ಹೆಚ್ಚುವರಿ ರೈಲನ್ನು ಓಡಿಸಲು ಕ್ರಮ ಕೈಗೊಳ್ಳುವಂತೆ ವಿ. ಸೋಮಣ್ಣಗೆ ಒತ್ತಾಯ

ತುಮಕೂರು- ಬೆಂಗಳೂರಿನಿಂದ ತುಮಕೂರು, ಅರಸೀಕೆರೆ ಕಡೆಗೆ ಸಂಜೆ ವೇಳೆ ಚಲಿಸುವ ವಿಶೇಷ ಪ್ಯಾಸೆಂಜರ್ ಹಾಗೂ ಗೋಲ್‍ಗುಂಬಸ್ ರೈಲುಗಳಲ್ಲಿ ನಿಲ್ಲಲು ಜಾಗವಿಲ್ಲದೆ ಪ್ರಯಾಣಿಕರು ಹೈರಾಣಾಗುತ್ತಿದ್ದು, ಹೆಚ್ಚುವರಿ ಜನರಲ್ ಬೋಗಿಗಳು ಅಥವಾ ಹೆಚ್ಚುವರಿ ರೈಲನ್ನು ಓಡಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರನ್ನು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಪ್ರತಿನಿತ್ಯ ರಾಜಧಾನಿ ಬೆಂಗಳೂರಿಗೆ ಅರಸೀಕೆರೆ, ತಿಪಟೂರು, ಗುಬ್ಬಿ, ತುಮಕೂರು ಸೇರಿದಂತೆ ಈ ಭಾಗದ ವಿವಿಧೆಡೆಗಳಿಂದ ಸಾವಿರಾರು ಮಂದಿ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ, ಬ್ಯುಸಿನೆಸ್ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ರೈಲಿನಲ್ಲಿ ಪ್ರಯಾಣಿಸುತ್ತಾರೆ.

ಕೆಲ ಎಕ್ಸ್‍ಪ್ರೆಸ್ ರೈಲುಗಳು ನಿರ್ಧಿಷ್ಟ ನಿಲ್ದಾಣಗಳಲ್ಲಿ ನಿಲುಗಡೆ ಮಾಡುವುದನ್ನು ಬಿಟ್ಟರೆ ಉಳಿಡೆದೆ ನಿಲ್ಲಿಸುವುದಿಲ್ಲ. ಹಾಗಾಗಿ ಪ್ಯಾಸೆಂಜರ್ ರೈಲಿಗೆ ಬಹಳ ಬೇಡಿಕೆ ಇದೆ. ಈ ಪ್ಯಾಸೆಂಜ್ ರೈಲಿನಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಆದರೆ ಈ ರೈಲಿನ ಬೋಗಿಗಳಲ್ಲಿ ಜನ ನಿಲ್ಲಲು ಜಾಗ ಇಲ್ಲದಷ್ಟರ ಮಟ್ಟಿಗೆ ಪ್ರಯಾಣಿಕರು ತುಂಬಿರುತ್ತಾರೆ. ಒಮ್ಮೊಮ್ಮೆ ಬೋಗಿಗಳಲ್ಲಿ ಉಸಿರಾಡಲು ಸಹ ಜಾಗ ಇರುವುದಿಲ್ಲ. ಉಸಿರುಗಟ್ಟಿ ಪ್ರಯಾಣಿಸಬೇಕಾದ ವಾತಾವರಣ ಸೃಷ್ಠಿಯಾಗಿರುತ್ತದೆ.

ಅದರಲ್ಲೂ ಬೆಳಿಗ್ಗೆ ಮತ್ತು ಸಂಜೆ ವೇಳೆ ವೃದ್ಧರು, ಮಕ್ಕಳು, ಮಹಿಳೆಯರು ರೈಲುಗಾಡಿಗಳಲ್ಲಿ ಪ್ರಯಾಣಿಸುವುದು ಬಹಳ ದುಸ್ತರವಾಗಿದೆ. ಹಾಗಾಗಿ ಈ ಬಗ್ಗೆ ರೈಲ್ವೆ ಅಧಿಕಾರಿಗಳು ಹಾಗೂ ಸಚಿವ ವಿ. ಸೋಮಣ್ಣ ಅವರು ಈ ಬಗ್ಗೆ ಗಮನ ಹರಿಸಿ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಹೆಚ್ಚುವರಿ ರೈಲುಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.

ಸಂಜೆ 6.20ಕ್ಕೆ ಮೆಜೆಸ್ಟಿಕ್‍ನಿಂದ ವಿಶೇಷ ಪ್ಯಾಸೆಂಜರ್ ರೈಲು ಹೊರಡಲಿದೆ. ಹಾಗೆಯೇ ಸಂಜೆ 6.40ಕ್ಕೆ ಗೋಲ್‍ಗುಂಬಸ್ ಎಕ್ಸ್‍ಪ್ರೆಸ್ ರೈಲು ಸಹ ಹೊರಡುತ್ತದೆ. ಈ ಅವಧಿಯಲ್ಲಿ ರಾಜಧಾನಿ ಬೆಂಗಳೂರಿಗೆ ವಿವಿಧ ಉದ್ದೇಶಗಳಿಗಾಗಿ ತೆರಳಿದ್ದ ಜನರು ತಮ್ಮ ತಮ್ಮ ಊರುಗಳಿಗೆ ಹೋಗಲು ತುದಿಗಾಲಲ್ಲಿ ನಿಂತಿರುತ್ತಾರೆ. ಈ ಎರಡು ರೈಲುಗಾಡಿಗಳ ಬೋಗಿಗಳಲ್ಲಿ ಜನ ನಿಲ್ಲಲು ಜಾಗ ಇಲ್ಲದೆ ಹೈರಾಣಾಗುತ್ತಿದ್ದಾರೆ.

ಇದು ಒಂದು-ಎರಡು ದಿನದ ಕಥೆಯಲ್ಲ, ವರ್ಷೊಂಬತ್ಕಾಲ ಇದೇ ಪರಿಸ್ಥಿತಿಯಲ್ಲಿ ಜನರು ಪ್ರಯಾಣಿಸಬೇಕಾಗಿದೆ. ಪ್ರಯಾಣಿಕರ ಸುರಕ್ಷತೆ ಬಗ್ಗೆ ಯಾವೊಬ್ಬ ಅಧಿಕಾರಿಗಳು ಸಹ ಗಮನ ಹರಿಸುತ್ತಿಲ್ಲ ಎಂದು ಪ್ರಯಾಣಿಕರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ಗೋಲ್‍ಗುಂಬಸ್ ರೈಲಿನಲ್ಲಿ ಎರಡು ಅಥವಾ ಮೂರು ಮಾತ್ರ ಜನರಲ್ ಬೋಗಿಗಳು ಇರುತ್ತದೆ. ಉಳಿದಂತೆ ರಿಸರ್ವ್ ಬೋಗಿಗಳು ಇವೆ. ಈ ರೈಲಿಗೆ ಟಿಕೆಟ್ ಪಡೆದಿರುವ ಮತ್ತು ಪಾಸ್ ಹೊಂದಿರುವ ಪ್ರಯಾಣಿಕರು ಸಹ ಬರುತ್ತಾರೆ. ಆಗ ಇರುವ 2-3 ಜನರಲ್ ಬೋಗಿಯಲ್ಲಿ ಕಾಲಿಡಲು ಸಹ ಜಾಗ ಇಲ್ಲದೇ ಪರದಾಡುವಂತಹ ವಾತಾವರಣ ಸೃಷ್ಠಿಯಾಗುತ್ತಲೇ ಇರುತ್ತದೆ. ಈ ಬಗ್ಗೆ ರೈಲ್ವೆ ಟಿ.ಸಿ.ಗಳು ಗಮನ ಹರಿಸುವುದಿಲ್ಲ, ಜತೆಗೆ ಪ್ರಯಾಣಿಕರೊಂದಿಗೆ ಸೌಜನ್ಯವಾಗಿ ವರ್ತಿಸಿ ಮಾಹಿತಿ ನೀಡುವುದಿಲ್ಲ. ಇದರಿಂದ ಪಾಸ್ ಹೊಂದಿರುವವರು ಹಾಗೂ ಟಿಕೆಟ್ ಪಡೆದು ಪ್ರಯಾಣಿಸುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

ಗೋಲ್‍ಗುಂಬಸ್ ರೈಲಿನಲ್ಲಿ ಇನ್ನು ಹೆಚ್ಚುವರಿ ಜನರಲ್ ಬೋಗಿಗಳನ್ನು ಅಳಪಡಿಸಿದರೆ ಪ್ರತಿನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಲಿದೆ. ಈ ಬಗ್ಗೆಯೂ ಸಚಿವರು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *