾರದ ಬಗ್ಗೆ ಚರ್ಚಿಸಿದರು.
ತುಮಕೂರು ನಗರದ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾಗಿರುವ ರೈಲ್ವೆ ಮೇಲುಸೇತುವೆ ಹಾಗೂ ರೈಲ್ವೆ ಕೆಳಸೇತುವೆ ಬಗ್ಗೆ ಹಾಗೂ ನಗರದ ಗೋಕುಲ ಬಡಾವಣೆ ಬಳಿ, ಮಹಾಲಕ್ಷ್ಮೀನಗರ, ಕ್ಯಾತಸಂದ್ರ, ಭೀಮಸಂದ್ರ ಹಾಗೂ ಶೆಟ್ಟಿಹಳ್ಳಿ ಗೇಟ್ ಬಳಿ ಪಾದಚಾರಿ ಸಬ್ ವೇ ನಿರ್ಮಾಣ ಮಾಡಲು ಸ್ಥಳವನ್ನು ಗುರುತಿಸಿ, ಸ್ಥಳ ಪರಿಶೀಲನೆ ಮಾಡಿ, ತುರ್ತಾಗಿ ಕಾಮಗಾರಿಗಳನ್ನು ಕೈಗೊಳ್ಳಲು ಶಾಸಕರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯರಾದ ವಿಷ್ಣುವರ್ಧನ್, ವೀಣಾ ಮನೋಹರಗೌಡ, ರೈಲ್ವೆ ಅಧಿಕಾರಿಗಳು ಹಾಗೂ ಮುಂತಾದ ಮುಖಂಡರುಗಳು ಹಾಜರಿದ್ದರು.