ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಏರಿಸಿರುವ ಕ್ರಮ ವಿರೋಧಿಸಿ ಜೂನ್ 20ರ ಗುರುವಾರ ರಾಜ್ಯಾದ್ಯಂತ ರಸ್ತೆ ರೋಖೊ ಚಳವಳಿ ಹಮ್ಮಿಕೊಂಡಿರುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಮಂಗಳವಾರ ಬೆಳಿಗ್ಗೆ ನಗರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ಅವರು ಡಾ.ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ ನಂತರ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಈ ವೇಳೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಹುಳುಕು ಮುಚ್ಚಿಹಾಕಿಕೊಳ್ಳಲು ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ, ಇದೊಂದು ಭಂಡ ಸರ್ಕಾರ ಎಂದು ಟೀಕಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಹಾಲಿನ ದರ, ವಿದ್ಯುತ್ ದರ, ಅಬಕಾರಿ ತೆರಿಗೆ, ಮುದ್ರಾಂಕ ಶುಲ್ಕ ಸೇರಿದಂತೆ ಎಲ್ಲದರ ದರ ಹೆಚ್ಚು ಮಾಡಿದೆ. ಇಷ್ಟೆಲ್ಲಾ ತೆರಿಗೆ ಜಾಸ್ತಿಯಾಗಿ ಸರ್ಕಾರದ ಆದಾಯವೂ ಜಾಸ್ತಿಯಾಗಿದೆ. ಈ ಆದಾಯ ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾಲ್ಮೀಕಿ ಅಭಿವೃದ್ಧಿ ನಿಗಮದ ನೂರಾರು ಕೋಟಿ ರೂ. ಹಣ ಎಲ್ಲಿಗೆ ಹೋಗಿದೆ? ಬೇನಾಮಿ ಖಾತೆ ಮುಖಾಂತರ ಆಂಧ್ರಕ್ಕೆ ಹೋಗಿದೆ. ರಾಜ್ಯದ ಹಣಕಾಸು ಸಚಿವರಾಗಿದ್ದೀರಿ, ನೀವು ಇಷ್ಟೆಲ್ಲಾ ಆದರೂ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರಿ ಎಂದರೆ ಅಧಿಕಾರದಲ್ಲಿ ಉಳಿಯಲು ನಿಮಗೆ ನೈತಿಕತೆ ಇದೆಯೆ ಎಂದು ನಿಮ್ಮನ್ನು ನೀವೇ ಪ್ರಶ್ನೆ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹೇಳಿದರು.
ಪೆಟ್ರೋಲ್ ಡೀಸೆಲ್ ಬೆಳೆ ಹೆಚ್ಚಳದಿಂದ ಜನಸಾಮಾನ್ಯರಿಗೆ ಹೊರೆಯಾಗಿದೆ. ರೈತರಿಗೆ ಅನ್ಯಾಯವಾಗುತ್ತಿದೆ. ಈಗ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ ರೈತರು ಕೃಷಿ ಚಟುವಟಿಕೆಗಳಿಗೆ ಟ್ರಿಲ್ಲರ್ ಟ್ರ್ಯಾಕ್ಟರ್, ಪಂಪ್ಸೆಟ್ ಬಳಸುತ್ತಿದ್ದಾರೆ. ವಿದ್ಯುತ್ ದರದ ಜೊತೆಗೆ ಪೆಟ್ರೋಲ್, ಡೀಸೆಲ್ ದರ ಏರಿಕೆಯೂ ರೈತರಿಗೆ ಹೊಡೆತ ಬಿದ್ದಿದೆ ಎಂದು ವಿಜಯೇಂದ್ರ ಹೇಳಿದರು.
ಒಂದು ವರ್ಷದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ, ಯಾವುದೇ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ. ಅಭಿವೃದ್ಧಿಗೆ ಕೇಂದ್ರದಿಂದ ಹಣ ಬಂದಿಲ್ಲ ಎಂದು ಹೇಳುತ್ತಾರೆ. ನಿಮ್ಮ ಆದಾಯದ ಹಣವನ್ನು ಏನು ಮಾಡಿದಿರಿ? ಬಿಜೆಪಿ ಸರ್ಕಾರ ಅಧಿಕಾರದಿಂದ ಕೆಳಗಿಳಿಯು ಸಂದರ್ಭದಲ್ಲಿ ರಾಜ್ಯದಲ್ಲಿ ಆದಾಯ ಅಧಿಕವಿತ್ತು. ಆದಾಯ ಹೆಚ್ಚಾಗಿದ್ದ ರಾಜ್ಯವನ್ನು ಸಂಕಷ್ಟಕ್ಕೆ ಸಿಲುಕಿಸಿ ಅಧೋಗತಿಗೆ ತಂದಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದರು.
ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಸುರೇಶ್ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಹನುಮಂತೇಗೌಡ, ವಿಧಾನ ಪರಿಷತ್ ಸದಸ್ಯ ನವೀನ್, ಮುಖಂಡರಾದ ಎಸ್.ಶಿವಪ್ರಸಾದ್, ಡಾ.ಪರಮೇಶ್, ಬ್ಯಾಟರಂಗೇಗೌಡ, ಅಂಬಿಕಾ ಹುಲಿನಾಯ್ಕರ್, ಎಸ್.ಪಿ.ಚಿದಾನಂದ್, ಟಿ.ಆರ್.ಸದಾಶಿವಯ್ಯ, ದಿಲೀಪ್ಕುಮಾರ್, ಚಂದ್ರಶೇಖರಬಾಬು, ಸಂದೀಪ್ಗೌಡ, ರವೀಶಯ್ಯ, ನವಚೇತನ್, ಜೆ.ಜಗದೀಶ್ ಮೊದಲಾದವರು ಹಾಜರಿದ್ದರು.